
2020ರಲ್ಲಿ 62 ಕ್ಷೇತ್ರ ಗೆದ್ದು ಬೀಗಿದ್ದ ಆಮ್ ಆದ್ಮಿ ಪಾರ್ಟಿ ಕೇವಲ 5 ವರ್ಷಗಳಲ್ಲಿ 22 ಸ್ಥಾನಗಳಿಗೆ ಸೀಮಿತವಾಗಿದೆ. 40 ಸ್ಥಾನಗಳನ್ನ ಕಳ್ಕೊಂಡಿದೆ.. ಇನ್ನು ಬಿಜೆಪಿ 2020 ರಲ್ಲಿ 8 ಕ್ಷೇತ್ರಗಳನ್ನಷ್ಟೇ ಗೆದ್ದಿತ್ತು.. ಈಗ ಬಿಜೆಪಿಯ ಬಲ 48 ಸ್ಥಾನಗಳಿಗೆ ಏರಿಕೆ ಕಂಡಿದೆ. ಕಳೆದ ಎಲೆಕ್ಷನ್ನಲ್ಲೂ ಸೊನ್ನೆ ಸುತ್ತಿದ್ದ ಕಾಂಗ್ರೆಸ್ ಈ ಸಲವೂ ಒಂದೇ ಒಂದು ಕ್ಷೇತ್ರದಲ್ಲೂ ಗೆಲ್ಲೋಕಾಗದೆ ಸೋತು ಸುಣ್ಣವಾಗಿದೆ.
2020ರಲ್ಲಿ ಎಎಪಿಗೆ ದೆಹಲಿಯ ಶೇಕಡ 54ರಷ್ಟು ಜನ ಮತ ಹಾಕಿ ಗೆಲುವು ಕೊಟ್ಟಿದ್ದರು.. ಈ ಬಾರಿ ಶೇಕಡವಾರು ಮತ ಗಳಿಕೆ 44ಕ್ಕೆ ಇಳಿದಿದೆ. ಶೇಕಡ 10 ರಷ್ಟು ಮತಗಳು ಕಡಿಮೆ ಆಗಿದ್ದು, ಕ್ಷೇತ್ರವಾರು 40 ಸ್ಥಾನಗಳೇ ಶೇಕಡ 10ರಷ್ಟು ಮತಗಳಲ್ಲಿ ಕೊಚ್ಚಿ ಹೋಗಿವೆ. 2020ರಲ್ಲಿ ಬಿಜೆಪಿಗೆ ಶೇಕಡ 38ರಷ್ಟು ಮತ ಕೊಟ್ಟಿದ್ದ ದೆಹಲಿ ಜನರು, ಈ ಬಾರಿ ಶೇಕಡ 46ರಷ್ಟು ಮತ ಹಾಕಿದ್ದು, ಕ್ಷೇತ್ರವಾರು 48 ಕ್ಷೇತ್ರಗಳೇ ಗೆಲುವಿನ ದಡ ಸೇರಿವೆ.

ದೆಹಲಿಯ ಒಟ್ಟು 70 ವಿಧಾನಸಭಾ ಕ್ಷೇತ್ರಗಳಲ್ಲಿ 36 ಸ್ಥಾನ ಗೆದ್ದವರು ದೆಹಲಿಯ ಗದ್ದುಗೆ ಹಿಡಿಯುತ್ತಾರೆ. 1993ರಲ್ಲಿ ದೆಹಲಿಯಲ್ಲಿ ಮೊದಲ ಚುನಾವಣೆಯನ್ನ ಬಿಜೆಪಿ ಗೆದ್ದಿತ್ತು. ಆ ಬಳಿಕ ಕಾಂಗ್ರೆಸ್ ದೆಹಲಿಯಲ್ಲಿ ಅಧಿಕಾರಕ್ಕೆ ಬಂದು.. 2013ರಿಂದ ದೆಹಲಿಯಲ್ಲಿ ಕೇಜ್ರಿವಾಲ್ ಪಕ್ಷಕ್ಕೆ ಜನ ಭರ್ಜರಿ ಮತಗಳನ್ನ ಕೊಟ್ಟು ಗೆಲ್ಲಿಸ್ತಾ ಬಂದಿದ್ರು.. ಈ ಸಲ ಎಎಪಿಯನ್ನ ವಿರೋಧಪಕ್ಷದ ಸ್ಥಾನಕ್ಕೆ ತಳ್ಳಿದ್ದಾರೆ. ಬಿಜೆಪಿಗೆ ದೆಹಲಿ ಜನ ಉಘೇ ಅಂದಿದ್ದಾರೆ. ಅಚ್ಚರಿ ಅಂದ್ರೆ ಕೇವಲ ಕೆಲವೇ ಕೆಲವೇ ಮತಗಳ ಅಂತರದಿಂದ ಸಾಕಷ್ಟು ಆಮ್ ಆದ್ಮಿಗಳು ಸೋಲುಂಡಿದ್ದಾರೆ.

ದೆಹಲಿ ರಾಜ್ಯವನ್ನ ಕಾಂಗ್ರೆಸ್ ಭ್ರಷ್ಟಾಚಾರದ ಕೂಪ ಮಾಡಿದೆ.. ಅದನ್ನೆಲ್ಲಾ ಕ್ಲೀನಾಗಿ ಗುಡಿಸೋಕೆ ಪೊರಕೆ ಸಿಂಬಲ್ಗೆ ಮತ ಹಾಕಿ ಅಂತ ಅರವಿಂದ ಕೇಜ್ರಿವಾಲ್ ಎಲೆಕ್ಷನ್ ಅಖಾಡಕ್ಕೆ ಇಳಿದಿದ್ದರು.. ಇದೀಗ ಅದೇ ರಾಜಕೀಯ ರಾಡಿಯಲ್ಲಿ ಎಎಪಿ ಪಕ್ಷದ ನಾಯಕರು ಮುಳುಗಿದ್ದು ಸೋಲನ್ನು ತಂದಿಟ್ಟಿದೆ ಎನ್ನಬಹುದು. ಆದರೆ ಎಎಪಿ ಪಕ್ಷದ ಮೇಲಿದ್ದ ಭ್ರಷ್ಟಾಚಾರ ಆರೋಪಗಳು ಏನೇ ಇದ್ದರೂ ದೆಹಲಿ ಜನ ಆಮ್ ಆದ್ಮಿಗಳನ್ನು ಬೆಂಬಲಿಸಿದ್ದಾರೆ. ಆದರೆ ಕಾಂಗ್ರೆಸ್ ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧೆ ಮಾಡಿತ್ತು. ಎಲ್ಲಿಯೂ ಗೆಲ್ಲದಿದ್ದರೂ ಆಪ್ ಸೋಲಿಸಿದ ತೃಪ್ತಿ ಕಾಂಗ್ರೆಸ್ ಪಾಲಾಗಿದೆ.