ಬೆಂಗಳೂರು: ಜಗತ್ತಿನಲ್ಲಿ ಇಸ್ಲಾಂ ಅತ್ಯಂತ ಶ್ರೇಷ್ಠ ಹಾಗೂ ವೈಜ್ಞಾನಿಕವಾದ ಧರ್ಮವಾಗಿದ್ದು, ನನಗೆ ಮಕ್ಕಾ-ಮದೀನಾದ ಹಜ್ ಯಾತ್ರೆಗೆ ಹೋಗುವ ತೀವ್ರ ಆಸೆಯಿದೆ ಎನ್ನುವ ಸಚಿವ ಬಸವರಾಜ ರಾಯರೆಡ್ಡಿ ಹೇಳಿಕೆ ವಿರುದ್ಧ ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.

ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಆರ್.ಅಶೋಕ್, ಸಿಎಂ ಡಿ.ಕೆ ಶಿವಕುಮಾರ್ ಅವರೇ, ನಿಮ್ಮ ಕಾಂಗ್ರೆಸ್ ಸರ್ಕಾರದ ಈ ಹಿಂದೂ ವಿರೋಧಿ ಮನಸ್ಥಿತಿಗೆ ಕೊನೆಯೇ ಇಲ್ಲವೇ? ದಿನಬೆಳಗಾದರೆ ದೇವಸ್ಥಾನ ಸುತ್ತುವ ನಾಟಕ ಮಾಡುತ್ತಾ, ಕ್ಯಾಮೆರಾ ಮುಂದೆ ಭಕ್ತಿಯ ಪ್ರದರ್ಶನ ನೀಡುವ ನೀವು, ನಿಮ್ಮದೇ ಸಂಪುಟದ ಸಚಿವರು ಸನಾತನ ಹಿಂದೂ ಧರ್ಮದ ಬಗ್ಗೆ ಮತ್ತು ದೇವಸ್ಥಾನಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದಾಗ ಮಾತ್ರ ಮೌನ ವಹಿಸಿರುವುದೇಕೆ ಡಿಕೆಶಿ ಅವರೇ? ಎಂದು ಪ್ರಶ್ನಿಸಿದ್ದಾರೆ.

ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರ ಉದ್ಧಟತನದ ಹೇಳಿಕೆಗಳನ್ನು ಒಮ್ಮೆ ಕಿವಿಗೊಟ್ಟು ಕೇಳಿಸಿಕೊಳ್ಳಿ. “ಮಠಮಾನ್ಯಗಳಿಗೆ, ದೇವಸ್ಥಾನಗಳಿಗೆ ಹೋಗುವುದಿಲ್ಲ” ಎಂದು ಹೇಳುವ ಮೂಲಕ ನಾಡಿನ ಕೋಟ್ಯಂತರ ಹಿಂದೂಗಳ ಶ್ರದ್ಧಾಕೇಂದ್ರಗಳನ್ನು ತುಚ್ಛವಾಗಿ ಬಣ್ಣಿಸಿದ್ದಾರೆ. “ಇತರ ಧರ್ಮಗಳಿಗಿಂತ ಇಸ್ಲಾಂ ಧರ್ಮವೇ ಶ್ರೇಷ್ಠ” ಎಂಬ ರೀತಿಯಲ್ಲಿ ಹೇಳಿಕೆ ನೀಡಿ ಸನಾತನ ಧರ್ಮವನ್ನು ಕೀಳಾಗಿ ಬಿಂಬಿಸಿದ್ದಾರೆ. ಇದೇನಾ ನಿಮ್ಮ ಕಾಂಗ್ರೆಸ್ ಪಕ್ಷದ ‘ಸರ್ವಧರ್ಮ ಸಮಭಾವ’? ಇದೇನಾ ನಿಮ್ಮ ‘ಸರ್ವ ಜನಾಂಗದ ಶಾಂತಿಯ ತೋಟ’? ಅಥವಾ ನಿಮ್ಮ ನಾಟಕ, ಬೂಟಾಟಿಕೆಯೆಲ್ಲ ಹಿಂದೂಗಳ ಮತಕ್ಕಾಗಿ ಹಾಕಿಕೊಂಡಿರುವ ಮತ್ತೊಂದು ಮುಖವಾಡವೇ? ಎಂದು ಆರ್.ಅಶೋಕ್ ಕಿಡಿಕಾರಿದ್ದಾರೆ.

ಇನ್ನು ಮೊದಲು ಬಸವರಾಜ ರಾಯರೆಡ್ಡಿ ಅವರು ತಮ್ಮ ಹೇಳಿಕೆಗಳನ್ನು ಹಿಂಪಡೆದು, ನಾಡಿನ ಸಮಸ್ತ ಹಿಂದೂಗಳ ಕ್ಷಮೆ ಕೇಳಲಿ. ಅದಕ್ಕೆ ಸಿದ್ಧರಿಲ್ಲದಿದ್ದರೆ, ಅವರನ್ನು ಸಂಪುಟದಿಂದ ವಜಾಗೊಳಿಸುವ ಬದ್ಧತೆಯನ್ನು ಸಿಎಂ ಡಿಕೆಶಿ ಅವರು ತೋರಿಸಲಿ. ಇಲ್ಲವಾದರೆ ಕನ್ನಡ ನಾಡಿನ ಕೋಟ್ಯಾಂತರ ಹಿಂದೂಗಳಿಗೆ ಒಂದು ವಿಷಯ ಸ್ಪಷ್ಟವಾಗುತ್ತದೆ. ನಿಮ್ಮ ದೇವಸ್ಥಾನ ಭೇಟಿ ಭಕ್ತಿಗಾಗಿ ಅಲ್ಲ, ನಿಮ್ಮ ಮಾತುಗಳು ಹಿಂದೂ ಧರ್ಮದ ಮೇಲಿನ ಗೌರವಕ್ಕಾಗಿ ಅಲ್ಲ, ಎಲ್ಲವೂ ಕೇವಲ ಮತಕ್ಕಾಗಿ, ತೋರಿಕೆಗಾಗಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಗುಡುಗಿದ್ದಾರೆ.







