ರಾಷ್ಟ್ರಪತಿ ಚುನಾವಣೆಗೆ ತಮ್ಮ ಅಭ್ಯರ್ಥಿಯನ್ನು ಅಂತಿಮಗೊಳಿಸಲು ವಿರೋಧ ಪಕ್ಷದ ನಾಯಕರು ಇಂದು ಸಭೆ ನಡೆಸಲಿದ್ದಾರೆ. ವಿರೋಧ ಪಕ್ಷಗಳ ವತಿಯಿಂದ ಸಂಭವನೀಯ ಅಭ್ಯರ್ಥಿಗಳು ಎಂದು ಚರ್ಚೆಯಾದ ಮಹಾತ್ಮ ಗಾಂಧೀಜಿ ಅವರ ಮೊಮ್ಮಗ ಗೋಪಾಲಕೃಷ್ಣ ಗಾಂಧಿ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಎನ್ ಸಿಪಿ ನಾಯಕ ಶರದ್ ಪವರ್ ಮತ್ತು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಶನಲ್ ಕಾನ್ಫರೆನ್ಸ್ ಮುಖಂಡ ಫಾರೂಕ್ ಅಬ್ದುಲ್ಲಾ ಅವರುಗಳು ತಾವು ಸ್ಪರ್ಧಿಸುವುದಿಲ್ಲ ಎಂದು ಹೇಳಿರುವುದರಿಂದ ವಿಪಕ್ಷಗಳು ಈಗ ಭಾರೀ ಇಕ್ಕಟ್ಟಿಗೆ ಸಿಲುಕಿವೆ.
ಕಳೆದ ವಾರ ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ವಿಪಕ್ಷಗಳ ವತಿಯಿಂದ ನಡೆದ ಮೊದಲ ಸಭೆಯಲ್ಲಿ ಸಾಮಾನ್ಯ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿತ್ತು. ಇಂದು ಮಧ್ಯಾಹ್ನ 2:30ಕ್ಕೆ ಸಂಸತ್ತಿನ ಅನೆಕ್ಸ್‌ನಲ್ಲಿ ಸಭೆ ನಡೆಯಲಿದ್ದು, ಕಾಂಗ್ರೆಸ್ ಪಕ್ಷದ ವತಿಯಿಂದ ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಹಿರಿಯ ನಾಯಕರಾದ ಸೀತಾರಾಮ್ ಯೆಚೂರಿ, ಡಿ ರಾಜಾ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಕಾಮನ್ ಕ್ಯಾಂಡಿಡೇಟ್ ಯಾರು ಎಂಬುದರ ಸಣ್ಣ ಸುಳಿವು ಕೂಡ ಲಭ್ಯವಾಗುತ್ತಿಲ್ಲ.
ಈ ಬಾರಿ ವಿಪಕ್ಷಗಳ ವತಿಯಿಂದ ರಾಷ್ಟ್ರಪತಿ ಚುನಾವಣೆ ಅಭ್ಯರ್ಥಿಯಾಗಲು ಮೊದಲು ಕೇಳಿಬಂದ ಹೆಸರು ಶರದ್ ಪವರ್. ಶರದ್ ಪವರ್ ಅಭ್ಯರ್ಥಿ ಆಗುವುದಾದರೆ ತಮ್ಮ ಬೆಂಬಲವೂ ಇದೆ ಎಂದು ಯೂಪಿಎ ಜೊತೆ ಗುರುತಿಸಿಕೊಂಡಿಲ್ಲದ ಟಿಎಂಸಿ, ಆಮ್ ಆದ್ಮಿ ಪಕ್ಷ, ಟಿಆರ್ ಎಸ್ ಹೇಳಿದ್ದವು. ಆದರೆ ಹಿರಿಯ ರಾಜಕಾರಣಿ ಶರದ್ ಪವಾರ್ ತಾವು ಅಭ್ಯರ್ಥಿ ಆಗುವುದಿಲ್ಲ ಎಂದು ಹೇಳಿದರು. ನಂತರ ಕೇಳಿ ಬಂದ ಹೆಸರು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರಕ್ ಅಬ್ದುಲ್ಲಾ ಅವರದು. ಅವರಿಗೆ ಭಾರೀ ಬೆಂಬಲವೇನೂ ಇರಲಿಲ್ಲ. ಆದರೆ ಅವರು ಕೂಡ ಹಿಂದೆ ಸರಿದರು. ಹಾಗಾಗಿಯೇ ಪ್ರತಿಪಕ್ಷಗಳು ಮಹಾತ್ಮ ಗಾಂಧೀಜಿ ಅವರ ಮೊಮ್ಮಗ ಗೋಪಾಲಕೃಷ್ಣ ಗಾಂಧಿ ಅವರನ್ನು ಅಭ್ಯರ್ಥಿ ಮಾಡಲು ಉತ್ಸುಕವಾಗಿದ್ದವು. ಆದರೀಗ ಗೋಪಾಲಕೃಷ್ಣ ಗಾಂಧಿ ಪ್ರತಿಪಕ್ಷಗಳ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ.

ಗಾಂಧಿ V/s ಗೋಡ್ಸೆ
ಪ್ರತಿಪಕ್ಷಗಳು ಮಹಾತ್ಮ ಗಾಂಧೀಜಿಯವರ ಮೊಮ್ಮಗ ಮತ್ತು ಮಾಜಿ ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿ ಅವರನ್ನು ರಾಷ್ಟ್ರಪತಿ ಚುನಾವಣೆಯ ಅಭ್ಯರ್ಥಿ ಮಾಡುವುದರ ಹಿಂದೆ ಭಾರೀ ಲೆಕ್ಕಾಚಾರ ಅಡಗಿತ್ತು. ಸದ್ಯ ಕೇಂದ್ರದಲ್ಲಿ ಆಳ್ವಿಕೆ ನಡೆಸುತ್ತಿರುವ ಬಿಜೆಪಿಯು ಮಹಾತ್ಮ ಗಾಂಧೀಜಿ ಅವರನ್ನು ಕೊಂದ ನಾಥುರಾಮ್ ಗೋಡ್ಸೆ ಪರವಾಗಿ ಮೃಧು ಧೋರಣೆ ತೆಳೆದಿದೆ. ಆಗಾಗ ಮಹಾತ್ಮ ಗಾಂಧೀಜಿ ಅವರಿಗೆ ಅಪಮಾನ ಮಾಡುವ ಕೆಲಸಗಳು ಆಗುತ್ತಿವೆ. ಗೋಡ್ಸೆಯ ಆರಾಧನೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಚುನಾವಣೆಯನ್ನು ‘ಗಾಂಧಿ V/s ಗೋಡ್ಸೆ’ ಎಂಬ ಸೈದ್ಧಾಂತಿಕ ಹೋರಾಟವನ್ನಾಗಿ ಪರಿವರ್ತಿಸಬೇಕು ಎಂದುಕೊಂಡಿದ್ದವು.
ಆದರೆ ಸೋಮವಾರ ದಿಢೀರನೆ ಗೋಪಾಲಕೃಷ್ಣ ಗಾಂಧಿ ಅವರು ತಾವು ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿ ಆಗುವುದಿಲ್ಲ ಎಂದು ಪ್ರಕಟಣೆ ಮೂಲಕ ತಿಳಿಸಿರುವುದರಿಂದ ಪ್ರತಿಪಕ್ಷಗಳ “ರಾಷ್ಟ್ರಪತಿ ಚುನಾವಣೆಯನ್ನು ‘ಗಾಂಧಿ V/s ಗೋಡ್ಸೆ’ ಎಂಬ ಸೈದ್ಧಾಂತಿಕ ಹೋರಾಟವನ್ನಾಗಿ ಮಾಡುವ” ತಂತ್ರ ವಿಫಲವಾಗಿದೆ. ಅನಿವಾರ್ಯವಾಗಿ ಈಗ ಬೇರೆ ಅಭ್ಯರ್ಥಿ ಹುಡುಕಾಟ ಮಾಡಬೇಕಿದೆ. ಇರುವ ಕಡಿಮೆ ಸಮಯದಲ್ಲಿ ಎಲ್ಲರಿಗೂ ಒಪ್ಪಿಗೆ ಆಗುವಂತಹ ಅಭ್ಯರ್ಥಿ’ಯನ್ನು ಹುಡುಕಬೇಕಾಗಿದೆ.
ಇಂದಿನ ಸಭೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಭಾಗವಹಿಸುವುದಿಲ್ಲ. ಪೂರ್ವ ನಿಶ್ಚಯಗಳ ಕಾರಣ ಸಭೆಗೆ ಹಾಜರಾಗುವುದಿಲ್ಲ, ಆದರೆ ಇಂದಿನ ಸಭೆಯ ನಿರ್ಧಾರಕ್ಕೆ ಬದ್ಧರಾಗಿರಲಿದ್ದಾರೆ ಎಂದು ಹೇಳಲಾಗುತ್ತಿದೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕೂಡ ಪಾಲ್ಗೊಳ್ಳುವ ಸಾಧ್ಯತೆಯಿಲ್ಲ. ಈ ಮೂರೂ ಪಕ್ಷಗಳಿಂದ ಬೇರೆ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಕಳೆದ ವಾರ ನಡೆದ ಸಭೆಯಿಂದ ಅಂತರ ಕಾಯ್ದುಕೊಂಡಿದ್ದ ಟಿಆರ್‌ಎಸ್ ಮತ್ತು ಎಎಪಿ ಇಂದಿನ ಸಭೆಯಲ್ಲಿ ಪಾಲ್ಗೊಳ್ಳಲಿವೆಯೇ ಎಂಬುದನ್ನು ಕಾದುನೋಡಬೇಕು. ವೈಎಸ್ಆರ್ ಕಾಂಗ್ರೆಸ್, ಅಕಾಲಿದಳ ಮತ್ತು ಬಿಜೆಡಿ ಪಕ್ಷಗಳು ಪಾಲ್ಗೊಳ್ಳುವುದಿಲ್ಲ ಎಂಬುದು ಖಚಿತವಾಗಿದೆ.
ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಯಾವ ಅಭ್ಯರ್ಥಿಯನ್ನು ಹಾಕುತ್ತದೆ ಎಂಬುದನ್ನು ಕಾದುನೋಡಿ ಕಾರ್ಯತಂತ್ರ ರೂಪಿಸುವುದರಲ್ಲಿ ಅರ್ಥವಿಲ್ಲ ಎಂದು ವಿರೋಧ ಪಕ್ಷದ ಕೆಲವರು ಅಭಿಪ್ರಾಯಪಡುತ್ತಾರೆ. ಎನ್ ಡಿಎ ಮೈತ್ರಿ ಕೂಟದ ವತಿಯಿಂದ ಯಾರನ್ನೇ ಆಯ್ಕೆ ಮಾಡಿದರೂ ಅವರು ಬಿಜೆಪಿಯವರೇ ಆಗಿರುತ್ತಾರೆ. ಅದಕ್ಕಾಗಿ ನಾವೇಕೆ ಕಾಯಬೇಕು? ನಾವೇಕೆ ಬಿಜೆಪಿ ತೋಡುವ ಖೆಡ್ಡಾದಲ್ಲಿ ಬೀಳಬೇಕು? ನಾವು ನಮ್ಮ ಸಿದ್ಧಾಂತದ ಬಗ್ಗೆ ಚರ್ಚೆ ಮಾಡಬೇಕು. ಅದರಂತೆ ಅಭ್ಯರ್ಥಿ ಹಾಕಬೇಕು ಎಂದು ಹಿರಿಯ ನಾಯಕರು ಹೇಳುತ್ತಿದ್ದಾರೆ.
2017ರಲ್ಲಿ ಕೂಡ ಗೋಪಾಲಕೃಷ್ಣ ಗಾಂಧಿ ಅವರು ವಿರೋಧ ಪಕ್ಷದ ವತಿಯಿಂದ ರಾಷ್ಟ್ರಪತಿ ಅಭ್ಯರ್ಥಿಯಾಗಲು ಮುಂಚೂಣಿಯಲ್ಲಿದ್ದರು. ಆದರೆ ಎನ್‌ಡಿಎ ದಲಿತ ಸಮುದಾಯದ ರಾಮ್ ನಾಥ್ ಕೋವಿಂದ್ ಅವರ ಹೆಸರನ್ನು ಘೋಷಿಸುತ್ತಿದ್ದಂತೆ, ಪ್ರತಿಪಕ್ಷಗಳು ತನ್ನ ಕಾರ್ಯತಂತ್ರವನ್ನು ಬದಲಿಸಿ ದಲಿತ ನಾಯಕ ಜಗಜೀವನ್ ರಾಮ್ ಅವರ ಪುತ್ರಿ ಮತ್ತು ಮಾಜಿ ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಅವರನ್ನು ಕಣಕ್ಕಿಳಿಸಿತು. ನಂತರ ಗೋಪಾಲಕೃಷ್ಣ ಗಾಂಧಿ ಅವರನ್ನು ಉಪರಾಷ್ಟ್ರಪತಿ ಸ್ಥಾನಕ್ಕೆ ಕಣಕ್ಕಿಳಿಸಲಾಗಿತ್ತು. ಈ ಬಾರಿ ಹಾಗೆ ಮಾಡಬಾರದು ಎನ್ನುವುದು ವಿಪಕ್ಷಗಳ ಲೆಕ್ಕಾಚಾರವಾಗಿದೆ.
ದೇಶದ 16ನೇ ರಾಷ್ಟ್ರಪತಿ ಆಯ್ಕೆ ಮಾಡುವ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲು ಜೂನ್ 29 ಕೊನೆಯ ದಿನವಾಗಿದೆ. ಜುಲೈ 18ರಂದು ಮತದಾನ ನಡೆಯಲಿದೆ. ಜುಲೈ 21ರಂದು ಫಲಿತಾಂಶ ಪ್ರಕಟವಾಗಲಿದೆ. ಹಾಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಅಧಿಕಾರಾವಧಿ ಜುಲೈ 24ರಂದು ಕೊನೆಗೊಳ್ಳಲಿದೆ. ಜುಲೈ 26ಕ್ಕೆ ನೂತನ ರಾಷ್ಟ್ರಪತಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಇದೇ 24 ಅಥವಾ 25ರಂದು ಬಿಜೆಪಿ ತನ್ನ ಅಭ್ಯರ್ಥಿಯನ್ನು ಘೋಷಿಸಬಹುದು ಎಂದು ಹೇಳಲಾಗುತ್ತಿದೆ. ಇಂದು ವಿಪಕ್ಷಗಳ ಸಭೆಯಲ್ಲಿ ಯಾವುದೇ ಹೆಸರಿನ ಬಗ್ಗೆ ಒಮ್ಮತ ಮೂಡದಿದ್ದರೆ ನಾಳೆ ಅಥವಾ ನಾಳಿದ್ದು ಮತ್ತೊಂದು ಸುತ್ತಿನ ಸಭೆ ನಡೆಯುವ ಸಾಧ್ಯತೆ ಇದೆ.