ಬೆಂಗಳೂರು (Bengaluru): ರಾಮೇಶ್ವರಂ ಕೆಫೆ (Rameshwaram Cafe) ಬಾಂಬ್ ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯ ಆರೋಗ್ಯದಲ್ಲಿ ಚೇತರಿಕೆಯಾಗಿದೆ.
ಮಹಿಳೆಯನ್ನು ತೀವ್ರ ನಿಗಾ ಘಟಕ (ಐಸಿಯು)ದಿಂದ ವಿಶೇಷ ವಾರ್ಡ್‌ಗೆ ಶಿಫ್ಟ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಈ ಕುರಿತು ಬ್ರೂಕ್‌ಫೀಲ್ಡ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಟಿ.ಜೆ.ಪ್ರದೀಪ್ ಕುಮಾರ್ (Dr.T.J.Pradeep Kumar) ಅವರು ಮಾಹಿತಿ ನೀಡಿದ್ದಾರೆ.
ಸ್ಫೋಟದಲ್ಲಿ ಗಾಯಗೊಂಡಿದ್ದ 10 ಮಂದಿಯ ಪೈಕಿ ಸ್ವರ್ಣಾಂಬಾ ಅವರಿಗೆ ಶೇ.40ರಷ್ಟು ಸುಟ್ಟ ಗಾಯಗಳಾಗಿತ್ತು. ಐದು ದಿನಗಳಿಂದ ಐಸಿಯುನಲ್ಲಿದ್ದರು. ಮಹಿಳೆಗೆ ಪ್ಲಾಸ್ಟಿಕ್ ಸರ್ಜರಿ ಮಾಡಲಾಗಿದ್ದು, ಇದೀಗ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.
ಸ್ಫೋಟದ ಶಬ್ಧದ ತೀವ್ರತೆಯಿಂದಾಗಿ ಆಕೆ ತೀವ್ರ ಆಘಾತಕ್ಕೊಳಗಾಗಿದ್ದಾಳೆ.ಆಕೆಗೆ ಘಟನೆಯನ್ನು ಸ್ಮರಿಸಲು ಸಾಧ್ಯವಾಗುತ್ತಿಲ್ಲ. ಡಿಸ್ಚಾರ್ಜ್ ದಿನಾಂಕ ಇನ್ನೂ ತಿಳಿದಿಲ್ಲ. ಆಕೆಯ ಆರೋಗ್ಯ ಸ್ಥಿರವಾಗಿದೆ ಎಂದು ಸ್ವರ್ಣಾಂಬಾ ಅವರ ಪತಿ ಶ್ಯಾಮ್ ಸುಂದರ್ ಹೇಳಿದ್ದಾರೆ.
ಘಟನೆಯಲ್ಲಿ ಗಾಯಗೊಂಡಿದ್ದ ಮತ್ತೋರ್ವ ಗಾಯಾಳು ಖಾಸಗಿ ಸಂಸ್ಥೆಯ ಉದ್ಯೋಗಿ ದೀಪಾಂಶು (23) ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ. ಕೆಫೆಯಲ್ಲಿ ಹೌಸ್‌ಕೀಪಿಂಗ್ ಸಿಬ್ಬಂದಿಗಳಲ್ಲಿ ಒಬ್ಬರಾದ ಫಾರೂಕ್ ಹುಸೇನ್ (19) ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ಮುಂದುವರೆದಿದೆ ಎಂದು ಬ್ರೂಕ್‌ಫೀಲ್ಡ್ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ತಿಳಿಸಿದ್ದಾರೆ.
#karnataka #bengaluru #rameshwaramcafe #cafeblast #blast






