2024ರ ಲೋಕಸಭಾ ಚುನಾವಣೆಗೆ ವರ್ಷಗಳು ಬಾಕಿಯಿದ್ದರೂ, ಭಾರತೀಯ ರಾಜಕೀಯ ವಲಯದಲ್ಲಿ ಚುನಾವಣೆ ಎದುರಿಸುವ ತಯಾರಿಗಳು ಭರ್ಜರಿಯಾಗಿ ನಡೆಯುತ್ತಿವೆ. ಪ್ರತಿಪಕ್ಷಗಳು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಜೊತೆ ಸತತವಾಗಿ ನಡೆಸುತ್ತಾ ಬಂದಿರುವ ಸಭೆಗಳು ಈ ಕೆಲವು ಊಹಾಪೋಹಗಳಿಗೆ ಕಾರಣವಾಗಿದೆ. ಶಿವಸೇನೆ ಕೂಡಾ ರಾಷ್ಟ್ರ ರಾಜಕಾರಣದಲ್ಲಿ ಕಾಂಗ್ರೆಸ್‌ನ ಸಾಧ್ಯತೆಗಳ ಕುರಿತು ಗಂಭೀರ ಗಮನ ಹರಿಸುತ್ತಿದೆ. ಈ ನಡುವೆ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿಯನ್ನು ಎದುರಿಸಲು ಅಷ್ಟೇ ಪ್ರಭಾವಿ ನಾಯಕರ ನೇತೃತ್ವದ ಅವಶ್ಯಕತೆ ಇದೆ ಎಂದು ಶಿವಸೇನೆ ಮುಖಂಡ ಸಂಜಯ್ ರಾವತ್ ಹೇಳಿದ್ದಾರೆ.
ನರೇಂದ್ರ ಮೋದಿಯವರೊಂದಿಗೆ ಸ್ಪರ್ಧಿಸಲು ಪ್ರತಿಪಕ್ಷಗಳಿಗೆ ಅವರಷ್ಟೇ ವರ್ಚಸ್ಸಿನ ನಾಯಕರಿಲ್ಲ. ಆದರೆ ಪ್ರತಿಪಕ್ಷಗಳು ಪ್ರಭಾವಿ ನಾಯಕನನ್ನು ಆರಿಸುವವರೆಗೂ ಚುನಾವಣೆಯಲ್ಲಿ ಬಿಜೆಪಿಗೆ ಪ್ರಬಲ ಪೈಪೋಟಿ ಒಡ್ಡಲು ಸಾಧ್ಯವಿಲ್ಲ ಎಂದು ರಾವತ್ ಅಭಿಪ್ರಾಯಪಟ್ಟಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರಿಗೆ ಹೋಲಿಸಿದರೆ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅತ್ಯುತ್ತಮ ಅಭ್ಯರ್ಥಿ. ಅಂತೆಯೇ ಹಲವು ನಾಯಕರು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಹೆಸರೂ ಹೇಳುತ್ತಿದ್ದಾರೆ. ಅದಾಗ್ಯೂ, ಸದ್ಯ ಪ್ರತಿಪಕ್ಷಗಳ ಬಳಿ 2024ರ ಚುನಾವಣೆ ಎದುರಿಸಲು ದೊಡ್ಡ ವರ್ಚಸ್ಸಿನ ಅದೇ ವೇಳೆ ಅವಿರೋಧ ಆಯ್ಕೆಯಾಗುವಂತಹ ನಾಯಕರಿಲ್ಲ ಎಂದು ಹೇಳಿದ್ದಾರೆ.
ಇದು ಹೀಗೆಯೇ ಮುಂದುವರೆದರೆ 2024ರಲ್ಲೂ ಮೋದಿ ನೇತೃತ್ವದ ಬಿಜೆಪಿಯನ್ನು ಸೋಲಿಸುವುದು ಕಷ್ಟವಾಗುತ್ತದೆ. ಎಲ್ಲಾ ವಿರೋಧ ಪಕ್ಷಗಳನ್ನು ಒಟ್ಟುಗೂಡಿಸುವುದು ಮತ್ತು 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಒಬ್ಬ ಪ್ರಭಾವಿ ವರ್ಚಸ್ಸಿನ ನಾಯಕನ ಮೇಲೆ ಒಮ್ಮತವನ್ನು ರೂಪಿಸುವುದು ಕಷ್ಟವಾಗಿದೆ.ಯಾಕೆಂದರೆ ಪ್ರತಿ ವಿರೋಧ ಪಕ್ಷವು ತನ್ನದೇ ನಾಯಕರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಲು ಇಚ್ಛಿಸುತ್ತದೆ ಎಂದು ಅವರು ಹೇಳಿದ್ದಾರೆ.

ತುರ್ತು ಪರಿಸ್ಥಿತಿ ನಂತರದ ಚುನಾವಣೆಗಳಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ವಿರುದ್ಧ ಜಯ ಸಾಧಿಸಲು ಜೆಪಿ ನಾರಾಯಣ್, ಹಾಗೂ ರಾಜೀವ್ ಗಾಂಧಿ ವಿರುದ್ಧ ವಿ.ಪಿ.ಸಿಂಗ್ ರಂತಹ ಪ್ರಭಾವಿ ನಾಯಕರು ಸೆಣಸಿದ್ದರು. ಬಳಿಕ ಪ್ರಧಾನಿ ಮನಮೋಹನ್ ಸಿಂಗ್, ಸೋನಿಯಾಗಾಂಧಿ ವಿರುದ್ಧ ನರೇಂದ್ರ ಮೋದಿ ಅಂತಹ ಸವಾಲು ಒಡ್ಡಿದ್ದರು. ಅಂತಹ ಪ್ರಭಾವಿ ವರ್ಚಸ್ಸುಳ್ಳ ನಾಯಕರು ನಮಗೆ ಬೇಕು. ಇದಕ್ಕೆ ಶರದ್ ಪವಾರ್ ಅವರೇ ಸರಿಯಾದ ಆಯ್ಕೆ ಎಂದು ರಾವತ್ ಹೇಳಿದ್ದಾರೆ.
Also Read: ಕಾಂಗ್ರೆಸ್ ಸೇರುತ್ತಾರಾ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್?
ಇದೇ ವೇಳೆ ರಾಹುಲ್ ಗಾಂಧಿ ಕುರಿತು ಮಾತನಾಡಿದ ಸಂಜಯ್ ರಾವತ್, ‘ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ದೊಡ್ಡ ಮುಖಂಡರಾಗಿದ್ದಾರೆ. ಆದರೆ ಅವರಿಗಿಂತ ಹಿರಿಯ ಮತ್ತು ಪ್ರಭಾವಿ ಮುಖಂಡರೂ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಕಾಂಗ್ರೆಸ್‌ನಲ್ಲಿ ನಾಯಕತ್ವದ ಬಗ್ಗೆ ಬಿಕ್ಕಟ್ಟು ಇದೆ. ಅದಕ್ಕಾಗಿಯೇ ಕಾಂಗ್ರೆಸ್ ಗೆ ಇನ್ನೂ ಅಧ್ಯಕ್ಷ ಸ್ಥಾನಕ್ಕೆ ಯಾರನ್ನೂ ಆಯ್ಕೆ ಮಾಡಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.
ಪ್ರಶಾಂತ್ ಕಿಶೋರ್ ಮೇಲೆ ಭರವಸೆ!
ರಾಜಕೀಯ ಮತ್ತು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ಕುರಿತು ಉಲ್ಲೇಖಿಸಿದ ಸಂಜಯ್ ರಾವತ್, ‘ಪ್ರಶಾಂತ್ ಕಿಶೋರ್ ಬಂಗಾಳದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಹೇಳಿಕೊಂಡಿದೆ. ತೃಣಮೂಲ ಕಾಂಗ್ರೆಸ್ ಮತ್ತು ಪ್ರಶಾಂತ್ ಕಿಶೋರ್ ನಡುವೆ ಒಪ್ಪಂದವೂ ನಡೆದಿತ್ತು. ಪ್ರಶಾಂತ್ ಕಿಶೋರ್ ಮಹಾರಾಷ್ಟ್ರದಲ್ಲಿ ನಮ್ಮೊಂದಿಗೂ ಕೆಲಸ ಮಾಡಿದ್ದರು. ಬಹುಶಃ ಮುಂದಿನ ಪ್ರಧಾನಿ ಅಭ್ಯರ್ಥಿ ಆಯ್ಕೆಯಲ್ಲಿ ಪ್ರತಿಪಕ್ಷಗಳಿಗೆ ಪ್ರಶಾಂತ್ ಕಿಶೋರ್ ನೆರವಾಗಬಹುದು ಎಂದು ಹೇಳಿದ್ದಾರೆ.












