ದೇಶದಲ್ಲಿ ಎಲ್ಐಸಿ ಹೆಸರು ಕೇಳದವರೇ ಇಲ್ಲ. ಎಲ್ಐಸಿ ಅತಿದೊಡ್ಡ ಬ್ರಾಂಡ್. ಜಗತ್ತಿನಲ್ಲಿ ಯಾವ ಕಂಪನಿಯು ಇಷ್ಟು ಅಗಾಧವಾಗಿ, ವ್ಯಾಪಕವಾಗಿ ಹರಡಿಕೊಂಡಿಲ್ಲ ಮತ್ತು ಜನಪ್ರಿಯವಾಗಿಲ್ಲ. ಭಾರತೀಯ ಜೀವ ವಿಮಾ ನಿಗಮ(ಎಲ್ಐಸಿ) ಭಾರತದಲ್ಲಿ ವಿಮೆಯ ಪರಿಕಲ್ಪನೆಯನ್ನೇ ಬದಲಾಯಿಸಿದೆ. ಪ್ರತಿ ಮನೆಯಲ್ಲೂ ಒಂದಿಲ್ಲೊಂದು ಪಾಲಿಸಿದಾರರನ್ನು ಹೊಂದಿರುವ ಕಂಪನಿ. ಭಾರತದ ವಿಮಾಕ್ಷೇತ್ರಕ್ಕೆ ಖಾಸಗಿ ಕಂಪನಿಗಳು ಪ್ರವೇಶ ಮಾಡಿ ಎರಡು ದಶಕ ಕಳೆದಿದ್ದರೂ ಎಲ್ಐಸಿ ತನ್ನ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ಮತ್ತು ಇನ್ನೂ ಮೂರು ದಶಕಗಳು ಕಳೆದರೂ ಎಲ್ಐಸಿ ಅಗ್ರಸ್ಥಾನ ಆಬಾಧಿತವಾಗಿರುತ್ತದೆ.
ಇಂತಿಪ್ಪ ಎಲ್ಐಸಿಯನ್ನು ಮಾರಾಟ ಮಾಡಲು ಮೋದಿ ಸರ್ಕಾರ ಮುಂದಾಗಿದೆ. ಮಾರಾಟವೆಂದರೆ- ಈಗಿನಂತೆ ಇಡೀ ವಿಮಾನ ನಿಲ್ದಾಣ ಮಾರಾಟ ಮಾಡುವುದು, ಏರ್ ಇಂಡಿಯಾ ಮಾರಿದಂತೆ ಇಡೀ ಕಂಪನಿಯನ್ನೇ ಮಾರಾಟ ಮಾಡುವುದಲ್ಲ. ಎಲ್ಐಸಿಯ ಅಲ್ಪ ಪಾಲನ್ನು ಮಾರಾಟ ಮಾಡಲಿದೆ. ಆ ಮೂಲಕ 2022ನೇ ಸಾಲಿನಲ್ಲಿನ ಬಂಡವಾಳ ಹಿಂತೆಗೆತದ ಗುರಿಯನ್ನು ಕೇಂದ್ರ ಸರ್ಕಾರ ಸಾಧಿಸಲಿದೆ.
ಎಲ್ಐಸಿ ಎಷ್ಟು ಬೃಹತ್ ಕಂಪನಿ ಎಂದರೆ- ಅದರ ಉದ್ಯಮ ಮೌಲ್ಯವೇ ಸುಮಾರು 36 ಲಕ್ಷ ಕೋಟಿ ರೂಪಾಯಿಗಳಷ್ಟಿದೆ. ಷೇರುಮಾರುಕಟ್ಟೆಯಲ್ಲಿ ಕಂಪನಿಯು ಲಿಸ್ಟಾದರೆ ಅದರ ಮೌಲ್ಯವನ್ನು ‘ಮಾರುಕಟ್ಟೆ ಬಂಡವಾಳ’ದಲ್ಲಿ ಅಳೆಯಲಾಗುತ್ತದೆ. ಲಿಸ್ಟಾಗದ ಕಂಪನಿಗಳ ಮೌಲ್ಯವನ್ನು ‘ಉದ್ಯಮ ಮೌಲ್ಯ’ದ ಮೂಲಕ ಅಳೆಯಲಾಗುತ್ತದೆ.
ಎಲ್ಐಸಿ ಉದ್ಯಮ ಮೌಲ್ಯವನ್ನು ಗಣನೀಯವಾಗಿ ತಗ್ಗಿಸುವ ವ್ಯವಸ್ಥಿತ ಪ್ರಯತ್ನವು ಖಾಸಗಿ ವಿಮಾ ಕಂಪನಿಗಳ ವಲಯದಿಂದ ನಡೆಯುತ್ತಿದೆ ಎಂಬ ಆರೋಪ ಇದೆ. 30 ಕೋಟಿ ಪಾಲಿಸಿಗಳನ್ನು ಹೊಂದಿರುವ ಎಲ್ಐಸಿ ಉದ್ಯಮ ಮೌಲ್ಯವನ್ನು ನಿರ್ಧರಿಸುವ ಪೂರ್ವದಲ್ಲೇ ಇಂತಹ ಹುನ್ನಾರ ನಡೆದಿದೆ. ಉದ್ಯಮ ಮೌಲ್ಯ ತಗ್ಗಿಸಿದರೆ, ದೀರ್ಘಕಾಲದಲ್ಲಿ ವಿಮಾ ಕ್ಷೇತ್ರದಲ್ಲಿ ಖಾಸಗಿ ಕಂಪನಿಗಳು ಮೇಲುಗೈ ಸಾಧಿಸಲು ಸಾಧ್ಯವೆಂಬ ಲೆಕ್ಕಾಚಾರ ಇರಬಹುದು.
Also Read : ಪ್ರತಿಧ್ವನಿ ಬಜೆಟ್ ಸರಣಿ- 2 | ದೇಶದ ವಿತ್ತೀಯ ಕೊರತೆ ಹೆಚ್ಚಾದರೆ ಜನಸಾಮಾನ್ಯರು ಏಕೆ ತಲೆ ಕೆಡಿಸಿಕೊಳ್ಳಬೇಕು?
ಸದ್ಯಕ್ಕೆ ಹಣಕಾಸು ಮಾರುಕಟ್ಟೆಯಲ್ಲಿ ಚರ್ಚೆಯಾಗುತ್ತಿರುವ ಅಂದಾಜಿನಂತೆ ಎಲ್ಐಸಿ ಉದ್ಯಮ ಮೌಲ್ಯವು 18 ಲಕ್ಷ ಕೋಟಿ ರೂಪಾಯಿ ಆಜುಬಾಜಿನಲ್ಲಿದೆ. ಈ ವಿತ್ತೀಯ ವರ್ಷದ ಪೂರ್ವಾರ್ಧಲ್ಲೇ ಶೇ.10ರಷ್ಟು ಪಾಲನ್ನು ಸಾರ್ವಜನಿಕರಿಗೆ ಮಾರಾಟ ಮಾಡಿ, ಷೇರುಮಾರುಕಟ್ಟೆಯಲ್ಲಿ ಲಿಸ್ಟ್ ಮಾಡುವ ಉದ್ದೇಶ ಕೇಂದ್ರ ಸರ್ಕಾರಕ್ಕೆ ಇದೆ. ಪ್ರಸಕ್ತ ವರ್ಷ ಸುಮಾರು 2.50 ಲಕ್ಷ ಕೋಟಿ ರೂಪಾಯಿಗಳನ್ನು ಬಂಡವಾಳ ಹಿಂತೆಗೆತದಿಂದ ಸಂಗ್ರಹಿಸುವ ಗುರಿ ಕೇಂದ್ರ ಸರ್ಕಾರಕ್ಕೆ ಇದೆ. ಎಲ್ಐಸಿ ಪಾಲು ಮಾರಾಟವೊಂದರಿಂದಲೇ ಸುಮಾರು 1.80 ಲಕ್ಷ ಕೋಟಿ ರುಪಾಯಿ ಸರ್ಕಾರದ ಖಜಾನೆಗೆ ಬರಲಿದೆ. ಉಳಿದಂತೆ ಬಿಪಿಸಿಎಲ್ ಕಂಪನಿ ಮಾರಾಟದಿಂದ ಸುಮಾರು 55,000 ಕೋಟಿ ರೂಪಾಯಿಗಳು ಬರುವ ನಿರೀಕ್ಷೆ ಇದೆ. ಸಾಲದ ಭಾರಿ ಹೊರೆ ಹೊತ್ತಿದ್ದ ಏರ್ ಇಂಡಿಯಾ ಮಾರಾಟದಿಂದ ನಿರೀಕ್ಷಿತ ಪ್ರಮಾಣದಲ್ಲಿ ನಗದು ಹರಿದು ಬಂದಿಲ್ಲ. ಹೀಗಾಗಿ ಶಿಪ್ಪಿಂಗ್ ಕಾರ್ಪೊರೆಷನ್, ಕಂಟೈನರ್ ಕಾರ್ಪೊರೆಷನ್, ಐಡಿಬಿಐ ಬ್ಯಾಂಕ್, ಬಿಇಎಂಎಲ್, ಪವನ್ ಹನ್ಸ್, ನೀಲಾಚಲ್ ಇಸ್ಪಾಟ್ ನಿಗಮಗಳಿಂದ ಈ ಸಾಲಿನಲ್ಲಿ ಬಂಡವಾಳ ಹಿಂಪಡೆಯುವ ನಿರೀಕ್ಷೆ ಇದೆ.
2017-18, 2018-19ರಲ್ಲಿ ಕೇಂದ್ರ ಸರ್ಕಾರ ಬಂಡವಾಳ ಹಿಂತೆಗೆತದ ಶೇ.100ರಷ್ಟು ಗುರಿ ಸಾಧಿಸಿದೆ. 2019-20ರಲ್ಲಿ ಶೇ.40ರಷ್ಟು, 2020-21ರಲ್ಲಿ ಶೇ.16ರಷ್ಟು ಮಾತ್ರ ಗುರಿ ಸಾಧಿಸಿದೆ. ಹೀಗಾಗಿ ಹಿಂದಿನ ಬಾಕಿಯನ್ನೂ ಸೇರಿಸಿ ಗುರಿ ಸಾಧಿಸುವ ಉತ್ಸಾಹದಲ್ಲಿ ಕೇಂದ್ರ ಸರ್ಕಾರ ಇದೆ. ಅಂದಹಾಗೆ ಇದು ಕೇಂದ್ರ ಸರ್ಕಾರವು 6.50 ಲಕ್ಷ ಕೋಟಿ ರೂಪಾಯಿಗಳನ್ನು ಆಸ್ತಿನಗದೀಕರಣದ (ಸರ್ಕಾರದ ಆಸ್ತಿಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವುದು) ಮೂಲಕ ಸಂಗ್ರಹಿಸುವ ಯೋಜನೆ ಪಟ್ಟಿಯಲ್ಲಿ ಸೇರಿಲ್ಲ.
ಬಂಡವಾಳ ಹಿಂತೆಗೆತ ಪರಿಕಲ್ಪನೆ ಉದಾರೀಕರಣೋತ್ತರದಲ್ಲಿ ಬಂದದ್ದು. ನರಸಿಂಹರಾವ್ ಅವರು ಪ್ರಧಾನಿ, ಮನಮೋಹನ್ ಸಿಂಗ್ ಅವರು ವಿತ್ತ ಸಚಿವರಾಗಿದ್ದಾಗ ಸಾರ್ವಜನಿಕ ವಲಯದ ಕಂಪನಿಗಳಲ್ಲಿ ಅಲ್ಪ ಪಾಲನ್ನು ಮಾರಾಟ ಮಾಡುವ ಪ್ರಸ್ತಾಪವಾಯಿತು. ಮಾರಾಟ ಮಾಡುವ ಪಾಲು ಶೇ.5ರಷ್ಟಿತ್ತು ಮತ್ತು ಯಾವುದೇ ಕಾರಣಕ್ಕೂ ಶೇ.10ರ ಮಿತಿ ದಾಟಬಾರದು ಎಂಬ ನಿಯಮಗಳನ್ನು ಹಾಕಿಕೊಳ್ಳಲಾಗಿತ್ತು. ಬಂಡವಾಳ ಹಿಂತೆಗೆತದ ಹಿಂದೆ ಎರಡು ಉದ್ದೇಶಗಳಿದ್ದವು. ಒಂದು ಸರ್ಕಾರಕ್ಕೆ ನಗದು ಹರಿದು ಬರಬೇಕಿತ್ತು ಮತ್ತು ಸಾರ್ವಜನಿಕ ವಲಯದ ಕಂಪನಿಗಳಲ್ಲೂ ಜನರು ಹೂಡಿಕೆಗೆ ಅವಕಾಶ ಕಲ್ಪಿಸುವುದಾಗಿತ್ತು. ಮಿಗಿಲಾಗಿ ಸಾರ್ವಜನಿಕ ವಲಯದ ಕಂಪನಿಗಳ ಉದ್ಯಮ ಮೌಲ್ಯವನ್ನು ಉನ್ನತೀಕರಿಸುವುದಾಗಿತ್ತು.
Also read : ಪ್ರತಿಧ್ವನಿ ಬಜೆಟ್ ಸರಣಿ-1 | ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಸವಾಲಾಗಿರುವ ಬೃಹತ್ ಪ್ರಮಾಣದ ವಿತ್ತೀಯ ಕೊರತೆ
1991-92ರಲ್ಲಿ ಸಾರ್ವಜನಿಕ ವಲಯದ 31 ಕಂಪನಿಗಳಲ್ಲಿನ ಅಲ್ಪಪ್ರಮಾಣದ ಬಂಡವಾಳ ಹಿಂಪಡೆಯಲು ಕೇಂದ್ರ ಸರ್ಕಾರ ನಿರ್ಧರಿಸಿತು. 1996ರವರೆಗೆ ಈ ಕಂಪನಿಗಳಲ್ಲಿ ಕೇಂದ್ರ ಸರ್ಕಾರ ಮಾರಾಟ ಮಾಡಿ ಸಂಗ್ರಹಿಸಿದ್ದು 3,038 ಕೋಟಿ ರೂಪಾಯಿಗಳು ಮಾತ್ರ. 1996ರಲ್ಲಿ ಬಂಡವಾಳ ಹಿಂತೆಗೆಯಲು ಜಿ.ವಿ. ರಾಮಕೃಷ್ಣ ನೇತೃತ್ವದ ಸಲಹಾ ಸಮಿತಿ ರಚಿಸಲಾಗಿತ್ತು. 1999ರಲ್ಲಿ ಬಂಡವಾಳ ಹಿಂತೆಗೆತಕ್ಕಾಗಿಯೇ ಪ್ರತ್ಯೇಕ ಸಚಿವಾಲಯ ಸೃಷ್ಟಿಯಾಗಿತ್ತು. 2001ರಲ್ಲಿ ಬಂಡವಾಳ ಹಿಂತೆಗೆತ ಸಚಿವಾಲಯ ಎಂದೇ ಹೆಸರಿಸಲಾಗಿತ್ತು. 2004ರಲ್ಲಿ ಈ ಸಚಿವಾಲಯವನ್ನು ಹಣಕಾಸು ಇಲಾಖೆ ಜತೆಗೆ ವಿಲೀನಗೊಳಿಸಲಾಗಿಯುತು. ಅಂದಿನಿಂದ ಹಣಕಾಸು ಸಚಿವಾಲಯವೇ ಬಂಡವಾಳ ಹಿಂತೆಗೆತ ಪ್ರಕ್ರಿಯೆಯನ್ನು ನಿರ್ವಹಿಸುತ್ತಿದೆ.
ವರ್ಷ ಗುರಿ ಸಾಧನೆ ಶೇಕಡವಾರು ಸಾಧನೆ