ವಿದೇಶಿ ಆಕ್ರಮಣಕಾರರು ರಾಮಂಮದಿರವನ್ನು ನಾಶ ಪಡಿಸಿದರು. ಯಾಕೆಂದರೆ ರಾಮ ಮಂದಿರ ಭಾರತದ ಆತ್ಮವೆಂಬುವುದು ಅವರಿಗೆ ಗೊತ್ತಿತ್ತು ಎಂದು ಕೇಂದ್ರ ಸಚಿವರಾದ ಪ್ರಕಾಶ್ ಜಾವ್ಡೇಕರ್ ಭಾನುವಾರ ಹೇಳಿದ್ದಾರೆ.
ದೆಹಲಿಯಲ್ಲಿ ನಡೆಯುತ್ತಿದ್ದ ‘ರಾಮ ಜನ್ಮಭೂಮಿ ಮಂದಿರ ನಿಧಿ ಸಮರ್ಪಣಾ ಅಭಿಯಾನ’ದಲ್ಲಿ ಮಾತನಾಡುತ್ತಾ ಬಾಬ್ರಿ ಮಸೀದಿಯ ಧ್ವಂಸದೊಂದಿಗೆ ‘ಐತಿಹಾಸಿಕ ತಪ್ಪೊಂದನ್ನು’ ಸರಿ ಪಡಿಸಿದಂತಾಗಿದೆ ಎಂದಿದ್ದಾರೆ.
“ಬಾಬರ್ನಂತರ ವಿದೇಶಿ ಆಕ್ರಮಣಕಾರರು ಭಾರತಕ್ಕೆ ಬಂದು ನಾಶಪಡಿಸಲು ರಾಮ ಮಂದಿರವನ್ನೇ ಯಾಕೆ ಆಯ್ಕೆ ಮಾಡಿಕೊಂಡರು? ಯಾಕೆಂದರೆ ರಾಮ ಮಂದಿರ ಭಾರತದ ಆತ್ಮವೆಂದು ಅವರಿಗೆ ಗೊತ್ತಿತ್ತು. ಅವರು ಅಲ್ಲಿ ವಿವಾದ್ಮಾತಕ ಕಟ್ಟಡವನ್ನು ಕಟ್ಟಿದರು. ಅದು ಮಸೀದಿಯಾಗಿರಲಿಲ್ಲ. ಪ್ರಾರ್ಥನೆಗಳು ಸಲ್ಲಿಸಲ್ಪಡದ ಜಾಗ ಮಸೀದಿಯಾಗೋಕೆ ಸಾಧ್ಯವೇ ಇಲ್ಲ. ಐತಿಹಾಸಿಕ ಪ್ರಮಾದವನ್ನು ಡಿಸೆಂಬರ್ 6, 1992ರಂದು ಸರಿ ಪಡಿಸಲಾಯಿತು” ಎಂದಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
“ಡಿಸೆಂಬರ್ 6, 1992ರಂದು ನಡೆದ ಘಟನೆಗೆ ನಾನೂ ಸಾಕ್ಷಿಯಾಗಿದ್ದೆ. ಆಗ ನಾನು ‘ಭಾರತೀಯ ಯುವ ಮೋರ್ಚಾ’ಕ್ಕಾಗಿ ಕೆಲಸ ಮಾಡುತ್ತಿದ್ದೆ. ಅಯೋಧ್ಯೆಗೆ ಕರಸೇವಕನಾಗಿ ನಾನೂ ಹೋಗಿದ್ದೆ. ಮರು ದಿನ ಇಡೀ ದೇಶ ಐತಿಹಾಸಿಕ ತಪ್ಪನ್ನು ಹೇಗೆ ಸರಿಪಡಿಸಲಾಯಿತು ಎಂಬುವುದನ್ನು ನೋಡಿತು” ಎಂದಿದ್ದಾರೆ.
“ಪ್ರತಿಯೊಂದು ದೇಶವೂ ತನ್ನ ಇತಿಹಾಸದಲ್ಲಿನ ತಪ್ಪುಗಳನ್ನು ಒರೆಸಿಹಾಕಲು ಬಯಸುತ್ತವೆ. ಬಾಬರಿ ಮಸೀದಿಯ ಧ್ವಂಸವೂ ಅಂಥದ್ದೇ ಒಂದು ಸಹಜ ಪ್ರಕ್ರಿಯೆ. ನಾವು ಹಲವು ನಗರಗಳ ಹೆಸರನ್ನೂ ಬದಲಾಯಿಸಿದ್ದೇವೆ, ಅದು ಸಹ ದೇಶದ ಸ್ವಾಭಿಮಾನದ ಸಂಕೇತ” ಎಂದು ಹೇಳಿದ ರಾಮಮಂದಿರದ ಡೊನೇಶನ್ಗಾಗಿ ದೇಶದ ಪ್ರತಿಯೊಂದು ಮನೆಗಳಿಗೂ ಭೇಟಿ ನೀಡಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.