ತಮಿಳುನಾಡಿನ ಜನರಿಗೆ ರಾಜ್ಯ ಸರ್ಕಾರ ಪೆಟ್ರೋಲ್ ಬೆಲೆಯಲ್ಲಿ ಪ್ರತಿ ಲೀಟರ್ಗೆ 3ರೂ ಇಳಿಸಿದೆ. ತಮಿಳುನಾಡು ಹಣಕಾಸು ಸಚಿವ ಪಳನಿವೇಲ್ ತ್ಯಾಗರಾಜನ್ ಅವರು , ಶುಕ್ರವಾರ ರಾಜ್ಯ ಬಜೆಟ್ ಮಂಡಿಸುವಾಗ, ಪೆಟ್ರೋಲ್ ಬೆಲೆಯಲ್ಲಿ 3ರೂ ಕಡಿತ ಮಾಡಲಾಗಿದೆ ಮತ್ತು ಇದರಿಂದಾಗಿ ರಾಜ್ಯ ಸರ್ಕಾರಕ್ಕೆ 1 1,160 ಕೋಟಿ ನಷ್ಟವಾಗುತ್ತೆ ಎಂದು ಹೇಳಿದ್ದಾರೆ.
ತಮಿಳುನಾಡಿನಲ್ಲಿ 2.6 ಕೋಟಿ ಜನರು ದ್ವಿಚಕ್ರ ವಾಹನಗಳನ್ನು ಬಳಸುತ್ತಾರೆ. ನಾವು ಪೆಟ್ರೋಲ್ ಬೆಲೆಯಲ್ಲಿ ₹ 3 ಕಡಿಮೆ ಮಾಡಿದ್ದೇವೆ ಮತ್ತು ನಾವು ಇದಕ್ಕಾಗಿ 1,160 ಕೋಟಿ ಮೀಸಲಿಟ್ಟಿದ್ದೇವೆ ಎಂದು ತ್ಯಾಗರಾಜನ್ ಹೇಳಿದ್ದಾರೆ.
ಈ ವರ್ಷದ ಏಪ್ರಿಲ್ನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಡಿ.ಎಂ.ಕೆ ಪಕ್ಷವು ಅಧಿಕಾರದ ಚುಕ್ಕಾಣಿ ಹಿಡಿದ ನಂತರ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ನೇತೃತ್ವದ ಸರ್ಕಾರ ಮಂಡಿಸಿದ ಮೊದಲ ಬಜೆಟ್ ಇದಾಗಿದೆ.
ದೇಶಾದ್ಯಂತ ಇಂಧನ ಬೆಲೆಗಳು ಏರಿಕೆಯಾಗುತ್ತಿವೆ ಮತ್ತು ಹಲವಾರು ರಾಜ್ಯಗಳಲ್ಲಿ ₹ 100 ರ ಗಡಿಯನ್ನು ದಾಟಿದೆ, ಸ್ಥಳೀಯ ತೆರಿಗೆಗಳಾದ ವ್ಯಾಟ್ ಮತ್ತು ಸರಕು ಶುಲ್ಕಗಳ ಆಧಾರದ ಮೇಲೆ ಇಂಧನ ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತವೆ.
ಕೇಂದ್ರ ಸರ್ಕಾರವು ಪ್ರತಿ ಲೀಟರ್ ಗೆ 32.90 ರೂ ಅಬಕಾರಿ ಸುಂಕ ವಿಧಿಸುತ್ತದೆ ಮತ್ತು ರಾಜ್ಯ ಸರ್ಕಾರಗಳು 22.80ರೂ ವ್ಯಾಟ್ ವಿಧಿಸುತ್ತವೆ. ಡೀಸೆಲ್ ಮೇಲೆ 31.80ರೂ ಕೇಂದ್ರ ಅಬಕಾರಿ ಸುಂಕ ವಿಧಿಸಿತ್ತದೆ ಮತ್ತು ರಾಜ್ಯಸರ್ಕಾರಗಳು 13.04ರೂ ವ್ಯಾಟ್ಅನ್ನು ವಿಧಿಸುತ್ತವೆ.
ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಇಂಧನ ಬೆಲೆ ಏರಿಕೆ ವಿರುದ್ಧ ಸರ್ಕಾರವನ್ನು ಟೀಕಿಸುತ್ತಿರುವುದರ ನಡುವೆ ತಮಿಳುನಾಡು ಸರ್ಕಾರದ ಈ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. .
ಕರ್ನಾಟಕ ವಿಪಕ್ಷ ನಾಯಕ ಸಿದ್ದರಾಮಯ್ಯ ಕರ್ನಾಟಕ ಸರ್ಕಾರವೂ ಕೂಡಾ ತಮಿಳುನಾಡು ಸರ್ಕಾರದ ಮಾದರಿಯನ್ನು ಅನುಸರಿಸಬೇಕೆಂದು ಒತ್ತಾಯಿಸಿದ್ದಾರೆ.
ಲಕ್ಷಾಂತರ ಸಾಮಾನ್ಯ ಜನರಿಗೆ ಸಹಾಯವಾಗಲೆಂದು ತಮಿಳುನಾಡು ಸರ್ಕಾರ ಪೆಟ್ರೋಲ್ ಬೆಲೆಯಲ್ಲಿ 3 ರೂಪಾಯಿ ಕಡಿತಗೊಳಿಸಿದೆ. ಕರ್ನಾಟಕ ಸರ್ಕಾರ ಕೂಡಾ ಇದೇ ಮಾದರಿಯನ್ನು ಅನುಸರಿಸಬೇಕೆಂದು ಬಸವರಾಜ್ ಬೊಮ್ಮಾಯಿ ಅವರನ್ನು ಉಲ್ಲೇಖಿಸಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.