ಪ್ರಶಾಂತ್ ಕಿಶೋರ್ ‘ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮೂರಂಕಿ ದಾಟಿದರೆ ಪೊಲಿಟಿಕಲ್ ಸ್ಟಾಟರ್ಜಿಸ್ಟ್ ಕೆಲಸವನ್ನೇ ಬಿಟ್ಟುಬಿಡುತ್ತೇನೆ’ ಎಂದು ಶಪಥಗೈದಿದ್ದರು. ಅವರ ಅಂದಾಜಿನಂತೆ ಬಿಜೆಪಿ ಕಡೆಗೂ ಮೂರಂಕಿ ದಾಟಲೇ ಇಲ್ಲ. ಆದರೆ ಅಭೂತಪೂರ್ವ ಜಯಭೇರಿಯ ರೂವಾರಿಯಾದ ಪ್ರಶಾಂತ್ ಕಿಶೋರ್ ಮಾತ್ರ ‘ ಪೊಲಿಟಿಕಲ್ ಸ್ಟಾಟರ್ಜಿಸ್ಟ್’ ಕೆಲಸ ಬಿಡುವ ಮಾತಿಗೆ ಬದ್ಧರಾದರು. ‘ನನಗೊಂದು ಬ್ರೇಕ್ ಬೇಕು, ಇನ್ನು ಈ ಕೆಲಸ ಮಾಡಲ್ಲ’ ಎಂದು ಬಿಟ್ಟರು. ಆಗ ಸಹಜವಾಗಿ ‘ಹಾಗಾದರೆ ಪ್ರಶಾಂತ್ ಕಿಶೋರ್ ಮುಂದೆ ಏನು ಮಾಡುತ್ತಾರೆ?’ ಎಂಬ ಪ್ರಶ್ನೆ ಹುಟ್ಟುಕೊಂಡಿದ್ದವು. ಸಕ್ರಿಯ ರಾಜಕಾರಣ ಮಾಡಬಹುದು ಎಂಬ ಮಾತುಗಳು ಕೇಳಿಬಂದಿದ್ದವು.
ಈಗ ಪ್ರಶಾಂತ್ ಕಿಶೋರ್ ಹೊಸ ಪಾತ್ರ ನಿರ್ವಹಿಸಲು ಹೊರಟಿದ್ದಾರೆ. 2002ರಲ್ಲಿ ಮೊದಲ ಬಾರಿಗೆ ಅವರು ಗುಜರಾತಿನಲ್ಲಿ ಬಿಜೆಪಿ ಪರವಾಗಿ (ಬಿಜೆಪಿ ಎನ್ನುವುದಕ್ಕಿಂತ ಅಲ್ಲಿನ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಪರವಾಗಿ ಎನ್ನುವುದು ಹೆಚ್ಚು ಸೂಕ್ತ) ಪೊಲಿಟಿಕಲ್ ಸ್ಟಾಟರ್ಜಿಸ್ಟ್ ಆಗಿ ಕೆಲಸ ಮಾಡಿದರು. ಭಾರತೀಯ ರಾಜಕೀಯ ರಂಗದಲ್ಲಿ ಆಗ ಅದು ಕೂಡ ಹೊಸ ಪಾತ್ರವೇ ಆಗಿತ್ತು. ಈಗ ಮತ್ತೆ ಅದೇ ರೀತಿಯಲ್ಲಿ ಮೊಗ್ಗಲು ಬದಲಿಸಲು ಹೊರಟಿದ್ದಾರೆ. ಅಂದರೆ ಇತ್ತ ಚುನಾವಣೆ ಗೆಲ್ಲಲು ರಣತಂತ್ರ ರೂಪಿಸುವ, ಅಭಿಪ್ರಾಯ ರೂಪಿಸುವ ‘ಪೊಲಿಟಿಕಲ್ ಸ್ಟಾಟರ್ಜಿಸ್ಟ್’ ಕೆಲಸವೂ ಅಲ್ಲ, ಇನ್ನೊಂದೆಡೆ ಸಕ್ರಿಯ ರಾಜಕಾರಣವೂ ಅಲ್ಲ. ‘ರಾಜಕಾರಣಿಯಾಗಿರದೆ ರಾಜಕೀಯ ನೇತಾರರ ಮತ್ತು ರಾಜಕೀಯ ಪಕ್ಷಗಳ ನಡುವೆ ಸಮನ್ವಯ ಸಾಧಿಸುವ’ ಕೆಲಸ ಕೈಗೆತ್ತಿಕೊಂಡಿದ್ದಾರೆ.

ಹಿಂದೆ ಕೂಡ ಕೆಲ ಸಂದರ್ಭಗಳಲ್ಲಿ ಈ ರೀತಿಯ ಸಮನ್ವಯ ಸಾಧಿಸಿದವರು ಇದ್ದಾರೆ. ಆದರೆ ರಾಜಕೀಯ ತಂತ್ರಗಾರಿಕೆ ರೂಪಿಸುತ್ತಿದ್ದರೂ ಅದಕ್ಕೊಂದು ‘ವೃತ್ತಿಪರತೆ ತಂದುಕೊಡದೆ’ ಸಂದಾರ್ಭಿಕವಾಗಿ ಕೆಲಸ ಮಾಡುತ್ತಿದ್ದವರ ನಡುವೆ ‘ಪೊಲಿಟಿಕಲ್ ಸ್ಟಾಟರ್ಜಿಸ್ಟ್’ ಎಂಬ ಪರಿಕಲ್ಪನೆ ಹುಟ್ಟು ಹಾಕಿದ್ದು ಪ್ರಶಾಂತ್ ಕಿಶೋರ್. ಅದೇ ರೀತಿ ಈಗ ‘ರಾಜಕಾರಣಿಯಾಗಿರದೆ ರಾಜಕೀಯ ನೇತಾರರ ಮತ್ತು ರಾಜಕೀಯ ಪಕ್ಷಗಳ ನಡುವೆ ಸಮನ್ವಯ ಸಾಧಿಸುವ’ ಕೆಲಸಕ್ಕೂ ಹೊಸ ಆಯಾಮ ನೀಡಲು ಹೊರಟಿದ್ದಾರೆ. ಇದಕ್ಕೆ ಯಾವ ಹೆಸರು-ರೂಪ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕು.
ಪ್ರಶಾಂತ್ ಕಿಶೋರ್ ಬಳಿ ಈಗಲೂ ಪಂಜಾಬ್ ಚುನಾವಣೆಗೆ ಕಾಂಗ್ರೆಸ್ ಪರ ತಂತ್ರಗಾರಿಕೆ ಮಾಡಬೇಕಾದ ಅಸೈನ್ಮೆಂಟ್ ಇದೆ. ಇದು ಅವರು ‘ಸ್ವಯಂ ನಿವೃತ್ತಿ’ ಘೋಷಿಸುವ ಮೊದಲೇ ಒಪ್ಪಿಕೊಂಡಿದ್ದ ಕೆಲಸ. ಇದರ ನಡುವೆ ಅವರು ‘ರಾಜಕಾರಣಿಯಾಗಿರದೆ ರಾಜಕೀಯ ನೇತಾರರ ಮತ್ತು ರಾಜಕೀಯ ಪಕ್ಷಗಳ ನಡುವೆ ಸಮನ್ವಯ ಸಾಧಿಸುವ’ ಕೆಲಸ ಆರಂಭಿಸಿದ್ದಾರೆ. 2024ರ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಪ್ರಶಾಂತ್ ಈ ಕೆಲಸ ಕೈಗೆತ್ತಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದು ಆಸಕ್ತಿದಾಯಕವಾದ ವಿಚಾರ.

ಏಕೆಂದರೆ ಪಶ್ಚಿಮ ಬಂಗಾಳದಲ್ಲಿ ಮೂರನೇ ಬಾರಿ ಗೆಲುವು ಸಾಧಿಸಿದ ಬಳಿಕ 2024ಕ್ಕೆ ಮಮತಾ ಬ್ಯಾನರ್ಜಿ ಅವರೇ ಪ್ರಧಾನ ಮಂತ್ರಿ ಅಭ್ಯರ್ಥಿ ಆಗಲು ಸೂಕ್ತ ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ಪಶ್ಚಿಮ ಬಂಗಾಳದ ಗೆಲುವು ಮಮತಾ ಬ್ಯಾನರ್ಜಿ ಮತ್ತು ಪ್ರಶಾಂತ್ ಕಿಶೋರ್ ನಡುವಿನ ಗೆಳತನವನ್ನು ಇನ್ನಷ್ಟು ಗಟ್ಟಿಗೊಳಿಸಿದೆ. ಈ ನಡುವೆ ‘ಹಿರಿತನದ’ ಕಾರಣಕ್ಕೆ ಎನ್ ಸಿಪಿ ನಾಯಕ ಶರದ್ ಪವಾರ್ ಹೆಸರು ಕೇಳಿಬರುತ್ತಿದೆ. ಶರದ್ ಪವಾರ್ ಕಾರಣದಿಂದಲೇ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್-ಎನ್ ಸಿಪಿ-ಶಿವಸೇನೆಗಳ ಮೈತ್ರಿ ಕೂಟದ ಸರ್ಕಾರ ರಚನೆ ಆಯಿತು. ಆಗ ಸರ್ಕಾರ ಆಗದಂತೆ ಭಾರೀ ಬೆವರು ಹರಿಸಿದ ಬಿಜೆಪಿ ಈಗ ಸರ್ಕಾರ ಕೆಡವುದಕ್ಕೂ ಭಾರೀ ಕಸರತ್ತು ನಡೆಸುತ್ತಿದೆ. ಸರ್ಕಾರ ಸುಭದ್ರವಾಗಿರುವುದಕ್ಕೂ ಶರದ್ ಪವಾರ್ ಕಾರಣ.
ಈಗ ಪಶ್ಚಿಮ ಬಂಗಾಳದ ಗೆಲುವಿನ ಮೂಲಕ ಮಮತಾ ಬ್ಯಾನರ್ಜಿ ಬಿಜೆಪಿಗೆ ಮಾಡಿರುವ ಮರ್ಮಾಘಾತವನ್ನೇ ಆಗ ಶರದ್ ಪವಾರ್ ಮಹಾರಾಷ್ಟ್ರದಲ್ಲಿ ಮಾಡಿದ್ದು. ಜೊತೆಗೆ ಹಿರಿಯರಾದ ಶರದ್ ಪವಾರ್ ಅವರಿಗೆ ‘ಎಲ್ಲರನ್ನೂ’ ಮತ್ತು ‘ಎಲ್ಲವನ್ನೂ’ ನಿಭಾಯಿಸುವ ಸಾಮರ್ಥ್ಯ ಇದೆ. ಆದುದರಿಂದ 2024ರ ಲೋಕಸಭಾ ಚುನಾವಣೆಗೆ ಅವರೇ ಪ್ರಧಾನಿ ಅಭ್ಯರ್ಥಿ ಆಗಲು ಸೂಕ್ತ ಎಂಬ ಮಾತುಗಳು ಕೇಳಿಬರುತ್ತಿವೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೆಸರು ಇದ್ದೇ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ ಮತ್ತು ಶರದ್ ಪವಾರ್ ಅವರಂತಹ ‘ಹೈಪ್ರೊಫೈಲ್’ ನಾಯಕರನ್ನು ಒಂದೇ ತಕ್ಕಡಿಗೆ ಹಾಕಬೇಕಾಗಿದೆ. ಇಷ್ಟು ದಿನ ಬೆಕ್ಕಿಗೆ ಗಂಟೆ ಕಟ್ಟುವ ಕೆಲಸವನ್ನು ಯಾರು ಮಾಡುತ್ತಾರೆ ಎಂದು ಕೇಳಲಾಗುತ್ತಿತ್ತು. ಪ್ರಶಾಂತ್ ಕಿಶೋರ್ ಈಗ ಶರದ್ ಪವಾರ್ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸುವ ಮೂಲಕ ತನ್ನ ಕೈಯಲ್ಲಿ ‘ಗಂಟೆ’ ಇದೆ ಎಂಬುದನ್ನು ಹೇಳಿದ್ದಾರೆ. 2024ರ ಲೋಕಸಭಾ ಚುನಾವಣೆಗೆ ಇನ್ನೂ ಮೂರು ವರ್ಷ ಇರುವುದರಿಂದ ಈಗಲೇ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ.