ಮೈಸೂರು : ಮೈಸೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಚಾರಕ್ಕೆ ಸಂಸದ ಪ್ರತಾಪ್ ಸಿಂಹ ಹಿಂದೇಟು ಹಾಕುತ್ತಿದ್ದು ಕೇವಲ ವರುಣ ಕ್ಷೇತ್ರಕ್ಕೆ ಮಾತ್ರ ಪ್ರಚಾರವನ್ನು ಸೀಮಿತವಾಗಿಸಿಕೊಂಡಿದ್ದಾರೆ. ಹೀಗಾಗಿ ಬಿಜೆಪಿ ನಾಯಕರಿಗೆ ಸಂಸದ ಪ್ರತಾಪ್ ಸಿಂಹ ನಡೆ ಬೇಸರ ಮೂಡಿಸಿದೆ ಎನ್ನಲಾಗಿದೆ.
ಮೈಸೂರು ಜಿಲ್ಲೆಯ ಯಾವುದೇ ಕ್ಷೇತ್ರಕ್ಕೂ ಕಾಲಿಡದ ಸಂಸದ ಪ್ರತಾಪ್ ಸಿಂಹ ಕೇವಲ ವರುಣ ಕ್ಷೇತ್ರದಲ್ಲಿ ಮಾತ್ರ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿದ್ದಾರೆ. ಇದನ್ನು ಹೊರತುಪಡಿಸಿ ಪಕ್ಷದ ಹೊಸ ಅಭ್ಯರ್ಥಿಗಳ ಪರ ಪ್ರತಾಪ್ ಸಿಂಹ ಪ್ರಚಾರ ಮಾಡದೇ ಇರುವುದು ಅನುಮಾನಕ್ಕೆ ಕಾರಣವಾಗಿದೆ.
ಚಾಮುಂಡೇಶ್ವರಿ ಅಭ್ಯರ್ಥಿ ಕವೀಶ್ ಗೌಡ , ಪಿರಿಯಾಪಟ್ಟಣ, ಎನ್ಆರ್ ಕ್ಷೇತ್ರಗಳಿಂದ ಸಂಸದ ಪ್ರತಾಪ್ ಸಿಂಹ ಅಂತರ ಕಾಯ್ದುಕೊಂಡಿದ್ದಾರೆ. ಹುಣಸೂರಿನಲ್ಲಿ ಹನುಮ ಜಯಂತಿ ಆಚರಿಸಿ ಹಿಂದುತ್ವದ ಬೀಜ ಬಿತ್ತಿದ್ದ ಸಂಸದ ಪ್ರತಾಪ್ ಸಿಂಹ ಇದೀಗ ಶಾಸಕ ಜಿ.ಟಿ ದೇವೇಗೌಡ ಪುತ್ರ ಹರೀಶ್ ಗೌಡ ಸ್ಪರ್ಧೆ ಹಿನ್ನೆಲೆಯಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕೆ ಹಿಂದೇಟು ಹಾಕುತ್ತಿದ್ದಾರಾ ಎಂಬ ಅನುಮಾನ ಮೂಡಿದೆ.