ಕಾಂಗ್ರೆಸ್ ನಾಯಕರು ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಮೂರು ದಿನಗಳ ಹಿಂದೆ ಮೇಕೆದಾಟುವಿನಿಂದ ಆರಂಭಿಸಿರುವ ಪಾದಯಾತ್ರೆ, ಕೆಪಿಸಿಸಿ ಅಧ್ಯಕ್ಷರ ತವರು ಕನಕಪುರಕ್ಕೆ ತಲುಪುವ ಹೊತ್ತಿಗಾಗಲೇ ರಾಜ್ಯ ರಾಜಕಾರಣದ ಹರಿವಿಗೆ ತಿರುವು ನೀಡುವ ಸೂಚನೆಗಳನ್ನು ಈಗಾಗಲೇ ನೀಡಿದೆ.
ಕಾಂಗ್ರೆಸ್ ಪಕ್ಷದ ಹಿಂದಿನ ಸರ್ಕಾರ, ಕೆಪಿಸಿಸಿ ಅಧ್ಯಕ್ಷ ಮತ್ತು ಮೇಕೆದಾಟು ಪಾದಯಾತ್ರೆ ರೂವಾರಿ ಡಿ ಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ಬಿಜೆಪಿ ನಾಯಕರು ನಡೆಸಿದ ನಿರಂತರ ವಾಗ್ದಾಳಿ ಮತ್ತು ಪಾದಯಾತ್ರೆಯಿಂದ ಹಿಂದೆ ಸರಿಯುವಂತೆ ಮಾಡಲು ಆಡಳಿತ ಸರ್ಕಾರ ನಡೆಸಿದ ಪ್ರಯತ್ನಗಳ ಹೊರತಾಗಿಯೂ ನಿಗದಿಯಂತೆ ಪಾದಯಾತ್ರೆ ಆರಂಭವಾಯಿತು.
ಅದರಲ್ಲೂ ಬಿಜೆಪಿಯ ಡಬ್ಬಲ್ ಎಂಜಿನ್ ಸರ್ಕಾರವಿದ್ದರೂ ಯೋಜನೆಗೆ ಕೇಂದ್ರದ ಅನುಮೋದನೆ ಪಡೆದು ಕಾಮಗಾರಿ ಆರಂಭಿಸಿಲ್ಲ. ಅದು ಬಿಜೆಪಿಯ ಜನದ್ರೋಹಿ ನಡೆಗೆ ನಿದರ್ಶನ ಎಂಬುದನ್ನು ಯಾತ್ರೆಯ ಉದ್ದಕ್ಕೂ ಕಾಂಗ್ರೆಸ್ ನಾಯಕರು ಹೇಳುವ ಮೂಲಕ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಇದು ಸಹಜವಾಗೇ ಬಿಜೆಪಿ ಪಾಳೆಯದಲ್ಲಿ ಭಾರೀ ಮುಜುಗರಕ್ಕೆ ಕಾರಣವಾಗಿದೆ.
ಈ ನಡುವೆ, ಮೇಕೆದಾಟು ಯೋಜನೆ ಫಲಾನುಭವಿ ಕ್ಷೇತ್ರಗಳಾದ ರಾಜ್ಯದ ಅಧಿಕಾರ ಹಿಡಿಯಲು ತೀರಾ ನಿರ್ಣಾಯಕವಾಗಿರುವ ಬೆಂಗಳೂರು ಮತ್ತು ಸುತ್ತಮುತ್ತಲ ಹಳೇ ಮೈಸೂರು ಭಾಗದ ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ಸಿನ ಈ ಪಾದಯಾತ್ರೆ ಎಬ್ಬಿಸಿರುವ ಹವಾ ಬಿಜೆಪಿಯ ಕೇಂದ್ರ ನಾಯಕರ ಗಮನಕ್ಕೂ ಹೋಗಿದೆ. ಅವರು ರಾಜ್ಯದ ನಾಯಕರಿಗೆ, ಅಧಿಕಾರ ಕೈಯಲ್ಲಿದ್ದು, ಕೋವಿಡ್ ನಿರ್ಬಂಧಗಳ ಅಸ್ತ್ರವಿದ್ದೂ ತಮಗೆ ರಾಜಕೀಯವಾಗಿ ದುಬಾರಿಯಾಗಲಿರುವ ಈ ಯಾತ್ರೆ ತಡೆಯಲಾಗದ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗುತ್ತಿದೆ.
“ಯೋಜನೆಯ ವಿಷಯದಲ್ಲಿ ಕಾಂಗ್ರೆಸ್ ನಾಯಕರು ಪಾದಯಾತ್ರೆ ಯೋಜಿಸಿದ ಆರಂಭದಿಂದಲೂ ಬಿಜೆಪಿ ನಾಯಕರು ಅದಕ್ಕೆ ಸಮರ್ಥ ಪ್ರತ್ಯುತ್ತರ ನೀಡುವ, ಯೋಜನೆಯ ವಿಷಯದಲ್ಲಿ ಕಾಂಗ್ರೆಸ್ ವೈಫಲ್ಯಗಳನ್ನು ಎತ್ತಿ ತೋರಿಸುವ ವಿಷಯದಲ್ಲಿ ಬಿಜೆಪಿ ರಾಜ್ಯ ನಾಯಕರು ಎಡವಿದ್ಧಾರೆ. ರಾಜಕೀಯವಾಗಿ ಕಾಂಗ್ರೆಸ್ ಉರುಳಿಸಿದ ಪ್ರಬಲ ದಾಳಕ್ಕೆ ಪ್ರತಿದಾಳ ಉರುಳಿಸುವಲ್ಲಿ ಬಿಜೆಪಿ ನಾಯಕರು ಸಂಪೂರ್ಣ ಎಡವಿದ್ದಾರೆ. ಇಂತಹದ್ದನ್ನು ರಾಜ್ಯ ನಾಯಕರಿಂದ ನಿರೀಕ್ಷಿಸಿರಲಿಲ್ಲ” ಎಂಬ ಸಂದೇಶವನ್ನು ದೆಹಲಿಯಿಂದ ಬಿಜೆಪಿ ವರಿಷ್ಠರು ರವಾನಿಸಿದ್ದಾರೆ. ಆ ಹಿನ್ನೆಲೆಯಲ್ಲಿಯೇ ಸಿ ಟಿ ರವಿ, ಗೋವಿಂದ ಕಾರಜೋಳ, ಕೆ ಎಸ್ ಈಶ್ವರಪ್ಪ ಮತ್ತಿತರ ನಾಯಕರು ಪಾದಯಾತ್ರೆ ಆರಂಭದ ಮಾರನೇ ದಿನದಿಂದ ಕಾಂಗ್ರೆಸ್ ನಾಯಕರ ವಿರುದ್ಧ ಗಟ್ಟಿ ದನಿ ಎತ್ತಿದ್ದಾರೆ ಎಂಬುದು ಬಿಜೆಪಿ ಪಡಸಾಲೆಯಲ್ಲೇ ಕೇಳಿಬರುತ್ತಿರುವ ಮಾತು.

ಈ ನಡುವೆ, ಕಾಂಗ್ರೆಸ್ಸಿನ ಪಾದಯಾತ್ರೆಯ ದಾಳಕ್ಕೆ ಪ್ರತ್ಯುತ್ತರ ನೀಡಲೇಬೇಕಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಆರ್ ಅಶೋಕ್, ಸಚಿವ ಮಾಧುಸ್ವಾಮಿ, ಡಾ ಸುಧಾಕರ್, ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲು ಮತ್ತಿತರರು ಕೋವಿಡ್ ಕಾರಣದಿಂದ ಕ್ವಾರಂಟೈನ್ ಆಗಿದ್ದಾರೆ. ಸಿಎಂ ಸೇರಿದಂತೆ ಅವರ ಸಂಪುಟದ ಪ್ರಮುಖರು ಮತ್ತು ಮುಖ್ಯವಾಗಿ ಪಾದಯಾತ್ರೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಿರುದ್ಧ ಹೇಳಿಕೆಗಳನ್ನು ನೀಡಬೇಕಿದ್ದ ಬೆಂಗಳೂರು ಮತ್ತು ಹಳೇ ಮೈಸೂರು ಭಾಗದ ಪ್ರಮುಖ ನಾಯಕರೇ ಹೀಗೆ ಒಂದೆರಡು ದಿನಗಳ ಅಂತರದಲ್ಲಿ ದಿಢೀರನೇ ಕ್ವಾರಂಟೈನ್ ಹೆಸರಲ್ಲಿ ತೆರೆಮರೆಗೆ ಸರಿದಿರುವುದು ಕೂಡ ಕುತೂಹಲ ಹುಟ್ಟಿಸಿದೆ.
ಗಮನಿಸಬೇಕಾದ ಸಂಗತಿ ಎಂದರೆ; ಆರ್ ಅಶೋಕ್, ಡಾ ಸುಧಾಕರ್, ಬೊಮ್ಮಾಯಿ ಅಂತಹ ನಾಯಕರು ಕ್ವಾರಂಟೈನ್ ಹೆಸರಲ್ಲಿ ಮೌನಕ್ಕೆ ಶರಣಾಗಿರುವ ಹೊತ್ತಲ್ಲಿ ಬೆಂಗಳೂರಿನ ಮತ್ತೊಬ್ಬ ಒಕ್ಕಲಿಗ ನಾಯಕರಾದ ಸಚಿವ ಅಶ್ವಥನಾರಾಯಣ ಕನಕಪುರ, ರಾಮನಗರಗಳಂತಹ ಡಿಕೆ ಶಿ ಸಹೋದರರ ಕೋಟೆಗೇ ನುಗ್ಗಿ ಗುಟುರು ಹಾಕುತ್ತಿದ್ದಾರೆ! ಇದು ಸ್ವತಃ ಅಶ್ವಥನಾರಾಯಣ ಅವರ ರಾಜಕೀಯ ಅಸ್ತಿತ್ವದ ಪ್ರಶ್ನೆಯ ಗುಟುರೋ, ಅಥವಾ ಪಕ್ಷದ ಹೈಕಮಾಂಡ್ ತಾಕೀತಿನ ಮೇಲೆ ಗಂಟಲ ಮೇಲಿಂದ ಮಾತ್ರ ಬರುತ್ತಿರುವ ಹೂಂಕಾರವೋ ಎಂಬುದು ಇನ್ನಷ್ಟೇ ಖಾತರಿಯಾಗಬೇಕಿದೆ!
ಸದ್ಯಕ್ಕಂತೂ ʼಅತಿರಥ ಮಹಾರಥರೆಲ್ಲಾ ಮೌನಕ್ಕೆ ಜಾರಿರುವಾಗ, ಕ್ವಾರಂಟೈನ್ ಆಗಿ ಬದಿಗೆ ಸರಿದಿರುವಾಗ ಅಶ್ವಥ ನಾರಾಯಣ್ ಅವರು ಡಿಕೆಶಿ ಸಹೋದರರ ಚಕ್ರವ್ಯೂಹದಲ್ಲಿ ನುಗ್ಗಿದ ಅಭಿಮನ್ಯುವಿನಂತೆ ಕಾಣಿಸುತ್ತಿದ್ದಾರೆ. ಕಾದು ನೋಡೋಣ.. ಮುಂದೇನಾಗುತ್ತೋ ಮಹಾಭಾರತʼ ಎಂಬುದು ಬಿಜೆಪಿಯ ಅಂತರರಂಗದ ಪಿಸುಮಾತು!