ನವದೆಹಲಿ: ಮತದಾರರ ಪಟ್ಟಿ ಪರಿಷ್ಕರಣೆ (SIR) ಕುರಿತಾಗಿ ಕೇಂದ್ರ ಚುನಾವಣಾ ಆಯೋಗ ಮತ್ತು ವಿಪಕ್ಷಗಳ ನಡುವಿನ ಸಂಘರ್ಷ ತಾರಕಕ್ಕೇರಿರುವ ಬೆನ್ನಲ್ಲೇ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಸಾಮಾಜಿಕ ಜಾಲತಾಣದಲ್ಲಿ ಶಿವನ ಸಾಂಕೇತಿಕ ಚಿತ್ರದೊಂದಿಗೆ “ಸತ್ಯಂ ಶಿವಂ ಸುಂದರಂ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ತೆಗೆದುಕೊಂಡಿರುವ ನಿರ್ಧಾರಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುವ ದಿನವೇ ರಾಹುಲ್ ಗಾಂಧಿ ಈ ಪೋಸ್ಟ್ ಹಂಚಿಕೊಂಡಿರುವುದು ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ.
सत्यम् शिवम् सुन्दरम् https://t.co/pIfskmfzAt
— Rahul Gandhi (@RahulGandhi) October 27, 2026
ಶಿವನ ವಿಭೂತಿ, ತಿಲಕದ ಚಿತ್ರ ಹಂಚಿಕೆ
ಮಂಗಳವಾರ ಬೆಳಿಗ್ಗೆ ರಾಹುಲ್ ಗಾಂಧಿ ಅವರು ಶಿವನನ್ನು ಪ್ರತಿನಿಧಿಸುವ ಮೂರು ಅಡ್ಡ ಬಿಳಿ ಗೆರೆಗಳು (ವಿಭೂತಿ) ಮತ್ತು ಲಂಬವಾದ ಕೆಂಪು ತಿಲಕವಿರುವ ಚಿತ್ರವನ್ನು ಹಂಚಿಕೊಂಡಿದ್ದು, ಅದರೊಂದಿಗೆ ಸಂಸ್ಕೃತದ ಪ್ರಸಿದ್ಧ ನುಡಿಗಟ್ಟು “ಸತ್ಯಂ ಶಿವಂ ಸುಂದರಂ” (ಸತ್ಯವೇ ಶಿವ, ಶಿವನೇ ಸುಂದರ) ಎಂದು ಬರೆದುಕೊಂಡಿದ್ದಾರೆ.
ಚುನಾವಣಾ ಆಯೋಗದ ಕಾರ್ಯವೈಖರಿ ಮತ್ತು ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮಗಳು ನಡೆದಿವೆ ಎಂದು ರಾಹುಲ್ ಗಾಂಧಿ ನಿರಂತರವಾಗಿ ಆರೋಪಿಸುತ್ತಿದ್ದಾರೆ. ಅಕ್ಟೋಬರ್ 11 ರಂದು “ಮತಗಳ ಕಳ್ಳತನ” (ವೋಟ್ ಚೋರಿ) ಆರೋಪಿಸಿ ಸುಪ್ರೀಂ ಕೋರ್ಟ್‌ಗೆ ಪಾದಯಾತ್ರೆ ನಡೆಸುವುದಾಗಿ ಘೋಷಿಸಿದ್ದ ಅವರು, ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿದ್ದರು. ಅಷ್ಟೇ ಅಲ್ಲದೆ, ವಿಪಕ್ಷಗಳ ಈ ಹೋರಾಟವನ್ನು ಶಿವನ ಬ್ರಹ್ಮಾಂಡ ನೃತ್ಯವಾದ ‘ತಾಂಡವ’ಕ್ಕೆ ಹೋಲಿಸಿ, ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದ್ದರು.
ರಾಜ್ಯದಲ್ಲಿ ಕಾಂಗ್ರೆಸ್ 4 ಎಂಎಲ್‌ಸಿ ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ : ಡಿಸಿಎಂ ಡಾ. ಜಿ. ಪರಮೇಶ್ವರ






