ಕರ್ನಾಟಕದಲ್ಲಿ ಮಳೆಯ ಪ್ರಮಾಣ ಕುಸಿತಗೊಂಡಿದೆ. ಕಾವೇರಿ ನದಿ ಪ್ರದೇಶದಲ್ಲಿ ಸರಿಯಾದ ಪ್ರಮಾಣದಲ್ಲಿ ಮಳೆಯಾಗದ ಪರಿಣಾಮ ಮಂಡ್ಯದ ಕೆ.ಆರ್.ಎಸ್ ಡ್ಯಾಂ ಕೂಡ ಭರ್ತಿ ಆಗಿಲ್ಲ. ಆದರೂ ತಮಿಳುನಾಡು ನಿಗದಿಯಂತೆ ನೀರು ಹರಿಸುವಂತೆ ಒತ್ತಾಯ ಮಾಡುತ್ತಲೇ ಇದೆ. ಜೊತೆಗೆ ಕಾವೇರಿ ನೀರು ನಿಯಂತ್ರಣಾ ಸಮಿತಿಯ ಮೇಲೆ ಒತ್ತಡ ಹೇರುತ್ತ ಕರ್ನಾಟಕಕ್ಕೆ ನೀರು ಬಿಡುವಂತೆ ಸೂಚನೆ ಕೊಡಿಸುತ್ತಲೇ ಇದೆ. ಇದೀಗ ಮತ್ತೆ ತಮಿಳುನಾಡಿಗೆ ನೀರು ಬಿಡುವಂತೆ ಕಾವೇರಿ ನೀರು ನಿಯಂತ್ರಣಾ ಸಮಿತಿ ಸೂಚನೆ ನೀಡಿದೆ. ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸಬೇಕು ಎಂದು ಮಂಗಳವಾರ ನಡೆದ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಕಾವೇರಿ ನೀರು ಬಳಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಅನ್ಯಾಯದ ಪೆಟ್ಟು ಬೀಳುತ್ತಲೇ ಇದೆ.
ಕಾವೇರಿ ನೀರು ಬಿಡಲ್ಲ ಎನ್ನುತ್ತಲೇ ನೀರು ಬಿಡುವ ಸರ್ಕಾರ..!

ಕಾವೇರಿ ನೀರು ಬಿಡುವುದಕ್ಕೆ ಸದ್ಯಕ್ಕೆ ನಮ್ಮ ಬಳಿ ನೀರು ಇಲ್ಲ ಎಂದು ಡಿಸಿಎಂ ಹಾಗು ಜಲಸಂಪನ್ಮೂಲ ಸಚಿವರೂ ಆಗಿರುವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ, ಬುಧವಾರ ಮತ್ತೊಂದು ಮೇಲ್ಮಟ್ಟದ ಸಭೆ ಇದೆ. ಅಲ್ಲಿ ನಮ್ಮ ಅಧಿಕಾರಿಗಳು ಇರುತ್ತಾರೆ. ನಾನು ಹಾಗು ಸಿಎಂ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ನೀರು ಬಿಡಲು ಆಗಲ್ಲ ಎಂದು ಅಧಿಕಾರಿಗಳಿಗೆ ತಿಳಿಸಿದ್ದೇವೆ. ಆದರೆ ಅವರು 12,500 ಕ್ಯೂಸೆಕ್ ನೀರು ಕೇಳಿದ್ದಾರೆ, 5000 ಬಿಡಬೇಕು ಅಂತ ಪ್ರಾಧಿಕಾರ ಹೇಳಿದೆ. ನೀರು ಬಿಡೋಕೆ ಸದ್ಯಕ್ಕೆ ನಮ್ಮಲ್ಲಿ ನೀರಿಲ್ಲ. ದೆಹಲಿಯ ಕಾನೂನು ತಜ್ಞರ ಜೊತೆ ಮಾತನಾಡುತ್ತಿದ್ದೇವೆ. ರೈತರ ಬೆಳೆಗೆ ನೀರು ಕೊಡುವುದಕ್ಕಿಂತ, ಕುಡಿಯುವ ನೀರಿಗಾಗಿ ನೀರು ಬೇಕಿದೆ. ಸುಪ್ರಿಂಕೋರ್ಟ್ ಕೂಡ ನಾವು ನಿರ್ಧಾರ ಮಾಡಲು ಆಗಲ್ಲ ಅಂತ ಕೈ ಚೆಲ್ಲಿದೆ. ಆದರೆ ನಾವು ನೀರು ಬಿಡುವುದು ಬಹಳ ಕಷ್ಟ ಎಂದಿದ್ದಾರೆ.
ತುರ್ತು ಸಭೆ ನಡೆಸಿದ ಸಿಎಂ, ಸರ್ವಪಕ್ಷ ಸಭೆಗೆ ನಿರ್ಧಾರ..!
ಕರ್ನಾಟಕ ನೀರು ಬಿಡುವುದಿಲ್ಲ ಎಂದು ಕೇಂದ್ರಕ್ಕೆ ಸೆಟೆದು ನಿಲ್ಲುವುದನ್ನು ನಿಟ್ಟು ಬೇರೆ ಆಯ್ಕೆಗಳಿಲ್ಲ. ಆದರೆ ಆ ರೀತಿ ಆದಾಗ ಕಾನೂನು ಸಂಘರ್ಷ ಏರ್ಪಡುತ್ತದೆ. ಒಂದು ವೇಳೆ ಕರ್ನಾಟಕದಿಂದ ನೀರು ಬಿಟ್ಟಿದ್ದೇ ಆದರೆ ತಮಿಲುನಾಡಿಗೆ ಕಾಂಗ್ರೆಸ್ ಸರ್ಕಾರ ಉದ್ದೇಶಪೂರ್ವಕವಾಗಿಯೇ ನೀರು ಬಿಡುತ್ತಿದೆ ಎನ್ನುವ ಆರೋಪ ಕೇಳಿ ಬರುತ್ತದೆ. ಈಗಾಗಲೇ ರೈತರು ಹಾಗು ವಿರೋಧ ಪಕ್ಷಗಳು ಕಾಂಗ್ರೆಸ್ ಹಾಗು ತಮಿಳುನಾಡಿನಲ್ಲಿ ಅಧಿಕಾರದಲ್ಲಿರುವ ಡಿಎಂಕೆ ಪಕ್ಷ ಮೈತ್ರಿ ಪಕ್ಷಗಳಾಗಿರುವ ಕಾರಣಕ್ಕೆ ನೀರು ಬಿಡಲಾಗ್ತಿದೆ ಎಂದು ಆರೋಪ ಮಾಡಿವೆ. ಇದೀಗ ಯಾವುದೇ ಆರೋಪ ಹೊತ್ತು ಕೊಳ್ಳುವುದಕ್ಕೆ ತಯಾರಿಲ್ಲದ ರಾಜ್ಯ ಸರ್ಕಾರ, ವಿರೋಧ ಪಕ್ಷಗಳ ನಾಯಕರ ಸಭೆ ಕರೆದು ನೀರು ಬಿಡುವ ಅಥವಾ ಕೇಂದ್ರದ ವಿರುದ್ಧ ಕಾನೂನು ಸಂಘರ್ಷಕ್ಕೆ ಇಳಿಯುವ ನಿರ್ಧಾರ ಮಾಡಲು ತೀರ್ಮಾನ ಮಾಡಿದೆ.

ಈಗಾಗಲೇ ಹೋರಾಟಕ್ಕೆ ಕಿಚ್ಚು ಹಚ್ಚಿರುವ ಅನ್ನದಾತರು..!
ಕರ್ನಾಟಕದ ರೈತರಿಗೆ ನೀರು ಬಿಡುಗಡೆ ಮಾಡಲು ಸಾಧ್ಯವಾಗ್ತಿಲ್ಲ. ಆದರೂ ತಮಿಳುನಾಡಿನ ರೈತರ ಬೆಳೆಗಾಗಿ ನೀರು ಹರಿಸಲಾಗ್ತಿದೆ. ಬೆಂಗಳೂರು ಸೇರಿದಂತೆ ಕಾವೇರಿ ನದಿ ತೀರದ ಪಟ್ಟಣಗಳಿಗೆ ಕುಡಿಯುವ ನೀರು ಒದಗಿಸಲು ಕಷ್ಟ ಸಾಧ್ಯವಾಗಿದೆ. ಯಾವುದೇ ಕಾರಣಕ್ಕೂ ನೀರು ಬಿಡುವ ಪ್ರಶ್ನೆಯೇ ಇಲ್ಲ ಎಂದು ರೈತನಾಯಕ ಹಾಗು ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾಧ್ಯಮಗಳ ಎದುರು ಆಕ್ರೋಶ ಹೊರ ಹಾಕಿದ್ದಾರೆ. ನಾವು ರೈತರ ಬೆಳೆಗಳಿಗೆ ನೀರು ಕೇಳ್ತಿಲ್ಲ. ಕುಡಿಯುವ ನೀರಿಗೂ ಸಂಕಷ್ಟ ಎದುರಾಗಲಿದೆ. ಒಂದು ವೇಳೆ ತಮಿಳುನಾಡಿ ನೀರು ಬಿಟ್ಟರೆ ಹೋರಾಟದ ರೂಪ ಬದಲಾಗಲಿದೆ ಎಂದು ರಾಜ್ಯ ಸರ್ಕಾರಕ್ಕೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಎಚ್ಚರಿಕೆ ನೀಡಿದ್ದಾರೆ. ಸರ್ಕಾರ ಯಾವುದೇ ಕಾರಣಕ್ಕೂ ನೀರು ಬಿಡುವ ನಿರ್ಧಾರ ಮಾಡಬಾರದು. ಎಲ್ಲಾ ರೈತ ಸಂಘಟನೆಗಳು, ರಾಜಕೀಯ ಪಕ್ಷಗಳು ಈ ಹೋರಾಟಕ್ಕೆ ಕೈ ಜೋಡಿಸಬೇಕು ಎಂದು ಆಗ್ರಹ ಮಾಡಿದ್ದಾರೆ. ಇಂದಿನ ಸರ್ವಪಕ್ಷ ಸಭೆಯ ನಿರ್ಧಾರ ಏನು ಹೊರಬೀಳಲಿದೆ ಅನ್ನೋದು ಕುತೂಹಲ ಮೂಡಿಸಿದೆ.
ಕೃಷ್ಣಮಣಿ