ರಾಮಚಂದ್ರಾಪುರ ಮಠದ ಸ್ವಾಮಿ ವಿರುದ್ಧದ ಸರಣಿ ಅತ್ಯಾಚಾರ ಆರೋಪ ಪ್ರಕರಣಗಳು ಮತ್ತೆ ಚರ್ಚೆಗೆ ಬಂದಿವೆ. ಅದರಲ್ಲೂ ಮುಖ್ಯವಾಗಿ ಬಹುಶಃ ಭಾರತೀಯ ನ್ಯಾಯಾಂಗದ ಇತಿಹಾಸದಲ್ಲೇ ಅಪರೂಪ ಎನ್ನಬಹುದಾದ ಮಟ್ಟಿಗೆ ಸ್ವಾಮಿ ವಿರುದ್ಧದ ವಿವಿಧ ಪ್ರಕರಣಗಳ ವಿಚಾರಣೆಯಿಂದ ಸಾಲು ಸಾಲು ನ್ಯಾಯಾಧೀಶರು ಹಿಂದೆ ಸರಿಯುತ್ತಿರುವುದರ ಹಿಂದಿನ ರಹಸ್ಯದ ಬಗ್ಗೆ ಚರ್ಚೆ ಶುರುವಾಗಿದೆ.
ರಾಮಚಂದ್ರಾಪುರ ಮಠದ ರಾಘವೇವೇಶ್ವರ ಭಾರತಿ ಸ್ವಾಮಿ ವಿರುದ್ಧದ ಪ್ರಕರಣಗಳ ವಿಚಾರಣೆಯಿಂದ ನ್ಯಾಯಾಧೀಶರು ಹಿಂದೆ ಸರಿಯುತ್ತಿರುವ ಆಘಾತಕಾರಿ ಪರಂಪರೆಯ ಹಿನ್ನೆಲೆಯಲ್ಲಿ ಪ್ರಭಾವಿ ಡಿಜಿಟಲ್ ಸುದ್ದಿ ಮಾಧ್ಯಮ ‘ದ ನ್ಯೂಸ್ ಮಿನಿಟ್’ ವಿಶೇಷ ವರದಿಯೊಂದನ್ನು ಪ್ರಕಟಿಸಿದೆ.
ಕನ್ನಡದ ಓದುಗರಿಗಾಗಿ ಆ ವರದಿಯನ್ನು ಸಾರಾಂಶ ರೂಪದಲ್ಲಿ ಇಲ್ಲಿ ನೀಡಲಾಗಿದೆ.
ರಾಘವೇಶ್ವರ ಸ್ವಾಮಿ ವಿರುದ್ಧ ಗಾಯಕಿ ಗೀತಾ(ಹೆಸರು ಬದಲಾಯಿಸಲಾಗಿದೆ) ಮಾಡಿದ್ದ ಸರಣಿ ಅತ್ಯಾಚಾರ ಆರೋಪದ ಪ್ರಕರಣದ ಕುರಿತ ವಿಚಾರಣೆಯ ವೇಳೆ ರಾಜ್ಯ ಹೈಕೋರ್ಟಿನ ಬರೋಬ್ಬರಿ ಹತ್ತು ಮಂದಿ ನ್ಯಾಯಮೂರ್ತಿಗಳು ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ. ಹೀಗೆ ನ್ಯಾಯಮೂರ್ತಿಗಳು ಪ್ರಭಾವಿ ಸ್ವಾಮಿಯ ವಿರುದ್ಧದ ಗಂಭೀರ ಅಪರಾಧ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯುತ್ತಿರುವುದು ಕೇವಲ ಅದೊಂದೇ ಪ್ರಕರಣಕ್ಕೆ ಸೀಮಿತವಾಗೇನೂ ಇಲ್ಲ.
ಪ್ರಭಾವಿ ಹವ್ಯಕ ಸಮುದಾಯದ ಈ ಸ್ವಾಮಿಗೆ ಸಂಬಂಧಿಸಿದ ಮತ್ತೊಂದು ಅತ್ಯಾಚಾರ ಪ್ರಕರಣ ಮತ್ತು ಇತರೆ ಪ್ರಕರಣಗಳಲ್ಲಿ ಕೂಡ ನ್ಯಾಯಧೀಶರು, ವಿಚಾರಣೆಯಿಂದ ದಿಢೀರನೇ ಹಿಂದೆ ಸರಿದಿರುವ, ಇಲ್ಲವೇ ತಮ್ಮ ಪೀಠದ ಬದಲಿಗೆ ಮತ್ತೊಂದು ಪೀಠಕ್ಕೆ ಪ್ರಕರಣವನ್ನು ವರ್ಗಾಯಿಸಬೇಕು ಎಂದು ಕೋರಿದ ನಿದರ್ಶನಗಳು ಹಲವು ಇವೆ.
ಗೋಕರ್ಣದ ಮಹಾಬಲೇಶ್ವರ ದೇವಾಲಯದ ಆಡಳಿತವನ್ನು ರಾಘವೇಶ್ವರ ಸ್ವಾಮಿ ವಹಿಸಿಕೊಂಡಿದ್ದರ ವಿರುದ್ಧ ಸ್ಥಳೀಯರು ಕೋರ್ಟ್ ಮೆಟ್ಟಿಲೇರಿದ್ದರು. ಆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗಲೂ 2009ರಲ್ಲಿ ನ್ಯಾ. ಶಾಂತನಗೌಡರ್ ವಿಚಾರಣೆಯಿಂದ ಹಿಂದೆ ಸರಿದಿದ್ದರು. ಗೋಕರ್ಣದ ದೇವಾಲಯದ ಆಡಳಿತವನ್ನು ರಾಘವೇಶ್ವರ ಸ್ವಾಮಿಯ ರಾಮಚಂದ್ರಾಪುರ ಮಠ ವಹಿಸಿಕೊಳ್ಳಬೇಕೆ ಅಥವಾ ಹಿಂದಿನಿಂದ ನಡೆದುಬಂದಂತೆ ರಾಜ್ಯ ಸರ್ಕಾರದ ಅಧೀನದಲ್ಲೇ ದೇವಾಲಯ ಆಡಳಿತ ಇರಬೇಕೆ ಎಂಬುದು ಈ ಪ್ರಕರಣದ ವಿವಾದವಾಗಿತ್ತು.
ಈ ಪ್ರಕರಣ ಈಗ ಸುಪ್ರೀಂಕೋರ್ಟಿನ ಮುಂದಿದೆ. ಆದರೆ, ಅದಕ್ಕೂ ಮುನ್ನ ಕೆಲವು ನ್ಯಾಯಾಧೀಶರು, ಅತ್ಯಾಚಾರ ಪ್ರಕರಣದ ವಿಷಯದಲ್ಲಿ ನಡೆದಂತೆಯೇ, ವಿಚಾರಣೆಯಿಂದ ದಿಢೀರನೆ ಹಿಂದೆ ಸರಿದ ಘಟನೆಗಳು ನಡೆದಿದ್ದವು. 2016ರಲ್ಲಿ ಅಂದಿನ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಎಸ್ ಕೆ ಮುಖರ್ಜಿ ಅವರೂ ಈ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದಿದ್ದರು. ನ್ಯಾಯಮೂರ್ತಿ ಮುಖರ್ಜಿ ಅವರು ದ್ವಾರಕ ಶಂಕರಾಚಾರ್ಯ ಅವರ ಭಕ್ತರಾಗಿರುವುದರಿಂದ ತಮಗೆ ಅವರ ನೇತೃತ್ವದ ನ್ಯಾಯಪೀಠದ ಮೇಲೆ ನಂಬಿಕೆ ಇಲ್ಲ ಎಂದು ರಾಘವೇಶ್ವರ ಪರ ವಕೀಲರು ಆಕ್ಷೇಪವೆತ್ತಿದ್ದರು. ಆ ಹಿನ್ನೆಲೆಯಲ್ಲಿ ಈ ಪ್ರಕರಣವಷ್ಟೇ ಅಲ್ಲದೆ, ರಾಘವೇಶ್ವರ ಸ್ವಾಮಿಗೆ ಸಂಬಂಧಿಸಿದ ಪ್ರಕರಣಗಳ ವಿಷಯದಲ್ಲಿ ಇತರೆ ಮೂರು ಸಂದರ್ಭಗಳಲ್ಲಿ ಕೂಡ ನ್ಯಾಯಮೂರ್ತಿ ಮುಖರ್ಜಿ ಅವರು ವಿಚಾರಣೆಯಿಂದ ಹಿಂದೆ ಸರಿದರು.
ಸ್ವಾಮಿಗೆ ಸಂಬಂಧಿಸಿದಂತೆ ಮತ್ತೊಂದು ಪ್ರಕರಣದಲ್ಲೂ ಇಂತಹದ್ದೇ ಬೆಳವಣಿಗೆಯಾಯಿತು. 2017ರ ಅಕ್ಟೋಬರ್ ನಲ್ಲಿ ರಾಮಚಂದ್ರಾಪುರ ಮಠ ಧಾರ್ಮಿಕ ಪೀಠದಿಂದ ರಾಘವೇಶ್ವರ ಸ್ವಾಮಿಯನ್ನು ಕೆಳಗಿಳಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ದೂರು ನ್ಯಾ. ಎಚ್ ಜಿ ರಮೇಶ್ ಅವರ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ನ್ಯಾ. ರಮೇಶ್ ಅವರು ಆಗ ಹೈಕೋರ್ಟಿನ ಹಂಗಾಮಿ ಮುಖ್ಯನ್ಯಾಯಮೂರ್ತಿಯೂ ಆಗಿದ್ದರು. ಆದರೆ, ನ್ಯಾ. ರಮೇಶ್ ಕೂಡ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದರು. ತಮ್ಮ ಆ ನಿಲುವಿಗೆ ಅವರು ನೀಡಿದ ಕಾರಣ; ಸ್ವಾಮಿ ಪರ ವಕೀಲರು ಈ ಹಿಂದೆ ತಮ್ಮ ಹಿರಿಯ ವಕೀಲರಾಗಿದ್ದರು ಎಂಬುದು!
Also Read : ಎರಡು ಅತ್ಯಾಚಾರ ಪ್ರಕರಣದ ಆರೋಪ ಹೊತ್ತ ಸ್ವಾಮಿ ಮತ್ತು ನ್ಯಾಯಮೂರ್ತಿಗಳ ಅಚ್ಚರಿಯ ನಡೆ! – ಭಾಗ – 1
“ಆ ಪೀಠದ ಮತ್ತೊಬ್ಬ ನ್ಯಾಯಮೂರ್ತಿಯಾಗಿದ್ದ ಪಿ ಬಿ ಭಜಂತ್ರಿ ಕೂಡ ವಿಚಾರಣೆಯಿಂದ ಹಿಂದೆ ಸರಿಯಲು ಬಯಸಿದ್ದಾರೆ. ಆ ಹಿನ್ನೆಲೆಯಲ್ಲಿ ನ್ಯಾಯಾಲಯದ ರಿಜಿಸ್ಟ್ರಿ, ಈ ಪ್ರಕರಣವನ್ನು ಬೇರೊಂದು ಪೀಠದ ಮುಂದೆ ವಿಚಾರಣೆಗೆ ಒಪ್ಪಿಸುವಂತೆ ಮುಖ್ಯನ್ಯಾಯಮೂರ್ತಿಗಳಿಗೆ ಕೋರಿದೆ. ಆ ಹಿನ್ನೆಲೆಯಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಹಂಗಾಮಿ ಮುಖ್ಯನ್ಯಾಯಮೂರ್ತಿಗಳನ್ನು ಒಳಗೊಳ್ಳದ ವಿಭಾಗೀಯ ಪೀಠಕ್ಕೆ ವರ್ಗಾಯಿಸಬೇಕು” ಎಂದು ಹೈಕೋರ್ಟ್ ಆದೇಶಿಸಿದೆ ಎಂದು ಹೈಕೋರ್ಟಿನ ವೆಬ್ ಸೈಟ್ ಉಲ್ಲೇಖಿಸಿದೆ.
ಅದೇ ರೀತಿ 2018ರ ಅಕ್ಟೋಬರ್ 11ರಂದು ರಾಮಚಂದ್ರಾಪುರ ಮಠದ ವಿಷಯಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಪ್ರಕರಣವೊಂದರ ಅರ್ಜಿಯ ವಿಚಾರಣೆಯಿಂದ ನ್ಯಾ. ಎಸ್ ಜಿ ಪಂಡಿತ್ ಕೂಡ ಹಿಂದೆ ಸರಿದರು. ನ್ಯಾ. ಪಂಡಿತ್ ಅವರು ಹೀಗೆ ಹಿಂದೆ ಸರಿಯಲು ಅವರು ಸ್ವಾಮಿಯ ಭಕ್ತರಾಗಿರುವುದೇ ಕಾರಣ ಎನ್ನಲಾಗಿತ್ತು.
ನ್ಯಾಯಮೂರ್ತಿಗಳು ಹೀಗೆ ಸಾಲುಸಾಲಾಗಿ ವಿಚಾರಣೆಯಿಂದ ಹಿಂದೆ ಸರಿಯುತ್ತಿರುವ ಈ ಆಶ್ಚರ್ಯಕರ ವಿದ್ಯಮಾನದ ಕುರಿತು ಪ್ರತಿಕ್ರಿಯೆ ಕೇಳಲು ಕರ್ನಾಟಕ ಹೈಕೋರ್ಟ್ ನಿವೃತ್ತಿ ನ್ಯಾಯಾಧೀಶ ಹಾಗೂ ಮಾಜಿ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಅವರನ್ನು ಟಿಎನ್ ಎಂ ಸಂಪರ್ಕಿಸಿತ್ತು.
ವಿಚಾರಣೆಯಿಂದ ನ್ಯಾಯಾಧೀಶರು ಹಿಂದೆ ಸರಿಯುವುದನ್ನು ಸಾಮಾನ್ಯವಾಗಿ ಮುಕ್ತವಾಗಿ ಕಾಣಲಾಗುತ್ತದೆ ಮತ್ತು ಆರೋಪಿತರು ಜನಪ್ರಿಯ ವ್ಯಕ್ತಿಯಾಗಿದ್ದಲ್ಲಿ ಅಂತಹ ಘಟನೆಗಳು ಹೆಚ್ಚುವುದು ಸಾಮಾನ್ಯ ಎಂಬುದನ್ನು ಪ್ರಸ್ತಾಪಿಸಿದ ಹೆಗ್ಡೆ, “ನ್ಯಾಯದಾನ ಖಾತರಿಪಡಿಸಿದರಷ್ಟೇ ಸಾಲದು. ನಿಷ್ಪಕ್ಷಪಾತವಾಗಿ ನ್ಯಾಯ ಸಿಗುತ್ತದೆ ಎಂಬುದನ್ನು ಎಲ್ಲರಿಗೆ ಕಾಣುವಂತೆ ತೋರಿಸುವುದು ಕೂಡ ಬಹಳ ಮುಖ್ಯ. ಆ ಹಿನ್ನೆಲೆಯಲ್ಲೇ ಕೆಲವರು ಕೆಲವು ಪ್ರಕರಣಗಳ ವಿಚಾರಣೆಯನ್ನು ತಾವು ಮಾಡುವುದಿಲ್ಲ ಎಂದು ಹಿಂದೆ ಸರಿಯುತ್ತಾರೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ಹೀಗೆ ವಿಚಾರಣೆಯಿಂದ ಹಿಂದೆ ಸರಿಯುವುದು ಒಂದು ಭಾಗವಾಗಿಯೇ ಇದೆ. ಕೆಲವರು ವಿವಾದಿತ ತೀರ್ಪು ಕೊಡುವುದಕ್ಕೆ ಹಿಂದೇಟು ಹಾಕಿಯೂ ವಿಚಾರಣೆಯಿಂದ ಹಿಂದೆ ಸರಿಯಬಹುದು. ಅದರಲ್ಲೂ ಅವರು ಒಬ್ಬ ಧಾರ್ಮಿಕ ವ್ಯಕ್ತಿ. ಹಾಗಾಗಿ ಅವರನ್ನು ಅನುಸರಿಸುವ, ಅವರ ಅನುಯಾಯಿಗಳಾದ ಕೆಲವರು ಹೀಗೆ ಹಿಂದೆ ಸರಿದಿರಬಹುದು. ಹಾಗೇ ಅವರನ್ನು ದ್ವೇಷಿಸುವವರು ಕೂಡ ಇಂತಹ ಸಂದರ್ಭದಲ್ಲಿ ವಿಚಾರಣೆಯಿಂದ ಹಿಂದೆ ಸರಿಯಬೇಕು. ಒಂದು ಉತ್ತಮ ನ್ಯಾಯಾಂಗದ ನಡತೆಯಾಗಿರುವ ಈ ವಿಚಾರಣೆಯಿಂದ ಹಿಂದೆ ಸರಿಯುವ ಪದ್ಧತಿ, ಒಂದು ವೇಳೆ ದುರುಪಯೋಗವಾಗುತ್ತಿದ್ದರೆ, ಅದು ಒಪ್ಪಿತವಲ್ಲ” ಎಂದು ಅಭಿಪ್ರಾಯಪಟ್ಟರು.
ಹೆಚ್ಚುವರಿ ಅಡ್ವೊಕೇಟ್ ಜನರಲ್ ವಿರುದ್ಧ ಆರೋಪ
ಈ ಹಿಂದೆ ನ್ಯಾಯಾಲಯದಲ್ಲಿ ರಾಘವೇಶ್ವರ ಸ್ವಾಮಿ ಪರ ವಕಾಲತು ವಹಿಸಿದ ವಕೀಲರಲ್ಲಿ ಒಬ್ಬರಾದ ಅರುಣ್ ಶಾಮ್, ಸದ್ಯ ಕರ್ನಾಟಕದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿದ್ದಾರೆ. ಸ್ವಾಮಿ ವಿರುದ್ಧ ಆರೋಪವಿರುವ ಅಪ್ರಾಪ್ತೆಯ ಅತ್ಯಾಚಾರ ಪ್ರಕರಣದಲ್ಲಿ ಅರುಣ್ ಶಾಮ್ ಎರಡನೇ ಆರೋಪಿಯಾಗಿದ್ದು, ಅವರ ವಿರುದ್ಧ ಅಪಹರಣ ಮತ್ತು ಬೆದರಿಕೆಯ ಆರೋಪ ಹೊರಿಸಲಾಗಿದೆ.
ಕರ್ನಾಟಕದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಅರುಣ್ ಶಾಮ್
ಈ ಪ್ರಕರಣದಲ್ಲಿ, ಬೆಂಗಳೂರಿನ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ 2015ರಲ್ಲಿ ರಾಘವೇಶ್ವರ ಸ್ವಾಮಿ ವಿರುದ್ಧ ಎಫ್ ಐಆರ್ ದಾಖಲಾಗಿತ್ತು. ಪ್ರಕರಣದ ಸಂತ್ರಸ್ತೆಯ ದೂರಿನ ಪ್ರಕಾರ ಆಕೆಯ ಮೇಲೆ ಸ್ವಾಮಿ ಅತ್ಯಾಚಾರ ಎಸಗಿದಾಗ ಆಕೆ 15 ವರ್ಷದ ಅಪ್ರಾಪ್ತೆ. ಆಕೆಯ ದೂರಿನ ಮೇಲೆ ಗಿರಿನಗರ ಠಾಣೆಯಲ್ಲಿ ದಾಖಲಾಗಿರುವ ಎಫ್ ಐಆರ್ ಪ್ರಕಾರ, 2006ರಲ್ಲಿ ಆಕೆಯ ಮೇಲೆ ಮೊದಲ ಬಾರಿ ಅತ್ಯಾಚಾರ ನಡೆದಾಗ, ಆಕೆ ಇನ್ನೂ ಸ್ವಾಮಿಯ ಅಪ್ರಾಪ್ತ ಭಕ್ತೆಯಾಗಿದ್ದಳು. ಆ ಎಫ್ ಐಆರ್ ನಲ್ಲಿ ಅರುಣ್ ಶಾಮ್ ಆರೋಪಿ ನಂಬರ್ 2 ಆಗಿದ್ದು, ಸಂತ್ರಸ್ತೆಯ ಅಪಹರಣ ಮತ್ತು ಆಕೆಗೆ ಬೆದರಿಕೆ ಒಡ್ಡಿದ ಆರೋಪವಿದೆ. 2015ರ ಸೆಪ್ಟೆಂಬರಿನಲ್ಲಿ ಅರುಣ್ ಶಾಮ್ ಗೆ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಸಿಕ್ಕಿದೆ.
ಎಫ್ ಐಆರ್ ಪ್ರಕಾರ, ರಾಘವೇಶ್ವರ ಆ ಹುಡುಗಿಯ ವಿಷಯದಲ್ಲಿ ‘ವಿಶೇಷ ಆಸಕ್ತಿ’ ವಹಿಸಿ, ಆಕೆಯೊಂದಿಗೆ ಮಾತನಾಡತೊಡಗಿದಾಗ ಆಕೆ ರಾಮಚಂದ್ರಾಪುರ ಮಠ ನಡೆಸುತ್ತಿದ್ದ ಶಾಲೆಯೊಂದರಲ್ಲಿ ಓದುತ್ತಿದ್ದಳು. 2006ರಲ್ಲಿ ಮಠದ ಒಂದು ಕಾರ್ಯಕ್ರಮದ ವೇಳೆ ಆಕೆ ಭಾಗಿಯಾದಾಗ, 15 ವರ್ಷದ ಆಕೆಯನ್ನು ತನ್ನ ಖಾಸಗಿ ಕೊಠಡಿಗೆ ಕರೆಸಿಕೊಂಡ ರಾಘವೇಶ್ವರ, ಆಕೆಯ ಜಾತಕದಲ್ಲಿ ದೋಷವಿದೆ ಎಂದು ಹೇಳಿ, ‘ರಾಮದರ್ಶನ’ ಎಂಬ ವಿಶೇಷ ರಾಮನ ಸೇವೆ ಮಾಡಿದರೆ ಆ ದೋಷ ನಿವಾರಣೆಯಾಗುವುದಾಗಿ ಹೇಳಿದರು. ಈ ವಿಶೇಷ ಸೇವೆಯ ಹೆಸರಲ್ಲಿ ಸ್ವಾಮಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದರು. ಅತ್ಯಾಚಾರದ ಬಳಿಕ, “ಈ ವಿಷಯವನ್ನು ನೀನು ಯಾರಿಗೂ ಹೇಳಬಾರದು. ಹೇಳಿದರೆ ಶ್ರೀ ರಾಮನ ಶಾಪಕ್ಕೆ ಗುರಿಯಾಗುತ್ತೀಯ” ಎಂದು ತನಗೆ ಬೆದರಿಸಿದರು ಎಂದು ಹೇಳಲಾಗಿದೆ.
ಆ ಬಳಿಕ 2012ರ ಆಗಸ್ಟ್ ನಲ್ಲಿ ಆ ಸಂತ್ರಸ್ತೆ ವಯಸ್ಕಳಾಗಿದ್ದರು ಮತ್ತು ಆಗಲೂ ಗಿರಿನಗರದ ಶ್ರೀ ರಾಮಚಂದ್ರಾಪುರ ಮಠದಲ್ಲಿಯೇ ಇದ್ದರು. ಆಗಲೂ ಆಕೆಯನ್ನು ತನ್ನ ಖಾಸಗಿ ಕೋಣೆಗೆ ಕರೆಸಿಕೊಂಡ ರಾಘವೇಶ್ವರ ಸ್ವಾಮಿ, ಆಕೆಯ ಮೇಲೆ ಅತ್ಯಾಚಾರ ಎಸಗಿದರು. ನಂತರ 2014ರ ಸೆಪ್ಟೆಂಬರಿನಲ್ಲಿ ಸಂತ್ರಸ್ತೆ ಉತ್ತರಕನ್ನಡ ಜಿಲ್ಲೆಯ ತನ್ನ ತಂದೆಯ ಮನೆಯಲ್ಲಿರುವಾಗ ವಕೀಲ ಅರುಣ್ ಶಾಮ್ ಸೇರಿದಂತೆ ಐದಾರು ಮಂದಿಯ ಗುಂಪೊಂದು ಆಕೆಯನ್ನು ಅಪಹರಿಸಿ ಕೆಕ್ಕಾರು ಮಠಕ್ಕೆ ಕರೆದೊಯ್ದರು ಎಂದು ಎಫ್ ಐಆರ್ ನಲ್ಲಿ ಹೇಳಲಾಗಿದೆ. ಅಲ್ಲದೆ, ಸ್ವಾಮಿ ವಿರುದ್ಧ ಮಾತನಾಡದಂತೆ ಆಕೆಗೆ ಬೆದರಿಕೆ ಹಾಕಲಾಯಿತು. ಒಂದು ವೇಳೆ ಆಕೆ ಸ್ವಾಮಿ ವಿರುದ್ಧ ಮಾತನಾಡಿದರೆ “ಅವಳ ಜೀವನವನ್ನೇ ಮುಗಿಸಿಬಿಡುವುದಾಗಿ” ಹೇಳಿದರು. ಆ ಮೂಲಕ ಸ್ವಾಮಿಯ ಬೆಂಬಲಿಗರು ಮತ್ತು ಅನುಯಾಯಿಗಳು ಸಂತ್ರಸ್ತೆಗೆ ಜೀವ ಬೆದರಿಕೆ ಹಾಕಿದರು ಎಂದು ಎಫ್ ಐಆರ್ ನಲ್ಲಿ ಹೇಳಲಾಗಿದೆ. ಪ್ರಕರಣದ ವಿಚಾರಣೆ ಬೆಂಗಳೂರಿನ ಸಿಟಿ ಸಿವಿಲ್ ಅಂಡ್ ಸೆಷನ್ಸ್ ಕೋರ್ಟ್ ನಲ್ಲಿ ನಡೆದು, ತೀರ್ಪನ್ನು ಕಾಯ್ದಿರಿಸಲಾಗಿದೆ. 2022ರ ಜನವರಿ 31ರಂದು ಮುಂದಿನ ವಿಚಾರಣೆ ನಿಗದಿ ಮಾಡಲಾಗಿದೆ.
“ಈ ಅಪ್ರಾಪ್ತೆಯ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದದ್ದು ಗೀತಾ ಅವರು ಸ್ವಾಮಿಯಿಂದ ಲೈಂಗಿಕ ದೌರ್ಜನ್ಯಕ್ಕೆ ಈಡಾದವರ ಪೈಕಿ ತಾನೊಬ್ಬಳೇ ಅಲ್ಲ” ಎಂಬ ಸಂಗತಿಯನ್ನು ಹೇಳಿದ ಬಳಿಕ ಎಂದು ಆಲ್ ಇಂಡಿಯಾ ಡೆಮಾಕ್ರಟಿಕ್ ವಿಮೆನ್ಸ್ ಅಸೋಸಿಯೇಷನ್ ನಾಯಕಿ ಕೆ ಎಸ್ ವಿಮಲಾ ಹೇಳುತ್ತಾರೆ. ವಿಮಲಾ ಅವರು ಈ ಪ್ರಕರಣದ ವಿಷಯದಲ್ಲಿ ಸಂತ್ರಸ್ತೆಯ ಪರ ನಿಂತು, ಆಕೆ ನ್ಯಾಯಾಲಯದಲ್ಲಿ ಪ್ರಕರಣ ನಡೆಸಲು ನೈತಿಕ ಬೆಂಬಲ ನೀಡಿದವರು.
Also Read : ಅತ್ಯಾಚಾರ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದ ಸಾಲು ಸಾಲು ನ್ಯಾಯಾಧೀಶರು! – ಭಾಗ – 2
“ಆಕೆಯನ್ನು ಕಾರೊಂದರಲ್ಲಿ ಬಲವಂತವಾಗಿ ಕರೆದೊಯ್ಯಲಾಗಿತ್ತು. ಸ್ವಾಮಿಯ ವಿರುದ್ಧ ಯಾವುದೇ ವಿಷಯ ಬಾಯಿಬಿಡದಂತೆ ಬೆದರಿಕೆ ಹಾಕಲಾಗಿತ್ತು. ಭಯ ಮತ್ತು ಭಕ್ತಿಯ ಭೀತಿಯಿಂದ ಆಕೆ ಅದಕ್ಕೆ ಒಪ್ಪಿದಳು. ನಂತರ ಅದೇ ತರಹದ ಬೆದರಿಕೆ ಹಾಕಿ ಆಕೆಯನ್ನು ಸ್ವಾಮಿಯ ಶಿಷ್ಯನೊಬ್ಬನೊಂದಿಗೆ ಮದುವೆ ಮಾಡಲಾಯಿತು. ಆಕೆಯ ಗಂಡನಿಂದಲೂ ಆಕೆ ಕೌಟುಂಬಿಕ ಹಿಂಸೆಗೆ ಗುರಿಯಾದಳು. ಆ ಹಿನ್ನೆಲೆಯಲ್ಲಿ ಆಕೆ ಆ ಪತಿಯಿಂದ ವಿಚ್ಛೇದನ ಕೋರಿ ಅರ್ಜಿ ಹಾಕಿದ್ದು, ಆ ಪ್ರಕರಣ ಕೂಡ ವಿಚಾರಣೆಯ ಹಂತದಲ್ಲಿದೆ” ಎಂದು ಕೆ ಎಸ್ ವಿಮಲಾ ವಿವರಿಸುತ್ತಾರೆ.