ಸಂಸತ್ತಿನಲ್ಲಿ ನೆಹರೂ ಅವರನ್ನು ಹೊಗಳಿ ಈಗಿನ ಸಂಸದರ ಬಗ್ಗೆ ವಿಷಾದ ವ್ಯಕ್ತಪಡಿಸಿದ ಸಿಂಗಾಪುರ ಪ್ರಧಾನಿ: ವಿದೇಶಾಂಗ ಇಲಾಖೆಯಿಂದ ತಕರಾರು ಸಲ್ಲಿಕೆ
‘Electoral watchdog Association for Democratic Reforms’ ಪ್ರಕಾರ 2019 ರಲ್ಲಿ ಚುನಾಯಿತರಾದ 17ನೇ ಲೋಕಸಭೆಯು ಗಂಭೀರ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿರುವ ಅತಿ ಹೆಚ್ಚು ಸದಸ್ಯರನ್ನು ಹೊಂದಿದೆ. ಹೊಸದಾಗಿ ಚುನಾಯಿತರಾದ ಸಂಸದರಲ್ಲಿ ಸುಮಾರು 43% ರಷ್ಟು ಕ್ರಿಮಿನಲ್ ಆರೋಪಗಳನ್ನು ಹೊಂದಿದ್ದರೆ, 29% ಕೊಲೆ ಮತ್ತು ಅತ್ಯಾಚಾರದಂತಹ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ. ಈಗ ಇದೇ ವಿಚಾರ ಸಿಂಗಾಪುರ್ ಸಂಸತ್ತಿನಲ್ಲೂ ಮಾರ್ದನಿಸಿದ್ದು ಭಾರತದ ಮಾನ ಅಂತರರಾಷ್ಟ್ರೀಯ ಮಟ್ಟದಲ್ಲಿ ಹರಾಜು ಆದಂತಾಗಿದೆ.
ಸಿಂಗಾಪುರದ ಸಂಸತ್ತಿನಲ್ಲಿ ಒಂದು ಚರ್ಚೆಯ ಸಂದರ್ಭದಲ್ಲಿ ಅಲ್ಲಿನ ಪ್ರಧಾನಿ ಒಂದು ದೇಶದಲ್ಲಿ ಸಂಸತ್ತು ಹೇಗೆ ಕಾರ್ಯನಿರ್ವಹಿಸಬೇಕು ಎನ್ನುವುದಕ್ಕೆ ಜವಾಹರ್‌ಲಾಲ್ ನೆಹರು ಉತ್ತಮ ಉದಾಹರಣೆ ಎಂದಿದ್ದಾರೆ. ಆದರೆ ಈಗ ಅದೇ ಭಾರತದ ಸಂಸತ್ತಿನಲ್ಲಿ ಅರ್ಧದಷ್ಟು ಮಂದಿ ಕ್ರಿಮಿನಲ್ ಪ್ರಕರಣವನ್ನು ಎದುರಿಸುತ್ತಿದ್ದಾರೆ ಎಂದಿದ್ದಾರೆ.
ತಮ್ಮ ಭಾಷಣದಲ್ಲಿ, ಸಿಂಗಾಪುರದ ಪ್ರಧಾನಿ ಇಸ್ರೇಲ್ ಮತ್ತು ಭಾರತದ ಸ್ಥಾಪಕ ಪಿತಾಮಹರು ಯುವ ರಾಷ್ಟ್ರಗಳಿಗೆ ನಿರ್ದೇಶನವನ್ನು ನೀಡಿದ “ಅಸಾಧಾರಣ ವ್ಯಕ್ತಿಗಳು” ಎಂದು ಹೊಗಳಿದ್ದಾರೆ. ಇಸ್ರೇಲ್ ಮತ್ತು ಭಾರತ ಎರಡರಲ್ಲೂ ಮೊದಲ ಸಾಲಿನಲ್ಲಿದ್ದ ನಾಯಕರ ದೂರದೃಷ್ಟಿ ಈಗ ಕಳೆದುಹೋಗಿದೆ ಎಂದು ಪ್ರಧಾನಿ ಲೀ ವಿವರಿಸಿದ್ದಾರೆ.
“ಎರಡು ವರ್ಷಗಳಲ್ಲಿ ನಾಲ್ಕು ಸಾರ್ವತ್ರಿಕ ಚುನಾವಣೆಗಳ ಹೊರತಾಗಿಯೂ, ಬೆನ್-ಗುರಿಯನ್ ಅವರ ಇಸ್ರೇಲ್‌ನಲ್ಲಿ ಸ್ಥಿರ ಸರ್ಕಾರವಿಲ್ಲ. ಜೊತೆಗೆ ಇಸ್ರೇಲ್‌ನಲ್ಲಿ ಹಿರಿಯ ರಾಜಕಾರಣಿಗಳು ಮತ್ತು ಅಧಿಕಾರಿಗಳು ಹಲವು ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದಾರೆ, ಕೆಲವರು ಜೈಲಿಗೂ ಹೋಗಿದ್ದಾರೆ” ಎಂದಿರುವ ಅವರು “ಮಾಧ್ಯಮ ವರದಿಗಳ ಪ್ರಕಾರ, ನೆಹರೂ ಅವರ ಭಾರತದಲ್ಲೂ ಲೋಕಸಭೆಯಲ್ಲಿ ಅರ್ಧದಷ್ಟು ಸಂಸದರ ವಿರುದ್ಧ ಅತ್ಯಾಚಾರ ಮತ್ತು ಕೊಲೆಯ ಆರೋಪಗಳು ಸೇರಿದಂತೆ ಕ್ರಿಮಿನಲ್ ಮೊಕದ್ದಮೆಗಳು ಬಾಕಿ ಉಳಿದಿದೆ” ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

“ಸಮಗ್ರತೆಯನ್ನು ಎತ್ತಿ ಹಿಡಿಯುವುದಕ್ಕಾಗಿ ಎಲ್ಲರಿಗೂ ಒಂದೇ ರೀತಿಯ ಮಾನದಂಡಗಳನ್ನು ಜಾರಿಗೊಳಿಸುವ ಕಡೆ ಹೆಚ್ಚಿನ ಆಸ್ಥೆ ವಹಿಸಬೇಕು” ಎಂದು ಅವರು ಸಂಸತ್ತಿನಲ್ಲಿ ಮಾಡಿದ ಭಾಷಣದಲ್ಲಿ ಹೇಳಿದ್ದಾರೆ. ಪ್ರಜಾಸತ್ತಾತ್ಮಕ ಅವನತಿ, ಸುಳ್ಳು ಸುದ್ದಿ, ರಾಜಕೀಯ ಪ್ರೇರೇಪಿತ ಆರೋಪಗಳ ಬಗ್ಗೆ ಮಾತನಾಡುತ್ತಾ ಅವರು ಈ ಮಾತುಗಳನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.
ಆದರೆ ಭಾರತೀಯ ಸಂಸತ್ತಿನಲ್ಲಿ ಕ್ರಿಮಿನಲ್‌ಗಳು ತುಂಬಿದ್ದಾರೆ ಎಂದು ಹೇಳಿರುವ ಸಿಂಗಾಪುರ್ ಪ್ರಧಾನಿಯವರ ಹೇಳಿಕೆಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಕರಾರು ಸಲ್ಲಿಸಿದೆ. “ಸಿಂಗಾಪೂರ್ ಪ್ರಧಾನಿಯವರ ಟೀಕೆಗಳು ಬೇಡವಾಗಿತ್ತು, ನಾವು ಈ ಬಗ್ಗೆ ಪ್ರತಿಭಟನೆ ದಾಖಲಿಸಿದ್ದೇವೆ” ಎಂದು ಅದು ಹೇಳಿದೆ.
ಭಾರತದಲ್ಲಿ ಪಂಚರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು ಪ್ರಧಾನಿಯಾದಿಯಾಗಿ ಆಡಳಿತ ಪಕ್ಷದ ನಾಯಕರು ಪದೇ ಪದೇ ನೆಹರೂ ಅವರ ಬಗ್ಗೆ ಪ್ರಶ್ನೆಗಳನ್ನು ಮಾಡುತ್ತಿದ್ದಾರೆ. ಅವರ ವಿದೇಶಾಂಗ ನೀತಿಯಿಂದ ಹಿಡಿದು ಆರ್ಥಿಕ ನೀತಿಯವರೆಗೂ ಇಲ್ಲಿ ಇನ್ನೂ ಚರ್ಚೆಗಳಾಗುತ್ತಿದೆ. ಅಂತದ್ದರಲ್ಲಿ ವಿದೇಶದ ಸರ್ಕಾರವೊಂದು ನೆಹರೂ ಅವರ ಬಗ್ಗೆ ಹೇಳಿರುವ ಮತ್ತು ಈಗಿನ ಸಂಸದರ ಬಗ್ಗೆ ವ್ಯಕ್ತಪಡಿಸಿರುವ ವಿಷಾದ ಸಹಜವಾಗಿಯೇ ಆಡಳಿತ ಪಕ್ಷಕ್ಕೆ ಮುಜುಗರ ತಂದಿದೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಸಿಂಗಾಪುರ್ ಪ್ರಧಾನಿಯವರ ನೆಹರೂ ಬಗೆಗಿನ ಮೆಚ್ಚುಗೆಯ ಮಾತುಗಳು ವೈರಲ್ ಆಗಿದ್ದು ನೂರಾರು ಬಾರಿ ಶೇರ್, ರಿಟ್ವೀಟ್ ಆಗಿದೆ.