ಯಾವುದೇ ಒಂದು ಮಾರಣಾಂತಿಕ ಸಾಂಕ್ರಾಮಿಕ ಮನುಕುಲವನ್ನು ಅಪ್ಪಳಿಸಿದಾಗ ಅದು ಬದುಕುಳಿದವರ ನಡುವೆ ಬಿಟ್ಟು ಹೋಗುವ ಹೆಜ್ಜೆ ಗುರುತುಗಳಿಗೆ ಇತಿಹಾಸವೇ ಸಾಕ್ಷಿಯಾಗಿ ನಿಲ್ಲುತ್ತದೆ. ಅಳಿದವರು ಗತಕಾಲದ ಭೀಕರತೆಯ ಕತೆ ಹೇಳುತ್ತಿರುವಂತೆ ನಮಗೆ ಭಾಸವಾಗುತ್ತದೆ. ಭಾರತದಲ್ಲಿ ಇಂದು ಕಾಡುತ್ತಿರುವ ಸಾಂಕ್ರಾಮಿಕವು ಮರೆಯಾದ ನಂತರದಲ್ಲಷ್ಟೇ ನಮಗೆ ಇಂದಿನ ವಾಸ್ತವತೆಗಳು ಎದುರಾಗುತ್ತವೆ. ಆದಾಗ್ಯೂ ಈ ಸುನಾಮಿಯಂತಹ ಪರಿಸ್ಥಿತಿಯ ನಡುವೆಯೂ ಪ್ರಸ್ತುತ ಸಂದರ್ಭದಲ್ಲಿ ಗಮನಿಸಬಹುದಾದ ಕೆಲವು ನೀತಿಗಳನ್ನು ಅನುಸರಿಸಿದ್ದಲ್ಲಿ ಬಹುಶಃ ಇಂದು ಕಾಣುತ್ತಿರುವ ಹಾನಿಯ ಪ್ರಮಾಣವನ್ನು ತಗ್ಗಿಸಬಹುದಿತ್ತು ಎಂಬ ಭಾವನೆ ಮೂಡಿದರೆ ಅಚ್ಚರಿಯೇನಿಲ್ಲ.
ಆರೋಗ್ಯ ಪಾಲನೆ ಮುಖ್ಯ ರಕ್ಷಣೆಯಲ್ಲ
ಮೊದಲನೆಯದಾಗಿ ನಾವು ಸಾರ್ವತ್ರಿಕ ಆರೋಗ್ಯ ಪಾಲನೆ ಮತ್ತು ಸಾರ್ವತ್ರಿಕ ಆರೋಗ್ಯ ರಕ್ಷಣೆ ಇವೆರಡರ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಬೇಕಿದೆ. 1946ರಲ್ಲಿ ಬ್ರಿಟನ್ನಿನಲ್ಲಿ ಅನೂರಿನ್ ಬೇವನ್ ನೇತೃತ್ವದಲ್ಲಿ ಜಾರಿಗೊಳಿಸಲಾದ ಸಾರ್ವತ್ರಿಕ ಆರೋಗ್ಯ ಸೇವೆ ಕಾಯ್ದೆಯ ನಂತರ ಬ್ರಿಟನ್ನಿನಲ್ಲಿ ಆರೋಗ್ಯ ಪಾಲನೆಯನ್ನು ವ್ಯಕ್ತಿಯ ಆದಾಯದಿಂದ ಮುಕ್ತಗೊಳಿಸುವ ಕ್ರಾಂತಿಕಾರಿ ಹೆಜ್ಜೆಯನ್ನು ಕಾಣಬಹುದಾಗಿತ್ತು. ಸಾರ್ವತ್ರಿಕ ಆರೋಗ್ಯ ಪಾಲನೆಯನ್ನು ಮಾರುಕಟ್ಟೆ ಶಕ್ತಿಗಳಿಗೆ ವಹಿಸಕೂಡದು ಎನ್ನುವ ಒಂದು ಪರಿಕಲ್ಪನೆಗೆ ಈ ಕಾಯ್ದೆ ಉತ್ತೇಜನ ಮತ್ತು ಚಾಲನೆ ನೀಡಿತ್ತು.
ಸ್ವತಂತ್ರ ಭಾರತದಲ್ಲಿ ಈ ಹೊತ್ತಿನವರೆಗೆ ಕೇಂದ್ರ ಸರ್ಕಾರದ ವತಿಯಿಂದ ಸಿದ್ಧಪಡಿಸಿರುವ ಸಮಗ್ರ ವರದಿ ಎಂದರೆ ಯೋಜನಾ ಆಯೋಗವು 2011ರಲ್ಲಿ ರಚಿಸಿದ್ದ ಉನ್ನತ ಮಟ್ಟದ ತಜ್ಞರ ಸಮಿತಿ ನವೆಂಬರ್ 2011ರಲ್ಲಿ ಸಲ್ಲಿಸಿದ್ದ ವರದಿ. ಈ ವರದಿಯಲ್ಲಿ “ ಸಾರ್ವಜನಿಕ ಸೌಕರ್ಯಗಳ ಕ್ರಮೇಣ ಸಬಲೀಕರಣದ ” ಮೂಲಕ ಮಾತ್ರವೇ ಇಡೀ ಜನಸಂಖ್ಯೆಗೆ ವೈದ್ಯಕೀಯ ಸೌಲಭ್ಯಗಳನ್ನು ತಲುಪಿಸಲು ಸಾಧ್ಯ ಎಂದು ಹೇಳಲಾಗಿತ್ತು. ಈ ನಿಟ್ಟಿನಲ್ಲಿ ಹಣಕಾಸು ಹೊಂದಿಸುವುದು ಒಂದು ಪ್ರಮುಖ ಸಮಸ್ಯೆಯಾಗಿ ಕಂಡಿತ್ತು. ಆದರೂ ಆರೋಗ್ಯ ಪಾಲನೆಯ ಕೇಂದ್ರ ಬಿಂದು ವಿಮಾ ರಕ್ಷಣೆ ಆಗಿರಲಿಲ್ಲ. 2014ರ ನಂತರ ವಿಮಾ ರಕ್ಷಣೆಯೇ ಕೇಂದ್ರಬಿಂದುವಾಗಿದ್ದು, ಆಯುಷ್ಮಾನ್ ಭಾರತ್‍ನಂತಹ ಯೋಜನೆಗಳಡಿ, ವಿಮಾರಕ್ಷಣೆಯ ಮೂಲಕ ಉತ್ತಮ ಆರೋಗ್ಯವನ್ನು ಸಾಧಿಸುವ ನೀತಿಯನ್ನು ಅನುಸರಿಸಲಾಗುತ್ತಿದೆಯಾದರೂ, ಮೂಲತಃ ಜನತೆಯ ಆರೋಗ್ಯ ರಕ್ಷಣೆಯ ವಿಚಾರದಲ್ಲಿ ಸಾರ್ವಜನಿಕ ಆರೋಗ್ಯ ಸೌಕರ್ಯಗಳನ್ನು ಸಬಲೀಕರಣಗೊಳಿಸುವ ನೀತಿಯಿಂದ ವಿಮುಖವಾಗಲು ಸಾಧ್ಯವಾಗಲಿಲ್ಲ. ಆದಾಗ್ಯೂ ಭಾರತ ಸರ್ಕಾರ ಆರೋಗ್ಯ ಕ್ಷೇತ್ರದಲ್ಲಿ ಹೂಡುತ್ತಿದ್ದ ಬಂಡವಾಳದ ಹೂಡಿಕೆಯ ಪ್ರಮಾಣ ಸೀಮಿತವಾಗಿಯೇ ಮುಂದುವರೆದಿದೆ. 2021ರ ಫೆಬ್ರವರಿಯಲ್ಲಿ ಮಂಡಿಸಿದ ವಾರ್ಷಿಕ ಬಜೆಟ್‍ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಮೀಸಲಿರಿಸಿದ ಹಣದ ಪ್ರಮಾಣವನ್ನು ಕಡಿಮೆ ಮಾಡಲಾಗಿದೆ. ಇದರ ಪರಿಣಾಮವನ್ನು ನಾವು ಇಂದು ನೋಡುತ್ತಿದ್ದೇವೆ.
1950ರಲ್ಲಿ ಕೇರಳ ಸರ್ಕಾರ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆಯನ್ನು ಆರಂಭಿಸಿದಾಗ ಇದರಿಂದ ಬಡ ರಾಜ್ಯಕ್ಕೆ ಹೊರೆಯಾಗುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ಪ್ರಾಥಮಿಕ ಆರೋಗ್ಯ ಸೇವೆಯಲ್ಲಿನ ಬಂಡವಾಳ ಹೂಡಿಕೆಯಿಂದ ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ ಎನ್ನುವುದನ್ನು ಕೇರಳ ನಿರೂಪಿಸಿದೆ. ಅಷ್ಟೇ ಅಲ್ಲದೆ ಸಾರ್ವಜನಿಕ ಆರೋಗ್ಯ ಸೇವೆಯನ್ನು ವಿಸ್ತರಿಸುವುದರ ಮೂಲಕ ಆರೋಗ್ಯ ಸೇವಾ ಸಿಬ್ಬಂದಿಯನ್ನು ಉತ್ತಮ ತರಬೇತಿಯ ಮೂಲಕ ಸಿದ್ಧಪಡಿಸುವುದು ಮತ್ತು ಜನಸಾಮಾನ್ಯರಿಗೆ ಉತ್ತಮ ಆರೋಗ್ಯ ಸೌಲಭ್ಯಗಳನ್ನು ಒದಗಿಸುವುದೂ ಸಾಧ್ಯ ಎನ್ನುವುದನ್ನು ನಿರೂಪಿಸಿದೆ. ಕೇರಳ ಸರ್ಕಾರದ ಈ ನೀತಿಯೇ ರಾಜ್ಯದ ಒಟ್ಟು ಉತ್ಪಾದನೆಯ ಹೆಚ್ಚಳಕ್ಕೂ ಕಾರಣವಾಗಿದ್ದು, ನಿರೀಕ್ಷೆಗೂ ಮೀರಿದ ಮಟ್ಟಿಗೆ ರಾಜ್ಯ ಸುಭಿಕ್ಷತೆಯನ್ನು ಸಾಧಿಸಿದೆ.
ವಿಜ್ಞಾನ ಮತ್ತು ಮೌಢ್ಯದ ಸಂಘರ್ಷ
ನವ ಭಾರತದ ಮತ್ತೊಂದು ಹೊಸ ನೀತಿಯನ್ನು ನಾವು ವಿಜ್ಞಾನ ಮತ್ತು ನಂಬಿಕೆಯ ನಡುವಿನ ಸಂಘರ್ಷದಲ್ಲಿ ಕಾಣಬಹುದಾಗಿದೆ. ಭಾರತ ಮತ್ತೊಮ್ಮೆ ನೆಮ್ಮದಿಯ ಉಸಿರಾಡಬೇಕಾದರೆ ನಾವು ವಿಜ್ಞಾನ ಮತ್ತು ನಂಬಿಕೆಯ ನಡುವಿನ ಸಂಘರ್ಷಲ್ಲಿ ಸ್ಪಷ್ಟ ನಿಲುವು ತಾಳುವುದಷ್ಟೇ ಅಲ್ಲದೆ, ವೈಚಾರಿಕ ಮನಸುಗಳನ್ನು ದಮನಿಸುವ ಹಾಗೂ ವಿಜ್ಞಾನವನ್ನು ಪಾಶ್ಚಿಮಾತ್ಯ ಅಥವಾ ಭಾರತೀಯ ಪ್ರಕೃತಿಗೆ ವಿರುದ್ಧವಾದ ಕಲ್ಪನೆ ಎಂದು ಭಾವಿಸುವ ಮನೋಭಾವವನ್ನು ತೊಡೆದುಹಾಕಬೇಕಿದೆ. ಕಳೆದ ಏಳು ವರ್ಷಗಳಲ್ಲಿ, ವಿಶೇಷವಾಗಿ ಕೋವಿದ್ 19 ಸಂದರ್ಭದಲ್ಲಿ, ಇಡೀ ದೇಶದಲ್ಲಿ ಹಾಹಾಕಾರ ಸೃಷ್ಟಿಯಾಗಿರುವ ಸಂದರ್ಭದಲ್ಲೂ ಸಹ, ಕೇಂದ್ರದ ಕೇಂದ್ರ ಆರೋಗ್ಯ ಸಚಿವರನ್ನೂ ಸೇರಿದಂತೆ ಕೇಂದ್ರದ ಉನ್ನತ ಸಚಿವರು ಯೋಗ ಗುರುವಿನೊಡನೆ ನಿಂತು, ಆ ಯೋಗ ಗುರುವೇ ಕೋವಿದ್ 19ಗೆ ಔಷಧಿಯನ್ನು ಕಂಡುಹಿಡಿದಿದ್ದಾನೆ ಎಂದು ಘೋಷಿಸಿದ್ದನ್ನು ನೋಡಿದ್ದೇವೆ. ಕೊನೆಗೆ ವಿಶ್ವ ಆರೋಗ್ಯ ಸಂಸ್ಥೆಯೇ ಖುದ್ದಾಗಿ ಮಧ್ಯಪ್ರವೇಶಿಸಿ ಯೋಗಗುರುವಿನ ಔಷಧಿಗೆ ಮಾನ್ಯತೆ ನೀಡಿಲ್ಲ ಎಂದು ಅಧಿಕೃತವಾಗಿ ಘೋಷಿಸಬೇಕಾಯಿತು.
ಭಾರತದ ಪ್ರಧಾನಮಂತ್ರಿಗಳೂ ಸಹ ತರ್ಕಕ್ಕಿಂತಲೂ ಮಿಥ್ಯೆಯನ್ನೇ ಪೋಷಿಸುತ್ತಿದ್ದು, 2014ರಲ್ಲಿ ಮುಂಬಯಿಯ ಆಸ್ಪತ್ರೆಯೊಂದರ ಉದ್ಘಾಟನಾ ಭಾಷಣದಲ್ಲಿ ಪ್ಲಾಸ್ಟಿಕ್ ಸರ್ಜರಿ ತಂತ್ರಜ್ಞಾನವನ್ನು ಭಾರತದ ಅವಿಷ್ಕಾರ ಎಂದು ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಗಣೇಶನ ಸೊಂಡಿಲನ್ನು ಜೋಡಿಸಿದ ತಂತ್ರಜ್ಞಾನವೇ ಪ್ಲಾಸ್ಟಿಕ್ ಸರ್ಜರಿಯ ಪ್ರಥಮ ಪ್ರಯತ್ನ ಎಂದು ಮೋದಿ ಹೇಳಿದ್ದುದನ್ನು ಸ್ಮರಿಸಬಹುದು. ವೈಚಾರಿಕತೆ, ವಿಜ್ಞಾನ ಮತ್ತು ಪರಿಣತಿ ಇವೆಲ್ಲವನ್ನೂ ನೆಹರೂ ಯುಗದ ಪಳೆಯುಳಿಕೆಗಳು ಎಂದು ಹೀಗಳೆಯುವ ಮನೋಭಾವವನ್ನು ಇಲ್ಲಿ ಗುರುತಿಸಬಹುದಿತ್ತು. ವಿಜ್ಞಾನ ಕ್ಷೇತ್ರಕ್ಕೆ ಸರ್ಕಾರ ನೀಡುತ್ತಿರುವ ಹಣಕಾಸು ನೆರವು ಸಹ ಕ್ಷೀಣಿಸುತ್ತಲೇ ಇದೆ. ಭಾರತೀಯ ವಿಜ್ಞಾನ ಸಮಾವೇಶದ ಸಂದರ್ಭದಲ್ಲಿ ಇಬ್ಬರು ವಿಜ್ಞಾನಿಗಳು ಪ್ರಾಚೀನ ಭಾರತದಲ್ಲೇ ಸ್ಟೆಮ್ ಸೆಲ್ ತಂತ್ರಜ್ಞಾನವನ್ನು ಕಂಡುಹಿಡಿಯಲಾಗಿತ್ತು ಎಂದು ಪ್ರತಿಪಾದಿಸಿದ್ದನ್ನು ಭಾರತೀಯ ವಿಜ್ಞಾನಿಗಳು ಖಂಡಿಸಿದ್ದರು. 2019ರ ಜನವರಿ 6ರಂದು ಭಾರತದ ವಿಜ್ಞಾನಿಗಳು ಬೆಂಗಳೂರು, ಕೊಚಿ, ಕೊಲ್ಕತ್ತಾ ಮತ್ತು ತಿರುವನಂತಪುರಂನಲ್ಲಿ ಪ್ರತಿಭಟನೆ ನಡೆಸಿ ವಿಜ್ಞಾನ ಸಮಾವೇಶದಲ್ಲಿ ಮಂಡಿಸಲಾದ ಅವೈಜ್ಞಾನಿಕ ಪ್ರತಿಪಾದನೆಗಳ ವಿರುದ್ಧ ಪ್ರತಿರೋಧ ವ್ಯಕ್ತಪಡಿಸಿದ್ದರು. ಕೇಂದ್ರ ಸರ್ಕಾರದ ಒತ್ತಾಸೆಯಿಂದ ಆಯುರ್ವೇದ, ಯುನಾನಿ, ಯೋಗ, ನ್ಯಾಚುರೋಪತಿ, ಸಿದ್ಧ ಮತ್ತು ಹೋಮಿಯೋಪತಿ ಚಿಕಿತ್ಸೆಗಳಿಗೆ ಹೆಚ್ಚಿನ ಉತ್ತೇಜನ ನೀಡುವ ಆಯುಷ್ ಸಂಸ್ಥೆಯ ನೀತಿಗಳ ವಿರುದ್ಧವೂ ಭಾರತದ ವಿಜ್ಞಾನಿಗಳು ಪ್ರತಿಭಟನೆ ನಡೆಸಿದ್ದರು. ಆಡಳಿತಾರೂಢ ಪಕ್ಷದ ಪರಿಸರದಲ್ಲಿ ವಿಜ್ಞಾನವನ್ನೇ ಅಪಾಯಕಾರಿ ಎಂದು ಪರಿಗಣಿಸುವ ಮನೋಭಾವವನ್ನು ಇಲ್ಲಿ ಗುರುತಿಸಬಹುದು.
ಕಳೆದ ಒಂದು ವರ್ಷದಲ್ಲಿ ಸಾರ್ವಜನಿಕರಿಗೆ ವಿಶ್ವಾಸಪೂರ್ವಕವಾಗಿ ಸಲಹೆ ನೀಡುವಂತಹ ಅಥವಾ ಸರ್ಕಾರದ ಆರೋಗ್ಯ ನೀತಿಗಳನ್ನು ಪ್ರಶ್ನಿಸುವಂತಹ ಒಬ್ಬರೇ ಒಬ್ಬರು ಸಾರ್ವಜನಿಕ ಆರೋಗ್ಯ ತಜ್ಞರನ್ನು ನಾವು ಕಂಡಿಲ್ಲ. ಈ ನಿಟ್ಟಿನಲ್ಲಿ ಜನರಿಗೆ ಸಲಹೆ ನೀಡಲು ಮತ್ತು ಸರ್ಕಾರಕ್ಕೆ ನಿರ್ದೇಶನಗಳನ್ನು ನೀಡಲು ಯಾವುದೇ ಆರೋಗ್ಯ ತಜ್ಞರಿಗೆ ಅಧಿಕಾರವನ್ನೂ ನೀಡದಿರುವುದನ್ನೂ ಗಮನಿಸಬೇಕು. ತಟ್ಟೆ , ಜಾಗಟೆ , ಚಪ್ಪಾಳೆ, ಮೋಂಬತ್ತಿಯ ಮೂಲಕ ಕೊರೋನಾ ಹೋಗಲಾಡಿಸಲು ಯತ್ನಿಸಿದ್ದೂ ಉಂಟು. ನಂತರ ಹಠಾತ್ ಲಾಕ್ ಡೌನ್ ಘೋಷಣೆ. ಇವೆಲ್ಲವನ್ನೂ ಸಹ ಜನತೆಗೆ ಮನದಟ್ಟು ಮಾಡಲು ಯತ್ನಿಸಿದ್ದು ಪ್ರಧಾನಮಂತ್ರಿಗಳೇ ಹೊರತು ಆರೋಗ್ಯ ತಜ್ಞರಲ್ಲ. ವೈಜ್ಞಾನಿಕ ನೀತಿಗಳಿಗೆ ವಿರುದ್ಧವಾಗಿ ಮೋದಿ ಸರ್ಕಾರ ಕೈಗೊಂಡ ಕ್ರಮಗಳನ್ನು ಪ್ರಶ್ನಿಸಲು ಅಥವಾ ಸರ್ಕಾರ ನೀಡಿದ ನಿರ್ದೇಶನಗಳನ್ನು ವಿರೋಧಿಸಲು ದೇಶದಲ್ಲಿ, ವಿಜ್ಞಾನಿಗಳು ಆರೋಗ್ಯ ತಜ್ಞರು ಮತ್ತು ಸಾರ್ವಜನಿಕ ಆರೋಗ್ಯ ತಜ್ಞರನ್ನೊಳಗೊಂಡ ಒಂದು ವೇದಿಕೆ ಕಂಡುಬಂದಿಲ್ಲ.
ಈ ವರ್ಷ ಜನವರಿ 28ರಂದು ಪ್ರಧಾನಿ ನರೇಂದ್ರ ಮೋದಿ ಭಾರತ ಕೋವಿದ್ 19 ವಿರುದ್ಧ ದಿಗ್ವಿಜಯ ಸಾಧಿಸಿದೆ ಎಂದು ಅಧಿಕೃತವಾಗಿಯೇ ಘೋಷಿಸಿದ್ದರು. ಪಶ್ಚಿಮ ಬಂಗಾಲದ ಚುನಾವಣಾ ಸಮಾವೇಶಗಳ ನಡುವೆಯೇ ದೇಶದ ಆರೋಗ್ಯ ಸಚಿವರು ಕೋವಿದ್ ಹೆಚ್ಚಳಕ್ಕೆ ಈ ಸಮಾವೇಶಗಳು ಕಾರಣವಲ್ಲ ಎಂದು ಮಾಧ್ಯಮದವರ ಮುಂದೆ ಹೇಳಿದ್ದರು. ಕುಂಭಮೇಳವನ್ನು ಒಂದು ವರ್ಷ ಮುಂಚಿತವಾಗಿಯೇ ನಡೆಸುವ ನಿರ್ಧಾರವನ್ನು ಕೈಗೊಂಡಾಗ ನಿರ್ಣಾಯಕ ಪಾತ್ರ ವಹಿಸಿದ್ದು ಅಖಿಲ ಭಾರತ ಅಖಾಡ ಪರಿಷತ್ತೇ ಹೊರತು ಯಾವುದೇ ಸಾಂಕ್ರಾಮಿಕ ತಜ್ಞರ ತಂಡ ಅಲ್ಲ. ಇತರ ಪ್ರಜಾತಂತ್ರ ದೇಶಗಳಲ್ಲಿ ಮಾಡಿದಂತೆ ಭಾರತದಲ್ಲೂ ಕೋವಿದ್ 19ನ ವಂಶವಾಹಿ ಮಾಹಿತಿಯನ್ನು ನಿಖರವಾಗಿ ತಿಳಿದುಕೊಳ್ಳುವ ಮೂಲಕ ಕೋವಿದ್ 19 ನಿಯಮಗಳನ್ನು ರೂಪಿಸುವಂತೆ ನೂರಕ್ಕೂ ಹೆಚ್ಚು ವಿಜ್ಞಾನಿಗಳು ಸರ್ಕಾರದ ಮೇಲೆ ಒತ್ತಡ ಹೇರಬೇಕಾಯಿತು. ಕೋವಿದ್ ಸಾಂಕ್ರಾಮಿಕವು ವ್ಯಾಪಕವಾಗಿ ಹರಡುತ್ತಿದ್ದರೂ ವಿಜ್ಞಾನ ಮತ್ತು ವೈಜ್ಞಾನಿಕ ನೀತಿಗಳನ್ನು ನಿರ್ಲಕ್ಷಿಸಿದ್ದರ ಪರಿಣಾಮವನ್ನು ಈಗ ನಾವು ಎದುರಿಸುತ್ತಿದ್ದೇವೆ.
ಮಾಹಿತಿಯ ಋಜುತ್ವ ಮುಖ್ಯ ಸಂದಿಗ್ಧತೆಯಲ್ಲ
ಮೂರನೆಯದಾಗಿ ಬಹುಮುಖ್ಯವಾಗಿ ಪರಿಗಣಿಸಬೇಕಿರುವುದು ಮಾಹಿತಿಯ ಋಜುತ್ವ. ಯಾವುದೇ ಸಂದರ್ಭದಲ್ಲಾದರೂ ಒಂದು ಸರ್ಕಾರದ ವಿಶ್ವಾಸಾರ್ಹತೆಯನ್ನು ಕಾಪಾಡುವುದು ಆಡಳಿತ ವ್ಯವಸ್ಥೆ ಒದಗಿಸುವ ಮಾಹಿತಿಯ ಋಜುತ್ವದಿಂದಲೇ. ಆದರೆ ನರೇಂದ್ರ ಮೋದಿ ಸರ್ಕಾರದ ಅವಧಿಯಲ್ಲಿ ಮಾಹಿತಿಯ ಅನಿಶ್ಚಿತತೆ ಅಥವಾ ಸಂದಿಗ್ಧತೆಯೇ ಪ್ರಧಾನವಾಗಿ ಕಾಣುತ್ತದೆ. ಆರ್ಥಿಕ ಅಂಕಿಅಂಶಗಳಾಗಲಿ, ಜಿಡಿಪಿ ಅಭಿವೃದ್ಧಿ ದರವಾಗಲೀ, ನಿರುದ್ಯೋಗದ ಅಂಕಿಅಂಶಗಳಾಗಲೀ ಎಲ್ಲ ವಿಚಾರಗಳಲ್ಲೂ ಕೇಂದ್ರ ಸರ್ಕಾರದ ಮಾಹಿತಿ ವಿಶ್ವಾಸರ್ಹತೆಯ ಕೊರತೆಯನ್ನು ಎದುರಿಸುತ್ತದೆ. ಕಾರ್ಮಿಕ ಸಮೀಕ್ಷಾ ವರದಿಯನ್ನು ವಿಳಂಬ ಮಾಡುವುದು, ಜನತೆಯ ಬಳಕೆಯ ಪ್ರಮಾಣವನ್ನು ಅಳೆಯುವ ಸಮೀಕ್ಷೆಯನ್ನು ವಿಳಂಬಮಾಡುವುದು ಇದೇ ರೀತಿಯ ನೀತಿಗಳನ್ನೇ ಕೋವಿದ್ ಸಂದರ್ಭದಲ್ಲಿ ಪರೀಕ್ಷೆಗಳ ಮಾಹಿತಿ ಮತ್ತು ಸಾವಿನ ಅಂಕಿಸಂಖ್ಯೆಗಳ ಮಾಹಿತಿಯ ಸಂದರ್ಭದಲ್ಲೂ ಅನುಸರಿಸಲಾಗುತ್ತಿದೆ.
ಈ ರೀತಿ ದೇಶದ ಪ್ರಜೆಗಳ ಸಾವುಗಳನ್ನೂ ಸಮರ್ಪಕವಾಗಿ ದಾಖಲಿಸದೆ ಇರುವುದು ಅಥವಾ ದಾಖಲಿಸಿದ ಮಾಹಿತಿಯನ್ನು ಹಂಚಿಕೊಳ್ಳದೆ ಇರುವುದರಿಂದ ಗಂಭೀರ ಪರಿಣಾಮಗಳು ಉಂಟಾಗುತ್ತವೆ. ಸಾವಿನ ಸಂಖ್ಯೆಗಳನ್ನು ನಿಖರವಾಗಿ ತಿಳಿದುಕೊಳ್ಳದಿದ್ದಲ್ಲಿ ರೋಗದ ಕಾರಣಗಳನ್ನು ಕಂಡುಹಿಡಿಯುವುದೂ ಕಷ್ಟವಾಗುತ್ತದೆ. ರೋಗದ ಕಾರಣಗಳು ನಿಖರವಾಗಿ ತಿಳಿಯದಿದ್ದರೆ ಭವಿಷ್ಯದಲ್ಲಿ ರೋಗದ ವಿರುದ್ಧ ಕೈಗೊಳ್ಳಬೇಕಾದ ಕ್ರಮಗಳನ್ನು ನಿಖರವಾಗಿ ನಿರ್ಧರಿಸಲಾಗುವುದಿಲ್ಲ. ಸಂಭಾವ್ಯ ಸಾವುಗಳ ಪ್ರಮಾಣವನ್ನೂ ಅಳೆಯುವುದು ಅಸಾಧ್ಯವೇ ಆಗುತ್ತದೆ.
ಭಾರತದಲ್ಲಿ ಕೋವಿದ್ 19 ನಿಂದಾಗಿ ಉಂಟಾಗಿರುವ ಸಾವಿನ ಪ್ರಮಾಣ ಸರ್ಕಾರದ ಅಧಿಕೃತ ದಾಖಲೆಗಿಂತಲೂ ಹೆಚ್ಚಾಗಿಯೇ ಇದೆ. ಭಾರತೀಯ ಆರೋಗ್ಯ ಛಂದಶ್ಶಾಸ್ತ್ರ ಮೌಲ್ಯಮಾಪನ ಸಂಸ್ಥೆಯ ಹಲವು ತಜ್ಞರು ದಾಖಲಿಸಿರುವಂತೆ ಭಾರತದಲ್ಲಿ ಕೋವಿದ್ 19ನಿಂದ ಇನ್ನೂ ಹೆಚ್ಚಿನ ಪ್ರಮಾಣದ ಸಾವುಗಳು ಸಂಭವಿಸಿವೆ. ತಜ್ಞರಾದ ಡಾ ಭ್ರಮರ್ ಮುಖರ್ಜಿ, ಡಾ ಆಶಿಶ್ ಕೆ ಝಾ ಮತ್ತು ಡಾ ಮುರಾದ್ ಬನಾಜಿ ಇವರುಗಳು ಈ ಕುರಿತು ವಿಸ್ತøತ ವರದಿಯನ್ನೂ ಸಲ್ಲಿಸಿದ್ದಾರೆ. ಮಾಹಿತಿ ದಾಖಲಿಸುವಲ್ಲಿನ ಈ ಕೊರತೆಯಿಂದ ಭಾರತ ಜಾಗತಿಕ ಮಟ್ಟದಲ್ಲೂ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ. ಲಭ್ಯ ಮಾಹಿತಿಯನ್ನು ನಿಖರವಾಗಿ ಸಂಗ್ರಹಿಸಿ ಹಂಚಿಕೊಳ್ಳದಿರುವುದರಿಂದ ಆಂತರಿಕವಾಗಿ ಮತ್ತು ಜಾಗತಿಕ ಮಟ್ಟದಲ್ಲಿ ಕೆಲವು ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.
ಬಡಜನತೆ ಮತ್ತು ಭಾರತದ ಆರ್ಥಿಕತೆ
ನಾಲ್ಕನೆಯದಾಗಿ, ಕೋವಿದ್ 19 ಸಂದರ್ಭದಲ್ಲಿ ನಾವು ಗಮನಿಸಬಹುದಾದ ನೀತಿ ಎಂದರೆ , ದೇಶದ ಕಡುಬಡವ ಜನಸಮುದಾಯಗಳ ಜೀವನಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಸರ್ಕಾರ ಕೈಗೊಳ್ಳಬೇಕಾದ ಆರ್ಥಿಕ ಕ್ರಮಗಳು. ಇತ್ತೀಚೆಗಷ್ಟೇ ಭಾರತ ಐದು ಲಕ್ಷ ಕೋಟಿ ಡಾಲರ್ ಆರ್ಥಿಕತೆಯಾಗುವ ತನ್ನ ಘೋಷವಾಕ್ಯವನ್ನು ಪ್ರಕಟಿಸಿದೆ. ಆದರೆ ದಿನಕ್ಕೆ 1.9 ಡಾಲರ್‍ಗಿಂತಲೂ ಕಡಿಮೆ ಆದಾಯ ಇರುವ ಭಾರತದ ಕೋಟ್ಯಂತರ ಬಡ ಜನತೆಯ ಜೀವನಮಟ್ಟವನ್ನು ಸುಧಾರಿಸುವ ಪ್ರಯತ್ನಗಳನ್ನೇ ಮಾಡದೆ ಹೋದರೆ, ಭಾರತಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಲಿಯಲ್ಲಾಗಲೀ, ಶ್ರೀಮಂತ ರಾಷ್ಟ್ರಗಳ ಗುಂಪುಗಳಲ್ಲಾಗಲೀ ಪ್ರವೇಶವೂ ದೊರೆಯುವುದಿಲ್ಲ. ಭಾರತದಲ್ಲಿ ಬಡತನ ಹೆಚ್ಚಾಗುತ್ತಿರುವುದರ ಬಗ್ಗೆ ಸಾಕಷ್ಟು ಸಮೀಕ್ಷೆಗಳು ಮತ್ತು ವರದಿಗಳು ಪ್ರಕಟವಾಗುತ್ತಿವೆ. ಕೋವಿದ್ 19 ಸಾಂಕ್ರಾಮಿಕದ ಅವಧಿಯಲ್ಲೇ ಭಾರತದ 23 ಕೋಟಿ ಜನರು ಕನಿಷ್ಟ ಜೀವನಮಟ್ಟಕ್ಕಿಂತಲೂ ಕೆಳಗೆ ಕುಸಿದಿರುವುದನ್ನು ಅಜೀಂ ಪ್ರೇಂಜಿ ವಿಶ್ವವಿದ್ಯಾಲಯದ ವರದಿಯೊಂದು ಉಲ್ಲೇಖಿಸಿದೆ.
ವಿಶ್ವಗುರು ಆಗುವ ಗೀಳು ಸಮಸ್ತ ಭಾರತವನ್ನೂ ಆವರಿಸಿದಂತಿದೆ. ಹಾಗಾಗಿಯೇ ಅನೇಕ ವಿಶ್ಲೇಷಕರೂ ಸಹ ಬಡತನ ನಿರ್ಮೂಲನಾ ಯೋಜನೆಗಳನ್ನು, ಬಡಜನತೆಗೆ ನೀಡುವ ಉಚಿತ ಸೌಲಭ್ಯಗಳನ್ನು ಖಂಡಿಸುತ್ತಾ, ಒಂದು ಸುಸ್ಥಿರ ಕಲ್ಯಾಣ ರಾಜ್ಯದ ನಿರ್ಮಾಣಕ್ಕೆ ಇವಕ್ಕಿಂತಲೂ ಭಾರತದ ಬಹುಸಂಖ್ಯೆಯ ಜನರಿಗೆ ಸಾಮಾಜಿಕ ಭದ್ರತೆ ಒದಗಿಸಬೇಕು ಎಂದು ದಿಕ್ಕುತಪ್ಪಿಸುವ ವಾದಗಳನ್ನು ಮಂಡಿಸುತ್ತಾರೆ. ಜಾಗತಿಕ ಮಟ್ಟದಲ್ಲಿ ಅಮೆರಿಕ, ಜರ್ಮನಿ, ಬ್ರಿಟನ್ ಮತ್ತು ಚೀನಾದ ಆರ್ಥಿಕ ನೀತಿಗಳನ್ನು ಗಮನಿಸಿದಾಗ ಈ ವಾದ ಎಷ್ಟು ಪೊಳ್ಳು ಎಂದು ಅರ್ಥವಾಗುತ್ತದೆ. ಭಾರತದಲ್ಲೇ 2005 ರಿಂದ 20015ರ ಅವಧಿಯಲ್ಲಿ ಬಡತನದ ಪ್ರಮಾಣ ಇಳಿಕೆಯಾಗಿರುವುದರ ಬಗ್ಗೆ ಐಎಂಎಫ್ ಮೆಚ್ಚುಗೆ ಸೂಚಿಸಿರುವುದು ಈ ವಿಶ್ಲೇಷಕರ ಅಭಿಪ್ರಾಯಗಳನ್ನು ತಳ್ಳಿಹಾಕುತ್ತವೆ. ಬಹುಸಂಖ್ಯೆಯ ಜನರಿಗೆ ,ಬಡವರು ಮತ್ತು ದುರ್ಬಲ ವರ್ಗಗಳಿಗೆ ನೆರವಾಗುವಂತಹ ಆರ್ಥಿಕ ಯೋಜನೆಗಳು ಅರ್ಥವ್ಯವಸ್ಥೆಯ ಮೂಲ ತತ್ವವಾಗಬೇಕೇ ಹೊರತು ಅದರಿಂದ ಮುಜುಗರ ಪಡುವ ಅವಶ್ಯಕತೆ ಇಲ್ಲ.
ವೈರಾಣು ಸಮಾಜಶಾಸ್ತ್ರಜ್ಞ ಜೀವಿ ಅಲ್ಲ. ಅದು ಜನರ ನಡುವೆ,, ಜನರು ಅವಕಾಶ ಮಾಡಿಕೊಟ್ಟಂತೆಲ್ಲಾ ಹರಡುತ್ತಾ ಹೋಗುತ್ತದೆ. ಈ ವೈರಾಣುವನ್ನು ಹೋಗಲಾಡಿಸಲು ಹಸುವಿನ ಗಂಜಲ ಕುಡಿಯುವುದು, ಚುನಾವಣೆಗಳ ನೆಪದಲ್ಲಿ ಅನಿಯಂತ್ರಿತ ಜನದಟ್ಟಣೆಯ ನಡುವೆ ಹರಡಲು ಅವಕಾಶ ಮಾಡಿಕೊಡುವುದು, ಕೆಲವೇ ದಿನಗಳ ಮುನ್ನವೂ ಅಪಾರ ಜನಸ್ತೋಮ ನೆರೆಯುವ ಸಮಾರಂಭಗಳನ್ನು ಏರ್ಪಡಿಸುವುದು ಇಂತಹ ವಿವೇಕರಹಿತ ಕ್ರಮಗಳಿಂದಲೇ ಭಾರತ ಈಗ ವಿನಾಶದ ಅಂಚಿಗೆ ತಲುಪಿದೆ. ಈ ಪರಿಸರದಲ್ಲೇ ವೈರಾಣು ಶೀಘ್ರವಾಗಿ ಹರಡುತ್ತದೆ, ಒಬ್ಬರಿಂದ ಮತ್ತೊಬ್ಬರಿಗೆ ಸೋಂಕು ತಗಲುತ್ತದೆ ಮತ್ತು ಎರಡನೆ, ಮೂರನೆ ಅಲೆಯೂ ಸೃಷ್ಟಿಯಾಗುತ್ತದೆ. ಸಂಪನ್ಮೂಲಗಳ ಕೊರತೆಯ ನಡುವೆಯೂ ಸಿಡುಬು ಮತ್ತು ಪೋಲಿಯೋ ಕಾಣಿಸಿಕೊಂಡ ಸಂದರ್ಭದಲ್ಲಿ ಭಾರತ ನಿರ್ವಹಿಸಿದ ಬಗೆಯನ್ನು ಒಮ್ಮೆ ಇಣುಕಿ ನೋಡಿದರೆ ಒಳಿತು. ಆ ಸಂದರ್ಭದಲ್ಲಿ ಆಡಳಿತ ವ್ಯವಸ್ಥೆಯಲ್ಲಿದ್ದ ವೈಜ್ಞಾನಿಕ ಮನೋಭಾವ, ಚಿಂತನೆ ಮತ್ತು ಧೋರಣೆ ರೋಗವನ್ನು ಶಮನ ಮಾಡುವಲ್ಲಿ ಪ್ರಧಾನ ಪಾತ್ರ ವಹಿಸಿತ್ತು.
ನಮ್ಮ ಸಾರ್ವಜನಿಕ ಮತ್ತು ಆಡಳಿತ ಸಂಸ್ಕøತಿಯಲ್ಲಿರುವ ಈ ವ್ಯತ್ಯಯಗಳನ್ನು ಪ್ರಸ್ತುತ ಕೋವಿದ್ 19 ಬಿಕ್ಕಟ್ಟು ನಿವಾರಿಸುವುದು ಒಳಿತು. ಇಲ್ಲವಾದರೆ ಕಳೆದ ಏಳು ವರ್ಷಗಳಿಂದ ಅನುಸರಿಸಿಕೊಂಡು ಬಂದಿರುವ ಪರಂಪರೆಯನ್ನೇ ಮುಂದುವರೆಸಿದರೆ ಬಹುಶಃ ವಿಶ್ಲೇಷಕರು ಇದನ್ನು ಮಾನವ ನಿರ್ಮಿತ ಅಥವಾ ಭಾರತೀಯ ಮಾದರಿ ವೈರಾಣು ಎಂದು ಹೆಸರಿಸಿದರೂ ಹೆಚ್ಚೇನಿಲ್ಲ.