ನವದೆಹಲಿ : ವಿಶ್ವ ಹವಾಮಾನ ಸಂಸ್ಥೆ (WMO) ಬಿಡುಗಡೆ ಮಾಡಿರುವ ಇತ್ತೀಚಿನ ವರದಿಯ ಪ್ರಕಾರ, ಪೆಸಿಫಿಕ್ ಸಾಗರದಲ್ಲಿ ಎಲ್ ನಿನೋ ವಿದ್ಯಮಾನವು ಹಿಂದೆಂದೂ ಕಾಣದ ರೀತಿಯಲ್ಲಿ ಪ್ರಬಲಗೊಳ್ಳುವ ಸಾಧ್ಯತೆಯಿದೆ. ಕೇಂದ್ರ ಮತ್ತು ಪೂರ್ವ ಸಮಭಾಜಕ ಪೆಸಿಫಿಕ್ ಸಾಗರ ಪ್ರದೇಶದಲ್ಲಿ ನೀರಿನ ಮೇಲ್ಮೈ ತಾಪಮಾನವು (Temperature) ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಿದ್ದು, ಇದು ಜಾಗತಿಕ ಹವಾಮಾನ ವ್ಯವಸ್ಥೆಯ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ತಾಪಮಾನ ಏರಿಕೆ ಮತ್ತು ಸಾಗರದ ಸ್ಥಿತಿ
ಸಾಮಾನ್ಯವಾಗಿ ಎಲ್ ನಿನೋ ಪ್ರಕ್ರಿಯೆ ಆರಂಭವಾಗಲು ಸಾಗರದ ತಾಪಮಾನ 0.5 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚಾಗಬೇಕಾಗುತ್ತದೆ. ಆದರೆ ಈ ಬಾರಿಯ ಎಲ್ ನಿನೋ ತೀವ್ರತೆಯು ವಾಡಿಕೆಗಿಂತ ಭಾರಿ ಪ್ರಮಾಣದಲ್ಲಿ ಏರಿಕೆಯಾಗುವ ಲಕ್ಷಣಗಳು ಕಂಡುಬರುತ್ತಿವೆ. ಮುಂಬರುವ ತಿಂಗಳುಗಳಲ್ಲಿ ಇದು ಗರಿಷ್ಠ ಮಟ್ಟವನ್ನು ತಲುಪುವ ಸಾಧ್ಯತೆಯಿದ್ದು, ಸಮುದ್ರದ ತಾಪಮಾನ ದಾಖಲೆ ಮಟ್ಟಕ್ಕೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಸಂಸ್ಥೆ ಸ್ಪಷ್ಟಪಡಿಸಿದೆ.
ಕೃಷಿ ಮತ್ತು ನೀರಿನ ಸಂಪನ್ಮೂಲಗಳ ಮೇಲೆ ಹೊಡೆತ
ಹೆಚ್ಚುತ್ತಿರುವ ತಾಪಮಾನ ಮತ್ತು ವಾಡಿಕೆಗಿಂತ ಕಡಿಮೆಯಾಗುವ ಮಳೆಯು ಜಾಗತಿಕ ಮಟ್ಟದಲ್ಲಿ ತೀವ್ರ ಬಿಸಿಗಾಳಿಗೆ ಕಾರಣವಾಗಬಹುದು. ಇದು ಕೃಷಿ ಚಟುವಟಿಕೆಗಳಿಗೆ ಭಾರಿ ಹಿನ್ನಡೆ ಉಂಟುಮಾಡುವುದಲ್ಲದೆ, ಕುಡಿಯುವ ನೀರು ಮತ್ತು ಕೃಷಿ ನೀರಿನ ಸಂಪನ್ಮೂಲಗಳ ಕೊರತೆಗೆ ಕಾರಣವಾಗುವ ಸಾಧ್ಯತೆಯಿದೆ. ಭಾರತ ಸೇರಿದಂತೆ ಮಧ್ಯ ಅಮೆರಿಕ ಹಾಗೂ ದಕ್ಷಿಣ ಅಮೆರಿಕದ ಉತ್ತರ ಭಾಗಗಳಲ್ಲಿ ತೀವ್ರ ಬರಗಾಲ ಪರಿಸ್ಥಿತಿ ಎದುರಾಗುವ ಆತಂಕವಿದೆ.
ಜಾಗತಿಕ ಮಟ್ಟದಲ್ಲಿ ಹವಾಮಾನ ಏರುಪೇರು
ಈ ವಿದ್ಯಮಾನದಿಂದಾಗಿ ಪ್ರಪಂಚದ ನಾನಾ ಭಾಗಗಳಲ್ಲಿ ಅನಿರೀಕ್ಷಿತ ಪ್ರಕೃತಿ ವಿಕೋಪಗಳು, ಅತಿಯಾದ ಶಾಖ ಮತ್ತು ಮಳೆಯ ಅಸಮತೋಲನ ಸೃಷ್ಟಿಯಾಗಲಿದೆ. ಹವಾಮಾನ ವೈಪರೀತ್ಯದ ಈ ಅಪಾಯಕಾರಿ ಪರಿಣಾಮಗಳನ್ನು ಎದುರಿಸಲು ಎಲ್ಲಾ ದೇಶಗಳು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಹವಾಮಾನ ತಜ್ಞರು ಸಲಹೆ ನೀಡಿದ್ದಾರೆ.
ರಾಜ್ಯ ಪೊಲೀಸ್ ಸಿಬ್ಬಂದಿಗೆ ಇನ್ಮುಂದೆ ನೂತನ ವಿಸಿಲ್ ಗಾರ್ಡ್: ಸಿಎಂ ಡಿ.ಕೆ.ಶಿವಕುಮಾರ್ ಘೋಷಣೆ






