ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (RCEP) ಮುಕ್ತ ವ್ಯಾಪಾರ ಒಪ್ಪಂದದಿಂದ ಹೊರಗುಳಿಯಲು ಭಾರತ ನಿರ್ಧರಿಸಿದೆ. ಭಾರತದ ಈ ನಿರ್ಧಾರದಿಂದಾಗಿ RCEP ಮುಕ್ತ ವ್ಯಾಪಾರ ಒಪ್ಪಂದದ ಆಶಯವು ಮೂರನೇ ಎರಡು ಭಾಗದಷ್ಟು ಮಾತ್ರ ಈಡೇರಿದಂತಾಗಿದೆ. ಒಪ್ಪಂದದ ವ್ಯಾಪ್ತಿಯಲ್ಲಿ ಭಾರತ ಸೇರಿದಂತೆ 16 ದೇಶಗಳಿದ್ದರೂ, ಚೀನಾ ನಂತರ ಭಾರತದ ಪಾಲು ಬಹುದೊಡ್ಡದು. ಜನಸಂಖ್ಯೆ ಮತ್ತು ಆರ್ಥಿಕ ವಹಿವಾಟಿನ ಲೆಕ್ಕ ಎರಡರಲ್ಲೂ ಭಾರತ ಈ ಸಮೂಹ ರಾಷ್ಟ್ರಗಳ ಪೈಕಿ ಮೂರನೇ ಒಂದರಷ್ಟು ಪಾಲು ಹೊಂದಿದೆ. ಹೀಗಾಗಿ ಭಾರತ ಒಳಗೊಳ್ಳದ RCEP ಮುಕ್ತವ್ಯಾಪಾರ ಒಪ್ಪಂದ ಅಪೂರ್ಣವೇ.
ಹೆಚ್ಚು ಓದಿದ ಸ್ಟೋರಿಗಳು
ಅದೇನೇ ಇರಲಿ, RCEP ಕುರಿತಂತೆ ದೇಶದಲ್ಲಿ ಇನ್ನಿಲ್ಲದ ಆತಂಕಗಳು ಮನೆಮಾಡಿದ್ದರೂ, ಮುಕ್ತ ವ್ಯಾಪಾರ ಒಪ್ಪಂದ ವಿರುದ್ಧ ಪ್ರತಿಭಟನೆಗಳು ಅಂತರ್ಗತವಾಗಿ ದೇಶವ್ಯಾಪಿ ಪ್ರವಹಿಸುತ್ತಿದ್ದರೂ ಸ್ಪಷ್ಟನೆ ನೀಡದ ಅಥವಾ ಜನರ ಆತಂಕಗಳನ್ನು ನಿವಾರಿಸದ ಮೋದಿ ಸರ್ಕಾರವು ಕೊನೆ ಕ್ಷಣದವರೆಗೂ ಜನರನ್ನು ಆತಂಕದೊಂದಿಗೆ ತುದಿಗಾಲ ಮೇಲೆ ನಿಲ್ಲಿಸಿತ್ತು. ನರೇಂದ್ರ ಮೋದಿ ಸರ್ಕಾರ ಈ ಹಿಂದೆ ಕೈಗೊಂಡಿರುವ ಕೆಲವು ನಿರ್ಧಾರಗಳ ಹಿನ್ನೆಲೆಯಲ್ಲಿ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಬಹುದೆಂಬ ಆತಂಕ ರೈತರು ವ್ಯಾಪಾರಿ ವರ್ಗಗಳಿಗಷ್ಟೇ ಅಲ್ಲಾ, ಮೋದಿ ಆರ್ಥಿಕ ನೀತಿಯನ್ನು ಕಟುವಾಗಿ ವಿಮರ್ಶಿಸುವ ಆರ್ಥಿಕ ತಜ್ಞರಲ್ಲೂ ಇತ್ತು. ಅದೃಷ್ಟವಶಾತ್ ಪ್ರಧಾನಿ ನರೇಂದ್ರಮೋದಿ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವುದಿಲ್ಲ ಎಂದು ಘೋಷಿಸಿದ್ದಾರೆ. ಅಲ್ಲದೇ ಸಹಿ ಹಾಕಲು ತಮ್ಮ ಆತ್ಮಸಾಕ್ಷಿ ಒಪ್ಪುತ್ತಿಲ್ಲ ಎಂದೂ ಹೇಳಿಕೊಂಡಿದ್ದಾರೆ.
ಆತ್ಮಸಾಕ್ಷಿ ಒಪ್ಪಿಲ್ಲವೋ ಅಥವಾ ಈ ಹಿಂದಿನ ಜನಪರವಲ್ಲದ ನೀತಿಗಳನ್ನು ಜಾರಿ ಮಾಡಿದ ನಂತರದಲ್ಲಿ ನಡೆದ ವಿವಿಧ ಚುನಾವಣೆಗಳಲ್ಲಿ ನಿರೀಕ್ಷಿತ ಫಲಿತಾಂಶ ಬಾರದೇ ಇದ್ದುದರಿಂದ ದೇಶೀಯ ರಾಜಕೀಯ ಲಾಭಕ್ಕಾಗಿ ಸಹಿ ಹಾಕಿಲ್ಲವೋ ಎಂಬುದು ಚರ್ಚಾರ್ಹ ಪ್ರಶ್ನೆ.
ಪ್ರಧಾನಿ ಮೋದಿ ಸಹಿ ಹಾಕದಿರಲು ಕೆಲಕಂಡ ಅರ್ಧ ಡಜನ್ ಕಾರಣಗಳಿರಬಹುದು ಎಂಬುದು ನಮ್ಮ ಅಂದಾಜು. ಆ ಆರು ಕಾರಣಗಳು ಇಲ್ಲಿವೆ:
ಚುನಾವಣಾ ಫಲಿತಾಂಶಗಳು
ಇತ್ತೀಚೆಗೆ ನಡೆದ ಮಹಾರಾಷ್ಟ್ರ ಮತ್ತು ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಲೋಕಸಭಾ ಚುನಾವಣೆಯಲ್ಲಿನ ಅಭೂತಪೂರ್ವ ಗೆಲುವಿನ ಸೂತ್ರದಾರ ನರೇಂದ್ರಮೋದಿ ಅವರ ಅಹಮ್ಮಿಗೆ ಸೂಚಿ ಚುಚ್ಚಿದ್ದಾರೆ. ಇಡೀ ದೇಶದ ಶೇ.99 ರಷ್ಟು ಮಾಧ್ಯಮಗಳೆಲ್ಲವೂ ಮೋದಿಗೆ ಅಭೂತಪೂರ್ವ ಜಯಭೇರಿಯ ಭವಿಷ್ಯ ನುಡಿದಿದ್ದರೆ, ಮತದಾರರು ಮಾತ್ರ ಸರಿಯಾದ ಪಾಠ ಕಲಿಸಿದ್ದಾರೆ. ಅತ್ತ ಹರ್ಯಾಣದಲ್ಲಾಗಲೀ, ಇತ್ತ ಮಹಾರಾಷ್ಟ್ರದಲ್ಲಾಗಲೀ ಬಿಜೆಪಿ ಮುಕ್ತವಾಗಿ ಸರ್ಕಾರ ರಚಿಸವಷ್ಟು ಸ್ಥಾನಗಳನ್ನು ಪಡೆಯಲಾಗಿಲ್ಲ. ಉಭಯ ರಾಜ್ಯಗಳಲ್ಲಿ ಕಳೆದ ಚುನಾವಣೆಗಳಲ್ಲಿ ಗೆದ್ದ ಸ್ಥಾನಗಳ ಪೈಕಿ ಹಲವು ಸ್ಥಾನಗಳನ್ನು ಕಳೆದುಕೊಂಡಿರುವ ಬಿಜೆಪಿ ಹೇಗೋ ಹರ್ಯಾಣದಲ್ಲಿ ಸರ್ಕಾರ ರಚಿಸಿ, ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವ ಸರ್ಕಸ್ ಮಾಡುತ್ತಿದ್ದರೂ, ಚುನಾವಣಾ ಫಲಿತಾಂಶಗಳು ಮಾತ್ರ ಬಿಜೆಪಿ ‘ನೈತಿಕ ಸೋಲ’ನ್ನು ಪ್ರತಿಬಿಂಬಿಸುತ್ತಿವೆ. ಉಭಯ ರಾಜ್ಯಗಳಲ್ಲೂ ರೈತ ಸಮುದಾಯದ ಪ್ರಾಬಲ್ಯ ಇರುವ ಪ್ರದೇಶದಲ್ಲೇ ಬಿಜೆಪಿಗೆ ಹಿನ್ನಡೆಯಾಗಿದೆ. ಹೀಗಾಗಿ ದೇಶೀಯ ರಾಜಕೀಯ ಲೆಕ್ಕಾಚಾರವು ಆರ್ಸಿಇಪಿ ಮುಕ್ತ ವ್ಯಾಪಾರ ಒಪ್ಪಂದದಿಂದ ಹೊರಗುಳಿಯುವ ನಿರ್ಧಾರಕ್ಕೆ ಪ್ರೇರೇಪಿಸಿದೆ.

ಆರ್ಥಿಕ ಹಿಂಜರಿತ
ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಸರ್ಕಾರ ಮೊಲದ ಅವಧಿಯಲ್ಲಿ ಕೈಗೊಂಡ ಕೆಲವು ಆರ್ಥಿಕ ನೀತಿಗಳಿಂದಾಗಿ ಇಡೀ ದೇಶವು ಆರ್ಥಿಕ ಹಿಂಜರಿತದ ಅಪಾಯದಲ್ಲಿದೆ. ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಜಿಡಿಪಿ ಕುಸಿಯುತ್ತಿದೆ. 2016ರಲ್ಲಿ ಜಾರಿಗೆ ತಂದ ಅಪನಗದೀಕರಣ ಸಂಪೂರ್ಣ ವೈಫಲ್ಯಗೊಂಡಿದ್ದರೆ ಮತ್ತು 2017ರಲ್ಲಿ ತರಾತುರಿಯಲ್ಲಿ ಜಾರಿಗೆ ತಂದ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯು ಕುಂಟುತ್ತಾ ಸಾಗಿದೆ. ಮಾಸಿಕ 1 ಲಕ್ಷ ಕೋಟಿ ತೆರಿಗೆ ಸಂಗ್ರಹದ ಗುರಿಯನ್ನು ಘೋಷಿಸಿ ಒಂದೂವರೆ ಡಜನ್ ಮಾಸಗಳೇ ಕಳೆದು ಹೋದವು. ಜಿ ಎಸ್ ಟಿ ತೆರಿಗೆ ಮಾತ್ರ ಆರಂಕಿ ಮುಟ್ಟುತ್ತಿಲ್ಲ. ಈ ಎರಡು ನೀತಿಗಳಲ್ಲದೇ ಆಗಾಗ್ಗೆ ಕೈಗೊಂಡ ನಿರ್ಧಾರಗಳು ಜನರ ಖರೀದಿ ಶಕ್ತಿಯನ್ನು ಕುಗ್ಗಿಸಿವೆ. ಉಪಭೋಗ ಕುಸಿಯುತ್ತಿದೆ. ಉತ್ಪಾದಕ ಮತ್ತು ಸೇವಾ ವಲಯವೂ ಹಿನ್ನಡೆಯತ್ತ ಸಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದರೆ ಸಹಭಾಗಿತ್ವ ರಾಷ್ಟ್ರಗಳಿಂದ ಪ್ರಹಾದೋಪಾದಿಯಲ್ಲಿ ದೇಶಕ್ಕೆ ಅಪ್ಪಳಿಸುತ್ತಿದ್ದ ಕಡಿಮೆ ಬೆಲೆಯ ಗ್ರಾಹಕ ಸರಕುಗಳು ದೇಶೀಯ ಉತ್ಪಾದಕರನ್ನು ಮತ್ತು ದೇಶೀಯ ಆರ್ಥಿಕತೆಯನ್ನು ಬಡುಮೇಲು ಮಾಡುವ ಸಾಧ್ಯತೆ ಇತ್ತು. ಇಂತಹ ಅಪಾಯದ ಮುನ್ಸೂಚನೆಯನ್ನು ಅರಿತು ಮೋದಿ ಸರ್ಕಾರ RCEP ಯಿಂದ ಹೊರಬಿದ್ದಿದೆ.
ವ್ಯಾಪಾರ ಕೊರತೆ
ನರೇಂದ್ರ ಮೋದಿ ಅಧಿಕಾರಕ್ಕೆ ಬಂದಂದಿನಿಂದಲೂ ಭಾರತದ ವ್ಯಾಪಾರ ಕೊರತೆ (ಅಂದರೆ ರಫ್ತು-ಆಮದು ನಡುವಿನ ಅಸಮತೋಲನ. ರಫ್ತು ಪ್ರಮಾಣ ಕುಗ್ಗಿ, ಆಮದು ಪ್ರಮಾಣ ತೀವ್ರವಾಗಿ ಹಿಗ್ಗುವುದು) ವರ್ಷದಿಂದ ವರ್ಷಕ್ಕೆ ಹಿಗ್ಗುತ್ತಲೇ ಇದೆ. ಮುಕ್ತ ವ್ಯಾಪಾರಕ್ಕೆ ಸಹಿ ಹಾಕಿರುವ ಎಲ್ಲಾ 15 ದೇಶಗಳೊಂದಿಗೂ ಭಾರತದ ವ್ಯಾಪಾರ ಕೊರತೆ ಹೊಂದಿದೆ. ಅಂದರೆ, ಈ ರಾಷ್ಟ್ರಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತಿದ್ದು, ರಫ್ತು ಪ್ರಮಾಣವು ಕಡಮೆ ಇದೆ. 2013-14ರಲ್ಲಿ ಈ ರಾಷ್ಟ್ರಗಳ ನಡುವಿನ ವ್ಯಾಪಾರ ಕೊರತೆಯು 54 ಬಿಲಿಯನ್ ಡಾಲರ್ ಗಳಷ್ಟಿತ್ತು. ಮೋದಿ ಸರ್ಕಾರದ ಈ ಐದು ವರ್ಷದ ಅವಧಿಯಲ್ಲಿ ವ್ಯಾಪಾರ ಕೊರತೆ ಪ್ರಮಾಣವು ದುಪ್ಪಟ್ಟಾಗಿದೆ ಅಂದರೆ 2018-19ರ ಸಾಲಿನಲ್ಲಿ ವ್ಯಾಪಾರ ಕೊರತೆ ಮೊತ್ತವು 105 ಬಿಲಿಯನ್ ಡಾಲರ್ ಗೆ ಏರಿದೆ. ಭಾರತವು ರಫ್ತು ಮಾಡುವ ಪೈಕಿ ಕೇವಲ ಶೇ.20ರಷ್ಟು ಸರಕುಗಳನ್ನು ಈ ರಾಷ್ಟ್ರಗಳಿಗೆ ರಫ್ತು ಮಾಡಿದರೆ, ಆಮದಿನಲ್ಲಿ ಈ ರಾಷ್ಟ್ರಗಳ ಪಾಲು ಶೇ.35ರಷ್ಟಿದೆ. 105 ಬಿಲಿಯನ್ ಡಾಲರ್ ವ್ಯಾಪಾರ ಕೊರತೆ ಪೈಕಿ ಚೀನಾದ ಪಾಲು ಅರ್ಧದಷ್ಟು ಅಂದರೆ 53 ಬಿಲಿಯನ್ ಡಾಲರ್ ಗಳಷ್ಟಿದೆ. ವ್ಯಾಪಾರ ಕೊರತೆ ಹಿಗ್ಗಿದಷ್ಟೂ ನಮ್ಮ ವಿದೇಶಿ ವಿನಿಮಯ ಮೀಸಲು ಕುಗ್ಗುತ್ತಾ ಹೋಗುತ್ತದೆ. ವಿದೇಶಿ ವಿನಿಮಯ ಮೀಸಲು ತೀವ್ರ ಪ್ರಮಾಣದಲ್ಲಿ ಕುಗ್ಗಿದರೆ, ಅದು ಆರ್ಥಿಕ ಅಸುರಕ್ಷತೆಗೆ ಕಾರಣವಾಗುತ್ತದೆ.
ನಮ್ಮ ವಿದೇಶಿ ವಿನಿಮಯ ಮೀಸಲನ್ನು ಕರಗಿಸುವ ಯಾವುದೇ ವ್ಯಾಪಾರ ಒಪ್ಪಂದವು ಒಟ್ಟಾರೆ ದೇಶದ ಆರ್ಥಿಕತೆಗೆ ಯಾವತ್ತಿದ್ದರೂ ಅಪಾಯವೇ. ಮುಕ್ತ ವ್ಯಾಪಾರಕ್ಕೆ ಸಹಿ ಹಾಕಿದರೆ, ವ್ಯಾಪಾರ ಕೊರತೆಯ ಅಂತರವು ಮತ್ತಷ್ಟು ಹಿಗ್ಗುತ್ತದೆ, ದೀರ್ಘಕಾಲದಲ್ಲಿ ಭಾರತದ ಪೂರ್ಣ ಆಮದು ಆಧಾರಿತ ರಾಷ್ಟ್ರವಾಗಿ ಬಿಡುವ ಅಪಾಯ ಇದೆ.

ರೈತರು ಮತ್ತು ಉದ್ಯಮಗಳು
ನರೇಂದ್ರ ಮೋದಿ ಸರ್ಕಾರ RCEP ಕುರಿತಂತೆ ದೇಶದ ಜನತೆಗೆ ಮಾಹಿತಿ ನೀಡದಿದ್ದರೂ, ಒಪ್ಪಂದ ಪೂರ್ವ ಮಾಹಿತಿ ಸೋರಿಕೆಯಿಂದಾಗಿ ಇಡೀ ದೇಶದ ರೈತ ಸಮುದಾಯ ಅಷ್ಟೇ ಅಲ್ಲಾ ಉದ್ಯಮಗಳೂ ಆತಂಕಗೊಂಡಿದ್ದವು ಮುಕ್ತ ವ್ಯಾಪಾರಕ್ಕೆ ಸಹಿ ಹಾಕುವುದೆಂದರೆ ರೈತರ ಮತ್ತು ಉತ್ಪಾದಕ ವಲಯದ ಶವಪೆಟ್ಟಿಗೆಗೆ ಕೊನೆ ಮೊಳೆ ಜಡಿದಂತಾಗುತ್ತಿತ್ತು. ಈ ಆತಂಕಗಳ ಹಿನ್ನೆಲೆಯಲ್ಲಿ ಒಂದು ಕಡೆ ರೈತ ಸಮುದಾಯವು ರಾಷ್ಟ್ರವ್ಯಾಪಿ ತಮ್ಮ ಪ್ರತಿಭಟನೆಯನ್ನು ಅಂತರ್ಗತವಾಗಿ ಪ್ರವಹಿಸುವಂತೆ ನೋಡಿಕೊಂಡರೆ, ಉದ್ಯಮ ವಲಯವು ಲಾಬಿ ಮಾಡುವ ಮೂಲಕ ತನ್ನ ಹಿತಾಸಕ್ತಿ ಕಾಪಾಡಿಕೊಳ್ಳಲು ಮುಂದಾಗಿತ್ತು. ಉತ್ಪಾದಕ ವಲಯವು ಸತತ ಹಿನ್ನಡೆ ಸಾಧಿಸುತ್ತಲೇ ಬಂದಿದೆ. ನಿಕ್ಕೀ ಸೇರಿದಂತೆ ಉತ್ಪಾದನಾ ಸೂಚ್ಯಂಕಗಳೆಲ್ಲವೂ ಋಣಾತ್ಮಕ ಬೆಳವಣಿಕೆಯನ್ನು ಸೂಚಿಸಿದ್ದವು.
ಅತಿವೃಷ್ಟಿ, ಅನಾವೃಷ್ಟಿ ಸೇರಿದಂತೆ ಪ್ರಕೃತಿ ಪ್ರಕೋಪ ಮತ್ತು ಮಾರುಕಟ್ಟೆ ಹಿತಾಸಕ್ತಿಗಳಿಂದಾಗಿ ಸದಾ ನಷ್ಟದಲ್ಲಿರುವ ರೈತರಿಗೆ RCEP ಮುಕ್ತ ಒಪ್ಪಂದವು ನಿಜಕ್ಕೂ ಮರಣ ಶಾಸನವಾಗಿಬಿಡುತ್ತಿತ್ತು. ಏಕೆಂದರೆ, ಕೃಷಿಯ ಜತೆಗೆ ಹೈನುಗಾರಿಕೆಯನ್ನು ಅವಲಂಬಿಸಿರುವ ಸುಮಾರು 10 ಕೋಟಿ ರೈತರು ನೇರವಾಗಿ ಸಂಕಷ್ಟ ಎದುರಿಸಬೇಕಾಗುತ್ತಿತ್ತು. ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಅತಿ ಕಡಿಮೆ ಬೆಲೆಯ ಹೈನು ಉತ್ಪಾದನೆಗಳನ್ನು ದೇಶಕ್ಕೆ ಹರಿಸಲು ತುದಿಗಾಲಲ್ಲಿ ನಿಂತಿದ್ದವು, ವಿಯೇಟ್ನಾಂ ಮತ್ತು ಇಂಡೋನೆಷಿಯಾ ಕಡಿಮೆ ದರದ ರಬ್ಬರ್ ಅನ್ನು ಪುಟಿದೆಸೆಯಲು ತಯಾರಾಗಿದ್ದವು. ಅಷ್ಟೇ ಏಕೆ, ಕಾಳುಮೆಣಸು, ಏಲಕ್ಕಿ, ಸೇರಿದಂತೆ ಸಾಂಬಾರ ಪದಾರ್ಥಗಳು, ಅಡಕೆ, ತೆಂಗು ಹೀಗೆ ಎಲ್ಲಾ ಕೃಷಿ ಉತ್ಪನ್ನಗಳೂ ಕಡಿಮೆ ದರದೊಂದಿಗೆ ದೇಶಕ್ಕೆ ನುಗ್ಗಿ, ದೇಶೀಯ ಉತ್ಪಾದಕರನ್ನು ನಾಶ ಮಾಡಿಬಿಡುತ್ತಿದ್ದವು.
ಚೀನಾದ ಕಾರ್ಯತಂತ್ರ
RCEP ಮುಕ್ತ ವ್ಯಾಪಾರ ಒಪ್ಪಂದದ ಸಮೂಹ ರಾಷ್ಟ್ರಗಳಿಗೆ ಚೀನಾ ದೊಡ್ಡಣ್ಣ ಇದ್ದಂತೆ. ಜನಸಂಖ್ಯೆ ಮತ್ತು ವಹಿವಾಟಿನಲ್ಲಿ ಅಗ್ರಪಾಲು ಹೊಂದಿರುವ ದೇಶ. ನಿರೀಕ್ಷೆ ಮೀರಿ ಬೆಳೆದಿರುವ ಚೀನಾದ ಉತ್ಪಾದನಾ ಉದ್ಯಮವನ್ನು ರಕ್ಷಿಸುವ ಕಾರ್ಯತಂತ್ರದ ಫಲವೇ ಈ ಮುಕ್ತ ವ್ಯಾಪಾರ ಒಪ್ಪಂದ. ಒಂದು ವೇಳೆ ಭಾರತವೇನಾದರೂ ಸಹಿಹಾಕಿದ್ದರೆ, ಈಗಾಗಲೇ ಮೊಬೈಲ್ ನಲ್ಲಿ ಮಾರುಕಟ್ಟೆಯನ್ನು ಕಬ್ಜಾ ಮಾಡಿರುವ ಚೀನಾವು ಆಟಿಕೆಗಳು, ವಿದ್ಯುನ್ಮಾನ ಉಪಕರಣಗಳು, ಗೃಹೋಪಯೋಗಿ ವಸ್ತುಗಳು ಸೇರಿದಂತೆ ಎಲ್ಲಾ ಸರಕುಗಳ ಮಾರುಕಟ್ಟೆಯನ್ನು ಕಬ್ಜಾ ಮಾಡುವ ಹುನ್ನಾರದಲ್ಲಿತ್ತು. ಚೀನಾ ಈಗಾಗಲೇ ಬಹುತೇಕ RCEP ಸಮೂಹ ರಾಷ್ಟ್ರಗಳಲ್ಲಿ ತನ್ನ ಹಿಡಿತ ಸಾಧಿಸಿದೆ. 2010ರಲ್ಲಿ ಜಾರಿಗೆ ಬಂದ ACFTA- ಅಂದರೆ ಆಸೀಯಾನ್-ಚೀನಾ ಮುಕ್ತ ವ್ಯಾಪಾರ ಒಪ್ಪಂದವು ಚೀನಾ ಹೊರತು ಪಡಿಸಿ ಉಳಿದ ರಾಷ್ಟ್ರಗಳಿಗೆ ಅನನುಕೂಲವಾಗಿ ಪರಿಣಮಿಸಿದೆ. ಒಪ್ಪಂದ ಹೊತ್ತಿಗೆ ಚೀನಾದೊಂದಿಗೆ ಇಂಡೋನೆಷಿಯಾ, ಮಲೇಷಿಯಾ, ಫಿಲಿಫೈನ್ಸ್, ಸಿಂಗಾಪೂರ್, ಥೈಲ್ಯಾಂಡ್ ಮತ್ತು ವಿಯೇಟ್ನಾಂ ದೇಶಗಳು 53 ಬಿಲಿಯನ್ ಡಾಲರ್ ಗಳಷ್ಟು ಹೆಚ್ಚುವರಿ ರಫ್ತು ಮಾಡುತ್ತಿದ್ದವು. ಆದರೆ, 2016ರ ಹೊತ್ತಿಗೆ ರಫ್ತು ಪ್ರಮಾಣವು ಕುಗ್ಗಿ ವ್ಯಾಪಾರ ಕೊರತೆಯು 54 ಬಿಲಿಯನ್ ಗಳಷ್ಟಾಗಿದೆ. ಮುಂಬರುವ ವರ್ಷಗಳಲ್ಲಿ ಇದು 100 ಬಿಲಿಯನ್ ದಾಟಲೂ ಬಹುದು.

ಹಿಂದಿನ ಅನುಭವ
ಮುಕ್ತ ವ್ಯಾಪಾರ ಒಪ್ಪಂದಗಳಿಂದಾಗಿ ಭಾರತಕ್ಕೆಂದೂ ಹೆಚ್ಚಿನ ಲಾಭವಾಗಿಲ್ಲ. 2017ರಲ್ಲಿ ನೀತಿ ಆಯೋಗ ಪ್ರಕಟಿಸಿರುವ ವರದಿ ಪ್ರಕಾರ, ಭಾರತವು ಶ್ರೀಲಂಕಾ, ಮಲೇಷಿಯಾ, ಸಿಂಗಾಪೂರ, ದಕ್ಷಿಣ ಕೊರಿಯಾ ಜತೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡಿದ್ದು, ಈ ದೇಶಗಳಿಗೆ ಮಾಡುತ್ತಿರುವ ರಫ್ತು ಪ್ರಮಾಣವು ತಗ್ಗುತ್ತಿದ್ದು, ಆಮದು ಪ್ರಮಾಣ ಹಿಗ್ಗುತ್ತಿದೆ. ದೇಶದ ಒಟ್ಟು ರಫ್ತು ಪ್ರಮಾಣಕ್ಕೆ ಹೋಲಿಸಿದರೆ, ಈ ರಾಷ್ಟ್ರಗಳಿಗೆ ಮಾಡುತ್ತಿರುವ ರಫ್ತು ಪ್ರಮಾಣವು ಹೆಚ್ಚೇನೂ ಇಲ್ಲ. ಮುಕ್ತ ವ್ಯಾಪಾರ ಒಪ್ಪಂದ ಲಾಭವು ಶೇ.5- 25ರಷ್ಟು ಮಾತ್ರ ಆಗಿದೆ. ಆದರೆ, ಒಪ್ಪಂದ ಮಾಡಿಕೊಂಡಿರುವ ದೇಶಗಳು ಮಾತ್ರ ಶೇ.100ರಷ್ಟು ಲಾಭ ಮಾಡಿಕೊಂಡಿವೆ.
ಈ ಎಲ್ಲಾ ಹಿನ್ನೆಲೆಯಲ್ಲಿ ಭಾರತ RCEP ಮುಕ್ತ ವ್ಯಾಪಾರ ಒಪ್ಪಂದದಿಂದ ಹೊರಗುಳಿಯಲು ನಿರ್ಧರಿಸಿದೆ. ಭಾರತ ವಿಧಿಸಿರುವ ಷರತ್ತುಗಳನ್ನು ಒಪ್ಪಿದರೆ ಮುಂಬರುವ ದಿನಗಳಲ್ಲಿ ಭಾರತ ತನ್ನ ನಿರ್ಧಾರ ಬದಲಾಯಿಸಲೂಬಹುದು.