ಮೂಲ : ಸುಧೀಂದ್ರ ಕುಲಕರ್ಣಿ
Boycott’ Isn’t the Counter to Modi’s Attempt to Bypass the Indian Constitution
ದ ಕ್ವಿಂಟ್ 28 ಮೇ 2023
ಅನುವಾದ : ನಾ ದಿವಾಕರ
7 min read
ಮೇ 2014 ರಲ್ಲಿ ಅಧಿಕಾರ ವಹಿಸಿಕೊಂಡಾಗ, ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಸಂವಿಧಾನವು ಅವರ ಪಾಲಿಗೆ “ಪವಿತ್ರ ಗ್ರಂಥ” ಎಂದು ಘೋಷಿಸಿದರು. ಇದು ತಮ್ಮ ಸರ್ಕಾರಕ್ಕೆ ಏಕೈಕ “ಧರ್ಮ ಗ್ರಂಥ” ಅಥವಾ ಗ್ರಂಥವಾಗಿದೆ ಎಂದು ಅವರು ಹೇಳಿದ್ದರು. ಈ ದೃಷ್ಟಿಯಿಂದ ನೋಡಿದಾಗ, “ಭಾರತದ ಹೊಸ ಸಂಸತ್ತಿನ ಕಟ್ಟಡವನ್ನು ಯಾರು ಉದ್ಘಾಟಿಸಬೇಕಿತ್ತು?” ಎಂಬ ಪ್ರಶ್ನೆಯ ಬಗ್ಗೆ ಯಾವುದೇ ಚರ್ಚೆ ಅಥವಾ ವಿವಾದ ಇರಕೂಡದು. ನಿಸ್ಸಂಶಯವಾಗಿ ಅದು ಭಾರತದ ರಾಷ್ಟ್ರಪತಿಯೇ ಆಗಿರಬೇಕು. ಸಂವಿಧಾನದ ಮೂಲ ತತ್ವ ಮತ್ತು ಅಂತಃಸತ್ವವನ್ನು ಅನುಸರಿಸುವುದೇ ಆದರೆ ಅದು ಭಾರತದ ಪ್ರಧಾನ ಮಂತ್ರಿಯಾಗಲು ಸಾಧ್ಯವಿಲ್ಲ. ಆದರೆ ಸಂವಿಧಾನವನ್ನು ನಿರ್ಲಕ್ಷಿಸಲು ಬಯಸಿದರೆ ಅದು ಅನ್ಯ ವಿಚಾರವಾದೀತು ಅಥವಾ ನಾವು ಈಗ ಅಘೋಷಿತ ಅಧ್ಯಕ್ಷೀಯ ಆಡಳಿತ ವ್ಯವಸ್ಥೆಯನ್ನು ಹೊಂದಿದ್ದೇವೆ ಎಂದು ಭಾರತೀಯರು ಒಪ್ಪಿಕೊಳ್ಳಬೇಕೆಂದು ಬಯಸುವುದೇ ಆದರೆ ಆಗ ಪ್ರಧಾನ ಮಂತ್ರಿ ಗಣರಾಜ್ಯದ ನೈಜ, ಅಧಿಕೃತ ಮುಖ್ಯಸ್ಥರಾಗಿರುತ್ತಾರೆ.
ಭಾರತದ ರಾಷ್ಟ್ರಪತಿಗಳ ಪ್ರಾಧಾನ್ಯತೆ
ಸಂವಿಧಾನದಲ್ಲಿ ಸೂಚಿಸಿರುವ ತತ್ವವನ್ನು ಅರ್ಥಮಾಡಿಕೊಳ್ಳಲು, “ಸಂಪೂರ್ಣ ರಾಜ್ಯಶಾಸ್ತ್ರ”ದಲ್ಲಿ ಸ್ನಾತಕೋತ್ತರ ಪದವಿಯ ಅಗತ್ಯವಿಲ್ಲ. ಸಂವಿಧಾನವನ್ನು ಸರಳವಾಗಿ ಓದಿದರೆ ಸಾಕು. ಭಾರತದ ಪ್ರಭುತ್ವ ಮತ್ತು ಅದರ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯು ಮೂರು ಸ್ತಂಭಗಳ ಮೇಲೆ ನಿಂತಿದೆ. ಪ್ರಧಾನ ಮಂತ್ರಿ ಮುಖ್ಯಸ್ಥರಾಗಿರುವ ಸರ್ಕಾರ ಅಥವಾ ಕಾರ್ಯಾಂಗವು ಆ ಮೂರು ಸ್ತಂಭಗಳಲ್ಲಿ ಒಂದಾಗಿದೆ. ಶಾಸಕಾಂಗ ಮತ್ತು ನ್ಯಾಯಾಂಗ, ಅದರ ಇತರ ಎರಡು ಸ್ತಂಭಗಳು ಸ್ವತಂತ್ರವಾಗಿದ್ದು ಇವೆರಡೂ ಸಹ ಸರ್ಕಾರ ಅಥವಾ ಪ್ರಧಾನ ಮಂತ್ರಿಗೆ ಅಧೀನವಾಗಿರದೆ ಸ್ವತಂತ್ರ ಅಸ್ತಿತ್ವವನ್ನು ಹೊಂದಿರುತ್ತವೆ.
ಭಾರತೀಯ ಪ್ರಭುತ್ವದ ಮುಖ್ಯಸ್ಥರಾಗಿರುವ ಭಾರತದ ರಾಷ್ಟ್ರಪತಿಗಳು ಸಂವಿಧಾನದ ಸಂರಕ್ಷಕರೂ ಆಗಿರುತ್ತಾರೆ. ಶಾಸಕಾಂಗದ ಕಾರ್ಯ ನಿರ್ವಹಣೆಯಲ್ಲಿಯೂ, ಭಾರತದ ರಾಷ್ಟ್ರಪತಿಯ ಪರಮಾಧಿಕಾರವನ್ನು ಸಂವಿಧಾನದಲ್ಲಿಯೇ ಸ್ಪಷ್ಟವಾಗಿ ದೃಢೀಕರಿಸಲಾಗಿದೆ. ಅನುಚ್ಛೇದ 79 ಅನ್ನು ಗಮನಿಸಿ : “ಒಕ್ಕೂಟಕ್ಕೆ ಒಂದು ಸಂಸತ್ತು ಇರುತ್ತದೆ, ಅದು ರಾಷ್ಟ್ರಪತಿ ಮತ್ತು ಎರಡು ಸದನಗಳನ್ನು ಒಳಗೊಂಡಿರುತ್ತದೆ, ಇದನ್ನು ಕ್ರಮವಾಗಿ ರಾಜ್ಯಗಳ ಪರಿಷತ್ತು (ರಾಜ್ಯಸಭೆ) ಮತ್ತು ಜನತೆಯ ಸದನ (ಲೋಕಸಭೆ) ಎಂದು ಕರೆಯಲಾಗುತ್ತದೆ.” ಇದರ ಅರ್ಥವೇನೆಂದರೆ ರಾಷ್ಟ್ರಪತಿಗಳು ರಾಜ್ಯಸಭೆ ಮತ್ತು ಲೋಕಸಭೆಯ ಹಾಗೆಯೇ ಸಂಸತ್ತಿನ ಅವಿಭಾಜ್ಯ ಅಂಗವಾಗಿದ್ದಾರೆ. ಈ ಕಾರಣಕ್ಕಾಗಿಯೇ ಸಂವಿಧಾನದ ಅನುಚ್ಛೇದ 86 ಅಧ್ಯಕ್ಷರಿಗೆ ಈ ಕೆಳಗಿನ ಜವಾಬ್ದಾರಿಯನ್ನು ನೀಡುತ್ತದೆ:
• ರಾಷ್ಟ್ರಪತಿಗಳು ಸಂಸತ್ತಿನ ಯಾವುದೇ ಸದನವನ್ನುದ್ದೇಶಿಸಿ ಅಥವಾ ಒಟ್ಟಿಗೆ ಸೇರುವ ಜಂಟಿ ಸದನಗಳನ್ನುದ್ದೇಶಿಸಿ ಮಾತನಾಡಬಹುದು, ಮತ್ತು ಆ ಉದ್ದೇಶಕ್ಕಾಗಿ ಸದಸ್ಯರ ಹಾಜರಾತಿಯ ಅಗತ್ಯವಿರುತ್ತದೆ. ಆಗ ಸಂಸತ್ತಿನಲ್ಲಿ ಬಾಕಿ ಇರುವ ಮಸೂದೆಗೆ ಸಂಬಂಧಿಸಿದಂತೆ ಅಥವಾ ಬೇರೆ ರೀತಿಯಲ್ಲಿ ರಾಷ್ಟ್ರಪತಿಗಳು ಸಂಸತ್ತಿನ ಯಾವುದೇ ಸದನಕ್ಕೆ ಸಂದೇಶಗಳನ್ನು ಕಳುಹಿಸಬಹುದು ಮತ್ತು ಹೀಗೆ ಕಳುಹಿಸಲಾದ ಸಂದೇಶವನ್ನು ಪಡೆಯುವ ಸದನವು, ಎಲ್ಲಾ ಅನುಕೂಲಕರ ಸನ್ನಿವೇಶಗಳೊಂದಿಗೆ ಸಂದೇಶವು ಅಪೇಕ್ಷಿಸುವ ಯಾವುದೇ ವಿಷಯವನ್ನು ಗಣನೆಗೆ ತೆಗೆದುಕೊಳ್ಳಬೇಕು. ರಾಷ್ಟ್ರಪತಿ ಮತ್ತು ಸಂಸತ್ತಿನ ನಡುವೆ, ಮತ್ತೊಂದು ಸಾಂವಿಧಾನಿಕ ಕಚೇರಿಯೂ ಇರುತ್ತದೆ. ಅದು ಉಪರಾಷ್ಟ್ರಪತಿಯ ಹುದ್ದೆ. ಅವರು ರಾಜ್ಯಸಭೆಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಾರೆ.
ಸಾಂವಿಧಾನಿಕ ಶಿಷ್ಟಾಚಾರಗಳು ಮತ್ತು ಔಚಿತ್ಯಗಳು
ಅಧಿಕೃತ ಔಪಚಾರಿಕ ಉದ್ದೇಶಗಳಿಗಾಗಿ – ಸಂಸತ್ತಿನ ಹೊಚ್ಚ ಹೊಸ ಕಟ್ಟಡದ ಉದ್ಘಾಟನೆಯು ನಿಸ್ಸಂದೇಹವಾಗಿ ಅಂತಹ ಒಂದು ಅಧಿಕೃತ ಸಮಾರಂಭವಾಗಿದೆ – ರಾಷ್ಟ್ರಪತಿ ಮತ್ತು ಉಪಾಧ್ಯಕ್ಷರು ಪ್ರಧಾನ ಮಂತ್ರಿಗಿಂತ ಉನ್ನತ ಸ್ಥಾನದಲ್ಲಿದ್ದಾರೆ ಎಂದು ಭಾರತ ಗಣರಾಜ್ಯದ ಆದೇಶ ಅಥವಾ ಆದ್ಯತೆಯ ಸಂದೇಶವು ಸ್ಪಷ್ಟವಾಗಿ ಸೂಚಿಸುತ್ತದೆ. ಸಂಸತ್ತಿನ ಬಜೆಟ್ ಅಧಿವೇಶನದ ಆರಂಭಿಕ ಅಧಿವೇಶನಗಳ ಎಲ್ಲಾ ಫೋಟೋಗಳನ್ನು (ಅಂತರ್ಜಾಲದಲ್ಲಿ ಲಭ್ಯವಿದೆ) ನೋಡಿದರೆ ಇದು ಸ್ಪಷ್ಟವಾಗುತ್ತದೆ.
ಪ್ರಧಾನ ಮಂತ್ರಿಯಾದವರು ಯಾವಾಗಲೂ ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ಲೋಕಸಭೆಯ ಸ್ಪೀಕರ್ ಹಿಂದೆ ನಡೆಯುತ್ತಾರೆ. ಉಭಯ ಸದನಗಳ ಜಂಟಿ ಅಧಿವೇಶನವನ್ನುದ್ದೇಶಿಸಿ ರಾಷ್ಟ್ರಪತಿಗಳು ಭಾಷಣ ಮಾಡಿದಾಗ, ಅವರ ಅಕ್ಕಪಕ್ಕದಲ್ಲಿ ಉಪರಾಷ್ಟ್ರಪತಿ (ರಾಜ್ಯಸಭೆಯ ಅಧ್ಯಕ್ಷರಾಗಿ) ಮತ್ತು ಲೋಕಸಭೆಯ ಸ್ಪೀಕರ್ ವೇದಿಕೆಯ ಮೇಲೆ ಇರುತ್ತಾರೆ. ಪ್ರಧಾನಿ ವೇದಿಕೆಯ ಮೇಲೆ ಕುಳಿತುಕೊಳ್ಳುವುದಿಲ್ಲ, ಬದಲಾಗಿ ತಮ್ಮ ಲೋಕಸಭೆಯ ನಾಯಕ ಸಾಮರ್ಥ್ಯದಲ್ಲಿ ಸಂಸದರ ನಡುವೆ ಮುಂಚೂಣಿಯಲ್ಲಿ ಕುಳಿತುಕೊಳ್ಳುತ್ತಾರೆ.
ಇದಲ್ಲದೆ, ಪ್ರಧಾನ ಮಂತ್ರಿ ಲೋಕಸಭೆಯ ಚುನಾಯಿತ ಸದಸ್ಯರಾಗಿದ್ದರೆ, ಅವರು ರಾಜ್ಯಸಭೆಯ ಮೊದಲ ಸ್ಥಾನವನ್ನು ಅಲಂಕರಿಸಲು ಸಾಧ್ಯವಿಲ್ಲ. ಆಡಳಿತ ಪಕ್ಷಕ್ಕೆ ಸೇರಿದ ರಾಜ್ಯಸಭೆಯ ಸದಸ್ಯರೊಬ್ಬರು ಅದರ ನಾಯಕರಾಗುತ್ತಾರೆ ಮತ್ತು ಆ ಸಾಮರ್ಥ್ಯದಲ್ಲಿ, ಟ್ರೆಜರಿ ಬೆಂಚುಗಳಲ್ಲಿ ಮೊದಲ ಸ್ಥಾನವನ್ನು ಆಕ್ರಮಿಸುತ್ತಾರೆ. ಪ್ರಧಾನ ಮಂತ್ರಿ ಎರಡನೇ ಸ್ಥಾನವನ್ನು ಆಕ್ರಮಿಸಿಕೊಂಡಿದ್ದಾರೆ. ಹೀಗಾಗಿ, ರಾಜ್ಯಸಭೆಯಲ್ಲಿ ಮೋದಿ ತಮ್ಮದೇ ಸಚಿವ ಸಹೋದ್ಯೋಗಿ ಪಿಯೂಷ್ ಗೋಯಲ್ ಅವರ ಪಕ್ಕದಲ್ಲಿ ಕುಳಿತುಕೊಳ್ಳುತ್ತಾರೆ.
ಈ ಸಾಂವಿಧಾನಿಕ ಶಿಷ್ಟಾಚಾರಗಳು ಮತ್ತು ಔಚಿತ್ಯಗಳು ಸಂಸದೀಯ ಪ್ರಜಾಪ್ರಭುತ್ವದ ನೈತಿಕತೆ ಮತ್ತು ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಅವು ಸಂಸದೀಯ ಪ್ರಜಾಪ್ರಭುತ್ವದ ಸ್ವರೂಪವನ್ನು ಮಾತ್ರವಲ್ಲ, ಅದರ ಆತ್ಮ ಮತ್ತು ಸಾರವನ್ನೂ ನಿರ್ಧರಿಸುತ್ತವೆ. ನಿಸ್ಸಂಶಯವಾಗಿ, ಈ ನಿಯಮಗಳು ಮತ್ತು ಮಾನದಂಡಗಳು ತಮಗೆ ಅನ್ವಯಿಸುವುದಿಲ್ಲ ಎಂದು ಪ್ರಧಾನಿ ಮೋದಿ ನಂಬುತ್ತಾರೆ, ಏಕೆಂದರೆ ಅವರು ಭಾರತೀಯ ಸಂಸತ್ತಿಗೆ ಹೊಸ ಕಟ್ಟಡವನ್ನು ನಿರ್ಮಿಸುವ ನಿರ್ಧಾರವನ್ನು ಸ್ವತಃ ತಾವೇ ತೆಗೆದುಕೊಂಡಿರುವುದಾಗಿ ಭಾವಿಸುತ್ತಾರೆ. ಆದ್ದರಿಂದ, ಭವಿಷ್ಯದ ತಲೆಮಾರು ತನ್ನ ಹೆಸರನ್ನು ಮಾತ್ರ ನೂತನ ಸಂಸತ್ ಭವನದ ನಿರ್ಮಾತೃವಾಗಿ ನೆನಪಿಟ್ಟುಕೊಳ್ಳಬೇಕೆಂದು ಅವನು ಬಯಸುತ್ತಾರೆ. 2020 ರ ಡಿಸೆಂಬರ್ 10 ರಂದು ಹೊಸ ಕಟ್ಟಡದ ‘ಭೂಮಿ ಪೂಜೆ’ ನಡೆದಾಗಲೇ ಇದು ಸ್ಪಷ್ಟವಾಗಿತ್ತು. ಅಂದಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಥವಾ ಅಂದಿನ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರನ್ನು ಸಮಾರಂಭಕ್ಕೆ ಆಹ್ವಾನಿಸಲಿಲ್ಲ. ಅಂತೆಯೇ, ಹಾಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅಥವಾ ಹಾಲಿ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಅವರನ್ನು ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿಸಲಾಗಿಲ್ಲ.
ಪ್ರತಿಪಕ್ಷಗಳು ಉದ್ಘಾಟನೆಯನ್ನು ಬಹಿಷ್ಕರಿಸಬಾರದಿತ್ತು
ಈ ವಿಷಯದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಸರ್ಕಾರದ ನಡೆಯುವು ನಿಸ್ಸಂದೇಹವಾಗಿ ಅನುಚಿತವಾಗಿದೆ. ಆದರೆ ಇದಕ್ಕೆ ಸಂಬಂಧಿಸಿದಂತೆ ಮತ್ತೊಂದು ಪ್ರಶ್ನೆಯೂ ಉದ್ಭವಿಸಿದೆ. ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಉದ್ಘಾಟನಾ ಸಮಾರಂಭವನ್ನು ಬಹಿಷ್ಕರಿಸುವುದು ಸರಿಯೇ? ಈ ಬರಹಗಾರನ ಅಭಿಪ್ರಾಯದಲ್ಲಿ, ಅವರು ಸಹ ತಪ್ಪು ಮತ್ತು ಸಮರ್ಥನೀಯವಲ್ಲದ ನಿರ್ಧಾರವಾಗಿದೆ. ತಮ್ಮ ಪ್ರತಿಭಟನೆಯನ್ನು ಕಾನೂನುಬದ್ಧ ರೀತಿಯಲ್ಲಿ ದಾಖಲಿಸಿದ ನಂತರ, ಅವರು ಐತಿಹಾಸಿಕ ಸಮಾರಂಭದಲ್ಲಿ ಭಾಗವಹಿಸಬೇಕಾಗಿತ್ತು. ಸಂವಿಧಾನಕ್ಕೆ ಸರ್ಕಾರದ ಅಗೌರವ ಏನೇ ಇರಲಿ, ಸಂಸತ್ತು ಭಾರತದ ಎಲ್ಲಾ ಜನರಿಗೆ ಸೇರಿದೆ ಎಂಬುದು ಸತ್ಯ.
ಉದಾಹರಣೆಗೆ, ಛತ್ತೀಸ್ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು 2020 ರಲ್ಲಿ ಹೊಸ ವಿಧಾನಸಭಾ ಭವನಕ್ಕೆ ಶಂಕುಸ್ಥಾಪನೆ ಮಾಡಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಆಹ್ವಾನಿಸಿದ್ದಾರೆಯೇ ಹೊರತು ರಾಜ್ಯದ ರಾಜ್ಯಪಾಲರಲ್ಲ ಎಂದು ಬಿಜೆಪಿ ಗಮನಸೆಳೆದಾಗ ಪ್ರತಿಪಕ್ಷಗಳು ಉತ್ತರಿಸಲಾಗದೆ ತಬ್ಬಿಬ್ಬಾಗುತ್ತವೆ. ಅಂತೆಯೇ, ತೆಲಂಗಾಣದ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಕಳೆದ ತಿಂಗಳು ಹೈದರಾಬಾದ್‌ನಲ್ಲಿ ಹೊಸ ಸಚಿವಾಲಯದ ಕಟ್ಟಡವನ್ನು ರಾಜ್ಯಪಾಲರನ್ನು ಆಹ್ವಾನಿಸದೆ ಉದ್ಘಾಟಿಸಿದರು. ಈಗ ಬಿಜೆಪಿಯ ಸ್ಪಿನ್ ಮಾಸ್ಟರ್‌ಗಳು ಪ್ರತಿಪಕ್ಷಗಳ ಬಹಿಷ್ಕಾರದ ನಿರ್ಧಾರವನ್ನು ಸಂಸತ್ತಿಗೆ ಅಗೌರವದ ಕೃತ್ಯವೆಂದು ಟೀಕಿಸುತ್ತಾರೆ – ಮತ್ತು ಸಂವಿಧಾನದ ನಿಬಂಧನೆಗಳ ಬಗ್ಗೆ ತಿಳಿದಿಲ್ಲದ ಕಾರಣ ಅನೇಕ ಸಾಮಾನ್ಯ ಜನರು ಈ ಟೀಕೆಯಿಂದ ಪ್ರಭಾವಿತರಾಗಬಹುದು.
ಆಡಳಿತಾರೂಢ ಪಕ್ಷದ ಪ್ರಚಾರ ಯಂತ್ರವು ಈಗಾಗಲೇ ಕಾಂಗ್ರೆಸ್ ಪಕ್ಷವನ್ನು ಸೋಲಿಸುವ ಸಲುವಾಗಿ ಉದ್ದೇಶಪೂರ್ವಕ ಅಲ್ಲದಿದ್ದರೂ ಮತ್ತೊಂದು ಬಡಿಗೆಯೊಂದಿಗೆ ಸಜ್ಜಾಗಿದೆ.. ಅಧಿಕಾರ ಹಸ್ತಾಂತರದ ಸಂಕೇತವಾಗಿ 1947 ರ ಆಗಸ್ಟ್ 15 ರಂದು ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರಿಗೆ ಹಸ್ತಾಂತರಿಸಿದ್ದಾರೆ ಎಂದು ಹೇಳಲಾದ ತಮಿಳುನಾಡಿನ ಕೊನೆಯ ಬ್ರಿಟಿಷ್ ವೈಸ್‌ರಾಯ್ ಲಾರ್ಡ್ ಮೌಂಟ್ ಬ್ಯಾಟನ್ ಅವರ ಸಾಂಪ್ರದಾಯಿಕ ಕೋಲು ‘ಸೆಂಗೋಲ್’ ಬಗ್ಗೆ ಅದರ ಹೇಳಿಕೆಗಳು ಇನ್ನೂ ನಿರ್ಣಾಯಕವಾಗಿ ಸಾಬೀತಾಗಿಲ್ಲ.
ಅಲಹಾಬಾದ್‌ನಲ್ಲಿರುವ ನೆಹರೂ ಅವರ ಪೂರ್ವಜರ ಮನೆಯಾದ ಆನಂದ್ ಭವನದ ವಸ್ತುಸಂಗ್ರಹಾಲಯದಲ್ಲಿ ಈ ರಾಜತ್ವದ ಲಾಂಛನವನ್ನು ಇರಿಸಲಾಗಿದ್ದು, ಇದನ್ನು “ಚಿನ್ನದ ವಾಕಿಂಗ್ ಸ್ಟಿಕ್” ಎಂದು ಪ್ರದರ್ಶಿಸಲಾಗಿದೆ. ಬಿಜೆಪಿಯು ಈ ಸಂವೇದನಾಶೀಲ “ಹೊಸ ಆವಿಷ್ಕಾರ”ವನ್ನು ಬಳಸಿಕೊಂಡು ನೆಹರೂ ಮತ್ತು ಆ ಮೂಲಕ ಇಂದಿನ ಕಾಂಗ್ರೆಸ್ ಪಕ್ಷವು ಭಾರತದ ಸಾಂಸ್ಕೃತಿಕ ಸಂಪ್ರದಾಯಗಳಿಗೆ ಅಗೌರವ ತೋರುತ್ತಿದೆ ಎಂದು ಆರೋಪಿಸಿದೆ.
‘ಸೆಂಗೋಲ್’ ಮೋದಿ ಸರ್ಕಾರದ ಪಾಲಿಗೆ ಮತ್ತೊಂದು ಪ್ರಮುಖ ಸಾಂಕೇತಿಕ ಉದ್ದೇಶವನ್ನು ಈಡೇರಿಸಲು ಅಸ್ತ್ರವಾಗುತ್ತದೆ. ಮೇ 28ರಂದು ಪ್ರಧಾನಿಯವರು ಅದನ್ನು ತಮಿಳುನಾಡಿನ ಪುರೋಹಿತರಿಂದ ಔಪಚಾರಿಕವಾಗಿ ಸ್ವೀಕರಿಸಿ ಹೊಸ ಸಂಸತ್ತಿನಲ್ಲಿ ಮಂಡಿಸಿದ್ದಾರೆ. ಆದರೆ ಹೊಸ ‘ಸೆಂಗೋಲ್’ ಯಾವ ಅಧಿಕಾರ ಹಸ್ತಾಂತರವನ್ನು ಸಂಕೇತಿಸುತ್ತದೆ? ಇಲ್ಲಿ ನಿಸ್ಸಂದೇಹವಾಗಿ ಕಾಣುವುದೆಂದರೆ, ಭಾರತವು ಸಂಸದೀಯ ವ್ಯವಸ್ಥೆಯಿಂದ ಅಧ್ಯಕ್ಷೀಯ ಆಡಳಿತ ವ್ಯವಸ್ಥೆಗೆ ಪರಿವರ್ತನೆಗೊಂಡಿದೆ ಎಂದು ಸಾಂಕೇತಿಕವಾಗಿ, ಸೂಕ್ಷ್ಮವಾಗಿ ಘೋಷಿಸುತ್ತದೆ – ರಾಷ್ಟ್ರಪತಿಗಳು ಔಪಚಾರಿಕವಾಗಿ ರಬ್ಬರ್ ಸ್ಟಾಂಪ್ ಆಗಿ ಉಳಿಯಲಿದ್ದಾರೆ.
ನಿಷ್ಕ್ರಿಯ ಸಂಸತ್ತಿನ ಹೊಸ ಕಟ್ಟಡ, ಹಳೆಯ ಕಥೆ
ಮಾಧ್ಯಮಗಳು ತುಂಬಾ ಪ್ರಚಾರ ಮಾಡಿರುವ ‘ಸೆಂಗೋಲ್’ ಚರ್ಚೆಯು ವಾಸ್ತವವಾಗಿ ನಮ್ಮ ಅಸಮರ್ಪಕ ಪ್ರಜಾಪ್ರಭುತ್ವ ಎದುರಿಸುತ್ತಿರುವ ನೈಜ ಸಮಸ್ಯೆಯಿಂದ ರಾಷ್ಟ್ರದ ಗಮನವನ್ನು ಬೇರೆಡೆಗೆ ಸೆಳೆಯುವ ಉದ್ದೇಶವನ್ನು ಹೊಂದಿದೆ. ನಿಜ, ನಾವು ಈಗ ಭವ್ಯವಾದ ಹೊಸ ಸಂಸತ್ ಕಟ್ಟಡವನ್ನು ಹೊಂದಿದ್ದೇವೆ, ಇದು ಕಾಲಾನಂತರದಲ್ಲಿ ಭಾರತದ ಜನಸಂಖ್ಯೆಯ ಗಣನೀಯ ಏರಿಕೆಗೆ ಅನುಗುಣವಾಗಿ ಹೆಚ್ಚಿನ ಸಂಖ್ಯೆಯ ಸಂಸದರನ್ನು ಹೊಂದಿರುತ್ತದೆ. ಆದರೆ ಕಳೆದ ಎರಡು ಚುನಾವಣೆಗಳಲ್ಲಿ ಬಿಜೆಪಿ ಗೆದ್ದ ನಂತರ ಸಂಸತ್ತಿನ ಕಾರ್ಯನಿರ್ವಹಣೆಯಲ್ಲಿ ಯಾವುದೇ ಬದಲಾವಣೆಯನ್ನು ಇದು ಸೂಚಿಸುತ್ತದೆಯೇ? ಸಂವಿಧಾನದ ಬಗ್ಗೆ ಸರ್ಕಾರದ ಗೌರವದ ದೃಷ್ಟಿಯಿಂದ ಇದು ಹೊಸ ಆರಂಭವನ್ನು ಸೂಚಿಸುತ್ತದೆಯೇ? ದುರದೃಷ್ಟವಶಾತ್, ಕಳೆದ ಒಂಬತ್ತು ವರ್ಷಗಳ ದಾಖಲೆಗಳನ್ನು ನೋಡಿದರೆ ಇಲ್ಲಿ ಭರವಸೆಗೆ ಅವಕಾಶವಿಲ್ಲ.
1950 ರಲ್ಲಿ ಗಣರಾಜ್ಯವು ಹುಟ್ಟಿದಾಗಿನಿಂದ, ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವಿನ ಸಂಬಂಧವು ಈಗಿನಷ್ಟು ತೀಕ್ಷ್ಣವಾಗಿರಲಿಲ್ಲ. ಎರಡರ ನಡುವೆ ಯಾವುದೇ ವಿಶ್ವಾಸ ಉಳಿದಿಲ್ಲ. ವಾಸ್ತವವಾಗಿ, ಎರಡರ ನಡುವೆ ಯಾವುದೇ ಮಾತುಕತೆಗಳೂ ನಡೆಯುತ್ತಿಲ್ಲ. ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವೆ ಕನಿಷ್ಠ ಮಟ್ಟದ ಪರಸ್ಪರ ನಂಬಿಕೆ ಮತ್ತು ಸಂವಾದವಿಲ್ಲದೆ ಪ್ರಜಾಪ್ರಭುತ್ವವು ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಇದು ಸಂಪೂರ್ಣ ಇಲ್ಲವಾಗಿರುವುದೇ ಸಂಸತ್ತು ನಿಷ್ಕ್ರಿಯವಾಗಿದೆ ಎಂಬುದನ್ನು ಸಾಬೀತುಪಡಿಸುತ್ತದೆ.
ಇದಕ್ಕೆ ಇನ್ನೂ ಹೆಚ್ಚಿನ ಪುರಾವೆಗಳಿವೆ. ಪ್ರಧಾನ ಮಂತ್ರಿಗಳು ಸಂಸತ್ತಿನಲ್ಲಿ ವಿರಳವಾಗಿ ಉಪಸ್ಥಿತರಾಗಿರುತ್ತಾರೆ ಹಾಗೂ ಸದಸ್ಯರ ಪ್ರಶ್ನೆಗಳಿಗೆ ಯಾವುದೇ ಸಂದರ್ಭದಲ್ಲೂ ಉತ್ತರಿಸುವುದಿಲ್ಲ.. ಸಂಸತ್ತಿನಲ್ಲಿ ಕಲಾಪಗಳ ಮುಂದೂಡಿಕೆಗಳು ರೂಢಿಯಾಗಿ ಹೋಗಿದೆಯೇ ಹೊರತು ಅಪವಾದವಾಗಿ ಉಳಿದಿಲ್ಲ. ಯಾವುದೇ ಸಂದರ್ಭದಲ್ಲಿ ಗಮನಿಸಿದರೂ ಸಂಸತ್ತು ವರ್ಷದಲ್ಲಿ ಸುಮಾರು 60 ದಿನಗಳವರೆಗೆ ಮಾತ್ರ ಕಲಾಪ ನಡೆಸುತ್ತದೆ – 1952 ರಲ್ಲಿ ಮೊದಲ ಸಂಸತ್ತಿನಲ್ಲಿ 134 ದಿನಗಳ ಕಲಾಪ ನಡೆದಿತ್ತು. ಈ ವರ್ಷದ ಬಜೆಟ್ ಸೇರಿದಂತೆ ಹತ್ತು ಹಲವು ಪ್ರಮುಖ ಮಸೂದೆಗಳನ್ನು ಉಭಯ ಸದನಗಳು ಯಾವುದೇ ಚರ್ಚೆಯಿಲ್ಲದೆ ಅಂಗೀಕರಿಸಿವೆ.
ಭಾರತ-ಚೀನಾ ಗಡಿಯಲ್ಲಿನ ಉದ್ವಿಗ್ನತೆ, ರೈತರ ಮಸೂದೆಗಳು (ಇದು ಒಂದು ವರ್ಷದ ಶಾಂತಿಯುತ ಕಿನಾಸ್ ಆಂದೋಲನವನ್ನು ಪ್ರಚೋದಿಸಿತು) ಅಥವಾ ಕಾರ್ಪೊರೇಟ್ ಹಗರಣಗಳು ಸೇರಿದಂತೆ ಹಲವಾರು ಪ್ರಮುಖ ವಿಷಯಗಳ ಬಗ್ಗೆ ಚರ್ಚೆಗೆ ಸರ್ಕಾರ ಅವಕಾಶ ನೀಡಿಲ್ಲ. ಬಿಜೆಪಿ ವಿರೋಧ ಪಕ್ಷದಲ್ಲಿದ್ದಾಗ ‘ಸುಗ್ರೀವಾಜ್ಞೆ ರಾಜ್’ ನ್ನು ಟೀಕಿಸುತ್ತಿತ್ತು. ಈಗ ಮೋದಿ ಸರ್ಕಾರವು ಸುಗ್ರೀವಾಜ್ಞೆಗಳನ್ನು ತರುವ ಮೂಲಕ ಸಂಸತ್ತನ್ನು ಕಡೆಗಣಿಸುತ್ತಿದೆ. ನಾಗರಿಕ ಸೇವಾ ಸಿಬ್ಬಂದಿಯನ್ನು ನೇಮಿಸುವ ದೆಹಲಿ ಸರ್ಕಾರದ ಅಧಿಕಾರವನ್ನು ಎತ್ತಿಹಿಡಿಯುವ ಸುಪ್ರೀಂ ಕೋರ್ಟಿನ ಮಹತ್ವದ ತೀರ್ಪನ್ನು ರದ್ದುಗೊಳಿಸುವ ಸುಗ್ರೀವಾಜ್ಞೆ ಇತ್ತೀಚಿನ ಮತ್ತು ಅತ್ಯಂತ ಖಂಡನಾರ್ಹ ಕ್ರಮವಾಗಿದೆ.
ಇತ್ತೀಚಿನ ದಿನಗಳಲ್ಲಿ ಪ್ರಧಾನಿ ಮೋದಿಯವರು ಭಾರತದಲ್ಲಿ ಮತ್ತು ವಿದೇಶಗಳಲ್ಲೂ ಸಹ ಭಾರತವು ವಿಶ್ವದ ‘ಪ್ರಜಾಪ್ರಭುತ್ವದ ತಾಯಿ’ ಎಂದು ಹೇಳಲು ಎಂದಿಗೂ ಹಿಂಜರಿಯುವುದಿಲ್ಲ. ದುರದೃಷ್ಟವಶಾತ್, ಭಾರತವು ಹೊಸ ಸಂಸತ್ತನ್ನು ಉದ್ಘಾಟಿಸುವಾಗ, ಜಗತ್ತು ನೋಡುತ್ತಿರುವುದು ಭಗ್ನಗೊಂಡ ಪ್ರಜಾಪ್ರಭುತ್ವ ಮತ್ತು ಆಳವಾಗಿ ವಿಭಜಿತವಾಗಿರುವ ರಾಜಕಾರಣವನ್ನು.
ನಮ್ಮ ಮೊದಲ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್ ಅವರ ವಿವೇಕಯುತ ಹಾಗೂ ಎಚ್ಚರಿಕೆಯ ಮಾತುಗಳನ್ನು ಪ್ರಧಾನಿ ಮೋದಿ ಮತ್ತು ವಿರೋಧ ಪಕ್ಷದ ನಾಯಕರು ನೆನಪಿಸಿಕೊಳ್ಳುವುದು ಉಚಿತ ಎನಿಸುತ್ತದೆ. ಸಂವಿಧಾನ ಜಾರಿಗೆ ಬಂದ 26 ಜನವರಿ 1950 ರಂದು ಸಂವಿಧಾನ ಸಭೆಯ ಕೊನೆಯ ಅಧಿವೇಶನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, “ನಾವು ಪ್ರಜಾಪ್ರಭುತ್ವ ಸಂವಿಧಾನವನ್ನು ಸಿದ್ಧಪಡಿಸಿದ್ದೇವೆ. ಆದರೆ ಪ್ರಜಾಸತ್ತಾತ್ಮಕ ಸಂಸ್ಥೆಗಳ ಯಶಸ್ವೀ ಕಾರ್ಯನಿರ್ವಹಣೆಗೆ ಇತರರ ದೃಷ್ಟಿಕೋನಗಳನ್ನು ಗೌರವಿಸುವ ಇಚ್ಛಾಶಕ್ತಿ, ರಾಜಿ ಮತ್ತು ಹೊಂದಾಣಿಕೆಯ ಸಾಮರ್ಥ್ಯದ ಅಗತ್ಯವಿದೆ. ಸಂವಿಧಾನದಲ್ಲಿ ಬರೆಯಲಾಗದ ಅನೇಕ ವಿಷಯಗಳನ್ನು ಸಂಪ್ರದಾಯಗಳು ಮಾಡುತ್ತವೆ. ನಾವು ಆ ಸಾಮರ್ಥ್ಯಗಳನ್ನು ತೋರಿಸುತ್ತೇವೆ ಮತ್ತು ಆ ಸಂಪ್ರದಾಯಗಳನ್ನು ಅಭಿವೃದ್ಧಿಪಡಿಸುತ್ತೇವೆ ಎಂದು ನಾನು ಭಾವಿಸುತ್ತೇನೆ.” ಎಂದು ಹೇಳುತ್ತಾರೆ.
(ಮೂಲ ಲೇಖಕರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆಪ್ತ ಸಹಾಯಕರಾಗಿದ್ದರು. )
-೦-೦-೦-