ಲೋಕಸಭಾ ಚುನಾವಣೆಗೆ ನಿಧಾನವಾಗಿ ಕಾವು ಏರುತ್ತಿದೆ. 2024ರಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಆದರೆ ಕರ್ನಾಟಕ ಹೈಕೋರ್ಟ್ ಪ್ರಜ್ವಲ್ ರೇವಣ್ಣ ಅವರ ಸಂಸದ ಸ್ಥಾನವನ್ನು ಅನರ್ಹ ಮಾಡಿ ಆದೇಶ ಹೊರಡಿಸಿದೆ. ಕಳೆದ ಬಾರಿ ನಡೆದಿದ್ದ ಲೋಕಸಭಾ ಚುನಾವಣೆ ವೇಳೆ ಕೆಲವೊಂದು ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ನೀಡದೆ ಮುಚ್ಚಿಟ್ಟಿದ್ದರು ಎನ್ನುವುದು ಪ್ರಮುಖ ಆರೋಪ. ಜೊತೆಗೆ ಆದಾಯ ತೆರಿಗೆ ಇಲಾಖೆ ಮಾಹಿತಿ, ಕ್ರಿಮಿನಲ್ ಕೇಸ್‌ಗಳ ಬಗ್ಗೆಯೂ ಮಾಹಿತಿ ನೀಡಿರಲಿಲ್ಲ ಎನ್ನುವುದನ್ನು ಪತ್ತೆ ಮಾಡಿದ್ದ ಎದುರಾಳಿ ಅಭ್ಯರ್ಥಿ ಆಗಿದ್ದ ಎ. ಮಂಜು ಹಾಗು ವಕೀಲ ದೇವರಾಜೇಗೌಡ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದರು. ಇದೀಗ ಆರೋಪಗಳು ಸಾಬೀತಾಗಿದ್ದು, ಅನರ್ಹ ಮಾಡಿ ಆದೇಶ ಮಾಡಲಾಗಿದೆ.
ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ಆರೋಪ ಸಾಬೀತು..!
2019ರಲ್ಲಿ ಪ್ರಜ್ವಲ್ ರೇವಣ್ಣ ಹಾಸನ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಆಗಿದ್ದರು. ಈ ವೇಳೆ ಅರಕಲಗೂಡು ಹಾಲಿ ಜೆಡಿಎಸ್ ಶಾಸಕ ಎ ಮಂಜು ಎದುರಾಳಿಯಾಗಿ ಸ್ಪರ್ಧೆ ಮಾಡಿದ್ದರು. ಆದರೆ ನಾಮಪತ್ರ ಸಲ್ಲಿಕೆ ಮಾಡುವಾಗ ಚುನಾವಣಾ ಆಯೋಗ ಹಾಗು ಪ್ರಚಾರದ ಮಾಹಿತಿ ನೀಡುವಾಗ ಚುನಾವಣಾ ಆಯೋಗಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಎ ಮಂಜು ಆರೋಪ ಮಾಡಿದ್ದರು. ಸರ್ಕಾರಿ ಜಮೀನನ್ನು ಅಕ್ರಮವಾಗಿ ಖರೀದಿ ಮಾಡಿ, ಆದಾಯ ತೆರಿಗೆ ಕಟ್ಟದೇ ವಂಚನೆ ಆರೋಪ. ಹೊಳೆನರಸೀಪುರದಲ್ಲಿ ಚೆನ್ನಾಂಬಿಕಾ ಕನ್ವೆನ್ಷನ್ ಸೆಂಟರ್ ಮೌಲ್ಯ 5 ಕೋಟಿ ಇದ್ದರೂ ನಾಮಪತ್ರದಲ್ಲಿ 14 ಲಕ್ಷ ಎಂದು ಉಲ್ಲೇಖ ಮಾಡಲಾಗಿದೆ. ಬೆಂಗಳೂರಿನ ಕರ್ನಾಟಕ ಬ್ಯಾಂಕ್ ಖಾತೆಯಲ್ಲಿ 48 ಲಕ್ಷ ಬ್ಯಾಲೆನ್ಸ್ ಇದ್ದರೂ ನಾಮಪತ್ರದಲ್ಲಿ ಕೇವಲ 5 ಲಕ್ಷ ಎಂದು ಉಲ್ಲೇಖ ಮಾಡಿದ್ರು, ಚುನಾವಣೆಯಲ್ಲಿ ಪ್ರಚಾರಕ್ಕೆ ದೇವೇಗೌಡರು ಹಾಗು ಸಿದ್ದರಾಮಯ್ಯರನ್ನು ಕರೆಸಿ ಪ್ರಚಾರ ಮಾಡಿದ್ರು. ಆದರೆ ಹೆಲಿಕಾಪ್ಟರ್ ಖರ್ಚು ವೆಚ್ಚ ಮುಚ್ಚಿಟ್ಟು ಚುನಾವಣೆ ಆಯೋಗಕ್ಕೆ ವಂಚನೆ ಮಾಡಲಾಗಿದೆ ಎಂದು ಕೋರ್ಟ್ ಮೆಟ್ಟಿಲೇರಲಾಗಿತ್ತು. ಎಲ್ಲಾ ಆರೋಪಗಳನ್ನು ಹೈಕೋರ್ಟ್ ಒಪ್ಪಿಕೊಂಡಿದೆ.
ಇಂದಿನಿಂದ ಮುಂದಿನ 6 ವರ್ಷ ಸ್ಪರ್ಧೆ ಮಾಡುವಂತಿಲ್ಲ..!
ಪ್ರಜ್ವಲ್ ರೇವಣ್ಣ ಸಂಸದ ಸ್ಥಾನ ಅಸಿಂಧು ಆಗಿರುವ ಹಿನ್ನೆಲೆಯಲ್ಲಿ ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಸ್ಪರ್ಧೆ ಮಾಡುವಂತಿಲ್ಲ, ಅಷ್ಟೇ ಅಲ್ಲದೆ 2029ಕ್ಕೆ ನಡೆಯುವ ಚುನಾವಣೆಯಲ್ಲೂ ಪ್ರಜ್ವಲ್ ರೇವಣ್ಣ ಸ್ಪರ್ಧೆಗೆ ಅನರ್ಹರಾಗಿದ್ದಾರೆ. ಭಾರತದ ಪ್ರಜಾಪ್ರತಿನಿಧಿ ಕಾಯ್ದೆ ಪ್ರಕಾರ, ಕ್ರಿಮಿನಲ್ ಕೇಸ್‌ನಲ್ಲಿ ಶಿಕ್ಷೆಗೆ ಒಳಗಾದ ಜನಪ್ರತಿನಿಧಿಗಳಿಗೆ 6 ವರ್ಷಗಳ ಕಾಲ ಯಾವುದೇ ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತಿಲ್ಲ. ಸೆಪ್ಟೆಂಬರ್ 1ರಂದು ಹೈಕೋರ್ಟ್ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಇಂದಿನಿಂದ ಮುಂದಿನ 6 ವರ್ಷಗಳ ಕಾಲ ಸ್ಪರ್ಧೆ ಮಾಡುವಂತಿಲ್ಲ. ನ್ಯಾಯಮೂರ್ತಿ ಕೆ.ನಟರಾಜನ್ ಪೀಠ ಈ ಆದೇಶ ಹೊರಡಿಸಿದೆ. ಕಾನೂನು ತಜ್ಙರ ಮೊರೆ ಹೋಗಿರುವ ಪ್ರಜ್ವಲ್ ರೇವಣ್ಣ, ಮುಂದಿನ ಕಾನೂನು ಹೋರಾಟ ಹೇಗಿರಬೇಕು ಅನ್ನೋ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.
ಪ್ರಜ್ವಲ್ ರೇವಣ್ಣ ಮುಂದಿರುವ ಆಯ್ಕೆಗಳು ಏನು..?
ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠದಿಂದ ಅನರ್ಹ ಆಗಿರುವ ಕಾರಣಕ್ಕೆ ಕೂಡಲೇ ಹೈಕೋರ್ಟ್ ದ್ವಿಸದಸ್ಯ ಪೀಠದ ಎದುರು ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನೆ ಮಾಡುವ ಅವಕಾಶವಿದೆ. ಇಲ್ಲದಿದ್ರೆ ನೇರವಾಗಿ ಮೊದಲು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿ ತಡೆ ನೀಡುವಂತೆ ಮನವಿ ಮಾಡುವ ಅವಕಾಶವಿದೆ. ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ರೆ, ವಿಚಾರಣೆಗೆ ತೆಗೆದುಕೊಳ್ಳಲಿರುವ ಸುಪ್ರೀಂಕೋರ್ಟ್, ತಡೆ ನೀಡಲು ಯೋಗ್ಯ ಎನಿಸಿದರೆ ಏಕಸದಸ್ಯ ಪೀಠದ ತೀರ್ಪಿಗೆ ತಡೆ ನೀಡಿ, ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ವಿಚಾರಣೆ ಮುಂದುವರಿಸುವಂತೆ ನಿರ್ದೇಶನ ನೀಡಬಹುದು. ಅಥವಾ ಸುಪ್ರೀಂಕೋರ್ಟ್‌ನಲ್ಲೇ ವಿಚಾರಣೆ ಮುಂದುವರಿಸಬಹುದು. ಒಂದು ವೇಳೆ ಸುಪ್ರೀಂಕೋರ್ಟ್‌ನಲ್ಲಿ ತಡೆಯಾಜ್ಞೆ ಸಿಗದಿದ್ರೆ ಮುಂದಿನ ಚುನಾವಣೆ ಮೇಲೆ ಕರಿನೆರಳು ಬೀಳಲಿದೆ ಎನ್ನಲಾಗ್ತಿದೆ.
ಕೃಷ್ಣಮಣಿ