ವಿಧಾನಸಭಾ ಚುನಾವಣೆಯಲ್ಲಿ ಮಕಾಡೆ ಮಲಗಿದ ಬಳಿಕ ರಾಜ್ಯದಲ್ಲಿ ಬಿಜೆಪಿ ಹಾಗು ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡರು. ಲೋಕಸಭಾ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಪಡೆದುಕೊಂಡು ಕುಮಾರಸ್ವಾಮಿ ಕೇಂದ್ರದಲ್ಲಿ ಮಂತ್ರಿಯೂ ಆಗಿದ್ದಾರೆ. ಈ ನಡುವೆ ಇಬ್ಬರ ನಡುವೆ ಯಾರಿಂದ ಯಾರಿಗೆ ಸಹಾಯ ಆಗಿದೆ ಅನ್ನೋ ಬಗ್ಗೆ ಚರ್ಚೆಗಳು ಶುರುವಾಗಿದೆ. ಹಿಂದೂ ಫೈರ್ ಬ್ರಾಂಡ್ ಬಸನಗೌಡ ಪಾಟೀಲ್ ಹೇಳಿಕೆ ಕುಮಾರಸ್ವಾಮಿ ಕಣ್ಣು ಕೆಂಪಾಗುವಂತೆ ಮಾಡಿದೆ. ಯತ್ನಾಳ್ ಹೇಳಿಕೆಗೆ ತಾಳ್ಮೆಯಿಂದಲೇ ತಿರುಗೇಟು ನೀಡಿದ್ದಾರೆ.
ಚನ್ನಪಟ್ಟಣ ಟಿಕೆಟ್ ವಿಚಾರವಾಗಿ ಯತ್ನಾಳ್ ಮಾತನಾಡಿದ್ದು, ಜೆಡಿಎಸ್‌ಗೆ ನಾವು ಪುನರ್ಜನ್ಮ ಕೊಟ್ಟಿದ್ದೇವೆ.. ಕುಮಾರಸ್ವಾಮಿ ಅವರು ಚನ್ನಪಟ್ಟಣ ಟಿಕೆಟ್ ತ್ಯಾಗ ಮಾಡಬೇಕು ಎಂದಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಯತ್ನಾಳ್, ಕುಮಾರಸ್ವಾಮಿ ಅವರ ಸಹಾಯ ನಮಗೆ ಬೇಕು. ನಮ್ಮ ಶಕ್ತಿ ಕುಮಾರಸ್ವಾಮಿ ಅವರಿಗೆ ಬೇಕು. ಕುಮಾರಸ್ವಾಮಿ ಬಂದಿರೋದ್ರಿಂದ ನಮಗೆ ಲೋಕಸಭೆಯಲ್ಲಿ ಅನುಕೂಲ ಆಗಿದೆ. ಜೆಡಿಎಸ್‌ಗೆ ನಾವು ಪುನರ್ಜನ್ಮ ಕೊಟ್ಟಿದ್ದೇವೆ. ಹೀಗಾಗಿ ಕುಮಾರಸ್ವಾಮಿ ಅವರು ಟಿಕೆಟ್ ತ್ಯಾಗ ಮಾಡಬೇಕು ಎಂದಿದ್ದಾರೆ.
ಚನ್ನಪಟ್ಟಣ ಉಪಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಮಂಡ್ಯದಲ್ಲಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಮಾತನಾಡಿದ್ದು, ಬಿ.ಎಸ್. ಯಡಿಯೂರಪ್ಪ ಜೊತೆಗೆ ಎಲ್ಲರೂ ಸೇರಿ ಚರ್ಚೆ ಮಾಡಿ ಆಯ್ಕೆ ಮಾಡ್ತೇವೆ ಎಂದಿದ್ದಾರೆ. ಅಲ್ಲದೆ, ಜೆಡಿಎಸ್‌ಗೆ ಮರುಜನ್ಮ ಕೊಟ್ಟಿದ್ದೇವೆ ಎಂಬ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಟಾಂಗ್ ಕೊಟ್ಟಿದ್ದು, ಯಾರಿಗೆ ಯಾರು ಮರುಜನ್ಮ ಕೊಟ್ಟಿದ್ದಾರೆ ಎಂದು ಬೀದಿಯಲ್ಲಿ ಚರ್ಚೆ ಮಾಡೋಕೆ ಆಗಲ್ಲ ಎಂದಿದ್ದಾರೆ. ಯಾವ ರೀತಿ ಶಕ್ತಿ ತುಂಬಿದೆ ಎಂಬ ಚರ್ಚೆ ಈಗ ಉಪಯೋಗವಾಗಲ್ಲ. ದೆಹಲಿ ನಾಯಕರಿಗೆ ಅದರ ಬಗ್ಗೆ ಸಂಪೂರ್ಣ ಮಾಹಿತಿ ಇದೆ. ಅದನ್ನ ನಾನು ಬೀದಿಯಲ್ಲಿ ನಿಂತು ಚರ್ಚೆ ಮಾಡಲೇ..? ಅದರ ಅವಶ್ಯಕತೆ ಇಲ್ಲ ಎಂದಿದ್ದಾರೆ.
ನಾನು ಈ ಕ್ಷಣದವರೆಗೂ ಜನತಾದಳ ಬಿಜೆಪಿ ಎಂದು ಬೇರ್ಪಡಿಸಿ ಮಾತನಾಡಿಲ್ಲ. ಎನ್‌ಡಿಎ ಅಭ್ಯರ್ಥಿ ಎಂದೆ ಮಾತನಾಡಿದ್ದೇನೆ. ತ್ಯಾಗದ ಬಗ್ಗೆ ಮಾತನಾಡುವವರು ಅವರ ಆತ್ಮಕ್ಕೆ ಪ್ರಶ್ನೆ ಹಾಕಿಕೊಳ್ಳಬೇಕು. ನಮ್ಮ ಮೈತ್ರಿಗೆ ಅಡ್ಡಿ ಆಗಬಾರದು ಎಂದು ನಡೆದುಕೊಳ್ಳುತ್ತಿದ್ದೇನೆ ಎನ್ನುವ ಮೂಲಕ ಹಾಸನ ಸೋಲನ್ನು ಪರೋಕ್ಷವಾಗಿ ಹೊರಹಾಕಿದ್ದಾರೆ. ರಾಜ್ಯದಲ್ಲಿ ಜೆಡಿಎಸ್ ಸಂಪೂರ್ಣವಾಗಿ ಬಿಜೆಪಿಯನ್ನು ಬೆಂಬಲಿಸದರೂ ಬಿಜೆಪಿ ಸಂಪೂರ್ಣವಾಗಿ ಜೆಡಿಎಸ್ ಬೆಂಬಲಿಸಲಿಲ್ಲ ಅನ್ನೋ ಚರ್ಚೆಗಳ ನಡುವೆ ಯತ್ನಾಳ್ ಮಾತು ಕಿಚ್ಚು ಹೊತ್ತಿಸಿದೆ.