ದೇಶದ ಹದಗೆಟ್ಟ ಆರ್ಥಿಕತೆಯ ಬಗ್ಗೆ ಚರ್ಚಿಸುವ ಧೈರ್ಯವಿಲ್ಲದೇ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಹುಟ್ಟು ಹಾಕಿದ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯ ಬಲೂನಿಗೆ ಅವರ ಆಪ್ತ ಆರ್ ಬಿ ಐ ಗವರ್ನರ್ ಶಕ್ತಿಕಾಂತ ದಾಸ್ ಸೂಚಿ ಚುಚ್ಚಿದ್ದಾರೆ. ಅಕ್ಟೋಬರ್ ತಿಂಗಳ ದ್ವೈಮಾಸಿಕ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಭಾರತದ ಆರ್ಥಿಕತೆಯು (ಜಿಡಿಪಿ) 2019-20ನೇ ಸಾಲಿನ ವಿತ್ತೀಯ ವರ್ಷದಲ್ಲಿ ಕೇವಲ ಶೇ.6.1ರಷ್ಟು ಎಂದು ಅಂದಾಜಿಸಿಸಲಾಗಿದೆ. 2020-21ನೇ ಸಾಲಿನ ವಿತ್ತೀಯ ವರ್ಷದ ಮೊದಲ ತ್ರೈಮಾಸಿಕದಲ್ಲಿ ಅದೂ ಉತ್ತಮ ಮಳೆಯಾದರೆ, ಶೇ.7.2ರಷ್ಟಾಗಬಹುದು ಎಂದು ಮುನ್ನಂದಾಜು ಮಾಡಲಾಗಿದೆ. ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅಧ್ಯಕ್ಷತೆಯಲ್ಲಿ ನಡೆದ ಹಣಕಾಸು ನೀತಿ ಸಮಿತಿ ಸಭೆಯೇ ಈ ಅಂಕಿ ಅಂಶಗಳನ್ನು ಒಪ್ಪಿ ಪ್ರಕಟಿಸಿರುವುದು ವಿಶೇಷ.
ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಆಪ್ತರು ಅಂಕಿ ಅಂಶಗಳನ್ನು ತಿರುಚುವುದರಲ್ಲಿ ನಿಪುಣರು ಎಂಬ ಆರೋಪಗಳನ್ನು ಬಿಜೆಪಿಯ ಹಿರಿಯ ನಾಯಕರಾದ ಯಶವಂತ್ ಸಿನ್ಹಾ, ಸುಬ್ರಮಣಿಯನ್ ಸ್ವಾಮಿ ಅವರೇ ಮಾಡಿದ್ದಾರೆ. ಅಂತಹದ್ದರಲ್ಲಿ, ಈಗ ಘೋಷಿತ ಜಿಡಿಪಿ ಮುನ್ನಂದಾಜು ದರ ಶೇ.6.1ರಷ್ಟು ಇದೆ ಎಂದಾದರೆ, ವಾಸ್ತವಿಕ ದರ ಇನ್ನೆಷ್ಟು ಇರಬಹುದು ಎಂಬುದು ನಿಜಕ್ಕೂ ಐದು ಟ್ರಿಲಿಯನ್ ಡಾಲರ್ ಪ್ರಶ್ನೆಯೇ ಸರಿ!
ದೇಶದಲ್ಲಿ ಹೆಚ್ಚಿದ ನಿರುದ್ಯೋಗ, ಉತ್ಪಾದನಾ ವಲಯ ಸೇರಿದಂತೆ ಬಹುತೇಕ ಎಲ್ಲಾ ವಲಯಗಳಲ್ಲಿನ ಹಿನ್ನಡೆಯಿಂದಾಗಿ ಉದ್ಭವಿಸಿರುವ ಆರ್ಥಿಕ ಹಿಂಜರಿತದ ಬಗ್ಗೆ ದೇಶದ ಆರ್ಥಿಕ ಚಿಂತಕರು ಚಿಂತೆ ಮಾಡುತ್ತಿದ್ದರೆ, ಸಾಮಾನ್ಯ ಜನರೂ ಚರ್ಚಿಸುತ್ತಿದ್ದರೆ, ಇಡೀ ದೇಶದ ಗಮನವನ್ನು ಬೇರೆಡೆಗೆ ಸೆಳೆಯುವ ಸಲುವಾಗಿ ಪ್ರಧಾನಿ ನರೇಂದ್ರಮೋದಿ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯ ಬಲೂನು ಹಾರಿಸಿದರು. ಸಾಮಾಜಿಕ ಜಾಲತಾಣಗಳ ಮೂಲಕ ಭಕ್ತರು ಮತ್ತು ಮೋದಿ ಕೃಪಾಕಟಾಕ್ಷ ಮಾಧ್ಯಮಗಳ ಮೂಲಕ ಮಂತ್ರಿಮಹೋದಯರು ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ಗಾಳಿ ಹಾಕತೊಡಗಿದ್ದರು.
ಅಷ್ಟಕ್ಕೂ ನಮ್ಮ ದೇಶದ ಆರ್ಥಿಕತೆ ಐದು ಟ್ರಿಲಿಯನ್ ಡಾಲರ್ ಮಟ್ಟ ಮುಟ್ಟ ಬೇಕಾದರೆ, ಮುಂದಿನ ಐದು ವರ್ಷಗಳಲ್ಲಿ ನಮ್ಮ ಜಿಡಿಪಿ ಅಭಿವೃದ್ಧಿ ದರ ಎರಡಂಕಿ ದಾಟಬೇಕು. ಅಂದರೆ ಪ್ರಸಕ್ತ ವಿತ್ತೀಯ ವರ್ಷವೂ ಸೇರಿದಂತೆ ಮುಂದಿನ ಐದು ವರ್ಷಗಳಲ್ಲಿ ಶೇ.10ಕ್ಕಿಂತ ಹೆಚ್ಚು ಅಭಿವೃದ್ಧಿ ಸಾಧಿಸಬೇಕು. ಸರಿ ಸುಮಾರು ಮುಂದಿನ ನಾಲ್ಕೂವರೆ ವರ್ಷಗಳ ವರೆಗೂ ನರೇಂದ್ರಮೋದಿಯೇ ಪ್ರಧಾನಿಯಾಗಿರುವುದರಿಂದ ಎರಡಂಕಿ ಅಭಿವೃದ್ಧಿ ಸಾಧ್ಯವೇ ಇಲ್ಲ ಎಂಬುದಕ್ಕೆ ಹೆಚ್ಚಿನ ಆರ್ಥಿಕ ಜ್ಞಾನವೇನೂ ಬೇಕಿಲ್ಲ. ಏಕೆಂದರೆ ನರೇಂದ್ರಮೋದಿ ಅಧಿಕಾರಕ್ಕೆ ಬಂದ ನಂತರ ದೇಶದ ಆರ್ಥಿಕತೆ ಕುಸಿತದ ಹಾದಿಯಲ್ಲಿ ಸಾಗಿದೆ.

ಕಳೆದ ತ್ರೈಮಾಸಿಕದಲ್ಲಿ ಆರು ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಪ್ರಸಕ್ತ ವಿತ್ತೀಯ ವರ್ಷದಲ್ಲಿ ಶೇ.6.1ರಷ್ಟು ಮತ್ತು ಮುಂದಿನ ವರ್ಷದ ಮೊದಲ ತ್ರೈಮಾಸಿಕದಲ್ಲಿ ಅದೂ ಉತ್ತಮ ಮಳೆಯಾದರೆ ಮಾತ್ರ ಶೇ.7.2ರಷ್ಟು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಮುನ್ನಂದಾಜು ಮಾಡಿದೆ. ದೇಶದ ಪ್ರಸಕ್ತ ಆರ್ಥಿಕ ಪರಿಸ್ಥಿತಿಯನ್ನು ಅವಲೋಕಿಸಿದರೆ, ಮುಂದಿನ ವಿತ್ತೀಯ ವರ್ಷದಲ್ಲಿ ಜಿಡಿಪಿ ದರ ಶೇ.7ನ್ನು ದಾಟುವುದಿರಲಿ, ಶೇ.6ರಷ್ಟನ್ನು ಕಾಯ್ದುಕೊಳ್ಳುವುದೂ ಕಷ್ಟವಿದೆ. ಹೀಗಾಗಿ ಬರುವ ದಿನಗಳಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಈ ಅಂಕಿ ಅಂಶಗಳು ಋಣಾತ್ಮಣ ಹಾದಿಯಲ್ಲಿ ಪರಿಷ್ಕರಿಸುವುದು ಬಹುತೇಕ ನಿಚ್ಚಳ.
ಅಷ್ಟಕ್ಕೂ ಏನಿದು ಈ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆ?
ಜಗತ್ತಿನಲ್ಲಿ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧಿಸಿರುವುದು ಮೂರೇ ದೇಶಗಳು. ಅಮೆರಿಕಾ (21.506 ಟ್ರಿಲಿಯನ್) , ಚೀನಾ (14.242 ಟ್ರಿಲಿಯನ್) ಮತ್ತು ಜಪಾನ್ (5.231 ಟ್ರಿಲಿಯನ್). ಜರ್ಮನಿ(4.210 ಟ್ರಿಲಿಯನ್) ಮತ್ತು ಯುನೈಟೆಡ್ ಕಿಂಗ್ಡಮ್ (2.982 ಟ್ರಿಲಿಯನ್) ಆ ಹಾದಿಯಲ್ಲಿ ಹೆಜ್ಜೆ ಹಾಕುತ್ತಿವೆ. ಜಾಗತಿಕ ಆರ್ಥಿಕ ಶಕ್ತಿಯ ಪೈಕಿ ಆರನೇ ಸ್ಥಾನಕ್ಕಾಗಿ ಭಾರತ (2.935 ಟ್ರಿಲಿಯನ್) ಮತ್ತು ಫ್ರಾನ್ಸ್ (2.934 ಟ್ರಿಲಿಯನ್) ನಡುವೆ ಹಗ್ಗ ಜಗ್ಗಾಟ ನಡೆದಿದೆ. 2018 ಜುಲೈ ತಿಂಗಳಲ್ಲಿ ಭಾರತವು ಮೊದಲ ಭಾರಿಗೆ ಫ್ರಾನ್ಸ್ ದೇಶವನ್ನು ಹಿಂದಿಕ್ಕಿ ಆರನೇ ಸ್ಥಾನಕ್ಕೇರಿತ್ತು. ಆದರೆ, ಆ ಸಂಭ್ರಮ ಇದ್ದದ್ದು ನಾಲ್ಕೇ ತಿಂಗಳು ಮಾತ್ರ. ನವೆಂಬರ್ ತಿಂಗಳಲ್ಲಿ ಮತ್ತೆ ಫ್ರಾನ್ಸ್ ಆರನೇ ಸ್ಥಾನಕ್ಕೇರಿತು. ಇತ್ತೀಚೆಗೆ ಭಾರತ ಮತ್ತೆ ಆರನೇ ಸ್ಥಾನಕ್ಕೇರಿದೆ ಎಂಬ ವರದಿಗಳು ಬಂದಿವೆ. ಅದು ಭಾರತದ ಜಿಡಿಪಿ ಶೇ.7.5 ರಷ್ಟು ಎಂಬ ಮುನ್ನಂದಾಜಿನ ಲೆಕ್ಕಾಚಾರದಿಂದ ಆದ ಪದೋನ್ನತಿ. ಪ್ರಸ್ತುತ ಭಾರತದ ಆರ್ಥಿಕ ಸ್ಥಿತಿ ಹೀಗೆಯೇ ಮುಂದುವರೆದರೆ, ಫಾನ್ಸ್ ದೇಶವನ್ನು ಹಿಂದಿಕ್ಕಿ ಏಳನೇ ಸ್ಥಾನಕ್ಕೇರುವುದು ಕಷ್ಟ ಸಾಧ್ಯ.
ಒಂದು ಟ್ರಿಲಿಯನ್ ಎಂದರೆ ಒಂದು ಲಕ್ಷ ಕೋಟಿ. ಒಂದು ಟ್ರಿಲಿಯನ್ ಡಾಲರ್ ಅನ್ನು ರುಪಾಯಿಗೆ ಪರಿವರ್ತಿಸಿದಾಗ 70 ಲಕ್ಷ ಕೋಟಿ ರುಪಾಯಿ ಆಗುತ್ತದೆ. ಪ್ರಸ್ತುತ ಭಾರತದ ಆರ್ಥಿಕ ಮೌಲ್ಯವು, ಫೋಕಸ್ ಡಾಟ್ ಎಕನಾಮಿಕ್ಸ್ (www.focus.economics.com) ಅಂಕಿ ಅಂಶಗಳ ಪ್ರಕಾರ, 2019ರಲ್ಲಿ 2.935 ಟ್ರಿಲಿಯನ್ ಡಾಲರ್. ಅಂದರೆ, ಭಾರತೀಯ ರುಪಾಯಿಗಳ ಲೆಕ್ಕದಲ್ಲಿ ಸುಮಾರು 200 ಲಕ್ಷ ಕೋಟಿ ರುಪಾಯಿಗಳಷ್ಟು. ಭಾರತ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧಿಸಬೇಕಾದರೆ, ಜಿಡಿಪಿ ಮೌಲ್ಯವು 350 ಲಕ್ಷ ಕೋಟಿ ರುಪಾಯಿಗಳಾಷ್ಟಬೇಕು. ಅಂದರೆ, ಇನ್ನೂ 150 ಲಕ್ಷ ಕೋಟಿ ರುಪಾಯಿಗಳಷ್ಟು ಮೌಲ್ಯದಷ್ಟು ಹೆಚ್ಚುವರಿ ಅಭಿವೃದ್ಧಿ ಸಾಧಿಸಬೇಕು.
ಆರ್ಥಿಕ ಅಭಿವೃದ್ಧಿಯ ಮೂಲ ಇಂಧನವೇ ಉದ್ಯೋಗ ಸೃಷ್ಟಿ. ಜನರ ಖರೀದಿ ಶಕ್ತಿಯೇ ಆರ್ಥಿಕತೆಯ ವೇಗವರ್ಧಕದ ವಾಹಕ. ಭಾರತದಲ್ಲೀಗ ಅಭಿವೃದ್ಧಿಯ ಇಂಧನವೂ ಇಲ್ಲ, ವೇಗವರ್ಧಕ ವಾಹಕವೂ ಇಲ್ಲ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಸರ್ವಕಾಲಿಕ ಗರಿಷ್ಠ ಪ್ರಮಾಣದಲ್ಲಿದೆ. ಜನರ ಖರೀದಿ ಶಕ್ತಿ ಇಂಗಿ ಹೋಗಿದ್ದು, ವಾಹನ, ಗೃಹೋಪಯೋಗಿ ವಸ್ತುಗಳು ಸೇರಿದಂತೆ ಸಿದ್ದ ಸರಕುಗಳನ್ನು ಕೊಳ್ಳುವವರೇ ಇಲ್ಲದೇ ಗೋದಾಮುಗಳಲ್ಲಿ ಧೂಳುಹಿಡಿಯುತ್ತಿವೆ. ಸೇವಾ ವಲಯವೂ ಹಿಂಜರಿತ ತೆಕ್ಕೆಗೆ ಸಿಕ್ಕಿಬಿದ್ದಿದೆ. ಉತ್ಪಾದನಾ ವಲಯವೂ ಹಿಂಜರಿತದ ಬಿಗಿಮುಷ್ಠಿಯಿಂದ ನಲುಗಿದೆ. ಈ ಹಂತದಲ್ಲಿ ಅಭಿವೃದ್ಧಿದರವನ್ನು ಎರಡಂಕಿಗೆ ಏರಿಸುವ ಯಾವ ಮಂತ್ರದಂಡವೂ ನರೇಂದ್ರಮೋದಿ ಅವರ ಬಳಿ ಇಲ್ಲ. ದೇಶವನ್ನು ಐದು ಟ್ರಿಲಿಯನ್ ಡಾಲರ್ ಆರ್ಥಿಕ ಶಕ್ತಿಯಾಗಿ ರೂಪಿಸಲು ಅಂಕಿ ಅಂಶಗಳನ್ನು ತಿರುಚುವುದರ ಹೊರತಾಗಿ ಬೇರಾವ ಪರಿಹಾರವೂ ಅವರ ಮುಂದೆ ಇಲ್ಲ.

ಈಗ ಜಾಗತಿಕ ಆರ್ಥಿಕ ಶಕ್ತಿಗಳ ಪೈಕಿ ಆರನೇ ಸ್ಥಾನವನ್ನಾದರೂ ಉಳಿಸಿಕೊಳ್ಳಬೇಕಾದರೆ, ನರೇಂದ್ರ ಮೋದಿ ಸರ್ಕಾರ ದೇಶದ ಆರ್ಥಿಕತೆಯು ಹಿಂಜರಿತ ಅಂಚಿನಲ್ಲಿರುವ ವಾಸ್ತವಿಕ ಪರಿಸ್ಥಿತಿಯನ್ನು ಒಪ್ಪಿಕೊಳ್ಳಬೇಕು. ಉದ್ಯೋಗ ಸೃಷ್ಟಿಸುವ ಕಾರ್ಯಸಾಧ್ಯ ರಚನಾತ್ಮಕ ಯೋಜನೆಗಳನ್ನು ತ್ವರಿತ ಜಾರಿ ಮಾಡಬೇಕು. ಜನರ ಖರೀದಿ ಶಕ್ತಿ ಉದ್ದೀಪಿಸುವ ಕಾರ್ಯಕ್ರಮಗಳನ್ನು ರೂಪಿಸಬೇಕು. ಕಾರ್ಪೊರೆಟ್ ವಲಯಕ್ಕೆ ವಾರ್ಷಿಕ 1.45 ಲಕ್ಷ ಕೋಟಿ ರುಪಾಯಿ ತೆರಿಗೆ ರಿಯಾಯ್ತಿ ನೀಡುವ ಬದಲು ಅದನ್ನೇ ಉದ್ಯೋಗ ಸೃಷ್ಟಿಸುವ ಯೋಜನೆಗಳಿಗೆ ಮತ್ತು ಜನರ ಖರೀದಿ ಶಕ್ತಿ ಹೆಚ್ಚಿಸುವ ಕಾರ್ಯಕ್ರಮಗಳಿಗೆ ಬಳಸಿದ್ದರೆ, ಆರ್ಥಿಕತೆಯ ಮುಖ್ಯವಾಹಿನಿಯಲ್ಲಿ ನಗದು ಹರಿವಿನ ಪ್ರಮಾಣ ಹೆಚ್ಚಿ ಒಟ್ಟಾರೆ ಆರ್ಥಿಕತೆಗೆ ಚೇತರಿಕೆ ಬರುತ್ತಿತ್ತು. ಕಾರ್ಪೊರೆಟ್ ತೆರಿಗೆ ಕಡಿತದಿಂದಾಗಿ ನರೇಂದ್ರ ಮೋದಿ ಹೌಡಿ ಕಾರ್ಯಕ್ರಮಕ್ಕೂ ಮುನ್ನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೋದಿ ಸರ್ಕಾರದ ಬಗ್ಗೆ ಒಂದಷ್ಟು ಸಕಾರಾತ್ಮಕ ಚರ್ಚೆ ನಡೆದಿರುವುದು ನಿಜಾ. ಹಾಗಂತ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದ ಸಕಾರಾತ್ಮಕ ಚರ್ಚೆಗಳು ನಮ್ಮ ದೇಶದ ಹಳಿತಪ್ಪಿರುವ ಆರ್ಥಿಕತೆಯನ್ನು ಸರಿದಾರಿಗೆ ತರಲಾರವು ಎಂಬುದು ಈ ಹೊತ್ತಿನ ವಾಸ್ತವ ಮತ್ತು ಕಟುಸತ್ಯ.!