ಬೆಂಗಳೂರು : ರಾಜಕೀಯ ನಿವೃತ್ತಿ ಘೋಷಣೆ ಮಾಡಿರುವ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಸದ್ಯ ವಿಶ್ರಾಂತಿ ಜೀವನವನ್ನು ನಡೆಸುತ್ತಿದ್ದಾರೆ. ಬಿಜೆಪಿಯ ಸದಸ್ಯನಾಗಿರುವ ಈಶ್ವರಪ್ಪ ಸಂಘಪರಿವಾರದಲ್ಲಿ ಗುರುತಿಸಿಕೊಂಡವರು. ಇದೇ ಕಾರಣಕ್ಕೆ ಪಿಎಫ್ಐ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪರನ್ನು ಹತ್ಯೆ ಮಾಡಲು ಸಂಚು ರೂಪಿಸಿತ್ತು ಎಂಬ ಸ್ಫೋಟಕ ಮಾಹಿತಿಯೊಂದು ಹೊರ ಬಿದ್ದಿದೆ.

ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದ ಪಿಎಫ್ಐ ಸಂಘಟನೆಯ ನಾಯಕ ಜಯೇಶ್ ಪೂಜಾರಿ ಅಲಿಯಾಸ್ ಶಾಹಿರ್ ಶೇಖ್ ಈ ಸ್ಫೋಟಕ ಮಾಹಿತಿಯನ್ನು ಬಾಯ್ಬಿಟ್ಟಿದ್ದಾನೆ. ಜನತೆಯಲ್ಲಿ ಪಿಎಫ್ಐ ಸಂಘಟನೆ ಬಗ್ಗೆ ಶಾಶ್ವತವಾದ ಭಯವನ್ನು ಹುಟ್ಟಿಸೋಕೆ ಇಂತಹದ್ದೊಂದು ಪ್ಲಾನ್ ಮಾಡಿದ್ದಾಗಿ ನಾಗ್ಪುರ ಪೊಲೀಸರ ಎದುರು ಸತ್ಯ ಕಕ್ಕಿದ್ದಾನೆ.
ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದಾಗಲೇ ಜಯೇಶ್ ಪೂಜಾರಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಕಚೇರಿಗೆ ಕರೆ ಮಾಡಿ ಪ್ರಮುಖ ರಾಜಕೀಯ ನಾಯಕನನ್ನು ಕೊಲೆ ಮಾಡೋದಾಗಿ ಬೆದರಿಕೆಯೊಡ್ಡಿದ್ದ. ಇದಾದ ಬಳಿಕ ತನಿಖೆ ನಡೆಸಿದ ನಾಗ್ಪುರ ಪೊಲೀಸರು ಜಯೇಶ್ ಪೂಜಾರಿಯನ್ನು ವಶಕ್ಕೆ ಪಡೆದಿದ್ದು ಈ ಸ್ಪೋಟಕ ಮಾಹಿತಿಯನ್ನು ಹೊರ ಹಾಕಿದ್ದಾರೆ.