ಒಂದು ಕಡೆ ಪ್ರತಿ ಪಕ್ಷ ಕಾಂಗ್ರೆಸ್ ಬೆಲೆ ಏರಿಕೆಯ ವಿರುದ್ಧ ಪ್ರತಿಭಟನೆ ತೀವ್ರಗೊಳಿಸಿದ್ದರೆ, ಮತ್ತೊಂದು ಕಡೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಲೀಟರಿಗೆ ನೂರು ರೂಪಾಯಿ ಮೀರಿ ದಿನೇ ದಿನೇ ಹೊಸ ಹೊಸ ದಾಖಲೆಯ ಜಿಗಿತ ಕಾಣತೊಡಗಿವೆ. ಆದರೆ, ಮುಖ್ಯಮಂತ್ರಿ ಯಡಿಯೂರಪ್ಪ ಮಾತ್ರ, ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆಯ ವಿಷಯದಲ್ಲಿ ಕಾಂಗ್ರೆಸ್ ರಾಜಕಾರಣ ಮಾಡಬಾರದು ಎಂದು ಕಿವಿಮಾತು ಹೇಳಿದ್ದಾರೆ.
ಕರೋನಾ ಲಾಕ್ ಡೌನ್ ನಿಂದಾಗಿ ದುಡಿಮೆ ಇಲ್ಲದೆ ಹೊತ್ತಿನ ಊಟಕ್ಕೇ ಜನಸಾಮಾನ್ಯರು ಅಂಗಾಲಾಚುವ ಭೀಕರ ಕ್ಷಾಮದ ಪರಿಸ್ಥಿತಿ ನಿರ್ಮಾಣವಾಗಿರುವಾಗ, ಉರಿವ ಗಾಯಕ್ಕೆ ಉಪ್ಪು ಸವರಿದಂತೆ ಕೇಂದ್ರ ಮತ್ತು ಬಿಜೆಪಿ ಸರ್ಕಾರಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 250-300 ಪಟ್ಟು ತೆರಿಗೆ ಹಾಕಿ ಜನರನ್ನು ಸುಲಿಗೆ ಮಾಡುತ್ತಿದೆ. ಸಂಕಷ್ಟದ ಹೊತ್ತಲ್ಲಿ ತೆರಿಗೆ ಕಡಿತ, ಅಗತ್ಯ ವಸ್ತು ಬೆಲೆ ಇಳಿಕೆ, ಪರಿಹಾರ ಪ್ಯಾಕೇಜಿನಂತಹ ಕ್ರಮಗಳ ಮೂಲಕ ಜನರ ಬದುಕಿಗೆ ಆಸರೆಯಾಗಬೇಕಿದ್ದ ಸರ್ಕಾರ, ಅದಕ್ಕೆ ತದ್ವಿರುದ್ಧವಾಗಿ ಜನರ ಸಂಕಷ್ಟದ ಹೊತ್ತಲ್ಲೇ ನಿರಂತರ ಬೆಲೆ ಏರಿಕೆಯ ಮೂಲಕ ಸುಲಿಗೆ ಮಾಡುತ್ತಿದೆ. ಇದು ಅತ್ಯಂತ ಅಮಾನವೀಯ ಮತ್ತು ಜನಕಂಟಕ ಆಡಳಿತ ಎಂದು ಪ್ರತಿಪಕ್ಷ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿರುವ ನಡುವೆ, ಸಿಎಂ ಯಡಿಯೂರಪ್ಪ ಅವರ ಈ ಹೇಳಿಕೆ ಹೊರಬಿದ್ದಿದೆ!

ತಮ್ಮ ತವರು ಕ್ಷೇತ್ರ ಶಿಕಾರಿಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ ಭಾರೀ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದೆ. ಅದರಲ್ಲಿ ಕೇಂದ್ರ ಅಥವಾ ರಾಜ್ಯ ಸರ್ಕಾರಗಳ ಪಾಲೇನೂ ಇಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಬಹಳ ಮುಂದಾಲೋಚನೆಯಿಂದ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಅವರನ್ನು ಇಡೀ ವಿಶ್ವವೇ ಕೊಂಡಾಡುತ್ತಿದೆ. ಇಂತಹ ಸಂಕಷ್ಟದ ನಡುವೆಯೂ ದೇಶದ ಹಿತಕ್ಕಾಗಿ ಕೆಲಸ ಮಾಡುತ್ತಿರುವ ಅವರಿಗೆ ಎಲ್ಲರೂ ಸಹಕಾರ ನೀಡಬೇಕು. ಅದೇ ರೀತಿ ಕಾಂಗ್ರೆಸ್ ನಾಯಕರು ಕೂಡ ನಡೆದುಕೊಳ್ಳಬೇಕು ಎಂದು ಹೇಳಿದ್ದಾರೆ.
ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆ ವಿಷಯದಲ್ಲಿ ಕಾಂಗ್ರೆಸ್ಸಿನವರು ರಾಜಕಾರಣ ಮಾಡದೆ ವಾಸ್ತವಾಂಶಗಳನ್ನು ಅರಿತು ನಡೆದುಕೊಳ್ಳಬೇಕು. ಸರ್ಕಾರಕ್ಕೆ ಸಹಕರಿಸಬೇಕು. ಸಂಕಷ್ಟದ ಹೊತ್ತಲ್ಲಿ ಸರ್ಕಾರದ ಜೊತೆ ಸಹಕರಿಸದೇ ಹೋದರೆ, ಅದನ್ನು ಏನನ್ನಬೇಕು ಎಂದೂ ಅವರು ಕೇಳಿದ್ದಾರೆ.

ಕರೋನಾ ನಿಯಂತ್ರಣದ ಲಾಕ್ ಡೌನ್ ಹಿನ್ನೆಲೆಯಲ್ಲಿ ಬಡವರು ಮತ್ತು ಮಧ್ಯಮವರ್ಗದವರ ಬದುಕು ಹೈರಾಣಾಗಿರುವ ಪರಿಸ್ಥಿತಿಯಲ್ಲಿ ನಿತ್ಯದ ಬದುಕೇ ನರಕವಾಗಿರುವ ಹೊತ್ತಲ್ಲಿ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಏರಿಕೆ ಮಾಡುತ್ತಿರುವ ಬಗ್ಗೆ ಪ್ರತಿಪಕ್ಷಗಳು ಮಾತ್ರವಲ್ಲ, ಜನಸಾಮಾನ್ಯರು ಕೂಡ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿರುವ ಹೊತ್ತಲ್ಲಿ, ಸ್ವತಃ ಮುಖ್ಯಮಂತ್ರಿಗಳು ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡು, ಪ್ರತಿಭಟನಾನಿರತ ಪ್ರತಿಪಕ್ಷಗಳ ವಿರುದ್ಧ ರಾಜಕಾರಣ ಮಾಡಬೇಡಿ ಎಂದಿರುವುದು ವಿಪರ್ಯಾಸಕರ.








