ಶಿವಮೊಗ್ಗ ಜಿಲ್ಲೆಯ ರಾಮಚಂದ್ರಾಪುರ ಮಠದ ಅರಣ್ಯ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಹೊಸನಗರ ತಾಲೂಕಿನ ರಾಮಚಂದ್ರಾಪುರ ಗ್ರಾಮದ ಸರ್ವೆ ನಂಬರ್ 7ರಲ್ಲಿ ಮಠದ ಧರ್ಮ ಚಕ್ರ ಟ್ರಸ್ಟ್ ಅರಣ್ಯ ಒತ್ತುವರಿ ಮಾಡಿದೆ ಎಂದು 2015ರ ಜೈಲೈ 15ರಂದು ಹೊಸನಗರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ(ಎಸಿಎಫ್) ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಮಾಡಿದೆ.
ಮಠದಿಂದಲೇ ಅರಣ್ಯ ಭೂಮಿ ಒತ್ತುವರಿ ಮಾಡಲಾಗಿದೆ ಎಂಬ ಹಿನ್ನೆಲೆಯಲ್ಲಿ ಸಾಕಷ್ಡು ವಿವಾದಕ್ಕೀಡಾಗಿದ್ದ ಈ ಪ್ರಕರಣದ ವಿಚಾರಣೆ ಸುದೀರ್ಘ ಅವಧಿಯಿಂದ ಹೈಕೋರ್ಟಿನಲ್ಲಿ ನಡೆಯುತ್ತಿತ್ತು.
ಗೋಶಾಲೆ ನಡೆಸುವ ಉದ್ದೇಶದಿಂದ ಟ್ರಸ್ಟ್, ಸರ್ವೆ ನಂಬರ್ 7ರಲ್ಲಿ 25 ಎಕರೆ ಗೋಮಾಳ ಭೂಮಿ ಮಂಜೂರು ಕೋರಿ ಅರ್ಜಿ ಸಲ್ಲಿಸಿತ್ತು. ಆದರೆ ಸ್ಥಳೀಯ ಎಸಿಎಫ್, ಆ ಬಗ್ಗೆ ಆಕ್ಷೇಪ ಸಲ್ಲಿಸಿ ಅದು ಅರಣ್ಯ ಭೂಮಿ, ಗೋಮಾಳ ಅಲ್ಲ ಎಂದು ಹೇಳಿದ್ದರು. ಹಾಗಾಗಿ, ಮಠದಿಂದ ಅರಣ್ಯ ಭೂಮಿ ಒತ್ತುವರಿ ಮಾಡಲಾಗಿದೆ ಎಂದು ದೂರು ದಾಖಲಿಸಲಾಗಿತ್ತು.
ಎಸಿಎಫ್ ಅದೇಶವನ್ನು ಪ್ರಶ್ನಿಸಿ ಮಠ ನ್ಯಾಯಾಲಯದ ಮೊರೆ ಹೋಗಿತ್ತು. ಈ ಜಾಗದ 160 ಎಕರೆ ಜಾಗವನ್ನು ಮೀಸಲು ಅರಣ್ಯ ಎಂದು ಇಂಡೀಕರಣಗೊಳಿಸಿ 2005ರಲ್ಲಿ ಆದೇಶಿಸಿದ್ದ ರಾಜ್ಯ ಸರ್ಕಾರ, ಉಳಿದ 60 ಎಕರೆ ಪ್ರದೇಶವನ್ನು ಗೋಮಾಳ ಎಂದು ಉಳಿಸಿತ್ತು. ಹಾಗಾಗಿ ಈ ಗೋಮಾಳ ಜಾಗದಲ್ಲಿ 25 ಎಕರೆ ಪ್ರದೇಶವನ್ನು ಮಠದ ವತಿಯಿಂದ ನಡೆಸುವ ಗೋಶಾಲೆಗೆ ಮಂಜೂರು ಮಾಡಬೇಕು ಎಂದು ತಾನು ಅರ್ಜಿ ಸಲ್ಲಿಸಿರುವುದಾಗಿ ಮಠ ವಾದಿಸಿತ್ತು.
ಅಲ್ಲದೆ, ಈ ಜಾಗದ ವಿಷಯದಲ್ಲಿ 2012ರ ನವೆಂಬರ್ 21ರಂದು ಸರ್ಕಾರಕ್ಕೆ ಪತ್ರ ಬರೆದಿರುವ ಶಿವಮೊಗ್ಗ ಜಿಲ್ಲಾಧಿಕಾರಿ, ಅದು ಗೋಮಾಳ ಜಾಗ ಎಂದು ಸ್ಪಷ್ಟಪಡಿಸಿದ್ದಾರೆ. ಅದಕ್ಕೂ ಮುಂಚೆಯೇ ಜಾಗದ ಮಂಜೂರಾತಿ ಕೋರಿ ಮಠ ಅರ್ಜಿ ಸಲ್ಲಿಸಿದೆ ಎಂದೂ ಮಠದ ಪರ ವಕೀಲರು, ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರ ಪೀಠದ ಗಮನಕ್ಕೆ ತಂದಿದ್ದರು.

ಆ ದಾಖಲೆಗಳ ಹಿನ್ನೆಲೆಯಲ್ಲಿ ನ್ಯಾಯಾಲಯ, ಎಸಿಎಫ್ ಆದೇಶವನ್ನು ರದ್ದುಪಡಿಸಿದ್ದು, ಆ ಅದೇಶದ ಮೇಲೆ ಕಂದಾಯ ಇಲಾಖೆ ಅಧಿಕಾರಿಗಳು ದಾಖಲೆ ತಿದ್ದುಪಡಿ ಮಾಡಿದ್ದರೆ ಅದನ್ನು ಸರಿಪಡಿಸಿ ಎರಡು ತಿಂಗಳಲ್ಲಿ ವರದಿ ನೀಡಬೇಕು ಮತ್ತು ಭೂ ಮಂಜೂರಾತಿ ಕೋರಿ ಅರ್ಜಿ ಸಲ್ಲಿರುವ ಅರ್ಜಿದಾರರ ಮನವಿಗಳನ್ನು ಪರಿಗಣಿಸಿ ಕ್ರಮ ಕೈಗೊಂಡ ಬಗ್ಗೆ ಆರು ತಿಂಗಳ ಒಳಗೆ ವರದಿ ನೀಡಬೇಕು ಎಂದು ಸರ್ಕಾರಕ್ಕೆ ಆದೇಶಿಸಿದೆ.
1993-94 ಹಾಗೂ 2012-13ರ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಗೋಮಾಳ, ಕೆರೆ ಅಚ್ಚುಕಟ್ಟು, ಹುಲ್ಲುಬನ್ನಿ, ಸೊಪ್ಪಿನಬೆಟ್ಟ ಸೇರಿದಂತೆ ವಿವಿಧ ಜನೋಪಯೋಗಿ ಉದ್ದೇಶಕ್ಕೆ ಮೀಸಲಿಟ್ಟಿದ್ದ ಕಂದಾಯ ಜಮೀನನ್ನು ಅರಣ್ಯ ಇಲಾಖೆ ಏಕಾಏಕಿ ದಾಖಲೆ ತಿದ್ದುಪಡಿ ಮಾಡಿ ಆ ಭೂಮಿಯನ್ನು ಅರಣ್ಯ ಎಂದು ಇಂಡೀಕರಣ ಮಾಡಿದ ಸಾವಿರಾರು ಪ್ರಕರಣಗಳ ಹಿನ್ನೆಲೆಯಲ್ಲಿ ಈ ಆದೇಶ ಮಲೆನಾಡಿನಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಅರಣ್ಯ ಭೂಮಿ ಇಂಡೀಕರಣ ಹೆಸರಿನಲ್ಲಿ ನಡೆದ ಈ ಪ್ರಕ್ರಿಯೆಯಲ್ಲಿ ಊರು, ಮನೆ, ಶಾಲೆ, ಕೆರೆಕಟ್ಟೆ, ತೋಟ, ಗದ್ದೆ ಮುಂತಾದ ಜನಬಳಕೆಯಲ್ಲಿರುವ ಮತ್ತು ದಶಕಗಳ ಹಿಂದೆಯೇ ಭೂ ಹಕ್ಕುಪತ್ರ ನೀಡಿದ್ದ ಜಾಗವನ್ನು ಕೂಡ ಸ್ಥಳ ಪರಿಶೀಲನೆ ಮಾಡದೆ, ಸಾರ್ವಜನಿಕರಿಗೆ ಮಾಹಿತಿ ನೀಡದೆ ರಹಸ್ಯವಾಗಿ ರಾತ್ರೋರಾತ್ರಿ ಭೂ ದಾಖಲೆ ತಿದ್ದುಪಡಿ ಮಾಡಿ ಜಿಲ್ಲೆಯೊಂದರಲ್ಲೇ ಬರೋಬ್ಬರಿ 1.80 ಲಕ್ಷ ಎಕರೆ ಕಂದಾಯ ಜಮೀನನ್ನು ಅರಣ್ಯ ಭೂಮಿ ಎಂದು ನಮೂದಿಸಲಾಗಿತ್ತು.
ಅದರಿಂದಾಗಿ ಜಿಲ್ಲೆಯ ಸರಣಿ ಜಲಾಶಯಗಳು, ಅಭಯಾರಣ್ಯಗಳು, ಜಲವಿದ್ಯುತ್ ಯೋಜನೆಗಳಲ್ಲಿ ಸಂತ್ರಸ್ತರಾದ ಸಾವಿರಾರು ಬಡ ಕುಟುಂಬಗಳು ದಶಕಗಳಿಂದ ಸಾಗುವಳಿ ಮಾಡಿಕೊಂಡು ಬಂದಿದ್ದ, ಏಕೈಕ ಜೀವನಾಧಾರವಾಗಿದ್ದ ಭೂಮಿ ಕೂಡ, ಸ್ವಾಧೀನದಾರರಿಗೇ ಗೊತ್ತಿಲ್ಲದಂತೆ ಅರಣ್ಯ ಭೂಮಿಯಾಗಿ ಬದಲಾಗಿ ಅವರ ಕೈತಪ್ಪಿತ್ತು. ಹಾಗೇ ದಾಖಲೆ ತಿದ್ದುಪಡಿ ಮಾಡಿದ ಬಳಿಕ ಕೆಲವು ವರ್ಷಗಳ ಕಾಲ ಆ ವಿಷಯವನ್ನು ಸಾರ್ವಜನಿಕರಿಂದ ಮುಚ್ಚಿಟ್ಟಿದ್ದ ಅರಣ್ಯ ಇಲಾಖೆ, ಕ್ರಮೇಣ ಅರಣ್ಯ ಒತ್ತುವರಿ ತೆರವು ಎಂದು ಜನರಿಗೆ ವಂಚಿಸಿ ಮೋಸದಿಂದ ಪಡೆದಿರುವ ಭೂಮಿಯಿಂದ ಸ್ವಾಧೀನದಾರರನ್ನು ಎತ್ತಂಗಡಿ ಮಾಡಲು ಬಿಡಿಬಿಡಿ ಕಾರ್ಯಾಚರಣೆ ಕೈಗೆತ್ತಿಕೊಂಡಾಗಲೇ ಮಲೆನಾಡಿಗರಿಗೆ ಆದ ಐತಿಹಾಸಿಕ ಅನ್ಯಾಯ ಬಯಲಾಗಿತ್ತು.
ಇದೀಗ ಅಂತಹದ್ದೇ ಗೋಮಾಳ ಭೂಮಿಯ ದಾಖಲೆ ತಿದ್ದುಪಡಿ ಮಾಡಿ ಅರಣ್ಯ ಎಂದು ಆದೇಶಿಸಿದ್ದ ನಿರ್ದಿಷ್ಠ ಆದೇಶವನ್ನು ರದ್ದುಪಡಿಸಿ, ಹೈಕೋರ್ಟ್ ಆ ಭೂಮಿಯನ್ನು ಮರಳಿ ಗೋಮಾಳ ಎಂದು ದಾಖಲೆ ತಿದ್ದಿ, ಅರ್ಜಿದಾರರ ಮನವಿ ಪರಿಗಣಿಸುವಂತೆ ಸೂಚಿಸಿದೆ. ಈ ಆದೇಶ,ಲಕ್ಷಾಂತರ ಎಕರೆ ಸಾಗುವಳಿ ಭೂಮಿ, ಗೋಮಾಳ ಜಾಗವನ್ನು ಅರಣ್ಯ ಎಂದು ತಿದ್ದುಪಡಿ ಮಾಡಿ ನಡೆಸಿದ ಇಂಡೀಕರಣ ಪ್ರಕ್ರಿಯೆಗೂ ಅನ್ವಯವಾಗುವುದೆ? ಮುಳುಗಡೆ ಸಂತ್ರಸ್ತರು ಸೇರಿದಂತೆ ಮಲೆನಾಡಿನ ತುಂಡು ಭೂಮಿ ಸಾಗುವಳಿದಾರರ ಭೂಮಿ ಕೈತಪ್ಪುವ ಮತ್ತು ಅರಣ್ಯ ಒತ್ತುವರಿ ಎಂಬ ನಕಲಿ ಪ್ರಕರಣಗಳಿಂದ ಮುಕ್ತಿ ಸಿಗುವುದೇ ? ಎಂಬ ಹಿನ್ನೆಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.