ಲಡಾಖ್ ರಾಜ್ಯದ ಲೇಹ್ ಜಿಲ್ಲೆಯ ಕಿಯಾರಿಯಲ್ಲಿ ಸೇನಾಯೋಧರು ಪ್ರಯಾಣಿಸುತ್ತಿದ್ದ ವಾಹನವು ಶನಿವಾರ (ಆಗಸ್ಟ್ 19) ಕಣಿವೆಗೆ ಉರುಳಿದ್ದು, 9 ಮಂದಿ ಯೋಧರು ಮೃತಪಟ್ಟಿದ್ದಾರೆ. ಒಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಾಲಕನ ನಿಯಂತ್ರಣ ತಪ್ಪಿದ ವಾಹನ ಸಂಜೆ 4.45ರ ವೇಳೆಗೆ ಅಳವಾದ ಕಣಿವೆಗೆ ಉರುಳಿದೆ. ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಪಿ.ಡಿ.ನಿತ್ಯಾ ಭಾನುವಾರ (ಆಗಸ್ಟ್ 20) ತಿಳಿಸಿದ್ದಾರೆ.
ವಾಹನದಲ್ಲಿ 10 ಮಂದಿ ಯೋಧರಿದ್ದರು. ವಾಹನ ಲಡಾಖ್ ರಾಜ್ಯದ ಲೇಹ್ನಿಂದ ನ್ಯೂಮಾಗೆ ತೆರಳುತ್ತಿತ್ತು. ತೀವ್ರವಾಗಿ ಗಾಯಗೊಂಡಿರುವ ಒಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.
“ಲಡಾಖ್ ಸೇನಾ ವಾಹನ ದುರಂತದಲ್ಲಿ ಸಾವಿನ ಸಂಖ್ಯೆ ಒಂಬತ್ತಕ್ಕೆ ಏರಿದೆ, ಒಬ್ಬರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ” ಎಂದು ಲೇಹ್ನ ರಕ್ಷಣಾ ಸಾರ್ವಜನಿಕ ಸಂಪರ್ಕಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಪಿಎಸ್ ಸಿಧು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಜಾರ್ಖಂಡ್ | 9 ತಿಂಗಳ ಮಗುವಿನಲ್ಲಿ ಹಕ್ಕಿ ಜ್ವರ..!
“ಸೇನಾ ವಾಹನದಲ್ಲಿದ್ದ ಬೆಂಗಾವಲು ಪಡೆ ಲಡಾಖ್ ಲೇಹ್ನಿಂದ ಕಿಯಾರಿಗೆ ಚಲಿಸುತ್ತಿತ್ತು. ಒಂದು ವಾಹನ ಅಪಘಾತಕ್ಕೆ ಈಡಾಯಿತು” ಎಂದು ರಕ್ಷಣಾ ಅಧಿಕಾರಿ ವಿವರಿಸಿದ್ದಾರೆ.
ಸೇನಾ ತಂಡವು 311 ಮಧ್ಯಮ ರೆಜಿಮೆಂಟ್ (ಫಿರಂಗಿ)ಗೆ ಸೇರಿದ್ದು, ಮಾರುತಿ ಜಿಪ್ಸಿಯನ್ನು ಒಳಗೊಂಡ ಮೂರು ವಾಹನಗಳಲ್ಲಿ ಒಟ್ಟು ಮೂವರು ಅಧಿಕಾರಿಗಳು, ಇಬ್ಬರು ಜೆಸಿಒಗಳು ಮತ್ತು 34 ಯೋಧರು ಪ್ರಯಾಣಿಸುತ್ತಿದ್ದರು. ಒಂದು ಟ್ರಕ್ ಮತ್ತು ಆಂಬುಲೆನ್ಸ್ ಕೂಡ ಜತೆಗಿತ್ತು ಎಂದು ವರದಿಯಾಗಿದೆ.