ರಾಮಚಂದ್ರಾಪುರ ಮಠದ ಸ್ವಾಮಿ ವಿರುದ್ಧದ ಸರಣಿ ಅತ್ಯಾಚಾರ ಆರೋಪ ಪ್ರಕರಣಗಳು ಮತ್ತೆ ಚರ್ಚೆಗೆ ಬಂದಿವೆ. ಅದರಲ್ಲೂ ಮುಖ್ಯವಾಗಿ ಬಹುಶಃ ಭಾರತೀಯ ನ್ಯಾಯಾಂಗದ ಇತಿಹಾಸದಲ್ಲೇ ಅಪರೂಪ ಎನ್ನಬಹುದಾದ ಮಟ್ಟಿಗೆ ಸ್ವಾಮಿ ವಿರುದ್ಧದ ವಿವಿಧ ಪ್ರಕರಣಗಳ ವಿಚಾರಣೆಯಿಂದ ಸಾಲು ಸಾಲು ನ್ಯಾಯಾಧೀಶರು ಹಿಂದೆ ಸರಿಯುತ್ತಿರುವುದರ ಹಿಂದಿನ ರಹಸ್ಯದ ಬಗ್ಗೆ ಚರ್ಚೆ ಶುರುವಾಗಿದೆ.
ರಾಮಚಂದ್ರಾಪುರ ಮಠದ ರಾಘವೇವೇಶ್ವರ ಭಾರತಿ ಸ್ವಾಮಿ ವಿರುದ್ಧದ ಪ್ರಕರಣಗಳ ವಿಚಾರಣೆಯಿಂದ ನ್ಯಾಯಾಧೀಶರು ಹಿಂದೆ ಸರಿಯುತ್ತಿರುವ ಆಘಾತಕಾರಿ ಪರಂಪರೆಯ ಹಿನ್ನೆಲೆಯಲ್ಲಿ ಪ್ರಭಾವಿ ಡಿಜಿಟಲ್ ಸುದ್ದಿ ಮಾಧ್ಯಮ ‘ದ ನ್ಯೂಸ್ ಮಿನಿಟ್’ ವಿಶೇಷ ವರದಿಯೊಂದನ್ನು ಪ್ರಕಟಿಸಿದೆ.
ಕನ್ನಡದ ಓದುಗರಿಗಾಗಿ ಆ ವರದಿಯನ್ನು ಸಾರಾಂಶರೂಪದಲ್ಲಿ ಇಲ್ಲಿ ನೀಡಲಾಗಿದೆ.
ಪ್ರಭಾವಿ ಮಠಾಧೀಶರೊಬ್ಬರ ವಿರುದ್ಧ ಒಂದಲ್ಲಾ, ಎರಡು ಬಾರಿ ಲೈಂಗಿಕ ದೌರ್ಜನ್ಯದ ಗಂಭೀರ ಪ್ರಕರಣಗಳು ದಾಖಲಾಗಿವೆ. ಕರ್ನಾಟಕದ ದೊಡ್ಡ ಮಠಗಳಲ್ಲಿ ಒಂದಾದ ಮಠವೊಂದರ ಆ ಮಠಾಧೀಶರ ವಿರುದ್ಧ ಅಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆಸಿದ ಆರೋಪವೂ ಇದೆ. ಬೇರೆ ಬೇರೆ ಧರ್ಮಗಳಿಗೆ ಸೇರಿದ ಧಾರ್ಮಿಕ ಮುಖಂಡರ ವಿರುದ್ಧದ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳ ಕುರಿತ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲಿ ರಾಮಚಂದ್ರಾಪುರ ಮಠದ ಈ ರಾಘವೇಶ್ವರ ಭಾರತಿ ಸ್ವಾಮಿ ವಿರುದ್ಧದ ಪ್ರಕರಣಗಳು ಭಾರೀ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಬೇಕಿತ್ತು. ಆದರೆ, ಅಂತಹದ್ದೇನೂ ಆಗಲೇ ಇಲ್ಲ.
ಈಗ ತಮ್ಮ ಐವತ್ತನೇ ವಯಸ್ಸಿನಲ್ಲಿರುವ ಮಹಿಳೆಯೊಬ್ಬರು, 2011ರಿಂದ 2014ರ ನಡುವಿನ ಅವಧಿಯಲ್ಲಿ ಸ್ವಾಮಿ ತಮ್ಮ ಮೇಲೆ 168 ಬಾರಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಗಂಭೀರ ಆರೋಪದ ಪ್ರಕರಣದಲ್ಲಿ ಸ್ವಾಮಿಯನ್ನು ಅಧೀನ ನ್ಯಾಯಾಲಯ ನಿರ್ದೋಷಿ ಎಂದು ಹೇಳಿದೆ. ಆದರೆ, ಪ್ರಕರಣದ ಕುರಿತ ಮೇಲ್ಮನವಿ ರಾಜ್ಯ ಹೈಕೋರ್ಟಿನಲ್ಲಿ ವಿಚಾರಣೆಗೆ ಬಾಕಿ ಇದೆ. ಮತ್ತೊಂದು ಪ್ರಕರಣ; ಈ ಪ್ರಭಾವಿ ಸ್ವಾಮಿ ತಾನು 15 ವರ್ಷದವಳಿರುವಾಗ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂಬ ಮತ್ತೊಬ್ಬ ಮಹಿಳೆಯ ಆರೋಪದ ಕುರಿತದ್ದು. ಈ ಎರಡು ಅತ್ಯಾಚಾರ ಪ್ರಕರಣಗಳಲ್ಲದೆ ಈ ಸ್ವಾಮಿಯ ವಿರುದ್ಧ ಭೂ ಕಬಳಿಕೆ, ಅಧಿಕಾರ ದುರುಪಯೋಗ ಮುಂತಾದ ಆರೋಪಗಳನ್ನೊಳಗೊಂಡ ಇತರೆ ಹಲವು ಪ್ರಕರಣಗಳೂ ನ್ಯಾಯಾಲಯದಲ್ಲಿವೆ.
ಆದರೆ, ವಿಚಿತ್ರ ಸಂಗತಿ ಎಂದರೆ, ಈ ಸ್ವಾಮಿಯ ವಿರುದ್ಧದ ಗಂಭೀರ ಅತ್ಯಾಚಾರ ಪ್ರಕರಣಗಳಿರಬಹುದು, ಅಥವಾ ಭೂ ಕಬಳಿಕೆ ಪ್ರಕರಣಗಳಿರಬಹುದು, ಬಹುತೇಕ ಎಲ್ಲಾ ಪ್ರಕರಣಗಳ ವಿಚಾರಣೆಯ ಹಂತದಲ್ಲೇ ಕರ್ನಾಟಕ ಹೈಕೋರ್ಟಿನ ಸಾಲು ಸಾಲು ನ್ಯಾಯಾಧೀಶರು ತಮ್ಮ ಮುಂದೆ ಪ್ರಕರಣ ಬರುತ್ತಲೇ ದಿಢೀರನೇ ವಿಚಾರಣೆಯಿಂದ ಹಿಂದೆ ಸರಿಯುತ್ತಿದ್ದಾರೆ. 2014ರಲ್ಲಿ ಸ್ವಾಮಿಯ ವಿರುದ್ಧ ಪ್ರಕರಣ ಹೈಕೋರ್ಟಿನಲ್ಲಿ ವಿಚಾರಣೆಗೆ ಬಂದಂದಿನಿಂದ ಈವರೆಗೆ 10 ಮಂದಿ ಹೈಕೋರ್ಟ್ ನ್ಯಾಯಮೂರ್ತಿಗಳು ವಿವಿಧ ಪ್ರಕರಣಗಳ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ. ಅಲ್ಲದೆ. ಸುಮಾರು 17 ಬಾರಿ ವಿವಿಧ ನ್ಯಾಯಮೂರ್ತಿಗಳು ಸ್ವಾಮಿ ವಿರುದ್ಧದ ಪ್ರಕರಣಗಳನ್ನು ತಮ್ಮ ಪೀಠದಿಂದ ಬೇರೊಂದು ಪೀಠಕ್ಕೆ ವರ್ಗಾಯಿಸುವಂತೆ ಕೋರಿದ್ದಾರೆ! (ಕರಣದ ವಿಚಾರಣೆಯಿಂದ ನ್ಯಾಯಧೀಶರು ಹಿಂದೆ ಸರಿಯುವುದು ಎಂದರೆ; ಪ್ರಕರಣದಲ್ಲಿ ಹಿತಾಸಕ್ತಿ ಸಂಘರ್ಷಕ್ಕೆ ಅವಕಾಶವಾಗಬಹುದು ಎಂಬ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತರಾಗಿ ನ್ಯಾಯಧೀಶರು ಪ್ರಕರಣದ ವಿಚಾರಣೆಯಿಂದ ದೂರ ಸರಿಯುವುದು ಅಥವಾ ಬೇರೆ ನ್ಯಾಯಾಧೀಶರಿಗೆ ಪ್ರಕರಣ ವರ್ಗಾವಣೆ ಮಾಡುವಂತೆ ಕೋರುವುದು).
ಅಂದರೆ; ಈ ರಾಘವೇಶ್ವರ ಭಾರತಿ ಅಷ್ಟೊಂದು ಪ್ರಭಾವಿಯೇ? ಯಾಕೆ ಅಷ್ಟೊಂದು ನ್ಯಾಯಮೂರ್ತಿಗಳು ಅವರ ವಿಷಯದಲ್ಲಿ ‘ಹಿತಾಸಕ್ತಿಯ ಸಂಘರ್ಷ’ದ ಬಿಕ್ಕಟ್ಟು ಹೊಂದಿದ್ದಾರೆ?. ರಾಘವೇಶ್ವರ ಭಾರತಿ ಶಿವಮೊಗ್ಗ ಜಿಲ್ಲೆಯ ರಾಮಚಂದ್ರಾಪುರ ಮಠದ ಸ್ವಾಮಿಯಾಗಿ ನೇಮಕವಾಗುವ ಮುನ್ನ ಹರೀಶ್ ಶರ್ಮಾ ಆಗಿದ್ದರು. ತಮ್ಮ ಭಕ್ತರಿಗೆ ತಾವು ಶ್ರೀರಾಮನ ಅವತಾರ ಎಂದು ಹೇಳಿಕೊಳ್ಳುತ್ತಾರೆ ಎನ್ನಲಾಗುತ್ತದೆ. “..ಈ ಸ್ವಾಮಿ ತಮ್ಮ ಭಕ್ತರಿಂದ ಯಾವುದಾದರೂ ಕಾರ್ಯ ಆಗಬೇಕು ಎನಿಸಿದರೆ, ಆ ಕಾರ್ಯ ಆಗಬೇಕು ಎಂಬುದು ಸಾಕ್ಷಾತ್ ಶ್ರೀರಾಮಚಂದ್ರನ ಬಯಕೆ. ತಮಗೆ ಏನಾದರೂ ಬೇಕು ಎನಿಸಿದರೆ, ಅದೂ ಕೂಡ ಶ್ರೀರಾಮನ ಬಯಕ ಎಂದು ಹೇಳುವ ಮೂಲಕ ಸ್ವತಃ ತಾವೇ ಶ್ರೀರಾಮಚಂದ್ರನ ಅವತಾರ ಎಂದು ತಮ್ಮ ಭಕ್ತರನ್ನು ನಂಬಿಸಿದ್ದಾರೆ” ಎಂದು 2014ರಲ್ಲಿ ರಾಷ್ಟ್ರಪತಿಗಳಿಗೆ ಬರೆದ ಪತ್ರದಲ್ಲಿ ಸ್ವಾಮಿ ವಿರುದ್ಧ ಅತ್ಯಾಚಾರ ಆರೋಪ ಮಾಡಿರುವ ಸಂತ್ರಸ್ತೆ ಹೇಳಿಕೊಂಡಿದ್ದಾರೆ. ರಾಘವೇಶ್ವರ ಸ್ವಾಮಿ ಕರ್ನಾಟಕದ ತೀರಾ ಸಣ್ಣ ಸಮುದಾಯವಾದರೂ ಭಾರೀ ಪ್ರಭಾವಿಯಾಗಿರುವ ಹವ್ಯಕ ಸಮುದಾಯಕ್ಕೆ ಸೇರಿದವರು.
ದೇಸಿ ಗೋ ತಳಿಗಳ ಸಂರಕ್ಷಣೆಯ ಅಭಿಯಾನದ ಮೂಲಕ ಪ್ರಸಿದ್ದಿಗೆ ಬಂದ ರಾಘವೇಶ್ವರ ಸ್ವಾಮಿಗೆ ಬಿಜೆಪಿ ಸಂಸದರಾದ ಅನಂತಕುಮಾರ ಹೆಗಡೆ, ತೇಜಸ್ವಿ ಸೂರ್ಯ, ನಳೀನ್ ಕುಮಾರ್ ಕಟೀಲ್, ಬಾಲಿವುಡ್ ನಟ ಸುರೇಶ್ ಒಬೆರಾಯ್ ಸೇರಿದಂತೆ ಹಲವು ಪ್ರಭಾವಿಗಳೊಂದಿಗೆ ಆಪ್ತ ಸಂಪರ್ಕವಿದೆ. ನರೇಂದ್ರ ಮೋದಿ(ಪ್ರಧಾನಿಯಾಗುವ ಮುನ್ನ), ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಭಯೋತ್ಪಾದನೆ ಆರೋಪಿತ ಸಂಸದೆ ಪ್ರಗ್ಯಾ ಠಾಕೂರ್, ಯೋಗಗುರು ಬಾಬಾ ರಾಮದೇವ್ ಮತ್ತು ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಸೇರಿದಂತೆ ಹಲವು ಪ್ರಭಾವಿಗಳು ಇವರನ್ನು ಭೇಟಿ ಮಾಡಿ ಫೋಟೋ ತೆಗೆಸಿಕೊಂಡಿದ್ದಾರೆ.

ಹಾಗೇ ಈ ಸ್ವಾಮಿ ವಿರುದ್ಧದ ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿಗಳು ಒಬ್ಬೊಬ್ಬರಾಗಿ ಪ್ರಕರಣದ ವಿಚಾರಣೆಯಿಂದ ಸರಿದಿದ್ದಾರೆ. ಆ ಪೈಕಿ ಕೆಲವರ ವಿರುದ್ಧ ಈ ಸ್ವಾಮಿ, ಆ ನ್ಯಾಯಾಧೀಶರು ಇತರೆ ಮಠಾಧೀಶರ ಭಕ್ತರು ಎಂದು ಆಕ್ಷೇಪವೆತ್ತಿದ್ದರೆ, ಮತ್ತೆ ಕೆಲವು ನ್ಯಾಯಾಧೀಶರ ಮಕ್ಕಳು ದೂರು ನೀಡಿದ ಸಂತ್ರಸ್ತೆಯ ಮಕ್ಕಳ ಸಹಪಾಠಿಗಳು ಎಂಬ ನೆಪವೊಡ್ಡಿ ಆಕ್ಷೇಪವೆತ್ತಿದ್ದರು!
ಅತ್ಯಾಚಾರ ಆರೋಪಗಳು
ರಾಘವೇಶ್ವರ ಸ್ವಾಮಿ ವಿರುದ್ಧ ಇಬ್ಬರು ಅತ್ಯಾಚಾರ ಆರೋಪ ಮಾಡಿದ್ದಾರೆ. ಆ ಪೈಕಿ ಮೊದಲನೆಯವರು ಇದೇ ಸ್ವಾಮಿಯ ಭಕ್ತೆಯಾಗಿದ್ದ ಹಾಡುಗಾರ್ತಿ. 2010ರಲ್ಲಿ ರಾಮಚಂದ್ರಾಪುರ ಮಠದಲ್ಲಿ ನಡೆದ ರಾಮಕಥಾ ಕಾರ್ಯಕ್ರಮದ ಗಾಯಕಿಯಾಗಿ ಗೀತಾ(ಹೆಸರು ಬದಲಿಸಲಾಗಿದೆ) ಸ್ವಾಮಿಯ ಸಂಪರ್ಕಕ್ಕೆ ಬಂದಿದ್ದರು. ರಾಮಕಥಾ ಕಾರ್ಯಕ್ರಮದ ಐವರು ಗಾಯಕಿಯರ ತಂಡದಲ್ಲಿ ಗೀತಾ ಪ್ರಮುಖ ಗಾಯಕಿಯಾಗಿದ್ದರು. ಸೆಪ್ಟೆಂಬರ್ 2011ರ ಹೊತ್ತಿಗೇ ಸ್ವಾಮಿ ಗಾಯಕಿ ಗೀತಾರೊಂದಿಗೆ ಆಪ್ತ ಸಂಪರ್ಕ ಹೊಂದಲು ಪ್ರಯತ್ನಿಸುತ್ತಿದ್ದರು ಮತ್ತು ಅಕ್ಟೋಬರ್ 2011ರಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆಸಿದರು ಎಂದು ಆರೋಪಿಸಲಾಗಿದೆ. ಶ್ರೀ ರಾಮಚಂದ್ರನಿಗೆ ವಿಶೇಷ ಪೂಜೆ ಸಲ್ಲಿಸುವ ನೆಪವೊಡ್ಡಿ ಸ್ವಾಮಿ, ತಮ್ಮ ಖಾಸಗಿ ಕೊಠಡಿಗೆ ತನ್ನನ್ನು ಕರೆಸಿಕೊಂಡಿದ್ದರು. ಆ ವೇಳೆ ಸ್ವಾಮಿ ತನ್ನ ಮೇಲೆ ನಡೆಸಿದ ಲೈಂಗಿಕ ದೌರ್ಜನ್ಯವನ್ನು ತಾವು ವಿರೋಧಿಸಲಿಲ್ಲ. ಏಕೆಂದರೆ, ಅದನ್ನು ವಿರೋಧಿಸಿದರೆ ದೇವರ ಶಾಪಕ್ಕೆ ಗುರಿಯಾಗಬೇಕಾಗುತ್ತದೆ ಮತ್ತು ಅದು ದೈವಾಜ್ಞೆಯನ್ನು ಧಿಕ್ಕರಿಸಿದ ಪಾಪವಾಗುತ್ತದೆ” ಎಂದು ತನ್ನನ್ನು ನಂಬಿಸಲಾಗಿತ್ತು ಎಂದು ಸಂತ್ರಸ್ತೆ ತನ್ನ ದೂರಿನಲ್ಲಿ ಹೇಳಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಸ್ವಾಮಿಯನ್ನು ನಿರ್ದೋಷಿ ಎಂದು ಅಧೀನ ನ್ಯಾಯಾಲಯ ಹೇಳಿದೆ. ಆದರೆ, ಕರ್ನಾಟಕ ಹೈಕೋರ್ಟಿನಲ್ಲಿ ಪ್ರಕರಣದ ಮೇಲ್ಮನವಿಯ ವಿಚಾರಣೆ ನಡೆಯುತ್ತಿದೆ.
ರಾಘವೇಶ್ವರ ವಿರುದ್ಧದ ಮತ್ತೊಂದು ಅತ್ಯಾಚಾರ ಪ್ರಕರಣ ದಾಖಲಾಗಿರುವುದು ಆ ದೌರ್ಜನ್ಯದ ವೇಳೆ 15 ವರ್ಷದ ಅಪ್ರಾಪ್ತೆಯಾಗಿದ್ದ ಮಹಿಳೆಯೊಬ್ಬರಿಂದ. ಪೋಕ್ಸೋ(ಮಕ್ಕಳ ವಿರುದ್ಧದ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ) ಕಾಯ್ದೆಯಡಿಯಲ್ಲಿ ದಾಖಲಾಗಿರುವ ಈ ಪ್ರಕರಣದ ವಿಚಾರಣೆ ಅಂತಿಮಗೊಂಡಿದ್ದು, ತೀರ್ಪನ್ನು ಕಾಯ್ದಿರಿಸಲಾಗಿದೆ. ಈ ಪ್ರಕರಣದಲ್ಲಿ ರಾಜ್ಯದ ಹಾಲಿ ಹೆಚ್ಚುವರಿ ಅಡ್ವೋಕೇಟ್ ಜನರಲ್ ಅರುಣ್ ಶಾಮ್ ಎರಡನೇ ಆರೋಪಿ. ಸಂತ್ರಸ್ತೆಯ ಅಪಹರಣ ಮಾಡಿದ ಮತ್ತು ಬೆದರಿಕೆಯೊಡ್ಡಿದ ಆರೋಪ್ ಅರುಣ್ ಶಾಮ್ ಮೇಲಿದೆ.
ಗೀತಾ ಪ್ರಕಾರ ಅವರ ಮೇಲಿನ ಲೈಂಗಿಕ ದೌರ್ಜನ್ಯ 2012 ಮತ್ತು 2013ರಲ್ಲೂ ಮುಂದುವರಿಯಿತು. ಸಂತ್ರಸ್ತೆಯ ದೂರಿನ ಪ್ರಕಾರ, “ರಾಮಕಥಾ ಮತ್ತು ಇತರೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಗಾಯಕಿಯಾಗಿ ಆಕೆಯನ್ನು ಕರೆಸಿಕೊಳ್ಳುತ್ತಲೇ ಇದ್ದರು ಮತ್ತು ಹಾಗೇ ಹೋದಾಗೆಲ್ಲಾ ಮತ್ತೆ ಮತ್ತೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಿರಂತರವಾಗಿ ನಡೆಯಿತು”. ರಾಘವೇಶ್ವರ ಸ್ವಾಮಿ ಆ ಅವಧಿಯಲ್ಲಿ ತನ್ನ ಮೇಲೆ ಒಟ್ಟು 168 ಬಾರಿ ಅತ್ಯಾಚಾರ ನಡೆಸಿದರು ಎಂದು ಗೀತಾ ಆರೋಪಿಸಿದ್ದಾರೆ. ಬಳಿಕ 2013ರಲ್ಲಿ ಸ್ವಾಮಿ ಜೊತೆಗಿನ ಎಲ್ಲಾ ನಂಟನ್ನು ಕಡಿದುಕೊಂಡಿದ್ದಾಗಿ ಹೇಳಿರುವ ಆಕೆ, ಆದರೆ, 2014ರಲ್ಲಿ ಮಠಕ್ಕೆ ಮತ್ತೆ ಹಿಂತಿರುಗಿದ್ದಾಗಿ ಹೇಳಿಕೊಂಡಿದ್ದಾರೆ. ಆಗಲೂ ರಾಘವೇಶ್ವರ ಸ್ವಾಮಿ ಆಕೆಯ ವಿರುದ್ಧದ ಲೈಂಗಿಕ ಕಿರುಕುಳವನ್ನು ಮುಂದುವರಿಸಿದ ಹಿನ್ನೆಲೆಯಲ್ಲಿ ಅಂತಿಮವಾಗಿ ಮಠದಿಂದ ಹೊರಬಂದೆ ಎಂದು ಅವರು ತಮ್ಮ ದೂರಿನಲ್ಲಿ ಹೇಳಿದ್ದಾರೆ.
ತನ್ನ ಮೇಲಿನ ಕೊನೆಯ ಬಾರಿಯ ಲೈಂಗಿಕ ದೌರ್ಜನ್ಯದ ಘಟನೆ ನಡೆದ 2014ರ ಜೂನ್ ನಂತರ, ತನ್ನ ಪತಿಯ ಗಮನಕ್ಕೆ ಈ ವಿಷಯವನ್ನು ತಂದಿದ್ದಾಗಿ ಗೀತಾ ಹೇಳಿದ್ದಾರೆ. ಆದರೆ, ಆ ದೌರ್ಜನ್ಯದ ವಿರುದ್ಧ ಅವರು ಯಾವುದೇ ಕ್ರಮಕ್ಕೆ ಮುಂದಾಗುವ ಮುನ್ನವೇ ಅವರನ್ನು ಬಂಧಿಸಲಾಯಿತು. ತಮ್ಮ ವಿರುದ್ಧ ಸಂತ್ರಸ್ತರು ಪೊಲೀಸರಿಗೆ ದೂರು ನೀಡಲಿದ್ದಾರೆ ಎಂಬ ಸೂಚನೆ ಅರಿತ ರಾಘವೇಶ್ವರ ಸ್ವಾಮಿ, ತಾವೇ ಮೊದಲು ಅವರ ವಿರುದ್ಧ ಬ್ಲಾಕ್ ಮೇಲ್ ದೂರು ನೀಡಿದರು.

ತಂದೆ-ತಾಯಿಯ ಬಂಧನದ ಬಳಿಕ ಸಂತ್ರಸ್ತೆಯ ಪುತ್ರಿ ತನ್ನ ತಾಯಿಯ ವಿರುದ್ಧ ಲೈಂಗಿಕ ದೌರ್ಜನ್ಯ ನಡೆಸಿದ ಸ್ವಾಮಿಯ ವಿರುದ್ಧ ಪ್ರಕರಣ ದಾಖಲಿಸುವಂತೆ ಕೋರಿ ನ್ಯಾಯಾಲಯದ ಮೊರೆ ಹೋದರು. ಆ ಪ್ರಕರಣದ ಕುರಿತ ವಿಚಾರಣೆ ಅಧೀನ ನ್ಯಾಯಾಲಯದಲ್ಲಿ ನಡೆಯುತ್ತಿರುವಾಗಲೇ 2014ರ ಅಕ್ಟೋಬರಿನಲ್ಲಿ ರಾಘವೇಶ್ವರ ಸ್ವಾಮಿ, ತಮ್ಮ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಹೈಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿದರು. ಹೈಕೋರ್ಟ್ ನ್ಯಾಯಮೂರ್ತಿ ಕೆ ಎನ್ ಫಣೀಂದ್ರ ಅವರು ರಾಘವೇಶ್ವರ ಅವರ ಮೇಲ್ಮನವಿಯನ್ನು ತಿರಸ್ಕರಿಸಿ, ಪ್ರಕರಣ ವಿಚಾರಣೆಗೆ ಅರ್ಹವಾಗಿದೆ ಎಂದು ಅಭಿಪ್ರಾಯಪಟ್ಟಿದ್ದರು.
ಆದರೆ, ಅದಾಗಿ ಕೇವಲ ಒಂದೇ ತಿಂಗಳಲ್ಲಿ, ರಾಘವೇಶ್ವರ ಸ್ವಾಮಿ ಮತ್ತೊಂದು ಮೇಲ್ಮನವಿ ಸಲ್ಲಿಸಿದಾಗ, ಅದೇ ನ್ಯಾಯಮೂರ್ತಿಗಳು ಅರ್ಜಿಯ ವಿಚಾರಣೆಯಿಂದ ದಿಢೀರನೇ ಹಿಂದೆ ಸರಿದರು. ಆ ಮೂಲಕ ರಾಘವೇಶ್ವರ ವಿರುದ್ಧದ ಪ್ರಕರಣಗಳಲ್ಲಿ ನ್ಯಾಯಾಧೀಶರು ವಿಚಾರಣೆಯಿಂದ ಹಿಂದೆ ಸರಿಯುವ ಪರಂಪರೆಗೆ ನಾಂದಿ ಹಾಡಿದರು.
ಮುಂದುವರಿಯುವುದು………