ಕರೋನಾ ಇನ್ನೇನು ಕಾಲಿಡುತ್ತಿದ್ದ ಸಂದರ್ಭ. Modi Lies Official ಎಂಬ ಹೆಸರಿನ ಫೇಸ್‌ಬುಕ್ ಪುಟದಲ್ಲೊಂದು ಅನೌನ್ಸ್‌ಮೆಂಟ್: ‘ಪ್ರಧಾನಿ ಮೋದಿಯವರು ಅಧಿಕಾರಕ್ಕೆ ಬಂದ ನಂತರ ಇದುವರೆಗೂ ಆಡಿರುವ ಸುಳ್ಳುಗಳ ಒಟ್ಟು ಸಂಗ್ರಹದ ವೆಬ್‌ಸೈಟ್ ಆರಂಭಿಸಲಾಗುತ್ತಿದೆ.’ ಎಂದಿನಂತೆ ಮೋದಿ ಮತ್ತು ಬಿಜೆಪಿ ವಿರೋಧಿಗಳು ಸಂಭ್ರಮಿಸಿದರು. ಅತ್ತ ಕಡೆಯ ಪಾಳಯದಲ್ಲಿ ಗುಸು-ಗುಸು, ಹಲ್ಲು ಮಸೆತ.
ಕಡೆಗೆ ‘Modi Lies’ ಹೆಸರಿನ ವೆಬ್‌ಸೈಟ್ ಕಾಣಿಸಿಕೊಂಡಿತು. ಇಂಗ್ಲಿಷ್ ಮಾಧ್ಯಮಗಳು ಈ ಜಾಲತಾಣದ ವಿಶೇಷಗಳ ಕುರಿತು ವರದಿ ಮಾಡಿದವು. ಕೆಲವು ಮಾಧ್ಯಮಗಳಿಗೆ, ಇಲ್ಲಿರುವ ಮಾಹಿತಿ ಎಷ್ಟೊಂದು ಮಹತ್ವದ್ದು ಎಂದು ಅರಿವಾಗಿ ವಿಶೇಷ ವರದಿಗಳನ್ನೇ ಪ್ರಕಟಿಸಿದವು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಈ ವೆಬ್‌ಸೈಟ್ ಲಿಂಕ್ ಟ್ವೀಟ್ ಮಾಡಿದ್ದಾಯ್ತು. ಇಷ್ಟೆಲ್ಲ ಆಗುತ್ತಿರುವಾಗ, ಕನ್ನಡ ಮಾಧ್ಯಮಗಳದ್ದು ಯಥಾಪ್ರಕಾರ ಕಳ್ಳ ನಿದ್ದೆ.
ಪ್ರಧಾನಿಯೊಬ್ಬರ ಸುಳ್ಳುಗಳ ಸಂಗ್ರಹಕ್ಕೆಂದೇ ಮೀಸಲಾಗಿದ್ದ ಜಗತ್ತಿನ ಏಕೈಕ್ ವೆಬ್‌ಸೈಟ್ ಇದಾಗಿದ್ದೀತು. ಅದೂ, ಇನ್ನೂ ಅಧಿಕಾರದಲ್ಲಿರುವ, ಎಳ್ಳಷ್ಟೂ ನಾಚಿಕೆ ಇಲ್ಲದೆ ಸುಳ್ಳುಗಳನ್ನು ಲೀಲಾಜಾಲವಾಗಿ ಹರಿಬಿಡುತ್ತಲೇ ಇರುವ ಪ್ರಧಾನಿಯ ಕುರಿತು ಇಂಥದ್ದೊಂದು ಮಾಹಿತಿ ಕಣಜ ಸೃಷ್ಟಿಸಿದ್ದು ಸಾಹಸವಲ್ಲದೆ ಇನ್ನೇನು! ಆದರೆ, ಈಗ ನೀವೇನಾದರೂ ಆ ವೆಬ್‌ಸೈಟ್ ಹುಡುಕಲು ಹೊರಟರೆ ನಿರಾಶರಾಗಬೇಕಾಗುತ್ತದೆ. ಏಕೆಂದರೆ, ಅದು ಚಾಲ್ತಿಯಲ್ಲಿಲ್ಲ. ‘Modi Lies’ ಜಾಗದಲ್ಲಿ ‘Matanga’ ಎಂಬ ಕ್ರೀಡಾ ಜಾಲತಾಣವೊಂದು ತೆರೆದುಕೊಳ್ಳುತ್ತದೆ!
‘Modi Lies Official’ ಫೇಸ್‌ಬುಕ್ ಪುಟದಲ್ಲಿ ಈ ಬಗ್ಗೆ ಹುಡುಕಿದರೆ, ಎಂಥದ್ದೂ ಮಾಹಿತಿ ಇಲ್ಲ. ಇಂಥದ್ದೊಂದು ವೆಬ್‌ಸೈಟ್ ಆರಂಭವಾದಾಗ ಅದರ ವಿಶೇಷತೆಗಳ ಕುರಿತು ವರದಿ ಮಾಡಿದ ಮಾಧ್ಯಮಗಳಲ್ಲೂ, ಈ ನಾಪತ್ತೆ ಬಗ್ಗೆ ಯಾವುದೇ ಸುದ್ದಿ ಇಲ್ಲ. ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ಇದ್ದಕ್ಕಿದ್ದಂತೆ ಹಳ್ಳಿಯೊಂದು ಕಾಣೆಯಾದ ಬಗೆಯಲ್ಲೇ ಮೋದಿ ಸುಳ್ಳುಗಳ ಸಂಗ್ರಹವಾಗಿದ್ದ ವೆಬ್‌ಸೈಟ್ ರಾತ್ರೋರಾತ್ರಿ ಕಾಣೆ.
ಆ ಜಾಲತಾಣದಲ್ಲಿದ್ದ ಒಟ್ಟು ಮಾಹಿತಿಯ ಶಕ್ತಿ ಯಾವ ಮಟ್ಟದ್ದೆಂದರೆ, ಪ್ರಧಾನಿಯನ್ನು ವಾಗ್ದಂಡನೆ ವಿಧಿಸಿ ಕೆಳಗಿಳಿಸುವಷ್ಟು! ನರೇಂದ್ರ ಮೋದಿ ೨೦೧೪ರ ಜೂನ್ ೧೯ರಂದು ಲೋಕಸಭೆಯಲ್ಲಿ ಮಾಡಿದ ಮೊದಲ ಭಾಷಣದಿಂದ ಶುರುವಾಗಿ, ತೀರಾ ಇತ್ತೀಚಿನವರೆಗೆ ಆಡಿದ ಮಾತುಗಳಲ್ಲಿ ಅಡಗಿದ್ದ ಹಸಿ ಸುಳ್ಳುಗಳನ್ನು ಎಳೆಎಳೆಯಾಗಿ ಬಿಡಿಸಿ ಬಿಸಿಲಿಗಿಟ್ಟು ಒಣಗಿಸಿ, ಅವುಗಳ ಅಸಲಿತನ ಕಾಣಿಸುವ ಕೆಲಸ ಇಲ್ಲಿ ನಡೆದಿತ್ತು. ಆದರೆ, ಇದು ಬರೀ ಮಾತುಗಳಲ್ಲಿ ಇರಲಿಲ್ಲ. ಬದಲಿಗೆ, ಪ್ರಧಾನಿ ಆಡಿದ ಪ್ರತಿ ಸುಳ್ಳನ್ನೂ ಅದು ಸುಳ್ಳು ಎಂದು ಸಾಬೀತು ಮಾಡುವ ದಾಖಲೆಗಳಿದ್ದವು. ಅವೆಲ್ಲ ದಾಖಲೆಗಳು ಪಾರದರ್ಶಕವೂ ಪ್ರಾಮಾಣಿಕವೂ ಆಗಿದ್ದವು. ೨೦೧೪ರಿಂದ ಆರಂಭಿಸಿ ಪ್ರತಿ ವರ್ಷ, ಪ್ರತಿ ತಿಂಗಳಿನ ವಿಭಾಗಗಳಿದ್ದವು. ಆ ಎಲ್ಲ ವಿಭಾಗಗಳಲ್ಲೂ ಪ್ರಧಾನಿ ಮೋದಿ ಆ ತಿಂಗಳು ಎಲ್ಲೆಲ್ಲಿ ಸುಳ್ಳು ಮಾತನಾಡಿದ್ದರೋ, ಎಷ್ಟು ಸುಳ್ಳುಗಳನ್ನು ಹೇಳಿರುತ್ತಿದ್ದರೋ, ಆ ಪ್ರತಿ ಸುಳ್ಳಿಗೂ ಒಂದೊಂದು ವಿಶ್ಲೇಷಣಾ ವರದಿ ಇತ್ತು.

ಇಂಥದ್ದೊಂದು ಅಪರೂಪದ ಮಾಹಿತಿ ಸಂಗ್ರಹ ಈಗಿಲ್ಲ. ಆ ವೆಬ್‌ಸೈಟ್ ಮತ್ತೆ ಜೀವಂತ ಆಗಬಹುದೆಂಬ ನಿರೀಕ್ಷೆ ಇಟ್ಟುಕೊಳ್ಳಲೂ ಸದ್ಯಕ್ಕೆ ಸಾಧ್ಯವಿಲ್ಲ. ಏಕೆಂದರೆ, ಮೊದಮೊದಲಿಗೆ ರಾಜಕಾರಣಿಗಳ ಸುಳ್ಳುಗಳನ್ನು ದಾಖಲೆ ಸಮೇತ ನಿರೂಪಿಸುವ ದಿಟ್ಟ ಕೆಲಸ ಮಾಡುತ್ತಿದ್ದ ‘Modi Lies Official’ ಎಂಬ ಫೇಸ್‌ಬುಕ್ ಪುಟದಲ್ಲಿ ಈಗ ಬರೀ ಮೀಮ್ಸ್‌ಗಳದ್ದೇ ಕಾರುಬಾರು! ಮೀಮ್ಸ್‌ಗಳು ಬಹುತೇಕರಲ್ಲಿ ನಗೆ ಉಕ್ಕಿಸಬಲ್ಲವೇ ವಿನಾ ಯೋಚನೆಗೆ ಹಚ್ಚಲಾರವು. ಹಾಗಾಗಿ ‘Modi Lies’ ಸದ್ಯಕ್ಕಂತೂ ಮುಗಿದ ಅಧ್ಯಾಯ.
ಇಂಥದ್ದೊಂದು ಮಹತ್ವದ ಮಾಹಿತಿ ಕಣಜವನ್ನು ಕನ್ನಡದ ಮಾಧ್ಯಮಗಳು ಯಾವ ರೀತಿಯಲ್ಲೂ ಬಳಸಿಕೊಳ್ಳಲಿಲ್ಲ ಎಂಬುದು ಅತ್ಯಂತ ಬೇಸರದ ವಿಷಯ. ಮೋದಿ ಸುಳ್ಳುಗಳ ಕುರಿತ ವೆಬ್‌ಸೈಟ್ ಕಂಡ ನಂತರ, ಇಂಡಿಯಾದ ಈಗಿನ ಎಲ್ಲ ಪಕ್ಷಗಳ ರಾಜಕೀಯ ನಾಯಕರ ಸುಳ್ಳುಗಳ ವಿಶ್ಲೇಷಣೆಗೂ ಇದೇ ಬಗೆಯ ಗಟ್ಟಿ ವೆಬ್‌ಸೈಟ್ ಜನ್ಮತಾಳಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಸುಳ್ಳುಗಳನ್ನೇ ಸತ್ಯವೆಂಬಂತೆ ಹೇಳುತ್ತ ಅಡ್ಡಾಡುವ ಮಹಾನುಭಾವರ ಕುರಿತ ವೆಬ್‌ಸೈಟಿನ ಕತೆಯೇ ಹೀಗಾದ ಮೇಲೆ, ಮಾಧ್ಯಮ ಮಂದಿಗೂ ಗೊತ್ತಾಗದಂತೆ ಅತ್ಯಂತ ಜಾಣತನದಿಂದ ಸುಳ್ಳು ಹೇಳುವ ಬಿಜೆಪಿಯೇತರ ಪಕ್ಷಗಳ ಕಿಲಾಡಿ ರಾಜಕಾರಣಿಗಳ ಕುರಿತು ಇಂಥ ವೆಬ್‌ಸೈಟ್ ರೂಪುಗೊಳ್ಳುವುದು ಅನುಮಾನವೇ. ವಿಪಕ್ಷಗಳ ರಾಜಕಾರಣಿಗಳ ಕುರಿತು ಸುಖಾಸುಮ್ಮನೆ ಸುಳ್ಳು ಹರಡುವುದು, ವೈಯಕ್ತಿಕ ನಿಂದನೆ ಮಾಡುವುದನ್ನೆಲ್ಲ ಬಿಟ್ಟು, ಅವರೆಲ್ಲರ ಸುಳ್ಳನ್ನು ಹೀಗೆ ದಾಖಲೆ ಸಮೇತ ಒಂದೆಡೆ ಸಂಗ್ರಹಿಸುವ ಕೆಲಸವನ್ನು ಬಿಜೆಪಿ ಐಟಿ ಸೆಲ್ ಮಾಡುವುದಾದರೆ ಅದೊಂದು ಕ್ರಾಂತಿಯೇ ಸರಿ.
ಮೋದಿ ಸುಳ್ಳುಗಳ ಕುರಿತ ವೆಬ್‌ಸೈಟ್ ಇದ್ದದ್ದು ಇಂಗ್ಲಿಷ್‌ನಲ್ಲಿ. ನಮ್ಮ ಕನ್ನಡ ಮಾಧ್ಯಮಗಳ ಮಂದಿಯೋ, “ನನಗೆ ಮೊದಲ ರ್ಯಾಂಕ್ ಬಂದರೂ,” ಎಂಬುದನ್ನು “ನನಗೆ ಮೊದಲ ರ್ಯಾಂಕ್ ಬಂದಿದೆ,” ಎಂದೇ ಅರ್ಥೈಸಿಕೊಂಡು ಮುಖಪುಟದ ಸುದ್ದಿ ಮಾಡುವ ಜಗಜ್ಜಾಣರು! ಹಾಗಾಗಿ, ಕನಿಷ್ಠಪಕ್ಷ ಕನ್ನಡದಲ್ಲೇ ಮಾಹಿತಿಗಳು ಸಿಕ್ಕರೆ, ಇಂಥ ಮೂರ್ಖತನ ಪುನಾವರ್ತನೆ ಆಗುವುದಿಲ್ಲ ಎಂಬ ದೂರದ ಆಸೆ.
‘ಮೋದಿ ಸುಳ್ಳುಗಳ ಸಂಗ್ರಹ’ದಂಥದ್ದೇ ಕನ್ನಡದಲ್ಲೊಂದು ಮಾಹಿತಿ ಕಣಜ ಉಂಟು. ಆದರೆ, ಈ ಕಣಜ ಯಾವುದೇ ಒಂದು ಪಕ್ಷದ ರಾಜಕಾರಣಿಗಳ ಬೆನ್ನು ಬಿದ್ದಿಲ್ಲ. ಬದಲಿಗೆ, ಎಲ್ಲ ಪಕ್ಷಗಳ ಸರ್ಕಾರಗಳ ನೌಟಂಕಿ ಕುರಿತು ಕರಾರುವಾಕ್ ಮಾಹಿತಿಗಳುಂಟು; ಅದೂ, ದಾಖಲೆ ಸಮೇತ. ಮಹಾಂತೇಶ್ ಭದ್ರಾವತಿ ಎಂಬ ಒಂಟಿ ಮನುಷ್ಯ ಈ ಕಣಜದ ರೂವಾರಿ. ಅದರ ಹೆಸರು ‘ದಿ ಫೈಲ್ (The File).’ ಯಾವ ಪಕ್ಷ ಅಧಿಕಾರದಲ್ಲಿದ್ದರೂ, ಯಾರೇ ಮುಖ್ಯಮಂತ್ರಿ ಆಗಿದ್ದರೂ, ಸರ್ಕಾರಿ ಲೋಪಗಳನ್ನು ಮುಲಾಜಿಲ್ಲದೆ ವರದಿ ಮಾಡುತ್ತ ಬಂದದ್ದು ಮಹಾಂತೇಶ್ ಹೆಗ್ಗಳಿಕೆ. ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಸಿಎಂ ಆಗಿದ್ದಾಗ, ಹೇಗೆ ಹಂತ-ಹಂತವಾಗಿ ಲೋಕಾಯುಕ್ತವನ್ನು ಹಿಂಬದಿಗೆ ಸರಿಸುತ್ತ, ಎಸಿಬಿ ಎಂಬ ಹುಲಿ ಬಣ್ಣದ ಶ್ವಾನವನ್ನು ಆ ಜಾಗಕ್ಕೆ ತಂದು ನಿಲ್ಲಿಸಿದರು ಎಂಬ ಕುರಿತು ಇಂಚೂ ಬಿಡದಂತೆ ವರದಿ ಮಾಡಿದ್ದ ಹೆಗ್ಗಳಿಕೆ ಇವರದ್ದು.
ಈ ‘ಫೈಲ್’ನ ಒಳಹೊಕ್ಕರೆ, ಈಗಿನ ಬಿಜೆಪಿ ಸರ್ಕಾರ, ಹಿಂದಿನ ಕಾಂಗ್ರೆಸ್, ಜೆಡಿಎಸ್ ಸರ್ಕಾರಗಳ ಅವಧಿಯಲ್ಲಿ ಮಹಾನ್ ಮಂತ್ರಿಗಳಿಂದ ಆದ ಎಡವಟ್ಟುಗಳು, ಅನುದಾನ ಕಬಳಿಕೆ, ಇಲಾಖೆಗಳ ನಿರ್ವಹಣಾ ಲೋಪ, ಭ್ರಷ್ಟಾಚಾರ, ಸುಳ್ಳು ಮಾಹಿತಿ, ಸರ್ಕಾರಿ ಯೋಜನೆಗಳ ವಾಸ್ತವಿಕ ಸ್ಥಿತಿಗತಿ… ಇತ್ಯಾದಿ ಹಲವು ವಿಷಯಗಳ ಕುರಿತ ವಿಶ್ಲೇಷಣಾ ಬರಹಗಳು, ಮಾಹಿತಿ ಆಧರಿಸಿದ ವರದಿಗಳು ನಿಮ್ಮ ಮುಂದೆ ತೆರೆದುಕೊಳ್ಳುತ್ತವೆ.

ಕರ್ನಾಟಕದ ಮತಾಂತರ ನಿಷೇಧ ಕಾಯ್ದೆ ಕುರಿತು ಸ್ವತಃ ಗೃಹ ಇಲಾಖೆಯಲ್ಲಿ ಯಾವುದೇ ಮಾಹಿತಿ ಇಲ್ಲ ಎಂಬುದಾಗಲೀ, ಚಾಣಕ್ಯ ವಿವಿಗೆ ಜಮೀನು ಮಂಜೂರು ಮಾಡುವಾಗ ಆರೆಸ್ಸೆಸ್ ಅನ್ನು ಓಲೈಸುವ ಸಲುವಾಗಿ ಇಲಾಖಾ ಟಿಪ್ಪಣಿಯನ್ನು ಬದಿಗಿರಿಸಿದ್ದ ಸಂಗತಿಯಾಗಲೀ, ಕೋವಿಡ್ ಮೂರನೇ ಅಲೆ ಎದುರಿಸಲು ಆಕ್ಸಿಜನ್ ಜನರೇಟರ್‌ಗಳನ್ನು ಖರೀದಿಗೆ ಮುಂದಾದ ರಾಜ್ಯ ಸರ್ಕಾರ ಒಕ್ಕೂಟ ಸರ್ಕಾರಕ್ಕೆ, ಪಿಎಂ ಕೇರ್ಸ್ ಮತ್ತಿತರ ಹಣಕಾಸು ನಿಧಿಗೆ ಬೇಡಿಕೆ ಸಲ್ಲಿಸುವ ಬದಲು, ರಾಜ್ಯ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದಾಗಲೀ, ಅದಕ್ಕೆ ಮಾರುತ್ತರ ಕೊಟ್ಟ ಹಣಕಾಸು ಇಲಾಖೆ ಅಧಿಕಾರಿಯೊಬ್ಬರು ಪಿಎಂ ಕೇರ್ಸ್‌ನಿಂದ ಅನುದಾನ ಪಡೆದುಕೊಳ್ಳಲು ಟಿಪ್ಪಣಿ ಬರೆದಿದ್ದಾಗಲೀ, ಈ ಯಾವ ಸಂಗತಿಗಳನ್ನೂ ಕನ್ನಡದ ಮುಖ್ಯವಾಹಿನಿ ಮಾಧ್ಯಮಗಳು ಮೂಸಿ ಕೂಡ ನೋಡಿಲ್ಲ! ಆದರೆ, ಇದೆಲ್ಲವೂ ‘ದಿ ಪೈಲ್’ನಲ್ಲುಂಟು.
ಸರ್ಕಾರದ ವಿರುದ್ಧ ಆಗೊಂದು ಈಗೊಂದು ಟುಸ್ ಪಟಾಕಿ ಹೊಡೆಯುತ್ತ, ಅದನ್ನೂ ಸರ್ಕಾರಕ್ಕೆ ಮುಜುಗರವಾಗದಂತೆ ಭಾರೀ ನಾಜೂಕಾಗಿ ನಿಭಾಯಿಸುತ್ತ, ತಾವು ತಾವೇ ಸನ್ಮಾನಿಸಿಕೊಳ್ಳುತ್ತ, ಬಾಗುತ್ತ ಬಳುಕುತ್ತ ತೆವಳುತ್ತ ಜೀವನ ಸವೆಸುತ್ತಿರುವ ಕನ್ನಡದ ಸುದ್ದಿವಾಹಿನಿಗಳು ಮತ್ತು ದಿನಪತ್ರಿಕೆಗಳು, ವರದಿಗಾರಿಕೆಯ ಪ್ರಾಮಾಣಿಕತೆಯನ್ನು ಇಂಥ ವೆಬ್‌ಸೈಟ್‌ಗಳಿಂದ ಕಲಿಯಬೇಕಾಗಿದೆ. ಹೀಗೆ ಕಲಿತದ್ದೇ ಆದರೆ, ಪಬ್ಲಿಕ್ ಸುದ್ದಿವಾಹಿನಿಯ ಶ್ರೀ ಶ್ರೀ ಶ್ರೀ ಎಚ್ ಆರ್ ರಂಗನಾಥ್ ಅವರಿಗೆ, ದೇಶ ವಿಭಜನೆ ಆದದ್ದು ಹೇಗೆ, ನಿಜವಾಗಿಯೂ ನಡೆದದ್ದೇನು ಎಂಬ ಖಚಿತ ಮಾಹಿತಿ ದೊರೆತು, ಬೀದಿ ಬದಿಯ ಸ್ವಯಂಘೋಷಿತ ಜ್ಯೋತಿಷಿಗಳ ಹಾಗೆ ಬಾಯಿಗೆ ಬಂದದ್ದು ಒದರುವುದು ತಪ್ಪೀತು. ಜನಸಮುದಾಯಗಳ ನಡುವೆ ದ್ವೇಷ ಹೆಚ್ಚಿಸುವ ಸುದ್ದಿಗಳನ್ನೇ ಪಾಂಪ್ಲೆಟ್ ರೂಪದಲ್ಲಿ ಪ್ರಿಂಟು ಮಾಡಿ ಹಂಚುತ್ತಿರುವ, ದಿ ಗ್ರೇಟ್ ವೆಟರನ್ ಜರ್ನಲಿಸ್ಟ್ ವಿಶ್ವೇಶ್ವರ ಭಟ್ಟರಿಗೆ, ವೈರಲ್ ವಿಡಿಯೋ ಮಾತ್ರವನ್ನೇ ಆಧರಿಸಿ ಯಾವ ಬಗೆಯಲ್ಲಿ ಮತ್ತು ಎಷ್ಟು ಪ್ರಮಾಣದಲ್ಲಿ ಸುದ್ದಿ ಮಾಡಬಹುದು ಎಂಬ ಪ್ರಾಥಮಿಕ ಅರಿವು (ಬೇಸಿಕ್ ನಾಲೆಡ್ಜ್) ಬಂದೀತು. ಇದೆಲ್ಲ ಸಾಧ್ಯವಾಗಬೇಂದರೆ, ಕನ್ನಡದ ಮಾಧ್ಯಮಗಳು ‘ದಿ ಫೈಲ್’ನಂಥ ವೆಬ್‌ಸೈಟ್‌ಗಳನ್ನು ಪ್ರತಿಸ್ಪರ್ಧಿಯಾಗಿ ಪರಿಗಣಿಸದೆ, ಮಾಹಿತಿ ಕಣಜವಾಗಿ ನೋಡುವುದನ್ನು, ಅಲ್ಲಿರುವ ಮಾಹಿತಿಗಳನ್ನು ಬಳಸಿ ಒಳಹೊಕ್ಕು ಇನ್ನಷ್ಟು ಸುದ್ದಿಗಳನ್ನು ಹೆಕ್ಕುವುದನ್ನು ಅಭ್ಯಾಸ ಮಾಡಿಕೊಳ್ಳಬೇಕಿದೆ.