ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಾಳೆಯಿಂದ ಸಾಕ್ಷ್ಯ ವಿಚಾರಣೆ ಆರಂಭವಾಗಲಿದೆ.

ಈಗಾಗಲೇ ಚಾರ್ಜ್ ಶೀಟ್ ಸಲ್ಲಿಕೆಯಾಗಿ ಚಾರ್ಜ್ ಫ್ರೇಮ್ ಕೂಡ ನಡೆದಿದೆ. ಹೀಗಾಗಿ ಟ್ರಯಲ್ ನ ಮೊದಲ ಭಾಗವಾಗಿ ನಾಳೆಯಿಂದ 57 ನೇ ಸಿಸಿಹೆಚ್ ಕೋರ್ಟ್ ನಲ್ಲಿ ಸಾಕ್ಷ್ಯ ವಿಚಾರಣೆ ಆರಂಭವಾಗಲಿದೆ. ಹೀಗಾಗಿ ಪ್ರಕರಣದ ವಿಶೇಷ ಸರ್ಕಾರಿ ಅಭಿಯೋಜಕ ಪ್ರಸನ್ನ ಕುಮಾರ್ ಮತ್ತು ತಂಡದಿಂದ ಸಿದ್ಧತೆ ನಡೆದಿದೆ. ಇದಕ್ಕಾಗಿ ಕೊಲೆ ನಡೆದ ಜಾಗ ಪಟ್ಟಣಗೆರೆ ಶೆಡ್, ಮೃತದೇಹ ಪತ್ತೆಯಾಗಿದ್ದ ಸತ್ವ ಅಪಾರ್ಟ್ ಮೆಂಟ್ ಮುಂದಿನ ಜಾಗ ಸೇರಿದಂತೆ ಘಟನೆಯ ಎಲ್ಲಾ ಸ್ಥಳಗಳನ್ನ ಪರಿಶೀಲನೆ ನಡೆಸಿದ್ದಾರೆ.

ಇನ್ನು ಎಸ್‌ಪಿಪಿ ಪ್ರಸನ್ನಕುಮಾರ್ ಪರಿಶೀಲನೆಗೆ ತನಿಖಾಧಿಕಾರಿ ಎಸಿಪಿ ಚಂದನ್, ಸಹಾಯಕ ಎಸ್‌ಪಿಪಿ ಸಚಿನ್ ಸಾಥ್ ನೀಡಿದ್ದಾರೆ.

ಸಾಕ್ಷ್ಯ ವಿಚಾರಣೆಯ ಭಾಗವಾಗಿ ರೇಣುಕಾಸ್ವಾಮಿ ತಂದೆ-ತಾಯಿ ನಾಳೆ 57 ನೇ ಸಿಸಿಹೆಚ್ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 260ಕ್ಕೂ ಅಧಿಕ ಸಾಕ್ಷಿಗಳು ಇವೆ. ಎಲ್ಲ ಸಾಕ್ಷಿಗಳ ವಿಚಾರಣೆ ಬಳಿಕ ಕೋರ್ಟ್ ಅಂತಿಮ ತೀರ್ಪು ನೀಡಲಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ದರ್ಶನ್, ಪವಿತ್ರಾ ಗೌಡ ಮುಂತಾದ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ





