ಬೆಂಗಳೂರು ಸೇರಿದಂತೆ ಇಡೀ ರಾಜ್ಯದಲ್ಲಿ ಎರಡನೇ ಡೋಸ್ ಲಸಿಕೆ ಹಂಚಿಕೆ ತೀವ್ರ ಪ್ರಮಾಣದಲ್ಲಿ ಕಳೆಗುಂದಿದೆ. ಇದೇ ಕಾರಣದಿಂದ ತಾಂತ್ರಿಕ ಸಲಹಾ ಸಮಿತಿ ಸಿಂಗಾಪೂರ್ ಮಾದರಿಯನ್ನು ಜಾರಿ ಮಾಡುವಂತೆ ಸರ್ಕಾರಕ್ಕೆ ಹಾಗೂ ಬಿಬಿಎಂಪಿಗೆ ಸಲಹೆ ನೀಡಿದೆ. ಈ ಮೂಲಕ ಎರಡನೇ ಡೋಸ್ ಲಸಿಕೆ ಹಂಚಿಕೆಯನ್ನು ಹೆಚ್ಚಿಸಲು ಸೂಚಿಸಲಾಗಿದೆ. ಅಷ್ಟಕ್ಕೂ ಏನಿದು ಸಿಂಗಾಪೂರ್ ಮಾದರಿ.?
ವ್ಯಾಕ್ಸಿನೇಷನ್ ರೀಚ್ ಗೆ ಸಿಂಗಾಪೂರ್ ಮಾಡೆಲ್ ಅನುಸರಿಸುವಂತೆ TAC ಸಲಹೆ !
ಕೊರೋನಾ ಸೋಂಕಿನ ಪ್ರಮಾಣ ಸದ್ಯ ಇಡೀ ರಾಜ್ಯದಲ್ಲಿ ತಹಬದಿಗೆ ಬಂದಿದೆ. ಆದರೂ ಜನರ ನಿರ್ಲಕ್ಷ್ಯ ಮತ್ತೊಂದು ಸುತ್ತಿನ ದುರಂತಕ್ಕೆ ಮುನ್ನುಡಿ ಬರೆಯುಬಹುದಾದ ಸಾಧ್ಯತೆ ಇದೆ. ಹೀಗಾಗಿ ಕೊರೋನಾದಿಂದ ಮುಕ್ತಿ ಪಡೆಯ ಬೇಕಾದರೆ ಲಸಿಕೆ ಒಂದೇ ದಾರಿ. ಆದರೆ ಅಂಥಾ ಲಸಿಕೆಯನ್ನು ಪಡೆಯಲು ಜನರು ಈಗ ಹಿಂದೇಟು ಹಾಕುತ್ತಿದ್ದಾರೆ. ಅದರಲ್ಲೂ ಎರಡನೇ ಡೋಸ್ ಪಡೆಯಲು ಜನರು ಮರೆತಂತಿದೆ. ಮೊದಲ ಡೋಸ್ ಪಡೆದು ಕೊರೋನಾದಿಂದ ಬಚಾವ್ ಆದ್ವಿ ಎನ್ನುವ ಮನಸ್ಥಿತಿ ಜನರಿಗೆ ಬಂದು ಬಿಟ್ಟಂತಿದೆ. ಇಡೀ ರಾಜ್ಯದಲ್ಲಿ ಸುಮಾರು 2 ಕೋಟಿ 46 ಲಕ್ಷ ಜನರಷ್ಟೇ ಈವರೆಗೆ ಎರಡನೇ ಡೋಸ್ ಲಸಿಕೆಯನ್ನು ಪಡೆದಿದ್ದಾರೆ. ಲೆಕ್ಕದ ಪ್ರಕಾರ 4 ಕೋಟಿಗೂ ಅಧಿಕ ಮಂದಿ ಇನ್ನೂ ಎರಡನೇ ಡೋಸ್ ಲಸಿಕೆಯನ್ನೇ ಪಡೆದಿಲ್ಲ. ಹೀಗಾಗಿ ಪೂರ್ಣ ಪ್ರಮಾಣದಲ್ಲಿ ಎರಡನೇ ಡೋಸ್ ಲಸಿಕೆ ಹಂಚಿಕೆಯಾಗಲು ಸಿಂಗಾಪೂರ್ ಮಾದರಿಯನ್ನು ಅನುಸರಿಸಿ ಎಂದು ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಕಿವಿ ಮಾತು ಹೇಳಿದೆ.
ರಾಜ್ಯದಲ್ಲಿ ಜಾರಿಯಾಗುತ್ತಾ ಸಿಂಗಾಪೂರ್ ಮಾಡೆಲ್ ?
ಅಷ್ಟಕ್ಕೂ ಏನಿದು ಸಿಂಗಾಪೂರ್ ಮಾಡೆಲ್ ಎಂಬುವುದೇ ಕುತೂಹಲಕಾರಿ ಸಂಗತಿ. ಎಂದರೆ, ಯಾರು ವ್ಯಾಕ್ಸಿನ್ ಹಾಕಿಸಿಕೊಳ್ಳುವುದಲ್ಲಿವೋ ಅಂಥವರಿಗೆ ಉಚಿತ ಚಿಕಿತ್ಸೆ ನೀಡಲಾಗುವುದಿಲ್ಲ. ಈ ನಿಯಮ ಸದ್ಯಕ್ಕೆ ಸಿಂಗಾಪೂರದಲ್ಲಿ ಜಾರಿ ಇದೆ. ಹೀಗಾಗಿ ಅಲ್ಲಿ ಯಶಸ್ವಿಯಾಗಿ ಎರಡನೇ ಡೋಸ್ ಕೂಡ ನಡೆಯುತ್ತಿದೆ ಎಂದು ಇತ್ತೀಚೆಗೆ ಅಂತರರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿದೆ. ಹೀಗಾಗಿ ಇಲ್ಲೂ ಕೂಡ ಅದೇ ಮಾದರಿಯ ನಿಯಮ ಜಾರಿಗೊಳಿಸುವಂತೆ ತಾಂತ್ರಿಕ ಸಲಹಾ ಸಮಿತಿ ಶಿಫಾರಸ್ಸು ಮಾಡಿದೆ.
ಬೆಂಗಳೂರಲ್ಲಿಯೂ ಸಿಂಗಾಪೂರ್ ಮಾಡೆಲ್ ಜಾರಿ ಸಾಧ್ಯತೆ !
ಇನ್ನು ಬಿಬಿಎಂಪಿ ವ್ಯಾಪ್ತಿಯಲ್ಲೂ ಎರಡನೇ ಡೋಸ್ ಗಣನೀಯವಾಗಿ ಕಡಿಮೆಯಾಗಿದೆ. 57% ನಷ್ಟು ಮಾತ್ರ ಸದ್ಯಕ್ಕೆ ಬೆಂಗಳೂರಲ್ಲಿ ಎರಡನೇ ಡೋಸ್ ಡ್ರೈವ್ ಮಾಡಲಾಗಿದೆ. ಹೀಗಾಗಿ ಬೆಂಗಳೂರಲ್ಲಿ ಕೂಡ ಸಿಂಗಾಪೂರ್ ಮಾದರಿ ಜಾರಿ ಆಗುವ ಸಾಧ್ಯತೆ ಇದೆ. ಈ ಬಗ್ಗೆ ಮಾತನಾಡಿರುವ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಶೇಕಾಡ 57ರಷ್ಟು ಜನರು ಎರಡನೇ ಡೋಸ್ ವ್ಯಾಕ್ಸಿನೇಷನ್ ಪಡೆದಿದ್ದಾರೆ. ಕೆಲವರು 12 ವಾರಗಳಾದ ನಂತರ ಸಹ ಎರಡನೇ ಡೋಸ್ ವ್ಯಾಕ್ಸಿನ್ ಪಡೆದಿಲ್ಲ. ಅಂತವರಿಗೆ ನಾವು ಕಾಲ್ ಸೆಂಟರ್ ಮೂಲಕ ಕರೆ ಮಾಡಿ ಜಾಗೃತಿಗೊಳಿಸುತ್ತಿದ್ದೇವೆ. ಜೊತೆಗೆ ಹತ್ತಿರದ ವ್ಯಾಕ್ಸಿನ್ ಸೆಂಟರ್ ಗೆ ಬಂದು ವ್ಯಾಕ್ಸಿನ್ ಪಡೆಯುವಂತೆ ಒತ್ತಡ ಹಾಕುತ್ತಿದ್ದೇವೆ. ಯಾರು ವ್ಯಾಕ್ಸಿನ್ ಪಡೆದಿದ್ದಾರೋ ಅವರು ಮಾತ್ರ ಸಾರ್ವಜನಿಕ ಸ್ಥಳಗಳಲ್ಲಿ ಬರಬಹುದು ಅನ್ನೋ ರೂಲ್ಸ್ ಸಿಂಗಾಪುರ್ ನಲ್ಲಿ ಇದೆ. ವ್ಯಾಕ್ಸಿನ್ ಪಡೆಯದೆ ಇರುವವರಿಗೆ ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧ ಹೇರಲಾಗಿದೆ. ಆ ರೀತಿಯ ನಿರ್ಭಂದನೆಗಳ ಬಗ್ಗೆ ಚರ್ಚೆ ಆಗುವುದಿದೆ. ವ್ಯಾಕ್ಸಿನ್ ಪಡೆಯುವುದರಿಂದ ನೀವು ಸುರಕ್ಷಿತವಾಗಿ ನಿಮ್ಮ ಕುಟುಂಬದವರನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬಹುದು ಎಂದು ಹೇಳಿದ್ದಾರೆ.
ಸದ್ಯ ಕೊರೋನಾ ಸಂಖ್ಯೆ ಕಡಿಮೆ ಇದೆ ನಿಜ. ಆದರೆ ಮುನ್ನಚ್ಚೆರಿಕಾ ಕ್ರಮವಾಗಿ ಲಸಿಕೆ ಪೂರ್ಣ ಪ್ರಮಾಣದಲ್ಲಿ ಹಂಚಿಕೆಯಾಗ ಬೇಕಿದೆ. ಈ ದೃಷ್ಟಿಯಿಂದ ತಾಂತ್ರಿಕ ಸಲಹಾ ಸಮಿತಿ ಆರೋಗ್ಯ ಸಚಿವರ ಬಳಿ ಸಿಂಗಾಪುರ್ ಮಾಡೆಲ್ ಬಗ್ಗೆ ಪ್ರಸ್ತಾಪಿಸಿದ್ದಾರೆ. ವ್ಯಾಕ್ಸಿನೇಷನ್ ರೀಚ್ ಆಗಬೇಕು ಅಂದರೆ ಈ ಮಾಡೆಲ್ ಅನುಸರಿಸಿ ಅಂತಾ ತಾಂತ್ರಿಕ ಸಲಹಾ ಸಮಿತಿ ಶಿಫಾರಸ್ಸು ಮಾಡಿದೆ. ಆದರೆ ಈ ಬಗ್ಗೆ ಅಂತಿಮ ನಿರ್ಧಾರ ಸರ್ಕಾರವೇ ತೆಗೆದುಕೊಳ್ಳಬೇಕಿದೆ.