ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಲೋಕಸಭಾ ಸದಸ್ಯ ಸ್ಥಾನವನ್ನು ಮರುಸ್ಥಾಪಿಸಲಾಗಿದೆ ಎಂದು ಎನ್‌ಡಿ ಟಿವಿ ಸೋಮವಾರ (ಆಗಸ್ಟ್ 7) ವರದಿ ಮಾಡಿದೆ.
ಮೋದಿ ಉಪನಾಮ ಪ್ರಕರಣದಲ್ಲಿ ರಾಹುಲ್ ಅವರಿಗೆ ಎರಡು ವರ್ಷ ಶಿಕ್ಷೆ ವಿಧಿಸಿದ್ದ ಸೂರತ್ ನ್ಯಾಯಾಲಯದ ಆದೇಶಕ್ಕೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ತಡೆ ನೀಡಿತ್ತು.

ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಲೋಕಸಭೆ ಸಚಿವಾಲಯ, ರಾಹುಲ್ ಗಾಂಧಿಯವರ ಸದಸ್ಯತ್ವ ಅನರ್ಹತೆಯನ್ನು ಆದೇಶವನ್ನು ಹಿಂಪಡೆಯಲಾಗಿದ್ದು, ಸದಸ್ಯತ್ವವನ್ನು ಮರುಸ್ಥಾಪಿಸಲಾಗಿದೆ ಎಂದು ತಿಳಿಸಿದೆ.

ವಯನಾಡು ಕ್ಷೇತ್ರದ ಸಂಸದರಾಗಿರುವ ರಾಹುಲ್ ಸೋಮವಾರ ಸಂಸತ್ತು ಮುಂಗಾರು ಅಧಿವೇಶನಕ್ಕೆ ಹಾಜರಾಗುವ ಸಾಧ್ಯತೆ ಇದೆ.

ಮೋದಿ ಉಪನಾಮದ ಬಗ್ಗೆ ಹೇಳಿಕೆ ನೀಡಿದ್ದರಿಂದ ದಾಖಲಾದ ಮಾನಹಾನಿ ಪ್ರಕರಣದಲ್ಲಿ ರಾಹುಲ್ ಅವರಿಗೆ ಗುಜರಾತ್ ಸೂರತ್ ಸೆಷನ್ಸ್ ನ್ಯಾಯಾಲಯ ಎರಡು ವರ್ಷ ಶಿಕ್ಷೆ ವಿಧಿಸಿತ್ತು.
ಈ ಸುದ್ದಿ ಓದಿದ್ದೀರಾ? ಉತ್ತರ ಪ್ರದೇಶ | ಕಳ್ಳತನದ ಶಂಕೆಯಲ್ಲಿ ಬಾಲಕರಿಬ್ಬರಿಗೆ ಮೂತ್ರ ಕುಡಿಸಿ, ಮೆಣಸಿನಕಾಯಿ ತಿನ್ನಿಸಿ ಹಲ್ಲೆ
ಮಾನಹಾನಿ ಪ್ರಕರಣದಲ್ಲಿ ರಾಹುಲ್ ಅವರು ತಪ್ಪಿತಸ್ಥ ಎಂದು ಆದೇಶಿಸಿದ್ದ ಗುಜರಾತ್‌ನ ಸೂರತ್ ನ್ಯಾಯಾಲಯ, ಮಾರ್ಚ್ 23ರಂದು 2 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಇದರ ಬೆನ್ನಲ್ಲೇ ಅವರನ್ನು ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿತ್ತು.
2019ರ ಕರ್ನಾಟಕ ಕೋಲಾರದಲ್ಲಿ ಲೋಕಸಭೆ ಚುನಾವಣಾ ಪ್ರಚಾರ ಸಭೆಯಲ್ಲಿ ರಾಹುಲ್ ಅವರು, “ಎಲ್ಲ ಕಳ್ಳರ ಹೆಸರು ಮೋದಿ ಎಂದು ಏಕಿರುತ್ತದೆ?” ಎಂದು ಪ್ರಶ್ನಿಸಿದ್ದರು.
ಮೋದಿ ಉಪನಾಮದ ಬಗ್ಗೆ ಹೇಳಿಕೆ ನೀಡಿದ್ದರಿಂದ ಶಾಸಕ ಪೂರ್ಣೇಶ್ ಮೋದಿ ಗುಜರಾತ್ ಸೂರತ್ ನ್ಯಾಯಾಲಯದಲ್ಲಿ ರಾಹುಲ್ ಗಾಂಧಿ ಅವರ ವಿರುದ್ಧ ಮಾನಹಾನಿ ಮೊಕದ್ದಮೆ ದಾಖಲಿಸಿದ್ದರು.