ಕರೋನ ಸಂಕಷ್ಟದಿಂದ ಆರ್ಥಿಕತೆಯನ್ನು ಪಾರುಮಾಡಲು ಬಡ್ಡಿದರವನ್ನು ತಗ್ಗಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್ ಸೇರಿದಂತೆ ಜಾಗತಿಕ ಕೇಂದ್ರೀಯ ಬ್ಯಾಂಕುಗಳು ತ್ವರಿತವಾಗಿ ಬಡ್ಡಿದರವನ್ನು ಹೆಚ್ಚಿಸುವುದರ ವಿರುದ್ಧ ಆರ್ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಎಚ್ಚರಿಕೆ ನೀಡಿದ್ದಾರೆ.
ಒಂದು ವೇಳೆ ತ್ವರಿತವಾಗಿ ಬಡ್ಡಿದರ ಹೆಚ್ಚಿಸಿದರೆ ಸಂಪತ್ತಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಮತ್ತು ಆರ್ಥಿಕತೆ ಚೇತರಿಕೆಯಲ್ಲಿ ಭಾಗಿಯಾಗುತ್ತಿರುವ ಗ್ರಾಹಕರಿಗೂ ಆಘಾತವಾಗಬಹುದು ಎಂದು ಹೇಳಿದ್ದಾರೆ.
ಕರೋನೊತ್ತರ ಆರ್ಥಿಕ ಪರಿಸ್ಥಿತಿಯು ತ್ವರಿತವಾಗಿ ಸುಧಾರಿಸುವ ಸಲುವಾಗಿ ಆರ್ಬಿಐ ಸೇರಿದಂತೆ ಬಹುತೇಕ ಎಲ್ಲಾ ಕೇಂದ್ರೀಯ ಬ್ಯಾಂಕುಗಳು ಬಡ್ಡಿದರವನ್ನು ತಗ್ಗಿಸಿ ಸುಲಭದರದಲ್ಲಿ ಸಾಲವನ್ನು ನೀಡಿವೆ. ಇದರ ಪರಿಣಾಮ ಆರ್ಥಿಕತೆ ಚೇತರಿಸಿಕೊಂಡು ಸ್ಥಿರವಾಗುತ್ತಿದೆ. ಈ ಹಂತದಲ್ಲಿ ಮತ್ತೆ ಬಡ್ಡಿದರವನ್ನು ಹೆಚ್ಚಿಸಲು ಕೇಂದ್ರೀಯ ಬ್ಯಾಂಕುಗಳು ಚಿಂತಿಸುತ್ತಿರುವುದನ್ನು ಪ್ರಸ್ತಾಪಿಸಿ ರಾಜನ್ ಈ ಎಚ್ಚರಿಕೆ ನೀಡಿದ್ದಾರೆ.
ಸಿಎನ್ಬಿಸಿ ವಾಹಿನಿ ಸಂವಾದದಲ್ಲಿ ಭಾಗಿಯಾಗಿದ್ದ ರಘುರಾಮ್ ರಾಜನ್, ಹಲವು ಕ್ಷೇತ್ರಗಳಲ್ಲಿ ವೌಲ್ಯವು ವಾಸ್ತವಿಕತೆಗಿಂದ ಹಿಗ್ಗಿದ್ದು, ಸಮರ್ಥಿಸಿಕೊಳ್ಳಲಾರದ ಮಟ್ಟ ಮುಟ್ಟಿವೆ ಎಂದು ಹೇಳಿದ್ದಾರೆ. “ಇದು ಸಹಜವಾಗಿ ಇರುವ ಸಮಸ್ಯೆ . ಕೇಂದ್ರೀಯ ಬ್ಯಾಂಕ್ಗಳು ತ್ವರಿತ ನಿರ್ಧಾರ ಕೈಗೊಂಡರೆ ಬಂಡವಾಳ ಮಾರುಕಟ್ಟೆಗಳು ಅಷ್ಟೇ ತ್ವರಿತವಾಗಿ ಹೊಂದಿಕೊಳ್ಳುತ್ತವೆ, ಆಗ ಮಾರುಕಟ್ಟೆಯಲ್ಲಿ ಕುಸಿತವಾಗಿ ಸಂಪತ್ತಿನ ಮೌಲ್ಯವು ತೀವ್ರವಾಗಿ ಕುಸಿಯಬಹುದು, ಗ್ರಾಹಕರೂ ಆತಂಕಕ್ಕೆ ಒಳಗಾಗಬಹುದು. ಈ ಬೆಳವಣಿಗೆಯು ನೀವೆಂದೂ ಬಯಸದ ಆರ್ಥಿಕ ಹಿಂಜರಿತವನ್ನು ನೀವೇ ಪ್ರಚೋದಿಸಿದಂತಾಗಬಹುದು ಎಂದು ರಾಜನ್ ವಿಶ್ಲೇಷಿಸಿದ್ದಾರೆ.
2013-16ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ ರಾಜನ್ ಸೇವೆಸಲ್ಲಿಸಿದ್ದರು ಅವರ ಸೇವೆಯನ್ನು ಎರಡನೇ ಅವಧಿಗೆ ವಿಸ್ತರಿಸಲು ಮೋದಿ ಸರ್ಕಾರ ನಿರಾಕರಿಸಿತ್ತು.
ಬಡ್ಡಿದರಗಳು ದೀರ್ಘಕಾಲದವರೆಗೆ ಕೆಳಮಟ್ಟದಲ್ಲೇ ಇರುತ್ತವೆ ಎಂಬ ನಂಬಿಕೆಯಿಂದಲೇ ಆರ್ಥಿಕತೆ ಚೇತರಿಕೆ ಕಂಡಿದೆ, ಈ ಹಂತದಲ್ಲಿ ಹಣಕಾಸು ನೀತಿ ರೂಪಿಸುವವರು ಬಡ್ಡಿದರ ಹೆಚ್ಚಳ ನಿರ್ಧಾರ ಕೈಗೊಂಡರೆ ಅದು ತೀವ್ರ ಪ್ರಮಾಣದ ಹಾನಿ ಉಂಟುಮಾಡಲಿದೆ ಎಂದು ರಾಜನ್ ಎಚ್ಚರಿಸಿದ್ದಾರೆ.
ಅತ್ಯಂತ ಕೆಟ್ಟಸಂಗತಿ ಎಂದರೆ, ತಾವು ಕುಸಿದಾಗ ನಮ್ಮ ನೆರವಿಗೆ ಕೇಂದ್ರೀಯ ಬ್ಯಾಂಕುಗಳು ದಾವಿಸುತ್ತವೆ ಎಂದು ಮಾರುಕಟ್ಟೆಗಳು ನಂಬಿವೆ. ಇದು ನಿಜವೇ ಆಗಿದ್ದಲ್ಲಿ ಕೇಂದ್ರೀಯ ಬ್ಯಾಂಕುಗಳು ಮಾರುಕಟ್ಟೆಗಳ ಮುಷ್ಠಿಯಲ್ಲಿ ಸಿಕ್ಕಿಬಿದ್ದಿವೆ ಎಂದರ್ಥ ಎಂದು ರಾಜನ್ ವಿಶ್ಲೇಷಿಸಿದ್ದಾರೆ.
ಆರ್ಬಿಐ ಹಾಲಿ ಗವರ್ನರ್ ಶಕ್ತಿಕಾಂತ ದಾಸ್ ಅವರು, ಇತ್ತೀಚೆಗೆ ದೇಶದಲ್ಲಿ ಆರ್ಥಿಕತೆ ಚೇತರಿಕೆ ತ್ವರಿತ ಮತ್ತು ನಿಚ್ಛಳವಾಗಿದೆ, ಪ್ರಸಕ್ತ ವಿತ್ತೀಯ ವರ್ಷದಲ್ಲಿ ನಿರೀಕ್ಷಿತ ಮುನ್ನಂದಾಜಿನಂತೆ ಶೇ.9.5ರಷ್ಟು ಜಿಡಿಪಿ ಬೆಳವಣಿಗೆ ದಾಖಲಿಸಿಲಿದೆ ಎಂದು ಹೇಳಿದ್ದರು. ಜತೆಗೆ ಬರುವ ದಿನಗಳಲ್ಲಿ ಬಡ್ಡಿದರಗಳು ಮೇಲ್ಮುಖ ಚಲಿಸುವ ಸಾಧ್ಯತೆಯನ್ನು ಪ್ರಸ್ತಾಪಿಸಿದ್ದರು. ಈ ಹಿನ್ನೆಲೆಯಲ್ಲಿ ರಘುರಾಮ್ ರಾಜನ್ ಅವರು ಬಡ್ಡಿದರ ಏರಿಕೆಯ ವಿರುದ್ಧ ನೀಡಿರುವ ಎಚ್ಚರಿಗೆಯು ಮಹತ್ವದ್ದಾಗಿದೆ. ರಘುರಾಮ್ ರಾಜನ್ ಅವರು 2008ರ ಆರ್ಥಿಕ ಕುಸಿತವನ್ನು ಮುನ್ನಂದಾಜು ಮಾಡಿದ್ದ ಏಕೈಕ ಅರ್ಥಶಾಸ್ತ್ರಜ್ಞ. ಆವರು ಆರ್ಬಿಐ ಗವರ್ನರ್ ಆಗಿದ್ದ ಅವಧಿಯಲ್ಲೇ ಬ್ಯಾಂಕುಗಳ ನಿಷ್ಕ್ರಿಯ ಸಾಲ (ಎನ್ಪಿಎ) ತಗ್ಗಿಸಲು ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದ್ದರು. ಆದರೆ, ಅವರ ಅವಧಿಯಲ್ಲಿ ಯಾವುದೇ ಭಾರಿ ಮೊತ್ತದ ಸಾಲವನ್ನು ಖಾತೆಯಿಂದ (ರೈಟ್ ಆಫ್) ಹೊರಗಿಟ್ಟಿರಲಿಲ್ಲ.
ರಘುರಾಮ್ ರಾಜನ್ ಅವರು ನೀಡಿರುವ ಎಚ್ಚರಿಕೆಯೂ ಇಡೀ ಜಗತ್ತಿನ ಪ್ರಮುಖ ಕೇಂದ್ರೀಯ ಬ್ಯಾಂಕುಗಳಿಗೇ ಆಗಿದ್ದರೂ, ಭಾರತದ ಮಟ್ಟಿಗೆ ಹೆಚ್ಚು ಹೊಂದುತ್ತದೆ. ಇದುವರೆಗೆ ಸಾಲಪಡೆದಿರುವ ಎಲ್ಲರೂ ಬಡ್ಡಿದರ ಕೆಳಮಟ್ಟದಲ್ಲೇ ಇರುತ್ತದೆ ಎಂದು ನಂಬಿದ್ದಾರೆ. ಕಷ್ಟಗಳ ನಡುವೆಯೂ ಸಾಲ ಪಡೆಯುತ್ತಿದ್ದಾರೆ. ಇದು ಹೊಸ ವಸತಿಗಳ ಮಾರಾಟ, ಕಾರು, ಬೈಕು, ಗೃಹೋಪಯೋಗಿ ವಸ್ತುಗಳ ಮಾರಾಟಕ್ಕೆ ಉತ್ತೇಜನ ನೀಡಿದೆ. ಆ ಕಾರಣಕ್ಕಾಗಿ ಆರ್ಥಿಕತೆಯಲ್ಲಿ ಚೇತರಿಕೆ ಕಂಡು ಬರುತ್ತಿದೆ. ಒಂದು ವೇಳೆ ಬಡ್ಡಿದರ ಏರುಮುಖವಾಗಿ ಸಾಗಿದರೆ ಬೇಡಿಕೆ ಕುಸಿದು ಚೇತರಿಕೆಯ ಹಾದಿಯಲ್ಲಿರುವ ಆರ್ಥಿಕತೆ ಹಿಂಜರಿತದತ್ತ ಸಾಗುತ್ತದೆ. ರಾಜನ್ ಅವರ ಎಚ್ಚರಿಕೆಯ ಉದ್ದೇಶ ಇಂತಹ ಅಪಾಯವನ್ನು ತಡೆಗಟ್ಟುವುದಾಗಿದೆ.