ಅದು ಹೇಗೆ ಗೊತ್ತೇ? ಪ್ರತಿ ವರ್ಷ ವಿತ್ತೀಯ ಕೊರತೆ ಇದ್ದೇ ಇರುತ್ತದೆ. ಒಂದು ಮಿತಿಯಲ್ಲಿ ಇದ್ದರೆ ಆರೋಗ್ಯಕರ. ಮಿತಿ ಮೀರಿದರೆ ಕಷ್ಟ. ವಿತ್ತೀಯ ಕೊರತೆಯ ಪ್ರಮಾಣವನ್ನು ಶೇ.3ಕ್ಕೆ ತಗ್ಗಿಸಬೇಕು ಎಂದು ಕೇಂದ್ರ ಸರ್ಕಾರವೇ ಗುರಿ ಇಟ್ಟುಕೊಂಡಿದೆ. ಆದರೆ, ವಿತ್ತೀಯ ಕೊರತೆ ಮಿತಿಯನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ. ವಿತ್ತೀಯ ಕೊರತೆ ಪ್ರಮಾಣವು ಒಟ್ಟು ಬಜೆಟ್ ಪ್ರಮಾಣದ ಪ್ರತಿಶತ ಭಾಗವಾಗಿರುವುದಿಲ್ಲ. ನಮ್ಮ ಒಟ್ಟು ಜಿಡಿಪಿಯ ಪ್ರತಿಶತ ಭಾಗವಾಗಿರುತ್ತದೆ. 2020-21ರಲ್ಲಿ ನಮ್ಮ ಒಟ್ಟುರಾಷ್ಟ್ರೀಯ ಉತ್ಪನ್ನ (ಜಿಡಿಪಿ) 134.4 ಲಕ್ಷ ಕೋಟಿ ರುಪಾಯಿಗಳು ಎಂದು ಅಂದಾಜಿಸಲಾಗಿದೆ. ವಿತ್ತೀಯ ಕೊರತೆಯು ಶೇ.9.4ರಷ್ಟಾಗಿದೆ. ಅಂದರೆ, ವಿತ್ತೀಯ ಕೊರತೆಯನ್ನು ರೂಪಾಯಿ ಲೆಕ್ಕದಲ್ಲಿ ಹೇಳುವುದಾದರೆ ಸುಮಾರು 13 ಲಕ್ಷ ಕೋಟಿ ರೂಪಾಯಿಗಳಾಗುತ್ತದೆ.
ಸರ್ಕಾರವು ಈ ಕೊರತೆ ಬಿದ್ದಿರುವ 13 ಲಕ್ಷ ಕೋಟಿ ರೂಪಾಯಿಗಳನ್ನು ಸರಿದೂಗಿಸಲು, ಆಂತರಿಕ ಸಾಲ ಮತ್ತು ವಿದೇಶಿ ಸಾಲವನ್ನು ಮಾಡುತ್ತದೆ. ಜತೆಗೆ ಬಂಡವಾಳ ಹಿಂತೆಗೆತದ ಮೂಲಕ ದೇಶದ ಆಸ್ತಿಗಳನ್ನು ಮಾರಾಟ ಮಾಡಿ ನಗದು ಕ್ರೋಢೀಕರಿಸುತ್ತದೆ. ತೀವ್ರವಾಗಿ ವಿತ್ತೀಯ ಕೊರತೆ ಹೆಚ್ಚಾದಾಗ ಬಂಡವಾಳ ವೆಚ್ಚಗಳು ತಗ್ಗುವುದರಿಂದ ಆರ್ಥಿಕತೆ ಕುಂಠಿತವಾಗುತ್ತದೆ.
ಜನಸಾಮಾನ್ಯರು ಏಕೆ ತಲೆಕೆಡಿಸಿಕೊಳ್ಳಬೇಕು ಎಂದರೆ- ಸರ್ಕಾರ ವಿತ್ತೀಯ ಕೊರತೆ ತುಂಬಿಕೊಳ್ಳಲು ಮಾಡಿದ ಸಾಲವು ಜನರ ತಲೆ ಮೇಲೆ ಬರುತ್ತದೆ. ಸರ್ಕಾರದ ಸಾಲ ಎಂದರೆ ಎಲ್ಲಾ ಜನರಿಗೂ ಸಮಾನಾಗಿ ಹಂಚಲಾಗುತ್ತದೆ. 2020ರಲ್ಲಿ ಭಾರತದ ತಲಾಸಾಲ 1731 ಡಾಲರ್ (ಇಂದಿನ ವಿನಿಮಯ ದರದಲ್ಲಿ 1,30,275 ರೂಪಾಯಿಗಳು)ಗಳಷ್ಟು ಇತ್ತು. 2021ರಲ್ಲಿ ಈ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ. 2013ರಲ್ಲಿ 982 ಡಾಲರ್ ಗಳಷ್ಟಿತ್ತು. ಆಗ ಇದ್ದ ರುಪಾಯಿ ಡಾಲರ್ ವಿನಿಮಯ ಮೌಲ್ಯವು 53.80 ರೂಪಾಯಿ ಇತ್ತು. ಆ ಲೆಕ್ಕದಲ್ಲಿ 2013ರಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯ ತಲೆ ಮೇಲೆ ಇದ್ದ ಸಾಲದ ಮೊತ್ತವು 52,832 ರೂಪಾಯಿಗಳು. ಈ ಏಳು ವರ್ಷಗಳಲ್ಲಿ ತಲಾಸಾಲವು ದುಪ್ಪಟ್ಟಾಗಿದೆ. 2020ನೇ ಸಾಲಿನಲ್ಲಿದ್ದ ದೇಶದ ಒಟ್ಟು ಸಾಲವು ನಮ್ಮ ಜಿಡಿಪಿಯ ಶೇ.89ರಷ್ಟಕ್ಕೆ ಜಿಗಿದಿದೆ. ಇದು ಸರ್ವಕಾಲಿಕ ದಾಖಲೆ. 2022-23ನೇ ಸಾಲಿನಲ್ಲಿ ಸಾಲದ ಮೊತ್ತವು ಜಿಡಿಪಿಯ ಶೇ.100ರಷ್ಟಾಗಬಹುದು ಎಂದು ಅಂದಾಜಿಸಲಾಗಿದೆ. ಅಂದರೆ, ನಮ್ಮ ಒಟ್ಟು ಸಂಪಾದನೆಯು ನಮ್ಮ ಸಾಲಕ್ಕೆ ಸರಿಸಮವಾಗಿಬಿಡುತ್ತದೆ.
ಈ ಸಾಲದ ಮೇಲೆ ಬಡ್ಡಿ ಪಾವತಿ ಮಾಡಲೇಬೇಕಾದ ಹೊಣೆಗಾರಿಕೆ ಇರುವುದರಿಂದ ದೇಶದ ಅಭಿವೃದ್ಧಿಯು ಶೇ.6-8ರಷ್ಟು ಪ್ರಗತಿ ಸಾಧಿಸಿದರೂ, ಶೇ.5ರಷ್ಟು ಬಡ್ಡಿ ಪಾವತಿ ಮತ್ತು ಹೊಸದಾಗಿ ಮಾಡುವ ಸುಮಾರು ಶೇ.5ರಷ್ಟು ಸಾಲದಿಂದಾಗಿ ಒಟ್ಟಾರೆ ನಮ್ಮ ದೇಶ ಸಾಲದ ಸುಳಿಗೆ ಸಿಕ್ಕಿಬಿದ್ದಂತಾಗುತ್ತದೆ.
ವಿತ್ತೀಯ ಕೊರತೆ ಸರಿದೂಗಿಸುವ ಸಲುವಾಗಿ ಸರ್ಕಾರ ದೇಶದ ಆಸ್ತಿಗಳನ್ನು ಮಾರಾಟ ಮಾಡುತ್ತಾ ಹೊದಂತೆಲ್ಲ ದೀರ್ಘಕಾಲದಲ್ಲಿ ಸರ್ಕಾರವೇ ದಿವಾಳಿಯಾಗುವ ಪರಿಸ್ಥಿತಿಗೆ ಬರುತ್ತದೆ. ಸಾಲ ಎಷ್ಟೇ ಇದ್ದರೂ ದೊಡ್ಡ ಪ್ರಮಾಣದಲ್ಲಿ ಆಸ್ತಿ ಇದ್ದಾಗ, ಸಂಕಷ್ಟ ಕಾಲದಲ್ಲಿ ಆಸ್ತಿ ಮಾರಿ ಸಾಲ ತೀರಿಸಿಕೊಳ್ಳಬಹುದು. ಆದರೆ, ಈಗ ಏನಾಗುತ್ತಿದೆ ಎಂದರೆ, ಮಾಡಿರುವ ಸಾಲದ ಮೇಲಿನ ಬಡ್ಡಿ ಪಾವತಿಗೆ ಆಸ್ತಿ ಮಾರುವ ಪರಿಸ್ಥಿತಿ ಬಂದಂತಿದೆ. ಇದು ನಿಜಕ್ಕೂ ಆತಂಕಕಾರಿ ಬೆಳವಣಿಗೆಯೇ. ಸಾಮಾನ್ಯವಾಗಿ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಸಾಲದ ಪ್ರಮಾಣವು ಜಿಡಿಪಿಗಿಂತಲೂ ಹೆಚ್ಚಿದೆ. ಆ ದೇಶಗಳು ಸ್ಥಿರಾಸ್ಥಿ ದೊಡ್ಡದಿದೆ. ಮೂಲಭೂತ ಸೌಲಭ್ಯಗಳು ಅಗಾಧವಾಗಿವೆ. ಅಲ್ಲಿ ಪ್ರತಿಯೊಂದು ಮನೆಗೂ ಡಾಂಬರು ರಸ್ತೆ, ನೀರು, ವಿದ್ಯುತ್ ಸರಬರಾಜು, ಒಳಚರಂಡಿ ವ್ಯವಸ್ಥೆ ಇರುತ್ತದೆ. ಕೊನೆ ಹಂತದವರೆಗೂ ಸಾರಿಗೆ ಮೂಲಭೂತ ಸೌಲಭ್ಯಗಳು, ಆರೋಗ್ಯ, ಶೈಕ್ಷಣಿಕ ಮೂಲಭೂತ ಸೌಲಭ್ಯಗಳಿವೆ. ಅಲ್ಲಿ ನಿರುದ್ಯೋಗ ಸಮಸ್ಯೆ ದೊಡ್ಡದಿರುವುದಿಲ್ಲ.
ಆದರೆ, ನಮ್ಮಲ್ಲಿನ್ನೂ ಜಿಲ್ಲಾ ಕೇಂದ್ರಗಳಿಗೇ ರಾಷ್ಟ್ರೀಯ ಹೆದ್ದಾರಿಗಳಾಗಿಲ್ಲ. ತಾಲೂಕು ಕೇಂದ್ರಗಳಿಗೆ ರಾಜ್ಯಹೆದ್ದಾರಿಗಳಾಗಿಲ್ಲ, ಹಳ್ಳಿಹಳ್ಳಿಗಳಿನ್ನೂ ಕಚ್ಚಾರಸ್ತೆಯನ್ನೇ ಅವಲಂಬಿಸಿವೆ. ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ನಮ್ಮ ಗ್ರಾಮೀಣ ಪ್ರದೇಶ ಇನ್ನೂ ನೂರು ವರ್ಷಗಳಷ್ಟು ಹಿಂದೆ ಇದೆ. ಈ ಕಾರಣಗಳಿಗಾಗಿ ಕೇಂದ್ರ ಸರ್ಕಾರ ಯದ್ವಾ-ತದ್ವಾ ಸಾಲ ಮಾಡುತ್ತಿದೆ ಎಂದರೆ ಅದು ನಾಗರಿಕರ ತಲೆ ಮೇಲೆ ಬರುತ್ತದೆ ಎಂಬುದನ್ನು ಅರಿಯಬೇಕು. ಅಂತಹ ಸಾಲಗಳ ಸದ್ಭಳಕೆಯಾಗಿದೆಯೇ ಎಂಬುದನ್ನು ಪ್ರಶ್ನಿಸುವಂತಾಗಬೇಕು. ದುರದೃಷ್ಟವಶಾತ್ ಮಹಾಲೆಕ್ಕಪರಿಶೋಧಕರೂ ಈ ಪ್ರಶ್ನೆಗಳನ್ನು ಎತ್ತುತ್ತಿಲ್ಲ.