2014ರ ಚುನಾವಣಾ ಪ್ರಚಾರದ ವೇಳೆ ತೆರಿಗೆ ವ್ಯವಸ್ಥೆಯ ಸುಧಾರಣೆ ಮಾಡುವುದಾಗಿ ಬಿಜೆಪಿ ಪ್ರಧಾನವಾಗಿ ಪ್ರಸ್ತಾಪ ಮಾಡಿತ್ತು. ತೆರಿಗೆ ವ್ಯವಸ್ಥೆ ಸುಧಾರಣೆ ಎಂದರೆ ತೆರಿಗೆ ಪ್ರಮಾಣ ಹೆಚ್ಚಿಸುವುದಲ್ಲ, ತೆರಿಗೆ ಪ್ರಮಾಣವನ್ನು ತಗ್ಗಿಸಿ, ತೆರಿಗೆದಾರರ ವ್ಯಾಪ್ತಿಯನ್ನು ಹಿಗ್ಗಿಸುವುದಾಗಿದೆ. ಆದರೆ, ಮೋದಿ ಸರ್ಕಾರ ಬಂದ ನಂತರ ತೆರಿಗೆ ಪ್ರಮಾಣ ಸುಧಾರಿಸುವುದಕ್ಕಿಂತ ಹೆಚ್ಚಾಗಿ ತೆರಿಗೆ ಹೇರಿಕೆ ಹೆಚ್ಚಾಗಿದೆ. ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆ ಜಾರಿಗೆ ಬಂದ ನಂತರ ಖರೀದಿದಾರರಿಗಷ್ಟೇ ಅಲ್ಲಾ ಮಾರಾಟಗಾರರಿಗೂ ಸಂಕಷ್ಟ ಎದುರಾಗಿದೆ. ಖರೀದಿದಾರ ಮತ್ತು ಮಾರಾಟಗಾರ ಇಬ್ಬರ ಮೇಲೂ ಹೆಚ್ಚಿನ ತೆರಿಗೆ ಭಾರ ಬಿದ್ದಿದೆ. ಜಿಎಸ್ಟಿ ವ್ಯಾಪ್ತಿಯಿಂದ ಹೊರಗೆ ಉಳಿಸಿದ ಪೆಟ್ರೋಲಿಯಂ ಉತ್ಪನ್ನಗಳ ಮೇಲಂತೂ ಹಿಂದೆಂದೂ ಕಂಡು ಕೇಳರಿಯದ ಪ್ರಮಾಣದಲ್ಲಿ ತೆರಿಗೆ ಹೇರಲಾಗಿದೆ. ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳ ಚುನಾವಣೆ ಮುಗಿದ ನಂತರ ಪೆಟ್ರೋಲ್, ಡಿಸೇಲ್ ದರ ಮತ್ತಷ್ಟು ಜಿಗಿಯಲಿದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸುವ ಹೊತ್ತಿನಲ್ಲಿ ಆದಾಯತೆರಿಗೆದಾರರ ಅರ್ಧ ಡಜನ್ ನಿರೀಕ್ಷೆಗಳನ್ನು ಇಲ್ಲಿ ಸಾಂಕೇತಿಕವಾಗಿ ಪಟ್ಟಿ ಮಾಡಲಾಗಿದೆ. ಸುಧೀರ್ಘ ಕಾಲದಲ್ಲಿ ಸುಸ್ಥಿರ ತೆರಿಗೆ ವ್ಯವಸ್ಥೆ ಮತ್ತು ಸಂಪನ್ಮೂಲ ಕ್ರೋಢೀಕರಣಕ್ಕೆ ಇದು ಉಪಯುಕ್ತವಾಗಲಿದೆ.
ವೈದ್ಯಕೀಯ ವೆಚ್ಚಕ್ಕೆ ಪೂರ್ಣಪ್ರಮಾಣದ ಆದಾಯ ತೆರಿಗೆ ವಿನಾಯ್ತಿ:
ಕಳೆದೆರಡು ವರ್ಷಗಳಿಂದ ಕೋವಿಡ್ ಸೋಂಕಿನಿಂದಾಗಿ ಪ್ರತಿ ಕುಟುಂಬಗಳು ಆರೋಗ್ಯ ಸುಧಾರಣೆಗಾಗಿ ಮಾಡುತ್ತಿರುವ ವೆಚ್ಚ ದುಪ್ಪಟ್ಟಾಗಿದೆ. ಸೋಂಕು ತಗುಲಿದವರ ವೈದ್ಯಕೀಯ ವೆಚ್ಚವಂತೂ ಆಯಾ ಕುಟುಂಬಗಳ ಒಂದು ವರ್ಷದ ಆದಾಯಕ್ಕಿಂತಲೂ ಹೆಚ್ಚಾಗಿಬಿಟ್ಟಿದೆ. ಇಂತಹ ಸಂಕಷ್ಟದಲ್ಲಿ ವೈದ್ಯಕೀಯ ವೆಚ್ಚಕ್ಕೆ ಪೂರ್ಣ ಪ್ರಮಾಣದಲ್ಲಿ ಆದಾಯ ತೆರಿಗೆ ವಿನಾಯ್ತಿ ನೀಡಬೇಕು. ಆದಾಯ ತೆರಿಗೆ ಇಲಾಖೆಯಲ್ಲಿರುವ ಹತ್ತಾರು ನಿಯಮಗಳು ಷರತ್ತುಗಳನ್ನು ಸಡಿಲಿಸಿ ತೆರಿಗೆ ವಿನಾಯ್ತಿ ನೀಡಬೇಕು.
ಆದಾಯ ತೆರಿಗೆ ವಿನಾಯ್ತಿ ಮಿತಿ ಹೆಚ್ಚಳ:
ಆದಾಯ ತೆರಿಗೆ ವಿನಾಯ್ತಿ ಮಿತಿ ಹಲವು ವರ್ಷಗಳಿಂದ ಪರಿಷ್ಕರಣೆಗೊಂಡಿಲ್ಲ. 2.50 ಲಕ್ಷ (ಮಹಿಳೆಯರು, ವೃದ್ಧರಿಗೆ 3 ಲಕ್ಷ) ರೂಪಾಯಿ ಇದೆ. ಹಣದುಬ್ಬರಕ್ಕೆ ಅನುಗುಣವಾಗಿ ಆದಾಯ ತೆರಿಗೆ ವಿನಾಯ್ತಿ ಮಿತಿ ಹೆಚ್ಚಳ ಮಾಡುವುದು ನ್ಯಾಯ ಸಮ್ಮತ. ಆದರೆ, ಹಣದುಬ್ಬರ ಏರುಹಾದಿಯಲ್ಲೇ ಸಾಗುತ್ತಿದೆ. ಆದಾಯ ಮಿತಿ ಮಾತ್ರ ಹೆಚ್ಚಳವಾಗಿಲ್ಲ. ಈ ಕಾರಣಕ್ಕಾಗಿ ಆದಾಯ ತೆರಿಗೆ ಮಿತಿಯನ್ನು 4 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಬೇಕು. ಜತೆಗೆ ಈಗಿರುವ ಎಲ್ಲಾ ವಿವಿಧ ರೂಪದ ವಿನಾಯ್ತಿಗಳನ್ನು ಮುಂದುವರೆಸಬೇಕು. ಜನರ ತೆರಿಗೆ ಭಾರ ತಗ್ಗಿಸಿದರೆ, ಜನರ ವಿನಿಯೋಜನೆ ಹೆಚ್ಚುವುದರಿಂದ ಅದರ ಲಾಭ ಒಟ್ಟಾರೆ ಆರ್ಥಿಕತೆಗೆ ದಕ್ಕುತ್ತದೆ.
ತೆರಿಗೆ ಸ್ಲಾಬ್ ಗಳನ್ನು ಅರ್ಧ ಡಜನ್ನಿಗೆ ಇಳಿಸಬೇಕು:
ಜಿಎಸ್ಟಿ ಜಾರಿಗೆ ತಂದಾಗ ಹಲವು ಸ್ಲ್ಯಾಬ್ ಗಳು ಇದ್ದುದರಿಂದಾಗಿಯೇ ಆರಂಭದ ವೈಫಲ್ಯಕ್ಕೆ ಕಾರಣವಾಗಿತ್ತು. ಆ ಲೋಪವನ್ನು ನಿಧಾನವಾಗಿ ಸರಿಪಡಿಸಿಕೊಳ್ಳಲಾಗಿದೆ. ಆದಾಯ ತೆರಿಗೆಯಲ್ಲೂ ಇನ್ನೂ ಹತ್ತು ಸ್ಲ್ಯಾಬ್ ಉಳಿಸಿಕೊಳ್ಳಲಾಗಿದೆ. ಹಾಲಿ ಇರುವ ಸ್ಲ್ಯಾಬ್ ಗಳೆಂದರೆ 5.2%, 10.4%, 15.6%, 20.80%, 26%, 31.2%, 34.32%, 35.88%, 39% ಮತ್ತು 42.744%. ಇಷ್ಟು ಸ್ಲ್ಯಾಬ್ ಗಳನ್ನು ಪರಿಷ್ಕರಿಸಿ ಆರಕ್ಕೆ ತಗ್ಗಿಸುವುದು ಸೂಕ್ತ. ಹೆಚ್ಚುವರಿ ಶುಲ್ಕ ಮತ್ತು ಸೆಸ್ ಹೇರಿಕೆಗೆ ಅನುಗುಣವಾಗಿ ತೆರಿಗೆ ಸ್ಲ್ಯಾಬ್ಗಳನ್ನು 5%, 10%, 15%, 20%, 25%, 30% ಸರಳೀಕರಿಸುವುದರಿಂದ ತೆರಿಗೆ ಪಾವತಿ ಮಾಡುವವರಿಗೂ ಸಂಗ್ರಹಿಸುವವರಿಗೂ ಸಲೀಸಾಗುತ್ತದೆ.
ತೆರಿಗೆ ರಹಿತ ಕೋವಿಡ್ ಬಾಂಡ್ ಹೂಡಿಕೆ:
ಸರ್ಕಾರಕ್ಕೂ ಈಗ ನಗದು ಸಂಪನ್ಮೂಲದ ಅಗತ್ಯವಿದೆ. ಈ ಹಂತದಲ್ಲಿ ಕೋವಿಡ್ ಬಾಂಡ್ ಮೂಲಕ ಸರ್ಕಾರ ಹಣ ಸಂಗ್ರಹಿಸಬೇಕು. ಈ ಬಾಂಡ್ ಗಳು ತೆರಿಗೆಮುಕ್ತವಾಗಿರಬೇಕು. ಮೂರರಿಂದ ಐದು ವರ್ಷಗಳವರೆಗೆ ಹಣದುಬ್ಬರಕ್ಕನುಗುಣವಾಗಿ ಬಡ್ಡಿದರ ನಿಗದಿ ಮಾಡಿ ವಾರ್ಷಿಕ ಪಾವತಿ ಅಥವಾ ಅಂತಿಮ ಹಂತದಲ್ಲಿ ಪಾವತಿ ಮಾಡುವ ಆಯ್ಕೆಯನ್ನು ಹೂಡಿಕೆದಾರರಿಗೆ ನೀಡಬೇಕು. ಇದರಿಂದ ಸರ್ಕಾರ ಹೆಚ್ಚಿನ ಬಡ್ಡಿ ನೀಡಿ ಮುಕ್ತ ಮಾರುಕಟ್ಟೆಯಿಂದ ಸಾಲ ಪಡೆಯುವುದು ತಪ್ಪುತ್ತದೆ. ಜತೆಗೆ ನಗದು ಹರಿವು ಲಭ್ಯವಾಗುತ್ತದೆ. ತೆರಿಗೆ ವಿನಾಯ್ತಿ ಲಭ್ಯವಾಗುವುದರಿಂದ ಹೂಡಿಕೆದಾರರಿಗೂ ಅನುಕೂಲವಾಗುತ್ತದೆ.
“ಮನೆಯಿಂದ ಕೆಲಸ” ಭತ್ಯೆಗೆ ತೆರಿಗೆ ವಿನಾಯ್ತಿ:
ಕೋವಿಡ್ ಸೋಂಕು ಜನರ ಉದ್ಯೋಗ ಸ್ವರೂಪವನ್ನೇ ಬದಲಾಯಿಸಿದೆ. ಆರಂಭದಲ್ಲಿ ವರ್ಕ್ ಫ್ರಮ್ ಹೋಮ್ ಪರಿಕಲ್ಪನೆಗೆ ವಿರೋಧ ವ್ಯಕ್ತ ಪಡಿಸಿದ್ದ ಉದ್ಯೋಗಿಗಳು ಈಗ ಅದಕ್ಕೆ ಆದ್ಯತೆ ನೀಡುತ್ತಿದ್ದಾರೆ. ಸೈಕೀ ಜಾಬ್ ಸೈಟ್ ನಡೆಸಿದ ಟೆಕ್ ಟ್ಯಾಲೆಂಟ್ ಔಟ್ಲುಕ್ ಸಮೀಕ್ಷೆಯಲ್ಲಿ ಶೇ.82ರಷ್ಟು ಉದ್ಯೋಗಿಗಳು ಮನೆಯಿಂದಲೇ ಕೆಲಸ ನಿರ್ವಹಿಸುವುದು ಇಷ್ಟ ಎಂದು ಹೇಳಿದ್ದಾರೆ. ಶೇ.64ರಷ್ಟು ಉದ್ಯೋಗಿಗಳು ತಾವು ಮನೆಯಲ್ಲಿ ಕೆಲಸ ಮಾಡುವಾಗ ತಮ್ಮ ಉತ್ಪಾದಕತಾ ಸಾಮರ್ಥ್ಯ ಹೆಚ್ಚಿರುತ್ತದೆ ಎಂದೂ ತಿಳಿಸಿದ್ದಾರೆ. ಆದ್ದರಿಂದ ಸರ್ಕಾರ ಮನೆಯಿಂದಲೇ ಕೆಲಸ ನಿರ್ವಹಿಸುವವರಿಗೆ ಮಾಸಿಕ 3,000-5000 ರೂಪಾಯಿಗಳನ್ನು ಗೃಹ ಕಚೇರಿ ವೆಚ್ಚವೆಂದು ಪರಿಗಣಿಸಿ ಅಷ್ಟೂ ಮೊತ್ತಕ್ಕೆ ಆದಾಯ ತೆರಿಗೆ ನಿಯಮ 2ಬಿಬಿ ಅಡಿಯಲ್ಲಿ ತೆರಿಗೆ ವಿನಾಯ್ತಿ ನೀಡಬೇಕಿದೆ.
ಇದರಿಂದ ಉದ್ಯೋಗಿಗಳ ತೆರಿಗೆ ಭಾರವನ್ನು ತಗ್ಗಿಲಿದೆ.
ವಹಿವಾಟು ತೆರಿಗೆ ರದ್ದು:
ಕೋವಿಡ್ ಸಂಕಷ್ಟದಲ್ಲಿ ಷೇರುಪೇಟೆಯಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ತೀವ್ರವಾಗಿ ಹೆಚ್ಚಿದೆ. ಷೇರು ವಹಿವಾಟು ನಡೆಸುವಾಗ ಅಲ್ಪಕಾಲದ ಲಾಭದ ಮೇಲಿನ ತೆರಿಗೆ ಶೇ.15ರಷ್ಟಿದೆ. ದೀರ್ಘಕಾಲದ ಲಾಭದ ಮೇಲಿನ ತೆರಿಗೆ ಶೇ.10ರಷ್ಟಿದೆ. ಇದರ ಜತೆಗೆ ನಿತ್ಯವೂ ನಡೆಸುವ ಟ್ರೆಡಿಂಗ್ ಮೇಲೂ ವಹಿವಾಟು ತೆರಿಗೆ ವಿಧಿಸಲಾಗುತ್ತಿದೆ. ಬಹಳ ಹಿಂದೆ ತೆರಿಗೆ ಪಾವತಿ ಮಾಡುವುದಿಲ್ಲವೆಂಬ ಕಾರಣಕ್ಕೆ ವಹಿವಾಟು ತೆರಿಗೆ ಜಾರಿಗೆ ತರಲಾಗಿತ್ತು. ಈಗ ತೆರಿಗೆ ವ್ಯವಸ್ಥೆ ಸುಧಾರಿಸಿದೆ. ತಂತ್ರಜ್ಞಾನ ಬಳಕೆಯಿಂದ ಯಾರೂ ತೆರಿಗೆ ವ್ಯಾಪ್ತಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಹೀಗಾಗಿ ದಿನ ನಿತ್ಯದ ವಹಿವಾಟಿನ ಮೇಲೆ ವಿಧಿಸುವ ವಹಿವಾಟು ತೆರಿಗೆಯನ್ನು ರದ್ದು ಮಾಡಬೇಕಿದೆ.