ಬೆಂಗಳೂರಿನಲ್ಲಿ ಸಾಕಷ್ಟು ಅವಘಡಗಳು ಸಂಭವಿಸುತ್ತಲೇ ಇರುತ್ತವೆ. ಆದರೆ ನೆನಪಿನಲ್ಲಿ ಉಳಿಯುವುದು ಕೆಲವು ಮಾತ್ರ. ಕಾರಣ ತಾನು ಮಾಡದೆ ಇರುವ ತಪ್ಪಿಗೆ ಪ್ರಾಣ ಕೊಟ್ಟ ಘಟನೆಗಳು ಎಲ್ಲರ ಮನಸ್ಸಲ್ಲೂ ಹಚ್ಚ ಹಸಿರಾಗಿ ಇರುತ್ತದೆ. ಈ ರೀತಿಯ ಪ್ರಕರಣಗಳ ಸಾಲಿಗೆ ನವೆಂಬರ್ ಮಧ್ಯಂತರದಲ್ಲಿ ನಡೆದೆ ಕರೆಂಟ್ ಶಾಕ್ ಪ್ರಕರಣ ನಿಲ್ಲುತ್ತದೆ. ಈ ರೀತಿಯ ಘಟನೆಗಳು ಸರ್ಕಾರದ ಕಣ್ಣು ತೆರೆಸುವುದಕ್ಕೂ ಮುನ್ನಡಿ ಬರೆಯುತ್ತವೆ. ನವೆಂಬರ್ 19ರಂದು ನಡೆದ ವಿದ್ಯುತ್ ಅವಘಡದ ಬಳಿಕ ಇಂಧನ ಇಲಾಖೆ ಎಚ್ಚೆತ್ತುಕೊಂಡಿದೆ. 19 ಮಹತ್ವದ ಬದಲಾವಣೆಗಳನ್ನು ಮಾಡಲು ಅಧಿಕೃತವಾಗಿ ಅದೇಶ ಮಾಡಿದೆ.
ತನಿಖಾ ಸಮಿತಿಯಿಂದ ಸರ್ಕಾರಕ್ಕೆ ವರದಿ ಸಲ್ಲಿಕೆ..!
ನವೆಂಬರ್ 19ರಂದು ತಮಿಳುನಾಡಿನ ದಂಪತಿ ಬೆಂಗಳೂರಿಗೆ ವಾಪಸ್ ಆಗಿದ್ದರು. ಈ ವೇಳೆ ಬಸ್ ಇಳಿದು ಕಾಡುಗೋಡಿ ಬಳಿಕ ಹೋಫ್ ಫಾರ್ಮ್ ಬಳಿ ಪಾದಚಾರಿ ಮಾರ್ಗದಲ್ಲಿ ನಡೆದುಕೊಂಡು ಹೋಗುವಾಗ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಪಾದಚಾರಿ ಮಾರ್ಗದಲ್ಲೇ ನಡೆದುಕೊಂಡು ಹೋಗ್ತಿದ್ದ ಮಹಿಳೆ ತುಳಿದು ಕರೆಂಟ್ ಶಾಕ್ಗೆ ಒಳಗಾಗಿದ್ದರು. ಆ ಮಹಿಳೆ ಎತ್ತಿಕೊಂಡಿದ್ದ ಮಗು ಕೂಡ ಕರೆಂಟ್ ಶಾಕ್ಗೆ ಒಳಗಾಗಿತ್ತು. ಕೆಲವೇ ಕ್ಷಣಗಳಲ್ಲಿ ಮಹಿಳೆ ಹಾಗು ಮಗು ಸುಟ್ಟು ಹೋಗಿದ್ದರು. ಈ ಸಾವಿಗೆ ಇಂಧನ ಇಲಾಖೆ ( BESCOM ) ನಿರ್ಲಕ್ಷ್ಯವೇ ಕಾರಣ ಎನ್ನುವುದು ಮೇಲ್ನೋಟಕ್ಕೇ ಸಾಬೀತಾಗಿತ್ತು. ಪರಿಹಾರ ಕೊಟ್ಟಿದ್ದ ಸರ್ಕಾರ ತಪ್ಪಿನ ಹೊಣೆ ಜೊತೆಗೆ ಸಮಸ್ಯೆ ಏನು..? ಪರಿಹಾರ ಹೇಗೆ ಅನ್ನೋ ಬಗ್ಗೆ ತನಿಖಾ ಸಮಿತಿ ನೇಮಕ ಮಾಡಿತ್ತು. ಇದೀಗ ವರದಿ ಸಲ್ಲಿಕೆಯಾಗಿದ್ದು, ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದೆ.

ಹೇಳಿದ್ದ ಮಾತನ್ನು ಉಳಿಸಿಕೊಂಡ ಸಚಿವ ಕೆ.ಜೆ ಜಾರ್ಜ್..
ಇಂಧನ ಇಲಾಖೆ ಸಚಿವ ಕೆ.ಜೆ ಜಾರ್ಜ್ ಆಗಿರುವ ತಪ್ಪನ್ನು ಒಪ್ಪಿಕೊಂಡಿದ್ದರು. ಅದೇ ಸಮಯದಲ್ಲಿ ಮುಂದಿನ ದಿನಗಳಲ್ಲಿ ಈ ರೀತಿಯ ತಪ್ಪುಗಳು ಆಗದಂತೆ ಏನು ಮಾಡಬೇಕು ಅನ್ನೋ ಬಗ್ಗೆಯೂ ತನಿಖೆ ಮಾಡಿ ವರದಿ ಪಡೆಯುತ್ತೇವೆ. ಮುಂದಿನ ದಿನಗಳಲ್ಲಿ ಈ ರೀತಿಯ ಅನಾಹುತ ಸಂಭವಿಸದಂತೆ ಎಚ್ಚರಿಕೆ ವಹಿಸಲಾಗುತ್ತದೆ ಎಂದಿದ್ದರು. ಅದರಂತೆ ಬೆಂಗಳೂರು ಪೂರ್ವ ವಿಭಾಗದ ಉಪ ವಿದ್ಯುತ್ ಪರಿ ವೀಕ್ಷಕರ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಲಾಗಿತ್ತು. ಇದೀಗ ವರದಿ ಸಲ್ಲಿಕೆಯಾಗಿದ್ದು, ಇಂಧನ ಇಲಾಖೆ ಮಾಡುತ್ತಿರುವ ತಪ್ಪುಗಳನ್ನು ಎತ್ತಿ ತೋರಿಸಿದೆ. ಜೊತೆಗೆ ಇಂಧನ ಇಲಾಖೆ ಮೈ ಮರೆತಿರುವ ಬಗ್ಗೆಯೂ ಚಾಟಿ ಬೀಸಿದೆ. ಮಾಡಬೇಕಿದ್ದ ಕೆಲಸವನ್ನು ಮಾಡಿಲ್ಲ ಅನ್ನೋ ಬಗ್ಗೆಯೂ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಈ ಬಗ್ಗೆ ಕಿಂಚಿತ್ತೂ ತಡ ಮಾಡದೆ ಎಲ್ಲಾ ಶಿಫಾರಸುಗಳ ಜಾರಿಗೆ ಇಂಧನ ಇಲಾಖೆ ಹಾಗು ಸಚಿವ ಕೆ.ಜೆ ಜಾರ್ಜ್ ನಿರ್ಧಾರ ಮಾಡಿದ್ದಾರೆ.

19 ಶಿಫಾರಸುಗಳಲ್ಲಿ ಏನೆಲ್ಲಾ ಸೇರಿದೆ ಗೊತ್ತಾ..?
ವಿದ್ಯುತ್ ಸರಭರಾಜು ಮಾಡುವ ತಂತಿಗಳನ್ನು ಪರಿಶೀಲಿಸಿ ಬದಲಾವಣೆ ಮಾಡಬೇಕು. ಈ ಪ್ರಕರಣದಲ್ಲಿ ಬದಲಾವಣೆ ಮಾಡಿಲ್ಲ ಎನ್ನಲಾಗಿದೆ. ಈ ರೀತಿಯ ಅವಘಡಗಳು ಸಂಭವಿಸಿದಾಗ ಸೇಫ್ಟಿ ಸಿಸ್ಟಂ ಸುಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ಒಂದು ಮುಂದಿನ ದಿನಗಳಲ್ಲೂ ಈ ರೀತಿ ವೈರ್ ತುಂಡಾಗಿ ಬಿದ್ದಾಗ ಕೂಡಲೇ ಅರ್ತ್ ಗಾರ್ಡಿಂಗ್ ವ್ಯವಸ್ಥೆ ಇರಬೇಕು. 11 KV ಹಾಗು 400 V ವಿದ್ಯುತ್ ಸರಭರಾಜು ಮಾರ್ಗದಲ್ಲಿ ವಿದ್ಯುತ್ ವೈರ್ ಜಾಯಿಂಟ್ಗಳನ್ನು JE, AE ಉಸ್ತುವಾರಿಯಲ್ಲಿ ನೋಡಿಕೊಳ್ಳಬೇಕು ಎಂದು ತಿಳಿಸಲಾಗಿದೆ. ಲೋ ಎಂಡ್ ಥರ್ಮೋ ಕ್ಯಾಮೆರಾ ಬಳಸಿ ವಯರ್ ಜಾಯಿಂಟ್ ಪರಿಶೀಲನೆ ಮಾಡ್ಬೇಕು. ಇನ್ನು ವಿದ್ಯುತ್ ಕಂಬಗಳ ಮೇಲೆ ಸಾಕಷ್ಟು ವೈರ್ಗಳು ಇರಲಿದ್ದು, ಮುಂದಿನಗಳಲ್ಲಿ ಯಾವುದೇ ಖಾಸಗಿ ವೈರ್ಗಳನ್ನು ಕಂಬಕ್ಕೆ ಹಾಕದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. 6 ತಿಂಗಳಿಗೆ ಒಮ್ಮೆ ತಪಾಸಣೆ ನಡೆಸಿ ಅಪಘಾತಕ್ಕೆ ಕಾರಣ ಏನು ಅನ್ನೋದನ್ನು ಮನವರಿಕೆ ಮಾಡಿಕೊಡಬೇಕು. ಅನ್ನೋ ಅಂಶಗಳ ಜೊತೆಗೆ ಒಟ್ಟು 19 ಅಂಶಗಳನ್ನು ಜಾರಿ ಮಾಡುವಂತೆ ಇಂಧನ ಇಲಾಖೆ ಅಪರ ಕಾರ್ಯದರ್ಶಿ ಆದೇಶ ಮಾಡಿದ್ದಾರೆ.

ಇಷ್ಟೆಲ್ಲಾ ಬೆಳವಣಿಗೆ ನೋಡಿಗಾದ ಇಂಧನ ಇಲಾಖೆಗೆ ತಪ್ಪಿನ ಅರಿವಾಗಿದೆ. ಆಗಿರುವ ತಪ್ಪನ್ನು ತಿದ್ದಿಕೊಳ್ಳಲು ಮುಂದಾಗಿದೆ. ಈ ಬೆಳವಣಿಗೆ ಎಲ್ಲಾ ಇಲಾಖೆಗಳಲ್ಲೂ ಆಗಬೇಕಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆ ಮರುಕಳಿಸದಿರಲಿ, ತಜ್ಞರ ಸಮಿತಿ ಕೊಟ್ಟಿರುಯವ ವರದಿ ಮತ್ತೆ ಮತ್ತೆ ಉಲ್ಲಂಘನೆ ಆಗದಂತೆ ಇಂಧನ ಇಲಾಖೆ ಅಧಿಕಾರಿಗಳು ನೋಡಿಕೊಳ್ಳಲಿ ಅನ್ನೋದು ಪ್ರತಿಧ್ವನಬಿ ಕಾಳಜಿ ಕೂಡ ಆಗಿದೆ.
ಕೃಷ್ಣಮಣಿ