ಬೆಂಗಳೂರು : ಬಂಗಾಳಕೊಲ್ಲಿಯ ನೈಋತ್ಯ ಭಾಗದಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ,ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದಿನಿಂದ ಮಳೆಯಾಗುವ (Rain) ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (Meteorological Department) ಮಾಹಿತಿ ನೀಡಿದೆ.
ಅಕ್ಟೋಬರ್ 23ರಿಂದ 25ರ ವರೆಗೆ ಮೈಸೂರು, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಹಾಗೂ ಹಾಸನದಲ್ಲಿ ಅಕ್ಟೋಬರ್ 23ರಿಂದ ಮುಂದಿನ ಮೂರು ದಿನಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಇದಲ್ಲದೆ, ಮಂಡ್ಯದಲ್ಲಿ ಅಕ್ಟೋಬರ್ 25, ಕೋಲಾರದಲ್ಲಿ ಅಕ್ಟೋಬರ್ 26 ಮತ್ತು ಕರಾವಳಿಯ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅಕ್ಟೋಬರ್ 21ರಂದು ಯೆಲ್ಲೋ ಅಲರ್ಟ್ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಮಂಡ್ಯ ಹಾಗೂ ತುಮಕೂರು ಭಾಗಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಸಾಧಾರಣ ಪ್ರಮಾಣದ ಮಳೆಯಾಗಲಿದೆ. ಆದರೆ, ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗದೆ ಒಣಹವೆಯೇ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆಯ ವರದಿ ಸ್ಪಷ್ಟಪಡಿಸಿದೆ.






