ಬೆಂಗಳೂರು: ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ Dharmendra Pradhan ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ಭಾನುವಾರ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಯಿತು.ಮಳೆಯ ನಡುವೆಯೂ ನಡೆದ ಪ್ರತಿಭಟನೆಯಲ್ಲಿ ನೂರಾರು ವಿದ್ಯಾರ್ಥಿಗಳು ಹಾಗೂ ಯುವಕರು ಭಾಗವಹಿಸಿ, ಕೇಂದ್ರ ಸರ್ಕಾರ ಮತ್ತು ಶಿಕ್ಷಣ ಸಚಿವರ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನಾಕಾರರು ವಿವಿಧ ಭಿತ್ತಿಪತ್ರಗಳನ್ನು ಪ್ರದರ್ಶಿಸಿ, ನೀಟ್ ಪರೀಕ್ಷಾ ವ್ಯವಸ್ಥೆಯಲ್ಲಿನ ಲೋಪಗಳು ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಖಂಡಿಸಿದರು.

ಸುಮಾರು ಮೂರೂವರೆ ಗಂಟೆಗಳ ಕಾಲ ನಡೆದ ಪ್ರತಿಭಟನೆಯಲ್ಲಿ ಕೆಲವರು ಮಳೆಯ ನಡುವೆ ಕೊಡೆ ಹಿಡಿದು ಭಾಷಣ ಆಲಿಸಿದರೆ, ಇನ್ನೂ ಕೆಲವರು ಮರಗಳ ಕೆಳಗೆ ಆಶ್ರಯ ಪಡೆದು ಹೋರಾಟದಲ್ಲಿ ಭಾಗಿಯಾದರು. ಕ್ರಾಂತಿಗೀತೆಗಳ ಮೂಲಕ ಪ್ರತಿಭಟನಾಕಾರರನ್ನು ಹುರಿದುಂಬಿಸಲಾಯಿತು.ಪ್ರತಿಭಟನಾಕಾರರು ಮಾತನಾಡಿ, ಕೇಂದ್ರ ಶಿಕ್ಷಣ ಇಲಾಖೆಯ ವೈಫಲ್ಯದಿಂದ ಲಕ್ಷಾಂತರ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದು, ಕೆಲ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವುದು ದುಃಖಕರ ಬೆಳವಣಿಗೆ ಎಂದು ಆರೋಪಿಸಿದರು. ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಫಲಿತಾಂಶಗಳಲ್ಲಿನ ಗೊಂದಲಗಳಿಗೆ ಕೇಂದ್ರ ಸರ್ಕಾರವೇ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಮಾತನಾಡಿ, ನಿರುದ್ಯೋಗ ಮತ್ತು ಶಿಕ್ಷಣ ಕ್ಷೇತ್ರದ ಸಮಸ್ಯೆಗಳಿಂದ ಯುವಜನತೆ ತತ್ತರಿಸಿದ್ದು, ಕೋಮು ರಾಜಕೀಯದ ಬದಲಾಗಿ ಜನಪರ ವಿಚಾರಗಳಿಗೆ ಆದ್ಯತೆ ನೀಡಬೇಕಿದೆ ಎಂದು ಹೇಳಿದರು. ಪ್ರಶ್ನೆ ಮಾಡುವವರನ್ನು ರಾಷ್ಟ್ರವಿರೋಧಿಗಳೆಂದು ಬಿಂಬಿಸುವ ಪ್ರವೃತ್ತಿಯನ್ನು ಅವರು ಟೀಕಿಸಿದರು.ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟ Prakash Raj ಮಾತನಾಡಿ, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯ ಮತ್ತು ಸಾರ್ವಜನಿಕ ಚರ್ಚೆಗಳಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಬಗ್ಗೆ ಪ್ರಧಾನಿ ಮೌನ ವಹಿಸಿರುವುದನ್ನು ಪ್ರಶ್ನಿಸಿದ ಅವರು, ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಅಗತ್ಯ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಹೋರಾಟಗಾರ Sonam Wangchuk, ಸಿಜೆಪಿ ಮುಖಂಡರಾದ ಸೌರವ್ ದಾಸ್, ರಾಹುಲ್ ಟಿ.ಎಸ್., ವನ್ಯಜೀವಿ ಛಾಯಾಗ್ರಾಹಕರಾದ ಕೃಪಾಕರ್ ಮತ್ತು ಸೇನಾನಿ, ಲೇಖಕ Nagesh Hegde ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.






