• Home
  • About Us
  • ಕರ್ನಾಟಕ
Wednesday, July 2, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಬಹುರೂಪಿಯ ತಾಯಿಯೂ ತಾಯಿಯ ಬಹುರೂಪವೂ

ನಾ ದಿವಾಕರ by ನಾ ದಿವಾಕರ
March 17, 2022
in ಅಭಿಮತ
0
ಬಹುರೂಪಿಯ ತಾಯಿಯೂ ತಾಯಿಯ ಬಹುರೂಪವೂ
Share on WhatsAppShare on FacebookShare on Telegram

ಮೈಸೂರಿನ ರಂಗಾಯಣ ಪ್ರತಿವರ್ಷ ಆಯೋಜಿಸುವ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಈ ಬಾರಿ ಹಲವು ವಿವಾದಗಳ ನಡುವೆಯೂ ಆರಂಭವಾಗಿದೆ. “ತಾಯಿ ” ವಸ್ತುವನ್ನು ಆಧರಿಸಿ ಆಯೋಜಿಸಲಾಗಿರುವ ಈ ಬಾರಿಯ ನಾಟಕೋತ್ಸವ ಹಲವು ಕಾರಣಗಳಿಗಾಗಿ ಗಮನಸೆಳೆದಿದೆ. ಭಾರತದ ಬಹುಸಂಸ್ಕೃತಿಯ ಮೂಲ ಭೂಮಿಕೆಯೊಂದಿಗೆ ರಂಗಭೂಮಿಯ ನೆಲೆಯಲ್ಲಿ ತಾಯಿ ಎನ್ನುವ ಮೂರ್ತ ಮತ್ತು ಅಮೂರ್ತ ಕಲ್ಪನೆಯನ್ನು ಸಾಕ್ಷಾತ್ಕರಿಸುವ ನಿಟ್ಟಿನಲ್ಲಿ ಈ ಬಾರಿಯ ಬಹುರೂಪಿ ಆಯೋಜಿಸಲಾಗಿದೆ ಎಂದು ಭಾವಿಸಬಹುದು. ಜಗತ್ತಿನ ಸೃಷ್ಟಿಕರ್ತೆ ತಾಯಿ ಹೀಗಾಗಿ ತಾಯಿ ಹೆಸರಿನಲ್ಲಿ ರಂಗೋತ್ಸವ ಆಯೋಜಿಸಲಾಗಿದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಈ ಬಾರಿಯ ಬಹುರೂಪಿಯ ಪರಿಕಲ್ಪನೆಗೆ ತಾತ್ವಿಕ ಸ್ಪರ್ಶ ನೀಡಿದ್ದಾರೆ.

ADVERTISEMENT

ಭಾರತವನ್ನೂ ಒಳಗೊಂಡಂತೆ ವಿಶ್ವ ಸಮುದಾಯ ನವ ಉದಾರವಾದ ಮತ್ತು ಜಾಗತೀಕರಣದ ಮಾರುಕಟ್ಟೆ ಪ್ರಭಾವಕ್ಕೊಳಗಾಗಿ, ಸೃಷ್ಟಿಯ ಗರ್ಭವನ್ನೇ ಸೀಳಿ ಮುನ್ನಡೆಯುತ್ತಿರುವ ಸಂದರ್ಭದಲ್ಲಿ ರಂಗಾಯಣದ ಆವರಣದಲ್ಲಿ ‘ತಾಯಿ’ ತನ್ನ ವಿಭಿನ್ನ ಸ್ವರೂಪಗಳಲ್ಲಿ ಕಲಾತ್ಮಕವಾಗಿ ಅಭಿವ್ಯಕ್ತಿಗೊಳ್ಳಲಿದ್ದಾಳೆ. ತಾಯಿ ಎನ್ನುವ ಪರಿಕಲ್ಪನೆಯನ್ನು ಒಂದು ನಿರ್ದಿಷ್ಟ ಜನಸಮುದಾಯದ ನಂಬಿಕೆಗಳ ನೆಲೆಯಲ್ಲಿಟ್ಟು ನೋಡುವುದಕ್ಕೂ, ವಿಶ್ವಮಾನವತೆಯ ಪರಿಕಲ್ಪನೆಯ ಉದಾತ್ತ ನೆಲೆಯಲ್ಲಿಟ್ಟು ನೋಡುವುದಕ್ಕೂ ಅಪಾರ ಅಂತರವಿದೆ ಎಂದು ಒಪ್ಪಿಕೊಳ್ಳುತ್ತಲೇ ಒಂದು ನಾಟಕೋತ್ಸವದ ಮೂಲ ವಸ್ತುವಾಗಿ ತಾಯಿ ನಿಷ್ಕರ್ಷೆಗೊಳಗಾಗುತ್ತಾಳೆ.

ಮಾನವ ಇತಿಹಾಸದಲ್ಲಿ ಶತಮಾನಗಳಿಂದಲೂ, ವೈವಿಧ್ಯಮಯ ಸಾಂಸ್ಕೃತಿಕ ಚಿಂತನೆಗಳ ನಡುವೆಯೂ ತಾಯಿ ಎನ್ನುವ ಪರಿಕಲ್ಪನೆ ತನ್ನ ಪಾರಮ್ಯ ಮತ್ತು ಶ್ರೇಷ್ಠತೆಯನ್ನು ಉಳಿಸಿಕೊಂಡುಬಂದಿದೆ. ಭೂಮಿಯನ್ನೇ ತಾಯಿ ಎಂದು ಭಾವಿಸುವ ಶ್ರದ್ಧಾಪೂರ್ವಕ ಅಭಿವ್ಯಕ್ತಿಯೊಂದಿಗೇ ಭೂಖಂಡದ ಸಮಸ್ತ ಚರಾಚರ ವಸ್ತುಗಳನ್ನು, ಜೀವಸಂಕುಲಗಳನ್ನು ಮತ್ತು ಜೀವ ವೈವಿಧ್ಯತೆಗಳನ್ನು ಕಾಣಲಾಗುತ್ತದೆ. ಬಹುತೇಕ ರಾಷ್ಟ್ರಗಳು ತಮ್ಮ ಭೂಪ್ರದೇಶವನ್ನು ತಾಯಿನಾಡು ಎಂದೇ ಗೌರವಿಸುವುದರೊಂದಿಗೆ, ಜನ್ಮದಾರಭ್ಯ ತಾನು ಆಡುವ ನುಡಿಗೆ ತಾಯಿನುಡಿ ಎಂದೇ ಕರೆಯುವ ಮೂಲಕ ಮಾನವ ಸಮಾಜ ತಾಯಿಯೊಡನೆ ತನ್ನ ನೈಸರ್ಗಿಕ ಸಂಬಂಧವನ್ನು ಬೆಳೆಸಿಕೊಂಡು ಬಂದಿದೆ.

ಬಹುರೂಪಿ ನಾಟಕೋತ್ಸವ ಉದ್ಘಾಟನೆಯ ಸಂದರ್ಭದಲ್ಲಿ ಆಶಯ ನುಡಿಗಳನ್ನಾಡಿದ ಚಿತ್ರನಟಿ ಮಾಳವಿಕಾ ಅವಿನಾಶ್ “ ತಾಯಿ ಎಂದರೆ ಭುವನೇಶ್ವರಿ, ಭಾರತ ಮಾತೆ, ವಿಶ್ವವನ್ನೇ ನಿಯಂತ್ರಿಸುವವಳು ತಾಯಿ ಚಾಮುಂಡೇಶ್ವರಿ ” ಎಂದು ಹೇಳುವ ಮೂಲಕ ತಾಯಿಯ ಪರಿಕಲ್ಪನೆಯನ್ನು ಒಂದು ನಿರ್ದಿಷ್ಟ ನಂಬಿಕೆ ಮತ್ತು ಶ್ರದ್ಧೆಯ ಚೌಕಟ್ಟಿನಲ್ಲಿ ಅಳವಡಿಸಿ, ತಾಯಿಗೆ ಸಾಂಸ್ಥಿಕ, ಸ್ಥಳೀಯ ಮತ್ತು ಸಾಂದರ್ಭಿಕವಾದ ಅರ್ಥವನ್ನು ಕಲ್ಪಿಸಿದ್ದಾರೆ. ತನ್ಮೂಲಕ ‘ತಾಯಿ’ ಬಹುರೂಪಿಗೆ ಯಶಸ್ಸನ್ನೂ ಕೋರಿದ್ದಾರೆ. “ಇಂದಿನ ದಿನಮಾನಗಳಲ್ಲಿ ಸಮಷ್ಟಿ ಪ್ರಜ್ಞೆ ಮಾಯವಾಗಿ ಮುಷ್ಟಿ ಪ್ರಜ್ಞೆ ತಲೆದೋರುತ್ತಿದೆ,,,, ಅನಾಗರಿಕ ಸಮಾಜದ ಲಕ್ಷಣಗಳನ್ನು ತೋರಿಸುತ್ತಿವೆ ಹಾಗಾಗಿ ನಾಗರಿಕ ಸಮಾಜದ ಸಂದೇಶ ಸಾರಲು ತಾಯಿ ವಸ್ತುವನ್ನು ಬಹುರೂಪಿ ಉತ್ಸವಕ್ಕೆ ಆಯ್ಕೆ  ಮಾಡಿದ್ದೇವೆ ” ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಹೇಳಿದ್ದಾರೆ.

ರಂಗಭೂಮಿ ಎನ್ನುವ ಒಂದು ಭೂಮಿಕೆಯೇ ಮೂಲತಃ ತಾಯಿಯ ಮತ್ತೊಂದು ಸ್ವರೂಪ. ತನ್ನ ಸುತ್ತಲಿನ ಸಮಾಜದ ಎಲ್ಲ ವ್ಯತ್ಯಯಗಳನ್ನೂ ಒಡಲಲ್ಲಿರಿಸಿಕೊಂಡು, ಎಲ್ಲ ಹರುಷ, ದುಃಖ, ದುಮ್ಮಾನಗಳನ್ನೂ ನುಂಗಿಕೊಳ್ಳುತ್ತಾ, ತಾನು ಪೊರೆಯುವ ಮನುಕುಲವನ್ನು ಸಹನಶೀಲತೆಯಿಂದ ಪೋಷಿಸಿಕೊಂಡೇ ಬರುವ ತಾಯಿ ಸ್ವರೂಪದ ನಿಸರ್ಗವನ್ನು ಅಷ್ಟೇ ಸಹಿಷ್ಣುತೆಯೊಂದಿಗೆ, ಸಂವೇದನೆಯೊಂದಿಗೆ ಅದರ ಎಲ್ಲ ವೈವಿಧ್ಯತೆಗಳನ್ನೂ ಮೇಳೈಸಿಕೊಂಡು ಸಮಾಜದ ಮುಂದೆ ಪ್ರಸ್ತುತಪಡಿಸುವ ಒಂದು ವೇದಿಕೆ ರಂಗಭೂಮಿ. ತಾಯಿ ಎಂಬ ಮೂರ್ತ ಪರಿಕಲ್ಪನೆಯನ್ನು ನಾಟಕೋತ್ಸವದ ವಸ್ತುವನ್ನಾಗಿಸುವ ಮೂಲಕ ಅಮೂರ್ತತೆಯತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ರಂಗಭೂಮಿ ತನ್ನ ಎಲ್ಲಾ ಅಭಿವ್ಯಕ್ತಿ ಸಾಧನಗಳನ್ನೂ ಬಳಸಿಕೊಳ್ಳುತ್ತಾ ಸಾಗುತ್ತದೆ.  ತಾಯ ಸ್ವರೂಪದ ನಿಸರ್ಗ ತನ್ನ ಒಡಲಿನಲ್ಲಿರುವ ವಿಷಬೀಜಗಳನ್ನೂ ಅರಗಿಸಿಕೊಳ್ಳುತ್ತಾ, ಮನುಕುಲದ ಒಳಿತಿಗಾಗಿ ಹಸಿರ ಸಂಪತ್ತನ್ನು, ಜಲ ಸಂಪನ್ಮೂಲಗಳನ್ನು ಮತ್ತು ಖನಿಜ ಸಂಪತ್ತನ್ನೂ ಒದಗಿಸುತ್ತಾ ಹೋಗುವಂತೆಯೇ, ರಂಗಭೂಮಿ ತಾನು ಪ್ರತಿನಿಧಿಸುವ ಸಾಮಾಜಿಕ-ಸಾಂಸ್ಕೃತಿಕ ವೈರುಧ್ಯಗಳನ್ನು ಮತ್ತು ತರತಮಗಳನ್ನು ಅರಗಿಸಿಕೊಂಡು, ಒಂದು ಕಲಾಭಿವ್ಯಕ್ತಿಯಾಗಿ ಜನಸಾಮಾನ್ಯರ ಮುಂದೆ ವಿಭಿನ್ನ ಲೋಕವನ್ನು ತೆರೆದಿಡುತ್ತದೆ. ಹಾಗಾಗಿಯೇ ರಂಗಭೂಮಿ ಶತಮಾನಗಳಿಂದಲೂ ತನ್ನ ಶ್ರೇಷ್ಠತೆಯನ್ನು ಉಳಿಸಿಕೊಂಡುಬಂದಿದೆ.

ಭಾರತದ ಈ ಹೊತ್ತಿನ ಸಂದರ್ಭದಲ್ಲಿ ಒಂದು ನಾಟಕೋತ್ಸವದ ಮೂಲ ವಸ್ತುವಾಗಿ ‘ ತಾಯಿ ’ ಯಾವ ರೂಪವನ್ನು ಪಡೆದುಕೊಳ್ಳಲು ಸಾಧ್ಯ ? ಅಮೂರ್ತ ನೆಲೆಯಲ್ಲಿ ಪರಿಭಾವಿಸಲಾಗುವ ತಾಯಿಯ ಪಾತ್ರವನ್ನು ಕಣ್ಣೆದುರಿನ ವಾಸ್ತವ ಜಗತ್ತಿನ ಯಾವ ಸ್ವರೂಪದಲ್ಲಿ ಪ್ರಸ್ತುತಪಡಿಸಲು ಸಾಧ್ಯವಾಗಬಹುದು ? ಭಾವುಕ ನೆಲೆಯಲ್ಲಿ ನೋಡುವುದಾದರೆ, ಮಾಳವಿಕಾ ಅವಿನಾಶ್ ಹೇಳಿದಂತೆ ಭಾರತಾಂಭೆ, ಚಾಮುಂಡೇಶ್ವರಿ ಇತ್ಯಾದಿಗಳು ಜನಾಕರ್ಷಣೆ ಪಡೆಯುತ್ತವೆ. ಆದರೆ ಇಂದಿನ ಭಾರತವನ್ನು ನಾವು ತಾಯಿಯ ರೂಪದಲ್ಲಿ ನೋಡುವಾಗ, ಈ ತಾಯಿಯ ಒಡಲನ್ನು, ಒಂದು ನಾಗರಿಕ ಸಮಾಜವಾಗಿ ಹೇಗೆ ಪೋಷಿಸುತ್ತಿದ್ದೇವೆ ಎಂದು ಪರಾಮರ್ಶಿಸಬೇಕಾಗುತ್ತದೆ.

“ ನಾಗರಿಕ ಸಮಾಜದ ಸಂದೇಶ,,,,,”ವನ್ನು ರಂಗಪ್ರಯೋಗಗಳ ಮೂಲಕ ನೀಡುವುದು ಒಂದು ಅಭಿವ್ಯಕ್ತಿಯ ಸ್ವರೂಪವಷ್ಟೇ. ಆದರೆ ಈ ಅಭಿವ್ಯಕ್ತಿಯ ಆಯಾಮಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ತಾಯಿ ತನ್ನ ಅಮೂರ್ತತೆಯನ್ನೂ ಕಳೆದುಕೊಂಡಂತೆ ಭಾಸವಾಗುವುದಿಲ್ಲವೇ ? ಶತಮಾನಗಳಿಂದ ಪೋಷಿಸಿಕೊಂಡು ಬರಲಾಗುತ್ತಿರುವ ಅಸ್ಪೃಶ್ಯತೆ ಮತ್ತು ತಾರತಮ್ಯಗಳನ್ನು ಇಂದಿಗೂ ಸಹ, ಮತೀಯ ನೆಲೆಯಲ್ಲಿ, ಜಾತಿ ಶ್ರೇಷ್ಠತೆಯ ನೆಲೆಯಲ್ಲಿ ಸಮರ್ಥಿಸಿಕೊಂಡು ಬರುತ್ತಿರುವ ಭಾರತೀಯ ಸಮಾಜಕ್ಕೆ ನಾಗರಿಕತೆಯ ಸ್ಪರ್ಶ ಅತ್ಯಗತ್ಯವಾಗಿದೆ ಎಂದೆನಿಸುವುದಿಲ್ಲವೇ ? ಜಾತಿ, ಮತ, ಧರ್ಮ, ಭಾಷೆ ಮತ್ತು ಪ್ರಾದೇಶಿಕ ಅಸ್ಮಿತೆಗಳಿಗೆ ಭಾವನಾತ್ಮಕ ಸ್ಪರ್ಶ ನೀಡುವ ಮೂಲಕ ಜನಸಮುದಾಯಗಳ ನಡುವೆ ಶಾಶ್ವತವಾದ ಗೋಡೆಗಳನ್ನು ನಿರ್ಮಿಸುತ್ತಿರುವ, ಸಮುದಾಯಗಳ ಸುತ್ತ ಮುಳ್ಳಿನ ಬೇಲಿಗಳನ್ನು ಕಟ್ಟುತ್ತಿರುವ ಒಂದು ವಿಕೃತ ಸಾಮಾಜಿಕ ವ್ಯವಸ್ಥೆಯನ್ನು ನಾವು ನೋಡುತ್ತಿದ್ದೇವೆ. ಭಾರತವನ್ನು                       ‘ ಭಾರತಾಂಬೆ ’ ಎಂಬ ತಾಯಿಯ ಸ್ವರೂಪದಲ್ಲಿ ನೋಡುವುದೇ ಆದರೆ, ಈ ಗೋಡೆ ಮತ್ತು ಬೇಲಿಗಳು ತಾಯೊಡಲನ್ನು ಸೀಳಿ ಛಿದ್ರಗೊಳಿಸುತ್ತಿದೆ ಎನಿಸುವುದಿಲ್ಲವೇ ?

ಈ ಛಿದ್ರಗೊಳಿಸುವ ವಿಚ್ಛಿದ್ರಕಾರಕ ಪ್ರಕ್ರಿಯೆಯ ವಿಭಿನ್ನ ಆಯಾಮಗಳನ್ನು ಹಾಗೂ ಇದರಿಂದ ಸೃಷ್ಟಿಯಾಗುವ ಸಾಂಸ್ಕೃತಿಕ-ಸಾಮಾಜಿಕ ವಿಕೃತಿಗಳನ್ನು ಕಲಾಭಿವ್ಯಕ್ತಿಯ ಮೂಲಕ ಅಭಿವ್ಯಕ್ತಗೊಳಿಸಿ, ಆಧುನಿಕ ಸಮಾಜಕ್ಕೆ ತನ್ನ ಆಂತರ್ಯದಲ್ಲಡಗಿರುವ ಬೌದ್ಧಿಕ ಮಾಲಿನ್ಯದ ಪರಿಚಯ ಮಾಡುವುದು ರಂಗಭೂಮಿಯ ಆದ್ಯತೆಯಾಗಬೇಕಿದೆ. ಸಾವನ್ನು ಸಂಭ್ರಮಿಸುವ, ಅತ್ಯಾಚಾರವನ್ನು ಸಮ್ಮತಿಸುವ, ದೌರ್ಜನ್ಯವನ್ನು ಸಾಂಘೀಕರಿಸುವ ಮತ್ತು ತಾರತಮ್ಯಗಳನ್ನು ಸಾರ್ವತ್ರೀಕರಿಸುವ ಒಂದು ವಿಕೃತ ಸಾಂಸ್ಕೃತಿಕ ರಾಜಕಾರಣವನ್ನು ಭಾರತ ತನ್ನ ಮೈಮೇಲೆ ಎಳೆದುಕೊಂಡಿದೆ. ಮತಶ್ರದ್ಧೆಯನ್ನು ಮತೀಯ ದ್ವೇಷವನ್ನಾಗಿ ಪರಿವರ್ತಿಸುವ, ಜಾತಿ ಪ್ರಜ್ಞೆಯನ್ನು ಜಾತಿ ಆಧಾರಿತ ದೌರ್ಜನ್ಯಕ್ಕೆ ಬಳಸುವ ಮೂಲಕ, ಜಾತಿ ಶ್ರೇಷ್ಠತೆಯ ಅಹಮಿಕೆಯನ್ನು ಪಾರಮ್ಯದ ಅಸ್ತ್ರವನ್ನಾಗಿ ಬಳಸುವ ಮೂಲಕ, ‘ತಾಯಿ’ ಎಂದು ಪರಿಭಾವಿಸಲಾಗುವ ಭಾರತಾಂಬೆಯ ಒಡಲನ್ನು ಅಡ್ಡಡ್ಡಲಾಗಿ ಸೀಳಲಾಗುತ್ತಿದೆ.

ಈ ವಿಷಮ ಸನ್ನಿವೇಶದಲ್ಲಿ, ರಂಗಭೂಮಿಯ ಒಂದು ನಾಟಕೋತ್ಸವದ ಸಂದರ್ಭದಲ್ಲಿ , ನಮ್ಮ ನಡುವಿನ ‘ ತಾಯಿ ’ ಹೀಗೆ ದುಃಖಿತಳಾಗಿ, ನೊಂದು ಬಸವಳಿದವಳಾಗಿ, ಶೋಷಿತಳಾಗಿ, ನಿರ್ಬಂಧಿತಳಾಗಿ ಕಾಣುತ್ತಾಳೆ. ಅಭಿವೃದ್ಧಿ ರಾಜಕಾರಣದ ಮುನ್ನಡೆಯಲ್ಲಿ, ಭೂಮಿಯ ಒಡಲಲ್ಲಿರುವ ಸಕಲ ಸಂಪತ್ತು, ಸಂಪನ್ಮೂಲಗಳನ್ನೂ ಮಾರುಕಟ್ಟೆಯ ಜಗುಲಿಯಲ್ಲಿ ಹರಾಜು ಹಾಕುತ್ತಾ, ನೆಲ-ಜಲ-ಅರಣ್ಯ ಸಂಪತ್ತನ್ನು ಮನುಷ್ಯ ಸಮಾಜದ ಲೋಲುಪತೆಗೆ, ಮಾರುಕಟ್ಟೆಯ ದಾಹ ನೀಗಿಸಲು ಬರಿದುಮಾಡುತ್ತಾ ಬರುತ್ತಿರುವ ‘ಆತ್ಮನಿರ್ಭರ’ ಭಾರತಕ್ಕೆ ನಾಗರಿಕ ಸಮಾಜದ ಸಂದೇಶವನ್ನು ನೀಡುವುದೇ ಆದರೆ, ಆಧುನಿಕ ಮಾರುಕಟ್ಟೆ ‘ ಭಾರತಾಂಬೆಗೆ ’ತೊಡಿಸಿರುವ ದಾಸ್ಯದ ಸಂಕೋಲೆಗಳನ್ನು ಕಿತ್ತೊಗೆಯುವ ಸಂಕಲ್ಪ ಮಾಡಬೇಕಿದೆ. ವಸಾಹತು ದಾಸ್ಯದಿಂದ ಮುಕ್ತವಾದರೂ, ಬಂಡವಾಳಶಾಹಿಯ ದಾಸ್ಯಕ್ಕೊಳಗಾಗಿ, ಸಂಪ್ರದಾಯ ಮತ್ತು ಪರಂಪರೆಯ ಹೆಸರಿನಲ್ಲಿ ಸಮಾಜವನ್ನು ಪ್ರಾಚೀನತೆಗೆ ಕರೆದೊಯ್ಯುತ್ತಿರುವ ಸಾಂಸ್ಕೃತಿಕ ರಾಜಕಾರಣವನ್ನು ಬುಡಸಮೇತ ಕಿತ್ತುಹಾಕಲು ಸಂಕಲ್ಪ ಮಾಡಬೇಕಿದೆ.

ತೊಟ್ಟಿಲಲ್ಲಿ ತನ್ನ ಒಡಲಕುಡಿಯನ್ನು ಮಲಗಿಸಿ ಲಾಲಿ ಹಾಡುತ್ತಾ ತೂಗುವ ತಾಯಿ ಒಂದು ಅಮೂರ್ತ ಕಲ್ಪನೆಯಾಗಿ ಭಾವನೆಗಳನ್ನು ಸ್ಫುರಿಸುತ್ತದೆ. ಭಾರತವನ್ನು ಈ ‘ ತಾಯಿಯ ’ ರೂಪದಲ್ಲಿ ಕಲ್ಪಿಸಿಕೊಂಡು ರಂಗಭೂಮಿಯನ್ನು ಪ್ರವೇಶಿಸುವಾಗ, ಒಡಲೊಳಗೆ ವ್ಯವಸ್ಥಿತವಾಗಿ ಬಿತ್ತಲಾಗುತ್ತಿರುವ ವಿಷಬೀಜಗಳು, ಬೆಳೆಯುತ್ತಿರುವ ವಿಷಜಂತುಗಳು ಮತ್ತು ಪೋಷಿಸಲ್ಪಡುತ್ತಿರುವ ವಿಷಜನಿತ ಸಂಸ್ಕೃತಿ ನಮ್ಮ ಕಣ್ಣೆದುರು ಇರಬೇಕಾಗುತ್ತದೆ. ಇಂದು ಭಾರತ ಈ ಸ್ಥಿತಿಯಲ್ಲಿದೆ. ತಮ್ಮ ಹುಟ್ಟಿನ ತಪ್ಪಿಗಾಗಿಯೇ ಅಪಮಾನಗಳನ್ನೆದುರಿಸುವ ಅಸ್ಪೃಶ್ಯ ಸಮುದಾಯ, ತನ್ನ ಲಿಂಗತ್ವದ ಕಾರಣಕ್ಕಾಗಿಯೇ ದೌರ್ಜನ್ಯಗಳನ್ನೆದುರಿಸುವ ಮಹಿಳಾ ಸಂಕುಲ, ಮತದ್ವೇಷ ಮತ್ತು ಜಾತಿ ದ್ವೇಷದ ಹಿಂಸೆಯನ್ನೆದುರಿಸುತ್ತಿರುವ ಸಮುದಾಯಗಳು, ಈ ವಿಷಾನಿಲದ ದುಷ್ಪರಿಣಾಮಗಳನ್ನು ಇಂದಿಗೂ ಎದುರಿಸುತ್ತಿರುವುದನ್ನು ರಂಗಭೂಮಿ ತನ್ನದೇ ಆದ ಕಲಾಭಿವ್ಯಕ್ತಿಯ ಮೂಸೆಯಲ್ಲಿ ಕಂಡುಕೊಳ್ಳಬೇಕಾಗುತ್ತದೆ.

ರಂಗಭೂಮಿ ಎನ್ನುವ ಒಂದು ಬೃಹತ್ ಕ್ಯಾನ್ವಾಸ್‍ನಲ್ಲಿ ಈ ಸುಡುವಾಸ್ತವಗಳನ್ನು ಗ್ರಹಿಸುವುದು ಸಾಧ್ಯವಾದಲ್ಲಿ ಈ ಬಾರಿಯ ಬಹುರೂಪಿಗೆ ‘ ತಾಯಿ ’ ವಸ್ತುವನ್ನು ಆಯ್ಕೆ ಮಾಡಿರುವುದೂ ಸಾರ್ಥಕವಾದೀತು.

Tags: ತಾಯಿಯೂ ತಾಯಿಬಹುರೂಪವೂಬಹುರೂಪಿಬಹುರೂಪಿ ನಾಟಕೋತ್ಸವ
Previous Post

ಹಿಜಾಬ್‌ ವಿವಾದ | ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಕೆ

Next Post

ಮಾರ್ಚ್ 17ಕ್ಕೆ ಅಪ್ಪು ಹುಟ್ಟುಹಬ್ಬ : ಡಾ. ಪುನೀತ್ ರಾಜ್ಕುಮಾರ್ ಕುರಿತು ಅಂಗರಕ್ಷಕ ಚಲಪತಿ ಮನದಾಳದ ಮಾತುಗಳು

Related Posts

Top Story

ಸಿಬಿಎಸ್‌ಇ 2025: 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

by ಪ್ರತಿಧ್ವನಿ
January 12, 2025
0

ಕೇಂದ್ರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) 2025ನೇ ಸಾಲಿನ 10ನೇ ಮತ್ತು 12ನೇ ತರಗತಿಯ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಪ್ರಕಾರ, ಪರೀಕ್ಷೆಗಳು ಫೆಬ್ರವರಿ 15,...

Read moreDetails

ಹಿರಿಯ ಸಾಹಿತಿ ನಾಡೋಜಾ ನಾ. ಡಿಸೋಜಾ ನಿಧನ..

January 6, 2025

ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ .

December 31, 2024

Central Govt: ಕೇಂದ್ರ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ.. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ..!!

December 6, 2024

ಉಪೇಂದ್ರ ನಿರ್ದೇಶಿಸಿ, ನಟಿಸಿರುವ “UI” ಚಿತ್ರ ಡಿಸೆಂಬರ್ 20 ರಂದು ಬಿಡುಗಡೆ..

December 3, 2024
Next Post
ಮಾರ್ಚ್ 17ಕ್ಕೆ ಅಪ್ಪು ಹುಟ್ಟುಹಬ್ಬ : ಡಾ. ಪುನೀತ್ ರಾಜ್ಕುಮಾರ್ ಕುರಿತು ಅಂಗರಕ್ಷಕ ಚಲಪತಿ ಮನದಾಳದ ಮಾತುಗಳು

ಮಾರ್ಚ್ 17ಕ್ಕೆ ಅಪ್ಪು ಹುಟ್ಟುಹಬ್ಬ : ಡಾ. ಪುನೀತ್ ರಾಜ್ಕುಮಾರ್ ಕುರಿತು ಅಂಗರಕ್ಷಕ ಚಲಪತಿ ಮನದಾಳದ ಮಾತುಗಳು

Please login to join discussion

Recent News

ಇಷ್ಟು ವರ್ಷಗಳು ಪತ್ರಿಕೆ ನಡೆಸುವುದು ಅಂದರೆ ಸಾಮಾನ್ಯ ಮಾತಲ್ಲ.
Top Story

ಇಷ್ಟು ವರ್ಷಗಳು ಪತ್ರಿಕೆ ನಡೆಸುವುದು ಅಂದರೆ ಸಾಮಾನ್ಯ ಮಾತಲ್ಲ.

by ಪ್ರತಿಧ್ವನಿ
July 2, 2025
ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ
Top Story

ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ

by ಪ್ರತಿಧ್ವನಿ
July 1, 2025
ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌
Top Story

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

by ಪ್ರತಿಧ್ವನಿ
July 1, 2025
ಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದುಬಿಟ್ಟ.. ಅವನನ್ನು ಸೋನಿಯಾಗೆ ಭೇಟಿ ಮಾಡಿದಿದ್ದೇ ನಾನು : ಬಿ.ಆರ್ ಪಾಟೀಲ್ 
Top Story

ಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದುಬಿಟ್ಟ.. ಅವನನ್ನು ಸೋನಿಯಾಗೆ ಭೇಟಿ ಮಾಡಿದಿದ್ದೇ ನಾನು : ಬಿ.ಆರ್ ಪಾಟೀಲ್ 

by Chetan
July 1, 2025
ಸ್ಮಾರ್ಟ್‌ ಸಿಟಿ ಎಂಬ ಕನಸು ಮತ್ತು ವಾಸ್ತವ
Top Story

ಸ್ಮಾರ್ಟ್‌ ಸಿಟಿ ಎಂಬ ಕನಸು ಮತ್ತು ವಾಸ್ತವ

by ನಾ ದಿವಾಕರ
July 1, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಇಷ್ಟು ವರ್ಷಗಳು ಪತ್ರಿಕೆ ನಡೆಸುವುದು ಅಂದರೆ ಸಾಮಾನ್ಯ ಮಾತಲ್ಲ.

ಇಷ್ಟು ವರ್ಷಗಳು ಪತ್ರಿಕೆ ನಡೆಸುವುದು ಅಂದರೆ ಸಾಮಾನ್ಯ ಮಾತಲ್ಲ.

July 2, 2025
ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ

ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ

July 1, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada