ಪ್ರಧಾನ ಮಂತ್ರಿಗಳ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿ (PM-CARES) ನಿಧಿಯ ಅಡಿಯಲ್ಲಿ ಕೇಂದ್ರ ಸರ್ಕಾರವು ಮಾರ್ಚ್ 27, 2020ರಿಂದ ಸಂಗ್ರಹಿಸಿರುವ ರೂ 10,990 ಕೋಟಿಗಳಲ್ಲಿ ರೂ 7,014 ಕೋಟಿ (64%)ಗಳು ಮಾರ್ಚ್ 31 2021 ರವರೆಗೆ ಬಳಕೆಯಾಗದೆ ಉಳಿದಿದೆ ಎಂದು NDTV, ಫೆಬ್ರವರಿ 8 ಮಂಗಳವಾರದಂದು ವರದಿ ಮಾಡಿದೆ.
ದೇಶದಲ್ಲಿ COVID-19 ಸಾಂಕ್ರಾಮಿಕ ರೋಗವು ಪ್ರಾರಂಭವಾದ ನಂತರ, PM-CARES ಅನ್ನು ಅದರ ಅಧಿಕೃತ ಸರ್ಕಾರಿ ವೆಬ್ಸೈಟ್ ಪ್ರಕಾರ, ‘ಸಾರ್ವಜನಿಕ ಚಾರಿಟಬಲ್ ಟ್ರಸ್ಟ್’ ಆಗಿ ‘ಯಾವುದೇ ರೀತಿಯ ತುರ್ತು ಅಥವಾ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುವ, ಸಂತ್ರಸ್ತರಿಗೆ ಪರಿಹಾರ ನೀಡುವ ಪ್ರಾಥಮಿಕ ಉದ್ದೇಶದೊಂದಿಗೆ’ ಸ್ಥಾಪಿಸಲಾಗಿದೆ.
ಫಂಡ್ ರಚನೆಯಾದ ಮೊದಲ ಐದು ದಿನಗಳಲ್ಲಿ 3,077 ಕೋಟಿ ರೂಪಾಯಿಗಳನ್ನು ಮತ್ತು ಮೊದಲ ವರ್ಷದಲ್ಲಿ 7,679 ಕೋಟಿ ರೂಪಾಯಿ ಮೌಲ್ಯದ ದೇಣಿಗೆಗಳನ್ನು ಸ್ವೀಕರಿಸಿದ್ದರೂ (ಬಡ್ಡಿಯಿಂದ ಬಂದ 235 ಕೋಟಿ ರೂ. ಜೊತೆಗೆ), ಸರ್ಕಾರವು ನಿಧಿಯಿಂದ ಕೇವಲ 3,976 ಕೋಟಿ ರೂ. ವನ್ನು ಆ ವರ್ಷ ಬಳಸಿಕೊಳ್ಳಲಾಗಿದೆ ಹಾಗೂ ಆ ವರ್ಷ 494.91 ಕೋಟಿ ರೂಪಾಯಿಗಳನ್ನು ವಿದೇಶಿ ಕೊಡುಗೆಯಾಗಿ ಮತ್ತು 7,183 ಕೋಟಿ ರೂಪಾಯಿಗಳನ್ನು ‘ಸ್ವಯಂಪ್ರೇರಿತ ಕೊಡುಗೆಗಳಿಂದ’ ದೇಣಿಗೆಯಾಗಿ ಪಡೆಯಲಾಗಿದೆ ಎಂದು NDTV ವರದಿಯಲ್ಲಿ ಉಲ್ಲೇಖಿಸಲಾಗಿದೆ.
6.6 ಕೋಟಿ ಡೋಸ್ ಲಸಿಕೆ ಖರೀದಿಸಲು 1,392 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಮತ್ತು 50,000 ಭಾರತೀಯ ನಿರ್ಮಿತ ವೆಂಟಿಲೇಟರ್ಗಳನ್ನು ಖರೀದಿಸಲು 1,311 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಎಂದು ವರದಿಯಾಗಿದೆ. ಆದರೆ ಕಳೆದ ವರ್ಷ ‘ದಿ ವೈರ್’ ವರದಿ ಮಾಡಿದಂತೆ 165 ವೆಂಟಿಲೇಟರ್ಗಳನ್ನು ಶ್ರೀನಗರದ ಶ್ರೀ ಮಹಾರಾಜ ಹರಿ ಸಿಂಗ್ ಆಸ್ಪತ್ರೆಗೆ ಆಸ್ಪತ್ರೆ ಕೇಳದೆಯೇ ತಲುಪಿಸಲಾಗಿದೆ ಮತ್ತು ಈ ಎಲ್ಲಾ ಘಟಕಗಳು ಆಸ್ಪತ್ರೆಯ ಸಿಬ್ಬಂದಿಯಿಂದ ನಿಷ್ಕ್ರಿಯವಾಗಿವೆ ಎಂಬ ದೂರುಗಳಿವೆ. ಹಾಗೆಯೇ ಹಿಂದೆಂದೂ ವೆಂಟಿಲೇಟರ್ ತಯಾರಿಸದ ಕಂಪೆನಿಗೆ 10,000 ವೆಂಟಿಲೇಟರ್ ತಯಾರಿಸುವ ಗುತ್ತಿಗೆ ನೀಡಲಾಯಿತು ಎಂಬ ದೂರುಗಳೂ ಕೇಳಿಬಂದಿದ್ದವು.

ವರದಿಯಲ್ಲಿ ವಿವರಿಸಲಾದ ಇತರ ವೆಚ್ಚಗಳಲ್ಲಿ ದೇಶದ ವಲಸಿಗ ಜನಸಂಖ್ಯೆಗೆ ಸಹಾಯ ಮಾಡಲು 1,000 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಮತ್ತುಸಾಂಕ್ರಾಮಿಕ ರೋಗದ ಎರಡನೇ ಅಲೆ ಮತ್ತು ಪರಿಣಾಮವಾಗಿ ದೇಶದಲ್ಲಿ ಆಮ್ಲಜನಕದ ಕೊರತೆಯ ನಂತರ 162 ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ರೂ 201.58 ಕೋಟಿ ಖರ್ಚು ಮಾಡಲಾಗಿದೆ ಎಂದು ವರದಿಯಾಗಿದೆ.
ಇದಲ್ಲದೆ, ಲಸಿಕೆಗಳನ್ನು ಪರೀಕ್ಷಿಸಲು ಮತ್ತು ಬಿಡುಗಡೆ ಮಾಡಲು ಸರ್ಕಾರ ನಡೆಸುವ ಲ್ಯಾಬ್ಗಳನ್ನು ನವೀಕರಿಸಲು 20.41 ಕೋಟಿ ರೂ. ವ್ಯಯಿಸಲಾಗಿದೆ. ಬಿಹಾರದಲ್ಲಿ ಎರಡು ಕೋವಿಡ್ ಆಸ್ಪತ್ರೆಗಳು ಹಾಗೂ ದೇಶಾದ್ಯಂತ 16 ಆರ್ಟಿ-ಪಿಸಿಆರ್ ಪರೀಕ್ಷಾ ಪ್ರಯೋಗಾಲಯಗಳನ್ನು ಸ್ಥಾಪಿಸಲು ರೂ 50 ಕೋಟಿ ಖರ್ಚು ಮಾಡಲಾಗಿದೆ ಮತ್ತು ರೂ 1.01 ಲಕ್ಷವನ್ನು ಬ್ಯಾಂಕ್ ಶುಲ್ಕಕ್ಕಾಗಿ ಖರ್ಚು ಮಾಡಲಾಗಿದೆ ಎಂದು ವರದಿ ಹೇಳಿದೆ.
ಹಲವಾರು RTI ಕಾರ್ಯಕಕರ್ತರು ಕೇಂದ್ರ ಸರ್ಕಾರದ PM-CARES ಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿದ್ದರು ಆದರೆ ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಸರ್ಕಾರವು ಅದು ‘ಸಾರ್ವಜನಿಕ ಪ್ರಾಧಿಕಾರ’ ಅಲ್ಲ ಎನ್ನುವ ಕಾರಣ ನೀಡಿ ಅವುಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿತ್ತು. ಆದರೆ ಮೋದಿಯವರ ಕ್ಯಾಬಿನೆಟ್ನಲ್ಲಿನ ಮಂತ್ರಿಗಳೇ ಪಿಎಂ ಕೇರ್ಸ್ನ್ನು ನಿರ್ವಹಿಸುತ್ತಾರೆ ಮತ್ತು ನಿಯಂತ್ರಿಸುತ್ತಾರೆ, ಇದು ನಿಧಿಯು ಕೇಂದ್ರ ಸರ್ಕಾರದಿಂದಲೇ ನಿಯಂತ್ರಿಸಲ್ಪಡುತ್ತದೆ ಎಂಬುವುದನ್ನು ತೋರಿಸುತ್ತವೆ. ಅಲ್ಲದೆ ವೆಂಟಿಲೇಟರ್ಗಳಂತಹ ಸಂಪನ್ಮೂಲಗಳನ್ನು ಖರೀದಿಸಲು ಸರ್ಕಾರಿ ಯಂತ್ರೋಪಕರಣಗಳನ್ನು ಬಳಸಲಾಗಿದೆ, ಇದು FCRA ವ್ಯಾಪ್ತಿಯ ಹೊರಗಿದೆ, ಎಲ್ಲಕ್ಕಿಂತ ಮುಖ್ಯವಾಗಿ ಪಿಎಂ ಕೇರ್ಸ್ ‘.gov.in’ ಡೊಮೇನ್ ಅನ್ನು ಹೊಂದಿದೆ.