‘ರಾಜ್ಯದ ಮುಖ್ಯವಾಹಿನಿ ಸಮಾಜಮುಖಿ ರಾಜಕೀಯ ಪಕ್ಷಗಳಿಗೆ ಆರ್‌ಎಸ್‌ಎಸ್ ಶೈಲಿಯ ಸಾಂಸ್ಥಿಕ ರಚನೆಯ ತಳಪಾಯ ಹಾಗೂ ರಾಜಕೀಯ ಪ್ರಜ್ಞೆ ಅತ್ಯಗತ್ಯ’ ಎಂದು ಕನ್ನಡದ ಸಾಕ್ಷಿಪ್ರಜ್ಞೆ, ಲೇಖಕ ದೇವನೂರ ಮಹಾದೇವ ಹೇಳಿದ್ದಾರೆ.
ಮೈಸೂರಿನಲ್ಲಿ ಮಂಗಳವಾರ ನಡೆದ ಪ್ರೊ.ಮಧುದಂಡವತೆ ಶತಮಾನೋತ್ಸವ ಪ್ರಯುಕ್ತ ‘ಮುಕ್ತ ಮತದಾನ– ಸಮರ್ಥ ಸರ್ಕಾರ’ – ಜನತಂತ್ರದ ‘ನೈಜ ಹಕ್ಕುದಾರರ ಧ್ವನಿ ಹಿಡಿದಿಡುವ ಡಯಗ್ನಾಸ್ಟಿಕ್ ವರದಿ’ಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಸಮಾಜಮುಖಿ ರಾಜಕೀಯ ಪಕ್ಷಗಳ ಸಾಂಸ್ಥಿಕ ರಚನೆ ಗಟ್ಟಿಯಿದ್ದರೂ ರಾಜಕೀಯ ಪ್ರಜ್ಞೆಯ ಕೊರತೆಯಿಂದಾಗಿ ಯಾವುದೇ ಅಲೆ ಎಬ್ಬಿಸುತ್ತಿಲ್ಲ. ತನ್ನ ರಾಜಕೀಯ (ಬಿಜೆಪಿಯ) ಪಕ್ಷದ ಗೆಲುವಿನಲ್ಲೇ ತನ್ನ ಅಳಿವು– ಉಳಿವು ಎಂದು ಸಂಘ ಪರಿವಾರವು ಕಾರ್ಯನಿರ್ವಹಿಸುವಂತೆ ಸಮಾಜಮುಖಿ ಪಕ್ಷಗಳ ಸಾಂಸ್ಥಿಕ ಸಂಘಟನೆಗಳು ವರ್ತಿಸುತ್ತಿಲ್ಲ’ ಎಂದು ಹೇಳಿದ್ದಾರೆ.
ಬೆಂಗಳೂರಿನ ಸಮಾಜವೇದಿಕೆ, ದೆಹಲಿಯ ಜನತಾಂತ್ರಿಕ ಸಮಾಜವಾದ ಸಂಘಟನೆ ಸಿದ್ಧಪಡಿಸಿದ ವರದಿಯನ್ನು ಹಿತ್ತಲಗಿಡ ಪ್ರಕಾಶನ ಪ್ರಕಟಿಸಿದ್ದು, ಬಿಜೆಪಿಗೆ ಆರ್‌ಎಸ್‌ಎಸ್ ಎಂಬ ಗಟ್ಟಿ ಸಾಂಸ್ಥಿಕ ತಳಪಾಯವಿರುವುದರ ಬಗ್ಗೆ ವರದಿಯಲ್ಲಿ ಪರಾಮರ್ಶಿಸಲಾಗಿದೆ ಎಂದು ದೇವನೂರು ಹೇಳಿದ್ದಾರೆ.

ತಳಮಟ್ಟದವರೆಗೂ ಬೇರೂರಿರುವ ಪ್ರಗತಿಪರ ಸಂಘಟನೆಗಳು, ಸಂಘ– ಸಂಸ್ಥೆಗಳು ಹೊಸ ರಾಜಕೀಯ ಪ್ರಯೋಗಕ್ಕೆ ಈ ರೀತಿಯ ಸಾಂಸ್ಥಿಕ ರಚನೆಯನ್ನು ಒದಗಿಸಬಹುದು. ಆಮ್ ಆದ್ಮಿ ಪಕ್ಷವು ಅಲೆ ಎಬ್ಬಿಸುತ್ತಿದ್ದರೂ ಇತರ ಸಮಾನ ಪಕ್ಷಗಳೊಂದಿಗೆ ಕೈಜೋಡಿಸದೆ ಒಂಟಿಯಾಗಿರುವುದೇ ನಿರೀಕ್ಷಿತ ಫಲಿತಾಂಶ ನೀಡದಿರಲು ಕಾರಣ ಎಂಬುದನ್ನು ವರದಿ ಗುರುತಿಸಿದೆ’ ಎಂದು ಹೇಳಿದ್ದಾರೆ.
‘ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಇದುವರೆಗೂ ಆಳ್ವಿಕೆ ಸಂಸಾರ ನಡೆಸಿವೆ. ಅವುಗಳನ್ನು ಬಿಟ್ಟು ಆಳ್ವಿಕೆ ಸಂಸಾರ ಮಾಡದಿರುವ ನವಪಕ್ಷಗಳ ಕಡೆಗೆ ಶೇ 46ರಷ್ಟು ಮತದಾರರು ಒಲವು ತೋರಿದ್ದಾರೆ’ ಎಂದರು.
ಚುನಾವಣೆ ಹತ್ತಿರವಾಗುತ್ತಿರುವಂತೆ ರಾಜ್ಯದಲ್ಲಿ ಮೋದಿ, ಅಮಿತ್ ಶಾ ಹೆಚ್ಚು ಓಡಾಡುತ್ತಿದ್ದಾರೆ. ಹೀಗಾಗಿ ಇಲ್ಲಿ ಕಸಿಪದ ‘ಮೊದಾನಿ’ ಚಲಾವಣೆಯಲ್ಲಿದೆ. ಮೋದಿ, ಅದಾನಿ ಸೇರಿದ ಒಂದೇ ಪದ, ಒಂದೇ ಹೆಸರು ಇದು. ಅಧಿಕಾರ ಮತ್ತು ಕುರುಡು ಕಾಂಚಾಣ ಸೇರಿ ಒಂದೇ ಪದವಾಗಿದೆ, ಉಳಿಗಾಲವಿಲ್ಲ’ ಎಂದು ದೇವನೂರ ಮಹಾದೇವ ಹೇಳಿದರು.


