ತಮ್ಮ 88ನೇ ವಯಸ್ಸಿನಲ್ಲಿಯೂ ಸಕ್ರೀಯ ರಾಜಕಾರಣದಲ್ಲಿರುವ ಮಾಜಿ ಪ್ರಧಾನಿ ಹಾಗೂ ಈಗಿನ ರಾಜ್ಯಸಭಾ ಸದಸ್ಯರಾದ ಹೆಚ್ ಡಿ ದೇವೇಗೌಡ ಅವರು, ಕಾವೇರಿ ನೀರಿನ ಸಮಸ್ಯೆ ಕುರಿತು ಇನ್ನೂ ಹೋರಾಟ ನಡೆಸಲು ತಯಾರಾಗಿದ್ದೇನೆ ಎಂದು ಹೇಳಿದ್ದಾರೆ.
“ಕಾವೇರಿ ನೀರಿನ ಸಮಸ್ಯೆಯ ಕುರಿತು ರಾಜ್ಯಸಭೆಯಲ್ಲಿಯೂ ಚರ್ಚೆ ನಡೆಸಿದ್ದೇನೆ. ಈ ಹಿಂದೆಯೂ ಹೋರಾಟಗಳನ್ನು ಮಾಡಿದ್ದೇನೆ. ಈಗ ತಮಿಳುನಾಡು ಸರ್ಕಾರದ ನದಿ ಜೋಡನೆ ಯೋಜನೆಯಿಂದ ರಾಜ್ಯಕ್ಕೆ ಮತ್ತಷ್ಟು ಅನ್ಯಾಯವಾಗಲಿದೆ. ಹಾಗಾಗಿ ಮತ್ತೆ ಹೋರಾಟ ಅನಿವಾರ್ಯ. ನನಗೆ ಶಕ್ತಿ ನೀಡಿದರೆ, ಮತ್ತೆ ಹೋರಾಟ ನಡೆಸಲು ಸಿದ್ದನಿದ್ದೇನೆ,” ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದಾಗ ಕೈಗೊಂಡಿದ್ದ ಮೇಕೆದಾಟು ಯೋಜನೆಗೂ ತಮಿಳುನಾಡು ಸರ್ಕಾರದ ಯೋಜನೆ ಕಂಟಕವಾಗಲಿದೆ. ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ಇದರಿಂದಾಗಿ, ಮಂಡ್ಯ ಮಾತ್ರವಲ್ಲದೇ, ಮೈಸೂರು, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಿಗೆ ತೊಂದರೆಯಾಗಲಿದೆ, ಎಂದಿದ್ದಾರೆ.
ಇನ್ನು ಹೊಸ ತಲೆಮಾರಿನ ನಾಯಕರಿಗೆ ಹೋರಾಟದ ಮಯಂದಾಳತ್ವವನ್ನು ವಹಿಸಿಕೊಳ್ಳಲು ಕರೆ ನೀಡಿರುವ ದೇವೇಗೌಡ ಅವರು, ನನಗೆ 88 ವರ್ಷ ವಯಸ್ಸಾಗಿದೆ. ಜಿಲ್ಲೆಯ ಹಿರಿಯ ನಾಯಕರಾದ ಎಸ್ ಎಂ ಕೃಷ್ಣ, ಮಾದೇಗೌ ಹಾಗೂ ಚೌಡಯ್ಯ ಅವರಿಗೂ ವಯಸ್ಸಾಗಿದೆ. ಇನ್ನು ಹೊಸ ತಲೆಮಾರಿನ ರಾಜಕಾರಣಿಗಳು ಈ ಹೋರಾಟದ ನೇತೃತ್ವವನ್ನು ವಹಿಸಿಕೊಳ್ಳಬೇಕಿದೆ, ಎಂದಿದ್ದಾರೆ.










