ಬೆಂಗಳೂರು: ಕರ್ನಾಟಕ ಸರ್ಕಾರದ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಪರಿಷ್ಕರಣೆ ಸರ್ವೆ ಕಾರ್ಯಕ್ಕೆ ನೀಡಿದ್ದ ಗಡುವನ್ನು ಮತ್ತೊಂದು ತಿಂಗಳು ವಿಸ್ತರಿಸಲಾಗಿದೆ. ಈ ಹಿಂದೆ ಆಗಸ್ಟ್ 31ರವರೆಗೆ ನಿಗದಿಪಡಿಸಿದ್ದ ಅವಧಿಯನ್ನು ಇದೀಗ ಸೆಪ್ಟೆಂಬರ್ 30ರವರೆಗೆ ವಿಸ್ತರಿಸಿ ಸರ್ಕಾರ ಆದೇಶಿಸಿದೆ.

ಗೃಹಜ್ಯೋತಿ ಯೋಜನೆಯಡಿ ಅನರ್ಹ ಫಲಾನುಭವಿಗಳನ್ನು ಗುರುತಿಸಿ, ಅರ್ಹರಿಗೆ ಮಾತ್ರ ಯೋಜನೆಯ ಸೌಲಭ್ಯ ಮುಂದುವರಿಸುವ ಉದ್ದೇಶದಿಂದ ಜುಲೈ 1ರಿಂದ ರಾಜ್ಯಾದ್ಯಂತ ಪರಿಷ್ಕರಣೆ ಸರ್ವೆ ನಡೆಸಲಾಗುತ್ತಿದೆ. ಬೆಸ್ಕಾಂ ಸೇರಿದಂತೆ ರಾಜ್ಯದ ಎಲ್ಲ ವಿದ್ಯುತ್ ಸರಬರಾಜು ಕಂಪನಿಗಳ ವ್ಯಾಪ್ತಿಯಲ್ಲಿ ಸಿಬ್ಬಂದಿ ಮನೆ ಮನೆಗೆ ತೆರಳಿ ಫಲಾನುಭವಿಗಳ ಮಾಹಿತಿಯನ್ನು ಪರಿಶೀಲಿಸುತ್ತಿದ್ದಾರೆ. ಇದುವರೆಗೆ ಸುಮಾರು ಶೇ.70ರಷ್ಟು ಸರ್ವೆ ಕಾರ್ಯ ಪೂರ್ಣಗೊಂಡಿದ್ದು, ಇನ್ನೂ ಶೇ.30ರಷ್ಟು ಕಾರ್ಯ ಬಾಕಿ ಇದೆ.

ಕೆಲವು ಮನೆಗಳಲ್ಲಿ ಫಲಾನುಭವಿಗಳು ಲಭ್ಯವಿಲ್ಲದಿರುವುದು ಹಾಗೂ ಗ್ರಾಹಕರಿಂದ ಅಗತ್ಯ ಮಾಹಿತಿ ಸಿಗದಿರುವುದು ಸರ್ವೆ ವಿಳಂಬಕ್ಕೆ ಕಾರಣವಾಗಿದೆ. ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವ ಕೆಲವು ಫಲಾನುಭವಿಗಳಿಂದ ಅಗತ್ಯ ಮಾಹಿತಿ ಪಡೆಯಲು ಸಿಬ್ಬಂದಿಗೆ ತೊಂದರೆ ಎದುರಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸರ್ವೆ ಕಾರ್ಯ ಪೂರ್ಣಗೊಳಿಸಲು ಹೆಚ್ಚಿನ ಕಾಲಾವಕಾಶ ನೀಡುವಂತೆ ಬೆಸ್ಕಾಂ ಸೇರಿದಂತೆ ಎಸ್ಕಾಂಗಳು ಸರ್ಕಾರಕ್ಕೆ ಮನವಿ ಮಾಡಿದ್ದವು. ಈ ಹಿನ್ನೆಲೆಯಲ್ಲಿ ಗೃಹಜ್ಯೋತಿ ಯೋಜನೆ ಪರಿಷ್ಕರಣೆ ಸರ್ವೆ ಗಡುವು ವಿಸ್ತರಣೆ ಮಾಡಲಾಗಿದೆ.

ರಾಜ್ಯಾದ್ಯಂತ ಗೃಹಜ್ಯೋತಿ ಯೋಜನೆಯ ಒಟ್ಟು 1,65,32,652 ಫಲಾನುಭವಿಗಳಿದ್ದಾರೆ. ಈ ಪೈಕಿ ಬೆಸ್ಕಾಂ ವ್ಯಾಪ್ತಿಯಲ್ಲಿ 68,86,860 ಫಲಾನುಭವಿಗಳು ಇದ್ದಾರೆ. ಇದೀಗ ಸೆಪ್ಟೆಂಬರ್ 30ರವರೆಗೆ ಸರ್ವೆ ಕಾರ್ಯಕ್ಕೆ ಅವಕಾಶ ನೀಡಲಾಗಿದ್ದು, ನಿಗದಿತ ಅವಧಿಯಲ್ಲಿ ಫಲಾನುಭವಿಗಳು ಅಗತ್ಯ ಮಾಹಿತಿಯನ್ನು ಒದಗಿಸುವಂತೆ ಸೂಚಿಸಲಾಗಿದೆ. ಸರ್ವೆ ಪೂರ್ಣಗೊಂಡ ಬಳಿಕ ಅರ್ಹತೆ ಆಧರಿಸಿ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇದೆ.







