ಬೆಂಗಳೂರು: ಇಲ್ಲಿನ ಸರ್ಕಾರಿ ದಂತ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (GDC&RI) ಉನ್ನತೀಕರಣಕ್ಕೆ ಹೆಚ್ಚು ಆದ್ಯತೆ ನೀಡಲಾಗುವುದು, ಅತ್ಯಾಧುನಿಕ ಉಪಕರಣಗಳು ಮತ್ತು ವಿಶೇಷ ಸೌಲಭ್ಯ ಒದಗಿಸುವ ಮೂಲಕ ಪರಿವರ್ತನೆಗೆ ಒತ್ತು ನೀಡಲಾಗುತ್ತದೆ.
ಗುರುವಾರ ನಡೆದ ಪದವಿ ಪ್ರದಾನ ಸಮಾರಂಭ ಮತ್ತು ಹೊಸ ಡಿಜಿಟಲ್ ಡೆಂಟಿಸ್ಟ್ರಿ ವಿಭಾಗದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವರಾದ ಡಾ. ಶರಣ್ ಪ್ರಕಾಶ್ Minister Dr. Sharan Prakash Patil ಪಾಟೀಲ್ ಈ ಘೋಷಣೆ ಮಾಡಿದರು.ಇದೇ ಸಂದರ್ಭದಲ್ಲಿ ಸರ್ಕಾರಿ ದಂತ ವೈದ್ಯಕೀಯ ಕಾಲೇಜಿನ ಪರಂಪರೆಯ ಬಗ್ಗೆಯೂ ಬೆಳಕು ಚೆಲ್ಲಿದರು.
ದೇಶದ ಅತ್ಯಂತ ಹಳೆಯ ದಂತ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಇದು ಒಂದಾಗಿದೆ ಹಾಗು ಒಟ್ಟಾರೆಯಾಗಿ ನಾಲ್ಕನೇ ಅತ್ಯುತ್ತಮ ಸಂಸ್ಥೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. “1958ರಲ್ಲಿ ಸ್ಥಾಪನೆಯಾದ ಈ ಕಾಲೇಜು, ದಂತ ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯಲ್ಲಿ ಆರು ದಶಕಗಳ ಕಾಲ ಸೇವೆ ಒದಗಿಸಿದೆ. ಈ ದಂತ ವೈದ್ಯಕೀಯ ಶಿಕ್ಷಣ ಸಂಸ್ಥೆ ನಮ್ಮ ರಾಜ್ಯದ ಹೆಮ್ಮೆಯಾಗಿದೆ. ಈಗ ಎಲ್ಲಾ ರಂಗಗಳಲ್ಲಿ ಆಧುನೀಕರಣದ ಅಗತ್ಯವಿದೆ. ಶೀಘ್ರದಲ್ಲೇ ಈ ಸಂಸ್ಥೆಗೂ ಸುಧಾರಿತ ಉಪಕರಣಗಳು ಮತ್ತು ಸೌಲಭ್ಯಗಳನ್ನು ಒದಗಿಸಲಾಗುವುದು” ಎಂದು ಸಚಿವರು ಘೋಷಿಸಿದರು.
ವೈದ್ಯಕೀಯ ಪದವೀಧರರು ವೃತ್ತಿಪರ ಕ್ಷೇತ್ರಕ್ಕೆ ಕಾಲಿಡುತ್ತಿದ್ದಂತೆ, ಪ್ರತಿಯೊಬ್ಬ ರೋಗಿಯು ವಿಐಪಿ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಮತ್ತು ರೋಗಿಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಪರಿಣಾಮಕಾರಿ ಸಂವಹನ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಡಾ.ಪಾಟೀಲ್ ತಿಳಿ ಹೇಳಿದರು.
ಡಿಜಿಟಲ್ ಡೆಂಟಿಸ್ಟ್ರಿ ಪ್ರಾರಂಭ ಇದೇ ಸಂದರ್ಭದಲ್ಲಿ ಡಾ.ಪಾಟೀಲ್, ಅತ್ಯಾಧುನಿಕ ಡಿಜಿಟಲ್ ಡೆಂಟಿಸ್ಟ್ರಿ ಕೇಂದ್ರವನ್ನು ಉದ್ಘಾಟಿಸಿ “ಇದು CAD/CAM ಸಿಸ್ಟಮ್‌ಗಳು ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದೆ, ದಂತ ವೈದ್ಯಶಾಸ್ತ್ರದಲ್ಲಿ ಕ್ರಾಂತಿಯನ್ನುಂಟು ಮಾಡಿದೆ,” ಎಂದು ಸಚಿವರು ವಿವರಿಸಿದರು.
ಅದಾನಿ ಫೌಂಡೇಶನ್‌ನ ಸಹಯೋಗದೊಂದಿಗೆ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ. ಇದು ಕೋನ್ ಬೀಮ್ ಕಂಪ್ಯೂಟೆಡ್ ಟೊಮೊಗ್ರಫಿ (CBCT) ಸೌಲಭ್ಯವನ್ನು ಒಳಗೊಂಡು, ಶಸ್ತ್ರಚಿಕಿತ್ಸೆ ಮತ್ತು ಇಂಪ್ಲಾಂಟಾಲಜಿ ಸೌಲಭ್ಯ ಹೊಂದಿದೆ. ಸುಧಾರಿತ ರೂಟ್ ಕೆನಾಲ್ ಚಿಕಿತ್ಸೆ ಸೌಲಭ್ಯಕ್ಕಾಗಿ ಮೈಕ್ರೊಸ್ಕೋಪಿಕ್ ಎಂಡೋಡಾಂಟಿಕ್ಸ್, ತಂತ್ರಜ್ಞಾನ ದೊರೆಯಲಿದೆ. ಜೊತೆಗೆ ಪಾಲಿಮರೇಸ್ ಚೈನ್ ರಿಯಾಕ್ಷನ್ (ಪಿಸಿಆರ್) ತಂತ್ರಜ್ಞಾನದ ಬಳಕೆಯಿಂದ ಹಲ್ಲಿನ ಸೋಂಕುಗಳ ಪತ್ತೆಗೆ ಮತ್ತು ಚಿಕಿತ್ಸೆ ನೀಡಲು ಸಾಧ್ಯವಾಗಲಿದೆ.
ಸರ್ಕಾರಿ ದಂತ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಅತ್ಯಾಧುನಿಕ, ಸುಧಾರಿತ ಸೌಲಭ್ಯಗಳು ಅತ್ಯುತ್ತಮವಾಗಿವೆ. ದಂತ ವೈದ್ಯಶಾಸ್ತ್ರದಲ್ಲಿನ ಉನ್ನತ ತಂತ್ರಜ್ಞಾನಗಳು ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರಿಗೆ ನೆರವಾಗಲಿದೆ” ಎಂದು ಡಾ. ಪಾಟೀಲ್ ತಿಳಿಸಿದರು. ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೋಶಿನ್, ಜಿಡಿಸಿ ಮತ್ತು ಆರ್‌ಐ ನಿರ್ದೇಶಕ ಡಾ. ಗಿರೀಶ್ ಗಿರಡ್ಡಿ ಮತ್ತು ಕನ್ಸರ್ವೇಟಿವ್ ಡೆಂಟಿಸ್ಟ್ರಿ ಮುಖ್ಯಸ್ಥ, ಡಾ. ಕಿರಣ್ ಉಪಸ್ಥಿತರಿದ್ದರು.