ವಿವಾದಾತ್ಮಕ ಮೂರು ಕೃಷಿ ಕಾನೂನುಗಳನ್ನು ರದ್ದು ಮಾಡುವುದಾಗಿ ಘೋಷಣೆ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಸೋಲು ಒಪ್ಪಿಕೊಂಡರೆ? ಮೇಲ್ನೋಟಕ್ಕೆ ಇದನ್ನು ಮೋದಿಯವರ ರಾಜಕೀಯ ಜಾಣ್ಮೆ ನಡೆ ಎಂದು ವಿಶ್ಲೇಷಕರು ಅರ್ಥೈಸುತ್ತಿದ್ದಾರೆ. ವಾಸ್ತವವಾಗಿ ರೈತ ಸಮುದಾಯ ಮತ್ತು ಆಳುವವರ್ಗದ ನಡುವಿನ ಸಂಘರ್ಷದಲ್ಲಿ ರೈತ ಸಮುದಾಯಕ್ಕೆ ನೈತಿಕ ಜಯ ದಕ್ಕಿದೆ. ಸಹಜವಾಗಿಯೇ ಪ್ರಧಾನಿ ನರೇಂದ್ರ ಮೋದಿ ನೈತಿಕವಾಗಿ ಸೋಲು ಅನುಭವಿಸಿದ್ದಾರೆ.
ರೈತರನ್ನು ಭಯೋತ್ಪಾದಕರು, ಖಲಿಸ್ತಾನಿಗಳು, ಆಂದೋಲನ ಜೀವಿಗಳು ಎಂದು ಖುದ್ದು ಮೋದಿ ಮತ್ತವರ ಸಂಪುಟದ ಸಹೋದ್ಯೋಗಿಗಳು ಆಗಾಗ್ಗೆ ಕುಚೋದ್ಯ ಮಾಡಿದ್ದು ಇದೆ. ದೆಹಲಿ ಗಡಿಯಲ್ಲಿ ಮೈಕೊರೆಯುವ ಚಳಿಯಲ್ಲಿ ಧರಣಿ ನಡೆಸುತ್ತಿದ್ದವರ ಮೇಲೆ ಜಲಫಿರಂಗಿ ಹಾರಿಸಿದ್ದನ್ನು, ಹೆದ್ದಾರಿಯಲ್ಲೇ ಮೊಳೆ ಜಡಿದಿದ್ದನ್ನು ಯಾರೂ ಮರೆತಿಲ್ಲ. ಎಂತಹ ಸಂದರ್ಭಗಳಲ್ಲೂ ರೈತರು ಮಾತ್ರ ಶಾಂತಿಯುತವಾಗಿ ಹೋರಾಟ ನಡೆಸಿಕೊಂಡು ಬಂದಿದ್ದಾರೆ. 700ಕ್ಕೂ ಹೆಚ್ಚು ರೈತರ ಬಲಿದಾನವಾಗಿದೆ. ಮಕ್ಕಳು, ತಾಯಂದಿರು, ವೃದ್ಧರಾದಿಯಾಗಿ ಹೋರಾಟದ ಅಖಾಡದಲ್ಲಿದ್ದ ಅನ್ನದಾತರ ಮುಂದೆ ಮೋದಿ ಸರ್ಕಾರ ಮಂಡಿಯೂರಿರುವುದಂತೂ ಸ್ಪಷ್ಟ.
ಇಡೀ ಬೆಳವಣಿಗೆಯಲ್ಲಿ ಮೋದಿಗೆ ಸಹಾನುಭೂತಿ ದಕ್ಕಿಲ್ಲ. ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡುವ ಮತ್ತು ಅದಕ್ಕಾಗಿ ಗುರುನಾನಕ್ ಅವರ ಜಯಂತಿ ದಿನವನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಮೋದಿ ಜಾಣ್ಮೆ ಮೆರೆದಿದ್ದರೂ, ರೈತರಲ್ಲಿ ನಂಬಿಕೆ ತುಂಬುವಲ್ಲಿ ಸಫಲರಾಗಿಲ್ಲ. ಪ್ರತಿಭಟನಾ ನಿರತ ರೈತರು ಮಾತ್ರ, ಸಂಸತ್ತಿನಲ್ಲಿ ಕಾನೂನುಗಳನ್ನು ರದ್ದು ಮಾಡಲಿ, ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಸ್ವರೂಪ ನೀಡಲಿ ನಂತರವಷ್ಟೇ ಪ್ರತಿಭಟನೆ ಕೈಬಿಡುವುದು ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅಂದರೆ, ಪ್ರಧಾನಿ ಅವರ ಮಾತನ್ನು ರೈತರು ನಂಬುವ ಸ್ಥಿತಿಯಲ್ಲಿ ಇಲ್ಲ. ಆರಂಭದಿಂದಲೂ ಪ್ರಧಾನಿ ಮೋದಿ ಎದುರಿಸುತ್ತಿರುವ ಸಮಸ್ಯೆ ಇದು- ವಿಶ್ವಾಸದ ಕೊರತೆ!
ಕೇಂದ್ರದ ಕಾನೂನುಗಳ ವಿರುದ್ಧ ರೈತರು ಸುಪ್ರೀಕೋರ್ಟ್ ಗೆ ಮೊರೆ ಹೋದಾಗಲೇ ಕೇಂದ್ರ ಸರ್ಕಾರವು ಕಾನೂನು ರದ್ದು ಮಾಡುವ ನಿರ್ಧಾರ ಕೈಗೊಳ್ಳಬೇಕಿತ್ತು. ಆದರೆ, ಸುಪ್ರೀಂ ಕೋರ್ಟ್ ತನ್ನ ಪರವಾಗಿ ತೀರ್ಪುನೀಡಬಹುದೆಂಬ ಮೋದಿ ಸರ್ಕಾರದ ಲೆಕ್ಕಾಚಾರ ತಲೆಕೆಳಗಾಗಿತ್ತು. ಸುಪ್ರೀಂ ಕೋರ್ಟ್ ಸಹ ಮುಂದಿನ ಆದೇಶ ನೀಡುವವರೆಗೂ ಕಾನೂನು ಜಾರಿ ಮಾಡದಂತೆ ಜನವರಿ 12ರಂದು ಆದೇಶ ನೀಡಿತು. ಆದಾದ ನಂತರವು ವಿಶ್ವಾಸದ ಕೊರತೆಯನ್ನು ತಗ್ಗಿಸುವ, ವಿಶ್ವಾಸವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನವನ್ನು ಮಾಡದ ಮೋದಿ ಸರ್ಕಾರ ಆಗಾಗ್ಗೆ ರೈತರನ್ನು ಭಯೋತ್ಪಾದಕರು, ಖಲಿಸ್ತಾನಿಗಳು, ಆಂದೋಲನ ಜೀವಿಗಳೆಂಬ ಹಣೆಪಟ್ಟಿ ಕಟ್ಟುವ ವ್ಯರ್ಥ ಪ್ರಯತ್ನ ಮುಂದುವರೆಸಿತು.

ವಿವಾದಾತ್ಮಕವಾಗಿರುವ ರೈತರ ಉತ್ಪನ್ನಗಳ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಅನುಕೂಲ) ಕಾಯ್ದೆಯು (2020) ಕೃಷಿಕರು ತಮ್ಮ ಉತ್ಪನ್ನಗಳನ್ನು ಎಪಿಎಂಸಿಗಳಾಚೆಗೂ ಮಾರುವ ಅವಕಾಶ ಕಲ್ಪಿಸುತ್ತದೆ. ಅಸ್ತಿತ್ವದಲ್ಲಿರುವ ರಾಜ್ಯಗಳ ಎಪಿಎಂಸಿ ಕಾನೂನುಗಳನ್ನು ರದ್ದು ಮಾಡಿ ಕೇಂದ್ರವು ಹೊಸ ಕಾನೂನುಗಳನ್ನು ರಚಿಸಲು ಅವಕಾಶ ನೀಡುತ್ತದೆ. ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಸ್ವರೂಪ ನೀಡದೇ ಈ ಕಾನೂನು ಜಾರಿಯಾದರೆ ಇಡೀ ಎಪಿಎಂಸಿ ವ್ಯವಸ್ಥೆ ತನ್ನಿಂತಾನೆ ನಶಿಸುತ್ತದೆ.
ಸಣ್ಣ ಹಿಡುವಳಿ ರೈತರೇ ಹೆಚ್ಚಿರುವುದರಿಂದ ಈ ಕಾನೂನು ಅನುಕೂಲವಾಗಿಲ್ಲ. ಬದಲಿಗೆ ಕೃಷಿಯಲ್ಲಿ ಸಾವಿರಾರು ಕೋಟಿ ರೂಪಾಯಿ ಹೂಡಿಕೆ ಮಾಡಲು ತುದಿಗಾಲಲ್ಲಿ ನಿಂತಿರುವ ಕಾರ್ಪೊರೆಟ್ ಕುಳಗಳಿಗೆ ವರವಾಗುವಂತಿದೆ. ಖರೀದಿದಾರರು ಮತ್ತು ಕೃಷಿಕರ ನಡುವಿನ ವಿವಾದಗಳನ್ನು ಇತ್ಯರ್ಥಪಡಿಸಲು ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ ಅವರ ಮಧ್ಯಸ್ಥಿಕೆ ವಹಿಸುವುದು ಸಹ ರೈತರಿಗೆ ಅನನುಕೂಲ. ಕೃಷಿಕರ (ಸಬಲೀಕರಣ ಮತ್ತು ರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಒಪ್ಪಂದ ಕಾಯ್ದೆಯು (2020) ಖರೀದಿದಾರರು ಮತ್ತು ರೈತರು ಪೂರ್ವನಿರ್ಧಾರಿತ ದರಕ್ಕೆ ಒಡಂಬಡಿಕೆ ಮಾಡುವುದನ್ನು ಕಡ್ಡಾಯಗೊಳಿಸುತ್ತದೆ. ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಸ್ವರೂಪ ಇಲ್ಲದೇ ಕಾರಣ ರೈತರಿಗೆ ಹೆಚ್ಚಿನ ನಷ್ಟವಾಗುತ್ತದೆ. ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ (2020) ಮೂಲಕ ಖಾದ್ಯ ತೈಲ, ಈರುಳ್ಳಿ, ಆಲೂಗೆಡ್ಡೆ ಮತ್ತಿತರ ವಸ್ತುಗಳನ್ನು ಅಗತ್ಯ ವಸ್ತುಗಳ ಪಟ್ಟಿಯಿಂದ ಹೊರಗಿಡಲಾಗಿದೆ. ಇದು ವ್ಯಾಪಾರಿಗಳು ಅಕ್ರಮ ದಾಸ್ತಾನು ಮಾಡಿ ಕೃತಕ ಅಭಾವ ಸೃಷ್ಟಿಸಿ ಬೆಲೆ ಏರಿಸಿ ಲಾಭ ಮಾಡಿಕೊಳ್ಳುತ್ತಾರೆ. ಇದರಿಂದ ರೈತರ ಜತೆಗೆ ನಷ್ಟ. ಈ ವಾಸ್ತವಿಕ ಸತ್ಯಗಳು ಮುಂದಿದ್ದರೂ ಮೋದಿ ಸರ್ಕಾರ ರೈತರಿಗಾಗಿಯೇ ಕಾನೂನು ರೂಪಿಸಿದ್ದಾಗಿ ಸುಳ್ಳು ಹೇಳುತ್ತಲೇ ಬಂದಿತ್ತು. ಈಗ ಸೋಲನ್ನು ಒಪ್ಪಿಕೊಂಡಿದೆ.
ಉತ್ತರ ಪ್ರದೇಶ ಮತ್ತು ಪಂಜಾಬ್ ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳಲ್ಲಿ ಸೋಲುವ ಭಯದಿಂದ ಪ್ರಧಾನಿ ನರೇಂದ್ರ ಮೋದಿ ರೈತರಿಗೆ ಶರಣಾಗಿದ್ದಾರೆ ಎಂಬುದು ಸತ್ಯ. ಮೋದಿ ರಾಜಕೀಯ ಕಾರಣಕ್ಕಾಗಿ ಏನಾದರೂ ಮಾಡುತ್ತಾರೆಂಬುದು ಆಗಾಗ್ಗೆ ಸಾಬೀತಾಗುತ್ತಲೇ ಇದೆ. ಚುನಾವಣೆಗಳು ಬಂದಾಗ ಏಕಾಏಕಿ ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆ ಸ್ಥಗಿತಗೊಳ್ಳುವುದು, ಚುನಾವಣೆ ಮುಗಿಯುತ್ತಲೇ ರಾತ್ರೋರಾತ್ರಿ ದರ ಏರಿಕೆ ಮಾಡುವುದನ್ನು ಇಡೀದೇಶದ ಜನರು ಕಂಡಿದ್ದಾರೆ.
ಚುನಾವಣೆ ಕಾರಣಕ್ಕಾಗಿಯೇ ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ಹೇರಿದ್ದ ಸುಂಕವನ್ನು ತಗ್ಗಿಸಿದ್ದು ಎಂಬುದು ಮೋದಿ ಅಭಿಮಾನಿಗಳಿಗೂ ಅರ್ಥವಾಗುತ್ತದೆ.

ಸದಾ ಉದ್ಯಮಿಗಳು ಮತ್ತು ಕಾರ್ಪೊರೆಟ್ ಕುಳಗಳ ಪರವಾಗಿಯೇ ವಕಾಲತ್ತು ವಹಿಸುತ್ತಾ, ಕಾನೂನುಗಳನ್ನು ರೂಪಿಸುತ್ತಾ ಬಂದಿರುವ ಮೋದಿ ಸರ್ಕಾರದ ಕೃಷಿ ಕಾನೂನು ರದ್ದು ಮಾಡುವ ನಿರ್ಧಾರದ ಬಗ್ಗೆ ಬಂಡವಾಳ ಮಾರುಕಟ್ಟೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದು ಕುತೂಲಹಕ್ಕೆ ಕಾರಣವಾಗಿದೆ.
ಶುಕ್ರವಾರ ಗುರುನಾನಕ್ ಜಯಂತಿ ಕಾರಣಕ್ಕಾಗಿ ಷೇರುಪೇಟೆಗಳಲ್ಲಿ ವಹಿವಾಟು ಇರಲಿಲ್ಲ. ಸೋಮವಾರ ಷೇರುಪೇಟೆ ವಹಿವಾಟು ಆರಂಭವಾದಾಗ ಸೂಚ್ಯಂಕಗಳು ಕುಸಿಯುವ ನಿರೀಕ್ಷೆಯಲ್ಲಿ ಮಾರುಕಟ್ಟೆ ವಿಶ್ಲೇಷಕರಿದ್ದಾರೆ. ವಿವಾದಾತ್ಮಕ ಕೃಷಿ ಕಾಯ್ದೆಗಳಿಂದ ಅಂಬಾನಿ ಮತ್ತು ಅದಾನಿ ಸಮೂಹಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂಬುದನ್ನು ರೈತ ನಾಯಕರು, ಪ್ರತಿಪಕ್ಷದ ನಾಯಕರು ಹೇಳುತ್ತಲೇ ಬಂದಿದ್ದಾರೆ. ರಿಲಯನ್ಸ್ ಜಿಯೋ ವಿರುದ್ಧ ಪಂಜಾಬ್ ನಲ್ಲಿ ಆಂದೋಲನವೂ ನಡೆದಿತ್ತು.
ಕೃಷಿ ಕಾಯ್ದೆಗಳಿಂದ ಲಾಭ ಪಡೆಯುವ ಅದಾನಿ ಕಂಪನಿಗಳ ಷೇರುಗಳು ವಾಸ್ತವಿಕ ಮೌಲ್ಯವನ್ನು ಮೀರಿ ಏರಿಕೆ ಕಂಡಿವೆ. ಜಗತ್ತಿನ ಅಗ್ರ ಶ್ರೀಮಂತರ ಪಟ್ಟಿಯಲ್ಲಿ ಅದಾನಿ ಕುಟುಂಬವೂ ಸೇರಿಕೊಂಡಿದೆ. ಅಂಬಾನಿ ಕಟುಂಬವು ಈ ಮೊದಲೇ ಸೇರಿತ್ತು. ಕೃಷಿ ಕಾನೂನು ರದ್ದು ಮಾಡುವುದರಿಂದ ಕಂಪನಿಗಳಿಗೆ ತಾತ್ಕಲಿಕ ಹಿನ್ನಡೆಯಂತೂ ಹೌದು. ಅದಾನಿ ಸಮೂಹವು ಈಗಾಗಲೇ ವಿವಿದೆಡೆ ಆಹಾರ ಧಾನ್ಯಗಳನ್ನು ಸಂಗ್ರಹಿಸಲು ಗೋದಾಮುಗಳನ್ನು ನಿರ್ಮಿಸಿದೆ. ಖರೀದಿಗಾಗಿ ಪೂರಕ ವ್ಯವಸ್ಥೆಯನ್ನು ಮಾಡಿಕೊಂಡಿದೆ. ಅದಕ್ಕಾಗಿ ಸಾಕಷ್ಟು ಹೂಡಿಕೆಯನ್ನೂ ಮಾಡಿದೆ. ಸರ್ಕಾರವೇ ಬೆಂಬಲಕ್ಕೆ ನಿಂತು, ಪೂರಕ ಕಾನೂನುಗಳನ್ನು ಮಾಡುತ್ತದೆ ಎಂದಾದಾಗ ಆ ಕಂಪನಿಗಳ ಷೇರುಗಳ ದರ ವಾಸ್ತವಿಕ ಮೌಲ್ಯ ಮೀರಿ ಏರುತ್ತವೆ. ಅದಾನಿ ಸಮೂಹದ ಬಹುತೇಕ ಕಂಪನಿಗಳ ಷೇರುಗಳ ದರಗಳೂ ವಾಸ್ತವಿಕ ಮೌಲ್ಯ ಮೀರಿವೆ. ಸೋಮವಾರದ ವಹಿವಾಟಿನಲ್ಲಿ ಎಷ್ಟರ ಮಟ್ಟಿಗೆ ಕುಸಿಯಲಿವೆ ಎಂಬುದನ್ನು ಕಾದು ನೋಡಬೇಕಿದೆ.












