ಭೂಮಿಯಲ್ಲಿನ ಅಪರೂಪದ ಮ್ಯಾಗ್ನೆಟ್ʼಗಳ ಉತ್ಪಾದನೆ ಮತ್ತು ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು, ಯೋಜನೆಯ ಉದ್ಯಮ ಪಾಲುದಾರರ ಮಹತ್ವದ ಸಭೆಯನ್ನು ನಡೆಸಿದರು.

ಬೃಹತ್ ಕೈಗಾರಿಕೆ ಸಚಿವಾಲಯದ ಕಚೇರಿಯಲ್ಲಿ ಸೋಮವಾರ ನಡೆದ ಈ ಸಭೆಯಲ್ಲಿ ಭಾರೀ ಕೈಗಾರಿಕೆಗಳ ಸಚಿವಾಲಯದ ಕಾರ್ಯದರ್ಶಿ, ಪರಮಾಣು ಇಂಧನ ಇಲಾಖೆಯ ಕಾರ್ಯದರ್ಶಿ, ಸಿಎಮ್‌ಡಿ, ಐಆರ್‌ಇಎಲ್ (ಭಾರತ) ಲಿಮಿಟೆಡ್ʼನ ನಿರ್ದೇಶಕರು (ತಾಂತ್ರಿಕ), ಎನ್‌ಎಂಡಿಸಿ ನಿರ್ದೇಶಕರು, ಎನ್‌ಎಫ್‌ಟಿಡಿಸಿ ಮತ್ತು ಭಾರತ ಮತ್ತು ವಿದೇಶಗಳ ವಿವಿಧ ಉದ್ಯಮ ಪಾಲುದಾರರು ಭಾಗವಹಿಸಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಈಗಾಗಲೇ ಯೋಜನೆಯನ್ನು ಘೋಷಣೆ ಮಾಡಲಾಗಿದ್ದು; 2047ಕ್ಕೆ ವಿಕಸಿತ ಭಾರತ ಸಾಕಾರಕ್ಕಾಗಿ ವೇಗಗತಿಯಲ್ಲಿ ಅನುಷ್ಠಾನ ಮಾಡಲಾಗುತ್ತಿದೆ. ಅದಕ್ಕೆ ಅನುಗುಣವಾಗಿ, ಆರ್‌ಇಪಿಎಂಗಳಿಗಾಗಿ ಸ್ವಾವಲಂಬಿ, ಸ್ಥಿತಿಸ್ಥಾಪಕ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕ ಪೂರಕ ವ್ಯವಸ್ಥೆಯನ್ನು ಸ್ಥಾಪಿಸುವತ್ತ ಕೇಂದ್ರ ಸರಕಾರ ಕ್ಷಿಪ್ರಗತಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಸಚಿವ ಕುಮಾರಸ್ವಾಮಿ ಅವರು ಹೇಳಿದರು.

ಎಲ್ಲಾ ಅರ್ಹ ದೇಶೀಯ ಮತ್ತು ಅಂತಾರಾಷ್ಟ್ರೀಯ ಪಾಲುದಾರರು ಈ ಅವಕಾಶವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತೆ ಮತ್ತು ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸುವ ಮೂಲಕ ಭಾರತದ ದೀರ್ಘಕಾಲೀನ ಬೆಳವಣಿಗೆಗೆ ಕೊಡುಗೆ ನೀಡಬೇಕೆಂದು ಸಚಿವರು ಒತ್ತಿ ಹೇಳಿದರು. ಡಿಸೆಂಬರ್ 15, 2025ರಂದು ಈ ಯೋಜನೆಯ ಅಧಿಸೂಚನೆ ಹೊರಡಿಸಲಾಗಿದ್ದು, ಆ ಯೋಜನೆ ಪ್ರಮುಖ ಉದ್ದೇಶ, ಗುರಿಗಳನ್ನು ಸಚಿವರು ಪಾಲುದಾರರಿಗೆ ವಿವರಿಸಿದರು.

ಈ ಯೋಜನೆಯ ಒಟ್ಟು ಹಣಕಾಸು ವೆಚ್ಚವು 7,280 ಕೋಟಿ ರೂ.ಗಳಾಗಿದ್ದು, ಇದರಲ್ಲಿ ಯೋಜನೆಯ ಮಾರಾಟದ ಮೇಲಿನ ಮಾರಾಟ, ಸಂಬಂಧಿತ ಪ್ರೋತ್ಸಾಹಕಗಳಲ್ಲಿ 6,450 ಕೋಟಿ ರೂ. ಆಗಿದೆ. ವಾರ್ಷಿಕ ಒಟ್ಟು 6,000 ಮೆಟ್ರಿಕ್ ಟನ್ ಉತ್ಪಾದನೆ ಗುರಿ ಸಾಧಿಸಲು 750 ಕೋಟಿ ರೂ.ಗಳ ಬಂಡವಾಳ ಸಬ್ಸಿಡಿಯೂ ಒಟ್ಟು ಮೊತ್ತದಲ್ಲಿ ಸೇರಿದೆ ಎಂದು ಸಚಿವರು ಮಾಹಿತಿ ನೀಡಿದರು.

ಅಪರೂಪದ ಮ್ಯಾಗ್ನೆಟ್ಸ್ʼಗಳ ಉತ್ಪಾದನೆ ಮತ್ತು ಬಳಕೆಯಲ್ಲಿ ಭಾರತವು ಸ್ವಾವಲಂಬನೆ ಸಾಧಿಸಬೇಕು ಹಾಗೂ ಜಾಗತಿಕ ಮಟ್ಟದಲ್ಲಿ ಪ್ರಮುಖ ಪಾಲುದಾರ ರಾಷ್ಟ್ರವಾಗಿ ಹೊರಹೊಮ್ಮಬೇಕು. ಈ ಯೋಜನೆಯು 7 ವರ್ಷಗಳ ಅವಧಿ ಹೊಂದಿದ್ದು, ಇದರಲ್ಲಿ ಸಮಗ್ರ ಉತ್ಪಾದನಾ ಸೌಲಭ್ಯಗಳನ್ನು ಸ್ಥಾಪಿಸಲು ಎರಡು ವರ್ಷಗಳ ಅವಧಿ ಮತ್ತು ಮಾರಾಟದ ಮೇಲಿನ ಪ್ರೋತ್ಸಾಹಕ ವಿತರಣೆಗೆ ಐದು ವರ್ಷಗಳ ಅವಧಿ ಇದೆ ಎಂದು ಸಚಿವರು ಹೇಳಿದರು.
ಸಭೆಯಲ್ಲಿ, ಉದ್ಯಮ ಪ್ರತಿನಿಧಿಗಳು ತಮ್ಮ ಊತ್ಪಾದನಾ ಸಾಮರ್ಥ್ಯದ ವಿವರಗಳನ್ನು ನೀಡಿದರು ಹಾಗೂ ಯೋಜನೆಯಲ್ಲಿ ಸಕ್ತಿಯವಾಗಿ ಭಾಗವಹಿಸುವ ಒಲವನ್ನು ವ್ಯಕ್ತಪಡಿಸಿದರು.











