ಸಂಘಟಿತ ಪ್ರದರ್ಶನ ನೀಡಿದ ರಾಜಸ್ಥಾನ್ ರಾಯಲ್ಸ್ 6 ವಿಕೆಟ್ ಗಳಿಂದ ಪಂಜಾಬ್ ಕಿಂಗ್ಸ್ ತಂಡವನ್ನು ಬಗ್ಗುಬಡಿದು ಐಪಿಎಲ್ ಟಿ-20 ಟೂರ್ನಿಯ ಪ್ಲೇಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ.
ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 189 ರನ್ ಗಳಿಸಿತು. ಕಠಿಣ ಗುರಿ ಬೆಂಬತ್ತಿದ ರಾಜಸ್ಥಾನ್ ರಾಯಲ್ಸ್ 19.4 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಈ ಗೆಲುವಿನೊಂದಿಗೆ ರಾಜಸ್ಥಾನ್ 11 ಪಂದ್ಯಗಳಿಂದ ೭ ಜಯ ಹಾಗೂ ೪ ಸೋಲಿನೊಂದಿಗೆ 14 ಅಂಕ ಸಂಪಾದಿಸಿ ಪ್ಲೇಆಫ್ ಸುತ್ತಿಗೆ ಮತ್ತಷ್ಟು ಸಮೀಪವಾಗಿದೆ. ಇದೇ ವೇಳೆ ಪಂಜಾಬ್ ತಂಡ 11 ಪಂದ್ಯಗಳಿಂದ 5 ಜಯ ಹಾಗೂ 6 ಸೋಲಿನೊಂದಿಗೆ 10 ಅಂಕ ಸಂಪಾದಿಸಿದ್ದು, ಪ್ಲೇಆಫ್ ಹಾದಿ ಕಠಿಣವಾಗಿದೆ.
ಕಠಿಣ ಗುರಿ ಬೆಂಬತ್ತಿದ ರಾಜಸ್ಥಾನ್ ತಂಡಕ್ಕೆ ಆರಂಭಿಕ ಯಶಸ್ವಿ ಜೈಸ್ವಾಲ್ ಅರ್ಧಶತಕ ಸಿಡಿಸಿ ನೆರವಾದರು. ಭರ್ಜರಿ ಫಾರ್ಮ್ ನಲ್ಲಿರುವ ಜೋಸ್ ಬಟ್ಲರ್ (30 ರನ್ 16 ಎಸೆತ, 5 ಬೌಂಡರಿ, 1 ಸಿಕ್ಸರ್) ಬೇಗನೇ ನಿರ್ಗಮಿಸಿದರೆ, ಯಶಸ್ವಿ ಜೈಸ್ವಾಲ್ ೪೧ ಎಸೆತಗಳಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 68 ರನ್ ಗಳಿಸಿದ್ದೂ ಅಲ್ಲದೇ ಮೊದಲ ವಿಕೆಟ್ ಗೆ 46 ರನ್ ಜೊತೆಯಾಟ ನಿಭಾಯಿಸಿದರು.
ನಾಯಕ ಸಂಜು ಸ್ಯಾಮ್ಸನ್ (23) ಬೇಗನೆ ಔಟಾದರೂ 31 ರನ್ ಗಳಿಸಿದ ದೇವದತ್ ಪಡಿಕಲ್ ಮತ್ತು 16 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ ಸೇರಿದ ಅಜೇಯ 31 ರನ್ ಗಳಿಸಿದ ಶಿರ್ಮೊನ್ ಹೆಟ್ಮೆಯರ್ ತಂಡವನ್ನು ಗೆಲುವಿನ ದಡ ತಲುಪಿಸಿದರು.