ವಿಧಾನ ಪರಿಷತ್ ಪರಿಷತ್ ಸ್ಥಾನಕ್ಕೆ ಮೂವರನ್ನು ನಾಮ ನಿರ್ದೇಶನ ಮಾಡಿದ್ದ ಕಾಂಗ್ರೆಸ್, ಉಮಾಶ್ರೀ, ಎಂ.ಆರ್ ಸೀತಾರಾಂ ಹಾಗು ಮಾಜಿ ಜಾರಿನಿರ್ದೇಶನಾಲಯ ಅಧಿಕಾರಿ ಸುಧಾಮ್ ದಾಸ್ ಅವರನ್ನು ಆಯ್ಕೆ ಮಾಡಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿತ್ತು. ಆದರೆ ಕೇವಲ ಮೂರು ತಿಂಗಳ ಹಿಂದಷ್ಟೇ ಪಕ್ಷ ಸೇರ್ಪಡೆ ಆಗಿರುವ ಸುಧಾಮ್ ದಾಸ್‌ಗೆ ಪರಿಷತ್ ಸ್ಥಾನ ಕೊಟ್ಟ ಬಗ್ಗೆ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿರುವ ಗೃಹಸಚಿವ ಡಾ.ಜಿ.ಪರಮೇಶ್ವರ್, ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ, ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ ಹಾಗು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಪತ್ರ ಬರೆದಿದ್ದರು. ಆದರೂ ಅಂತಿಮವಾಗಿ ಒಪ್ಪಿಗೆಯ ಮುದ್ರೆ ಬಿದ್ದಿದೆ. ಮೂವರೂ ಪರಿಷತ್ ಸದಸ್ಯರಾಗಿದ್ದಾರೆ.
ಪತ್ರಕ್ಕೆ ಕಿಮ್ಮತ್ತು ಕೊಡದ ಹೈಕಮಾಂಡ್, ರಾಜ್ಯಪಾಲರ ಒಪ್ಪಿಗೆ..!

ವಿಧಾನ ಪರಿಷತ್ ಸ್ಥಾನಕ್ಕೆ ಮೂವರನ್ನು ನಾಮನಿರ್ದೇಶನ ಸರ್ಕಾರದ ಶಿಫಾರಸಿಗೆ ರಾಜ್ಯಪಾಲರು ಒಪ್ಪಿಗೆ ಮುದ್ರೆ ಒತ್ತಿದ್ದಾರೆ. ಈ ಮೂಲಕ ಮೂವರು ಹೆಸರನ್ನು ಪರಿಷತ್ ಸದಸ್ಯರಾಗಿ ರಾಜ್ಯಪಾಲರು ಅನುಮೋದಿಸಿದ್ದಾರೆ. ಎಂ.ಆರ್ ಸೀತಾರಾಂ, ಹಿರಿಯ ನಟಿ ಉಮಾಶ್ರಿ, ಮಾಜಿ ED ಅಧಿಕಾರಿ ಸುಧಾಮ್ ದಾಸ್ ಪರಿಷತ್ ಸದಸ್ಯರಾಗಿ ನಾಮನಿರ್ದೇಶನಗೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಗೃಹಸಚಿವ ಡಾ ಜಿ ಪರಮೇಶ್ವರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿದ್ದು ನಿಜ. ಪತ್ರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಬಂದಿದ್ದು ನಿಜ. ಬೇರೆ ವಿಚಾರಗಳನ್ನು ಮಾಧ್ಯಮದ ಎದುರು ಮಾತನಾಡಲು ಬಯಸಲ್ಲ ಎಂದಿದ್ದಾರೆ.
ಪರಮೇಶ್ವರ್ ಕಚೇರಿಗೆ ಬಂದಿದ್ದ ಡಿಸಿಎಂ ಡಿಕೆಶಿ..!
ಸುಧಾಮ್ ದಾಸ್ ಆಯ್ಕೆ ಮಾಡಿದ್ದು ಡಿಸಿಎಂ ಡಿ.ಕೆ ಶಿವಕುಮಾರ್ ಎನ್ನಲಾಗಿದೆ. ಆದರೆ ಪರಿಷತ್ ಸ್ಥಾನಕ್ಕೆ ನಾಮ ನಿರ್ದೇಶನ ಮಾಡಿದ್ರಿಂದ ಸಲಿತ ಸಮುದಾಯದ ನಾಲ್ವರು ಸಚಿವರು ಒಟ್ಟಾಗಿ ವಿರೋಧ ಮಾಡಿದ್ದರಿಂದ, ಸ್ವತಃ ಡಿ.ಕೆ ಶಿವಕುಮಾರ್ ಅಖಾಡಕ್ಕೆ ಇಳಿದಿದ್ದರು. ಪರಿಷತ್ ಸದಸ್ಯನಾಗಿ ನಾಮನಿರ್ದೇಶನ ಆಗಿದ್ದ ಸುಧಾಮ್ ದಾಸ್ ಜೊತೆಗೆ ಪರಮೇಶ್ವರ್ ಭೇಟಿಗೆ ಡಿ.ಕೆ ಶಿವಕುಮಾರ್ ಪ್ರಯತ್ನ ನಡೆಸಿದ್ದರು. ಸುಧಾಮ್ ದಾಸ್ ಕರೆದುಕೊಂಡು ತಾವೇ ಪರಮೇಶ್ವರ್ ಕಚೇರಿಗೆ ತೆರಳಿದ್ದರು. ಆದರೆ ಪರಮೇಶ್ವರ್ ಕ್ಯಾಬಿನೆಟ್ ಹಾಲ್‌ಗೆ ತೆರಳಿದ್ದರಿಂದ ಭೇಟಿ ಸಾಧ್ಯವಾಗದೇ ವಾಪಸ್ ಆಗಿದ್ದರು. ಆ ಬಳಿಕ ಮಾತನಾಡಿ, ಆಯ್ಕೆ ಹಿಂದಿನ ಗುಟ್ಟನ್ನು ಮನವರಿಕೆ ಮಾಡಿದ್ದಾರೆ ಎನ್ನಲಾಗಿದೆ.

ಸುಧಾಮ್ ದಾಸ್ ಆಯ್ಕೆಗೆ ಸಮ್ಮತಿ ಪಡೆಯಲಿಲ್ಲ ಎನ್ನುವ ಕಿಚ್ಚು..!
ಸುಧಾಮ್ ದಾಸ್ ಜಾರಿ ನಿರ್ದೇಶನಾಲಯದಲ್ಲಿ ಹಿರಿಯ ಅಧಿಕಾರಿಯಾಗಿ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗಿದ್ದಾರೆ. ದಲಿತ ಸಮುದಾಯಕ್ಕೆ ಸೇರಿ ನಾಯಕರಾಗಿರುವ ಕಾರಣಕ್ಕೆ ನಾಲ್ವರು ಹಿರಿಯ ಸಚಿವರು ವಿರೋಧಿಸಿದ್ದಾರೆ ಎನ್ನಲಾಗಿದೆ. ನಮ್ಮದೇ ಸಮುದಾಯಕ್ಕೆ ಸೇರಿದ ನಾಯಕನನ್ನು ಪರಿಷತ್‌ಗೆ ನೇಮಕ ಮಾಡುವಾಗ ನಮ್ಮನ್ನು ಡಿ.ಕೆ ಶಿವಕುಮಾರ್ ಕ್ಯಾರೇ ಎನ್ನಲಿಲ್ಲ ಎನ್ನುವ ಕೋಪ ಒಂದು ಕಡೆಯಾದರೆ, ಮತ್ತೊಂದು ಕಡೆ ಡಿ.ಕೆ ಶಿವಕುಮಾರ್ ಮತ್ತೋರ್ವ ದಲಿತ ನಾಯಕನನ್ನು ಬೆಳೆಸಲು ಮುಂದಾಗಿರುವುದು ನಾಯಕರಿಗೆ ಕಸಿವಿಸಿ ತಂದಿಟ್ಟಿದೆ. ಇದೇ ಕಾರಣಕ್ಕೆ ಸುಧಾಮ್ ದಾಸ್ ಆಯ್ಕೆಗೆ ವಿರೋಧ ಕೂಡ ಮಾಡಿದ್ದರು. ಆದರೆ ಹೈಕಮಾಂಡ್ ನಾಯಕರು ಸೊಪ್ಪು ಹಾಕದಿದ್ದರಿಂದ ತೆಪ್ಪಗಾದರು ಎನ್ನಲಾಗಿದೆ.
ಕೃಷ್ಣಮಣಿ