ರಾಮು ಫಿಲಂಸ್ ಅನ್ನೋ ಹೆಸರು ಕೇಳಿದರೆ ಸಾಕು ಆಕ್ಷನ್ ಪ್ರಿಯರಿಗೆ ಅದೊಂದು ರಸದೌತಣ. ಅಂಥ ಅದ್ದೂರಿ ಚಿತ್ರಗಳಿಗೆ ಹೆಸರುವಾಸಿಯಾಗಿದ್ದವರು ನಿರ್ಮಾಪಕ ಕೋಟಿ ರಾಮು. ಅದು ತಮ್ಮ ಪತ್ನಿ ಮಾಲಾಶ್ರೀ ಅಭಿನಯದ ಚಿತ್ರವೇ ಆಗಿರಬಹುದು, ಅಥವಾ ಇನ್ಯಾರೇ ನಾಯಕರಾಗಿರೋ ಸಿನಿಮಾ ಆಗಿರಬಹುದು, ಆಕ್ಷನ್ ಪ್ರಿಯರ ನಿರೀಕ್ಷೆಗಳನ್ನು ರಾಮು ಯಾವತ್ತೂ ಹುಸಿಗೊಳಿಸುತ್ತಿರಲಿಲ್ಲ. ಇದೇ ರಾಮು ಫಿಲಂಸ್ ಸಂಸ್ಥೆಯಿಂದ ನಿರ್ಮಾಣವಾಗಿರುವ “ಅರ್ಜುನ್ ಗೌಡ” ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಆದರೆ, ಎಲ್ಲರ ನಿರೀಕ್ಷೆ ಹುಸಿಗೊಳಿಸಿದ ವಿಧಿಯ ಆಟದಂತೆ, ಚಿತ್ರ ಬಿಡುಗಡೆಗೂ ಮುನ್ನವೇ ರಾಮು ಅವರ ನಿಧನವಾಗಿರುವುದು ಸ್ಯಾಂಡಲ್ ವುಡ್ ಮಟ್ಟಿಗೆ ನಿಜಕ್ಕೂ ನೋವಿನ ಸಂಗತಿ. ಮೈನವಿರೇಳಿಸುವ ಸಾಹಸ ಸನ್ನಿವೇಶಗಳಿರುವ ಈ ಚಿತ್ರದ ನಾಯಕನಾಗಿ ಪ್ರಜ್ವಲ್ ದೇವರಾಜ್ ಅಭಿನಯಿಸಿದ್ದಾರೆ. ನಾಯಕಿಯಾಗಿ ಪ್ರಿಯಾಂಕ ತಿಮ್ಮೇಶ್ ನಟಿಸಿದ್ದಾರೆ. ಬಾಲಿವುಡ್ ನ ರಾಹುಲ್ ದೇವ್, ಸ್ಪರ್ಶ ರೇಖಾ, ಸಾಧುಕೋಕಿಲ, ಕಡ್ಡಿಪುಡಿ ಚಂದ್ರು, ದೀಪಕ್ ಶೆಟ್ಟಿ, ದಿನೇಶ್ ಮಂಗಳೂರು, ಶೋಭತ್, ಜೀವನ್, ಹನುಮಂತೇ ಗೌಡ, ಮೋಹನ್ ಜುನೇಜ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಶಂಕರ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಕವಿರಾಜ್, ರಾಘವೇಂದ್ರ ಕಾಮತ್, ಶಂಕರ್ ಅವರು ಚಿತ್ರದ ಹಾಡುಗಳನ್ನು ಬರೆದಿದ್ದು, ಧರ್ಮವಿಶ್ ಸಂಗೀತ ನೀಡಿದ್ದಾರೆ. ಜೈ ಆನಂದ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ , ಈಶ್ವರಿ ಕುಮಾರ್ ಕಲಾ ನಿರ್ದೇಶನ ಹಾಗೂ ಮೋಹನ್, ಕಂಬಿರಾಜು ಅವರ ನೃತ್ಯ ನಿರ್ದೇಶನ ಅರ್ಜುನ್ ಗೌಡ ಚಿತ್ರಕ್ಕಿದೆ.