ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಬ್ರಿಟಿಷ್ ಕಾಲದ ಹಳೆಯ ವಿಸಿಲ್ ಗಾರ್ಡ್ ಬದಲಾಗಿ ನೂತನ ಲ್ಯಾನ್ ವಿಸಿಲ್ ಗಾರ್ಡ್ (Whistle Guard) ನೀಡಲಾಗುವುದು ಎಂದು ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ಘೋಷಿಸಿದ್ದಾರೆ.
ಈ ಹಿಂದೆ ಸಿಬ್ಬಂದಿಯ ಹಿತದೃಷ್ಟಿಯಿಂದ ಜಾರಿಗೆ ತಂದಿದ್ದ ಸುಧಾರಣೆಗಳ ಮುಂದುವರಿದ ಭಾಗವಾಗಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಟೋಪಿ ಬದಲಾವಣೆ ಬೆನ್ನಲ್ಲೇ ಮತ್ತೊಂದು ಐತಿಹಾಸಿಕ ಹೆಜ್ಜೆ
ಹಿಂದೆ ಕೆಳಹಂತದ ಸಿಬ್ಬಂದಿ ಧರಿಸುತ್ತಿದ್ದ ಶೌಚ್ ಟೋಪಿಗಳು ಕರ್ತವ್ಯದ ವೇಳೆ, ವಿಶೇಷವಾಗಿ ಬೇಸಿಗೆಯ ಬಿರುಬಿಸಿಲಿನಲ್ಲಿ ತೀವ್ರ ಅಸ್ವಸ್ಥತೆಯನ್ನು ಉಂಟುಮಾಡುತ್ತಿದ್ದವು. ಈ ಹಿನ್ನೆಲೆಯಲ್ಲಿ ದೇಶದ ಹಲವು ರಾಜ್ಯಗಳ ಮಾದರಿಗಳನ್ನು ಪರಿಶೀಲಿಸಿ, ಬ್ರಿಟಿಷ್ ಕಾಲದ ವಿನ್ಯಾಸವನ್ನು ಕೈಬಿಟ್ಟು ಆಧುನಿಕ ನೇವಿ ಬ್ಲೂ ಪೀಕ್ ಕ್ಯಾಪ್‌ಗಳನ್ನು ನೀಡಲಾಗಿತ್ತು. ಸರ್ಕಾರದ ಈ ನಡೆ ಸಿಬ್ಬಂದಿ ದಕ್ಷತೆ ಹಾಗೂ ಸಂತಸದಿಂದ ಕರ್ತವ್ಯ ನಿರ್ವಹಿಸಲು ನೆರವಾಗಿತ್ತು. ಇದೀಗ ಅದೇ ಹಾದಿಯಲ್ಲಿ ಸಮವಸ್ತ್ರದ ವಿಸಿಲ್ ಚೈನ್ ಬದಲಾವಣೆಗೂ ಸರ್ಕಾರ ಮುಂದಾಗಿದೆ.
ಹಳೆಯ ಮೆಟಲ್ ಚೈನ್‌ನಿಂದ ಆರೋಗ್ಯ ಸಮಸ್ಯೆಗಳ ಆತಂಕ
ಪ್ರಸ್ತುತ ಸಮವಸ್ತ್ರದಲ್ಲಿ ಬಳಕೆಯಲ್ಲಿರುವ ಮೆಟಲ್ ವಿಸಿಲ್ ಚೈನ್ ಹಾಗೂ ಲೋಹದ ಬಟನ್‌ಗಳು ಹವಾಮಾನ ವೈಪರೀತ್ಯದಿಂದಾಗಿ ಬೇಗನೆ ತುಕ್ಕು ಹಿಡಿಯುತ್ತಿವೆ. ಇದರಿಂದ ಸಮವಸ್ತ್ರದ ಮೇಲೆ ಕಲೆಗಳು ಕೂತು ಬಟ್ಟೆಗಳು ಹಾಳಾಗುವುದಲ್ಲದೆ, ತುಕ್ಕು ದೇಹಕ್ಕೆ ತಾಗಿ ಸಿಬ್ಬಂದಿಗೆ ಚರ್ಮರೋಗ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಎದುರಾಗುತ್ತಿದ್ದವು. ಈ ತೊಂದರೆಗಳನ್ನು ನಿವಾರಿಸಲು ಆಧುನಿಕ ಹಾಗೂ ಸುರಕ್ಷಿತ ಬದಲಾವಣೆ ಅನಿವಾರ್ಯವಾಗಿತ್ತು.
ಹಲವು ರಾಜ್ಯಗಳಲ್ಲಿ ಈಗಾಗಲೇ ಹೊಸ ಮಾದರಿ ಜಾರಿ
ಸಿಕ್ಕಿಂ, ಪಂಜಾಬ್, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ತೆಲಂಗಾಣ, ರಾಜಸ್ಥಾನ, ದೆಹಲಿ, ಜಾರ್ಖಂಡ್, ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ಕೇರಳ, ಒಡಿಶಾ, ಛತ್ತೀಸ್‌ಗಢ, ಮೇಘಾಲಯ, ಉತ್ತರ ಪ್ರದೇಶ, ಉತ್ತರಾಖಂಡ ಹಾಗೂ ಹಿಮಾಚಲ ಪ್ರದೇಶ ಸೇರಿದಂತೆ ದೇಶದ ಬಹುತೇಕ ರಾಜ್ಯಗಳಲ್ಲಿ ಮೆಟಲ್ ಚೈನ್ ಬದಲಿಸಿ ಖಾಕಿ ಅಥವಾ ನೀಲಿ ಬಣ್ಣದ ವಿಸಿಲ್ ಗಾರ್ಡ್ ಹಾಗೂ ಪಾಲಿಶ್ಡ್ ಮ್ಯಾಟ್ ಫಿನಿಶ್ ಬಟನ್‌ಗಳನ್ನು ಕಡ್ಡಾಯಗೊಳಿಸಲಾಗಿದೆ. ನಮ್ಮ ರಾಜ್ಯದ ಅರಣ್ಯ ಮತ್ತು ಸಾರಿಗೆ ಇಲಾಖೆಗಳಲ್ಲೂ ಈ ವ್ಯವಸ್ಥೆ ಈಗಾಗಲೇ ಜಾರಿಯಲ್ಲಿದೆ.
ಪೊಲೀಸ್ ದೂರುಗಳ ಪ್ರಾಧಿಕಾರದ ನಿರಂತರ ಪ್ರಯತ್ನಕ್ಕೆ ಸಂದ ಜಯ
ರಾಜ್ಯ ಪೊಲೀಸ್ ಸಿಬ್ಬಂದಿಯ ಆರೋಗ್ಯ ಮತ್ತು ಹಿತದೃಷ್ಟಿಯಿಂದ ನೇವಿ ಬ್ಲೂ ಪೀಕ್ ಟೋಪಿಗೆ ಹೊಂದಿಕೆಯಾಗುವ ವಿಸಿಲ್ ಗಾರ್ಡ್ ಹಾಗೂ ಮ್ಯಾಟ್ ಫಿನಿಶ್ ಬಟನ್‌ಗಳನ್ನು ಅಳವಡಿಸಬೇಕು ಎಂದು ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪನವರು ಗೃಹ ಇಲಾಖೆ ಮತ್ತು ಡಿಜಿ-ಐಜಿಪಿಯವರಿಗೆ ಇತರೆ ರಾಜ್ಯಗಳ ಛಾಯಾಚಿತ್ರಗಳ ಸಮೇತ ನಿರಂತರವಾಗಿ ಪತ್ರ ಬರೆದು ಮನವಿ ಸಲ್ಲಿಸಿದ್ದರು. ತಮ್ಮ ಪ್ರಸ್ತಾವನೆಯನ್ನು ಪರಿಗಣಿಸಿ ಜಾರಿಗೆ ತಂದಿದ್ದಕ್ಕಾಗಿ ಅವರು ಮುಖ್ಯಮಂತ್ರಿಗಳಿಗೆ ಹಾಗೂ ಗೃಹ ಸಚಿವರಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.
ಪ್ರತಿ ಮನೆಗೂ ಅಭಿವೃದ್ಧಿಯ ಬೆಳಕು ತಲುಪಿಸುವುದೇ ನಮ್ಮ ಸಂಕಲ್ಪ: ಸಿಎಂ ಡಿ.ಕೆ. ಶಿವಕುಮಾರ್






