ಜನವರಿ 26ರಂದು ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ನಗರ ಪೊಲೀಸ್ ಇಲಾಖೆ ಹಾಗೂ ಬಿಬಿಎಂಪಿಯಿಂದ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಎಂದಿನಂತೆ ಈ ಬಾರಿಯೂ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಗಣರಾಜ್ಯೋತ್ಸವ ನಡೆಯಲಿದ್ದು ನಗರ ಪೊಲೀಸ್ ಇಲಾಖೆ ಬಿಗಿ ಪೊಲೀಸ್ ಬಂದೋ ಬಸ್ತ್ ನೀಡಲು ನಿರ್ಧರಿಸಿದೆ.
11 ಡಿಸಿಪಿ, 20 ಎಸಿಪಿ , 60ಪೊಲೀಸ್ ಇನ್ಸ್ ಪೆಕ್ಟರ್ , 125 ಸಬ್ ಇನ್ಸ್ ಪೆಕ್ಟರ್ ಸೇರಿದಂತೆ ಒಟ್ಟು 1,400 ಜನ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಇದರಲ್ಲಿ ಕೆ ಎಸ್ ಆರ್ ಪಿ , ಸಿಎ ಆರ್ , ಹೋ ಗಾರ್ಡ್ಸ್ ಹಾಗೂ ಟ್ರಾಫಿಕ್ ವಾರ್ಡನ್ಸ್ ಸಿಬ್ಬಂದಿ ಇದ್ದು, ಅಹಿತಕರ ನಡೆಯದಂತೆ ನೋಡಿಕೊಳ್ಳಲು ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಇನ್ನು ಮುಂಜಾಗ್ರತಾ ಕ್ರಮವಾಗಿ ಅಗ್ನಿಶಾಮಕ ದಳ , ಆಂಬುಲೆನ್ಸ್, ಕ್ಷಿಪ್ರ ಕಾರ್ಯಾಚರಣೆ ಪಡೆ ಹಾಗೂ ಗರುಡ ಪಡೆ ಕೂಡ ಸ್ಥಳದಲ್ಲಿ ನಿಯೋಜನೆಯಾಗಿದೆ. 15 ದಿನಗಳಿಂದ ಮೈದಾನದ ಸುತ್ತಮುತ್ತ 60 ಸಿಸಿಟಿವಿಗಳ ಕಣ್ಗಾವಲು ಏರ್ಪಡಿಸಲಾಗಿದ್ದು, ಅನುಮಾನಸ್ಪದವಾಗಿ ಕಂಡು ಬರುವವರನ್ನು ವಶಕ್ಕೆ ಪಡೆದು ವಿಚಾರಿಸಲು ತಾಕೀತು ಮಾಡಲಾಗಿದೆ.

ಕೋವಿಡ್ ಹಿನ್ನೆಲೆಯಲ್ಲಿ ಗಣ್ಯರಿಗೆ ಮಾತ್ರ ಕಾರ್ಯಕ್ರಮಕ್ಕೆ ಅವಕಾಶ ನೀಡಲಾಗಿದೆ. ಈ ಬಾರಿಯೂ ಸಾರ್ವಜನಿಕರಿಗೆ ಅವಕಾಶ ನಿಷೇಧಿಸಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚಿಸಲಾಗಿದೆ. ಕಾರ್ಯಕ್ರಮದ ವೇಳೆ ಆಹ್ವಾನ ಪತ್ರಿಕೆ ತೋರಿಸುವುದು ಕಡ್ಡಾಯವಾಗಿದೆ. ವಿಐಪಿ, ಕಾಮನ್ ಎಂಟ್ರಿ ಹೀಗೆ ನಿಗಧಿಪಡಿಸಿದ ದ್ವಾರದ ಮುಖಾಂತರವೇ ಆಯಾ ವರ್ಗದ ಜನರು ಬರಲು ಕೋರಲಾಗಿದೆ.
ಕಳೆದ 15 ದಿನದಿಂದ ಬೇಕಾದ ವ್ಯವಸ್ಥೆಗಳನ್ನ ಮಾಡಿಕೊಳ್ಳಲಾಗಿದೆ. ಈ ವರ್ಷ ಕಳೆದ ಬಾರಿಗಿಂತ ವಿಶೇಷವಾದ ಭದ್ರತೆ ಮಾಡಲಾಗಿದೆ. ಈ ಬಾರಿ ಸಿಸಿಟಿವಿ ಮಾತ್ರವಲ್ಲದೆ ಕಂಟ್ರೋಲ್ ರೂಂ ವ್ಯವಸ್ಥೆಯನ್ನೂ ಸ್ಥಳದಲ್ಲೇ ಮಾಡಲಾಗಿದೆ.
ಅಲ್ಲದೇ ಆಂಧ್ರಪ್ರದೇಶದ ಪೊಲೀಸರೂ ಕೂಡ ಈ ಬಾರಿಯ ಕವಾಯತು ನಲ್ಲಿ ಭಾಗವಹಿಸಲಿದ್ದಾರೆ. ಮೈದಾನಕ್ಕೆ ಆಗಮಿಸುವವರು 8:40 ಕ್ಕೆ ಆಗಮಿಸಬೇಕು. ಒಟ್ಟು ಇಡೀ ಕಾರ್ಯಕ್ರಮಕ್ಕೆ 200 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಪಾಸ್ ಇದ್ದವರಿಗೆ ಮಾತ್ರ ಪ್ರವೇಶ. ಇನ್ನು ಎಂದಿನಂತೆ ಸಿಗರೇಟ್ , ಬೆಂಕಿ ಪಟ್ಟಣ , ವಿಡಿಯೋ ಸ್ಟಿಲ್ ಕ್ಯಾಮರಾ , ಶಸ್ತ್ರಾಸ್ತ್ರಗಳು , ಪಟಾಕಿ, ಸ್ಪೋಟಕ ವಸ್ತುಗಳು , ಕಪ್ಪು ಕರ ವಸ್ತ್ರ ,ಚಾಕು ಚೂರಿಗಳು ನಿಷೇಧಿಸಲಾಗಿದೆ.